ಕನ್ನಡ ಸುದ್ದಿ  /  Karnataka  /  Student Kidnaps Boy To Pay College Fee In Bengaluru, Arrested

Student kidnaps boy: ಫೀಸ್​ ಕಟ್ಟೋಕೆ ದುಡ್ಡಿಲ್ಲ ಅಂತ ಬಾಲಕನನ್ನ ಕಿಡ್ನ್ಯಾಪ್​ ಮಾಡಿದ ಬಿಕಾಂ ವಿದ್ಯಾರ್ಥಿ

ಕಾಲೇಜು ಫೀಸ್​ ಕಟ್ಟೋಕೆ ಹಣವಿಲ್ಲವೆಂದು 14 ವರ್ಷದ ಬಾಲಕನನ್ನು ಸಿನಿಮೀಯ ಅಪಹರಿಸಿದ ಬಿಕಾಂ ವಿದ್ಯಾರ್ಥಿ ಹಾಗೂ ಆತನ ಸ್ನೇಹಿತನನ್ನು ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಾಲೇಜು ಫೀಸ್​ ಕಟ್ಟೋಕೆ ಹಣವಿಲ್ಲವೆಂದು 14 ವರ್ಷದ ಬಾಲಕನನ್ನು ಸಿನಿಮೀಯ ಅಪಹರಿಸಿದ ಬಿಕಾಂ ವಿದ್ಯಾರ್ಥಿ ಹಾಗೂ ಆತನ ಸ್ನೇಹಿತನನ್ನು ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬಿಕಾಂ ವಿದ್ಯಾರ್ಥಿ ಎಂ.ಸುನೀಲ್ ಕುಮಾರ್ (23) ಹಾಗೂ ಆತನ ಸ್ನೇಹಿತ ವೈ.ವಿ. ನಾಗೇಶ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಆರೋಪಿಗಳು ಸೆಪ್ಟೆಂಬರ್ 2 ರಂದು ಮಾನ್ಯತಾ ಲೇಔಟ್‌ನಲ್ಲಿರುವ ವಾಸವಾಗಿರುವ ಕಾರ್ಪೊರೇಟ್ ಕಂಪನಿಯ ಮ್ಯಾನೇಜರ್ ರಮೇಶ್ ಬಾಬು ಅವರ ಮಗ ಭವೇಶ್​ನನ್ನು ಅಪಹರಿಸಿದ್ದಾರೆ.

ಭವೇಶ್‌, ಮನೆಯ ತಳ ಮಹಡಿಯ ಕೊಠಡಿಯಲ್ಲಿ ಒಬ್ಬನೇ ಮಲಗುತ್ತಿದ್ದ ವಿಷಯ ಆರೋಪಿಗಳಿಗೆ ತಿಳಿದಿತ್ತು. ಸೆ. 2ರ ರಾತ್ರಿ ಮಾಸ್ಕ್‌ ಧರಿಸಿ ಬಂದ ಆರೋಪಿಗಳು ಭವೇಶ್​ ಮಲಗಿದ್ದ ಕೋಣೆಯ ಬಾಗಿಲು ಬಡಿದಿದ್ದಾರೆ. ಪೋಷಕರಿರಬಹುದೆಂದು ಭವೇಶ್‌ ಬಾಗಿಲು ತೆಗೆಯುತ್ತಿದ್ದಂತೆಯೇ ಚಾಕು ತೋರಿಸಿ ಬೆದರಿಸಿ, ತಂದೆಯ ಕಾರಿನ ಕೀ ಪಡೆದುಕೊಂಡು ಅದೇ ಕಾರಿನಲ್ಲಿ ಭವೇಶ್​ನನ್ನು ಕಿಡ್ನ್ಯಾಪ್​ ಮಾಡಿದ್ದಾರೆ.

ಮರುದಿನ ಆರೋಪಿ ತನ್ನ ಮೊಬೈಲ್‌ನಿಂದ ಬಾಲಕನ ತಂದೆಗೆ ಕರೆ ಮಾಡಿ ಮಗನ ಬಿಡಬೇಕೆಂದರೆ 15 ಲಕ್ಷ ರೂ. ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ರಮೇಶ್ ಬಾಬು ಮತ್ತು ಅವರ ಪತ್ನಿ ಹಣ ಹೊಂದಿಸಿದ್ದಾರೆ. ಆರೋಪಿಗಳ ಸೂಚನೆಯಂತೆ ಹಣವನ್ನು ನೆಲಮಂಗಲ ಸಮೀಪದ ರೈಲ್ವೆ ಟ್ರ್ಯಾಕ್‌ ಸಮೀಪ ಇಟ್ಟು ಬಂದಿದ್ದರು.

ಆರೋಪಿಗಳು ಹಣ ಸಂಗ್ರಹಿಸಿ ಭವೇಶ್​​ನನ್ನು ಬಿಡುಗಡೆ ಮಾಡಿದ್ದರು. ಮಗನನ್ನು ಮರಳಿ ಪಡೆದ ನಂತರ ರಮೇಶ್ ಬಾಬು ಸಂಪಿಗೆಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಎಸಿಪಿ ಟಿ.ರಂಗಪ್ಪ ಹಾಗೂ ಇನ್ಸ್ ಪೆಕ್ಟರ್ ಕೆ.ಟಿ. ನಾಗರಾಜು ನೇತೃತ್ವದ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ಲೊಕೇಶನ್​ ಆಧಾರದ ಮೇಲೆ ಯಲಹಂಕದಲ್ಲಿ ವಾಸವಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ಕಾಲೇಜು ಶುಲ್ಕ ಪಾವತಿಸಲು ಹಣ ಇರಲಿಲ್ಲ. ಯಾರೊಬ್ಬರೂ ಸಹಾಯಕ್ಕೆ ಬಂದಿಲ್ಲ. ಹೀಗಾಗಿ ಕೃತ್ಯ ಎಸಗಿದ್ದಾಗಿ ಸುನೀಲ್ ಕುಮಾರ್ ಪೊಲೀಸರಿಗೆ ತಿಳಿಸಿದ್ದಾನೆ. ರಮೇಶ್​ ಬಾಬು ನೀಡಿದ ಹಣದಲ್ಲಿ ಆರೋಪಿ ಸುನೀಲ್​ ಕಾಲೇಜು ಫೀಸ್​ ಕಟ್ಟಿ, ಹೊಸ ಬೈಕ್ ಮತ್ತು ಡಿಜಿಟಲ್ ಕ್ಯಾಮೆರಾ ಖರೀದಿಸಿ ಉಳಿದ ಹಣವನ್ನು ತನ್ನ ಬಳಿ ಇಟ್ಟುಕೊಂಡಿದ್ದ. ಕಾರು, ಬೈಕ್​, ಕ್ಯಾಮೆರಾ ಹಾಗೂ ನಗದನ್ನು ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.

IPL_Entry_Point