ಕನ್ನಡ ಸುದ್ದಿ  /  ಕರ್ನಾಟಕ  /  40 Percent Cm: ಹೈದರಾಬಾದ್‌ನಲ್ಲಿ ಬೊಮ್ಮಾಯಿಗೆ ಅವಮಾನ:‌‌ ಕಾಂಗ್ರೆಸ್‌ಗೆ ಆಹಾರವಾದ ʼ40 ಪರ್ಸೆಂಟ್‌ ಸಿಎಂʼ ಬೋರ್ಡ್!

40 Percent CM: ಹೈದರಾಬಾದ್‌ನಲ್ಲಿ ಬೊಮ್ಮಾಯಿಗೆ ಅವಮಾನ:‌‌ ಕಾಂಗ್ರೆಸ್‌ಗೆ ಆಹಾರವಾದ ʼ40 ಪರ್ಸೆಂಟ್‌ ಸಿಎಂʼ ಬೋರ್ಡ್!

ರಾಜ್ಯ ಸರ್ಕಾರದ ವಿರುದ್ಧ ಕೇಳಿ ಬರುತ್ತಿರುವ 40 ಪರ್ಸೆಂಟ್‌ ಕಮಿಷನ್‌ ಆರೋಪ, ಇದೀಗ ರಾಜ್ಯದ ಗಡಿ ದಾಟಿ ತೆಲಂಗಾಣಕ್ಕೂ ಕಾಲಿಟ್ಟಿದೆ. ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ʼವೆಲ್‌ಕಂ ಟು 40 ಪರ್ಸೆಂಟ್‌ ಸಿಎಂʼ ಎಂಬ ಫ್ಲೆಕ್ಸ್‌ ಅಳವಡಿಸಲಾಗಿದೆ. ಪ್ರತಿಪಕ್ಷ ಕಾಂಗ್ರೆಸ್‌ ಇದನ್ನೇ ಅಸ್ತ್ರವಾಗಿಸಿಕೊಂಡಿದ್ದು, ರಾಜ್ಯ ಬಿಜೆಪಿ ಸರ್ಕಾರಮತ್ತು ಸಿಎಂ ಬೊಮ್ಮಾಯಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಹೈದರಾಬಾದ್‌ನಲ್ಲಿ ಅಳವಡಿಸಿರುವ ವಿವಾದಾತ್ಮಕ ಬೋರ್ಡ್
ಹೈದರಾಬಾದ್‌ನಲ್ಲಿ ಅಳವಡಿಸಿರುವ ವಿವಾದಾತ್ಮಕ ಬೋರ್ಡ್ (‌Verified Twitter)

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಕೇಳಿ ಬರುತ್ತಿರುವ 40 ಪರ್ಸೆಂಟ್‌ ಕಮಿಷನ್‌ ಆರೋಪ, ಇದೀಗ ರಾಜ್ಯದ ಗಡಿ ದಾಟಿ ತೆಲಂಗಾಣಕ್ಕೂ ಕಾಲಿಟ್ಟಿದೆ. ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ʼವೆಲ್‌ಕಂ ಟು 40 ಪರ್ಸೆಂಟ್‌ ಸಿಎಂʼ(40 ಪರ್ಸೆಂಟ್‌ ಮುಖ್ಯಮಂತ್ರಿಗೆ ಸ್ವಾಗತ) ಎಂಬ ಫ್ಲೆಕ್ಸ್‌ ಅಳವಡಿಸಲಾಗಿದ್ದು, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತೀವ್ರ ಮುಜುಗರ ತಂದಿಟ್ಟಿದೆ.

ಟ್ರೆಂಡಿಂಗ್​ ಸುದ್ದಿ

ಹೌದು, ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಆದರೆ ತೆಲಂಗಾಣದ ಆಡಳಿತಾರೂಢ ಟಿಆರ್‌ಎಸ್‌ ಪಕ್ಷ, ʼ40 ಪರ್ಸೆಂಟ್‌ ಸಿಎಂಗೆ ಸ್ವಾಗತʼ ಎಂದು ಬರೆಯಲಾಗಿರುವ ಫ್ಲೆಕ್ಸ್‌ ಅಳವಡಿಸಿ, ಹೊಸ ವಿವಾದವೊಂದನ್ನು ಸೃಷ್ಟಿಸಿದೆ.

ನಿನ್ನೆ(ಸೆ.-17-ಶನಿವಾರ) ಹೈದರಾಬಾದ್‌ ವಿಮೋಚನಾ ದಿನಾಚರಣೆ ಪ್ತಯುಕ್ತ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹೈದರಾಬಾದ್‌ ಪರೇಡ್ ಮೈದಾನದಲ್ಲಿ ಭಾಷಣ ಮಾಡಿದ್ದರು. ಅದಕ್ಕೂ ಮೊದಲೇ ಟಿಆರ್‌ಎಸ್‌ ಈ ಬೃಹತ್ ಫಲಕವನ್ನು ಅಲ್ಲಿ ಅಳವಡಿಸಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು, ಹೈದರಾಬಾದ್‌ಗೆ ಬರುತ್ತಿರುವುದನ್ನು ತಿಳಿದೇ, ಟಿಆರ್‌ಎಸ್‌ ಈ ಉದ್ಧಟತನ ಮೆರೆದಿದೆ.

ಅಸಲಿಗೆ ಹೈದರಾಬಾದ್‌ ವಿಮೋಚನಾ ದಿನದ ಕುರಿತು ತೆಲಂಗಾಣದ ಆಡಿತಾರೂಢ ಟಿಅರ್‌ಎಸ್ ಮತ್ತು ಬಿಜೆಪಿ ನಡುವೆ ಭಾರೀ ವಾಕ್ಸಮರ ನಡೆಯುತ್ತಿದೆ. ಬಿಜೆಪಿ ಇದನ್ನು ವಿಮೋಚನಾ ದಿನ ಎಂದು ಕರೆದರೆ, ಟಿಆರ್‌ಎಸ್‌ ಇದನ್ನು ತೆಲಂಗಾಣ ರಾಷ್ಟ್ರೀಯ ಏಕೀಕರಣ ದಿನ ಎಂದು ಕರೆದಿದೆ. ಎಐಎಂಐಎಂ ಸಂಸದ ಅಸಾದುದ್ದೀನ್‌ ಒವೈಸಿ ಕೂಡ ಇದನ್ನು ತೆಲಂಗಾಣ ರಾಷ್ಟ್ರೀಯ ಏಕೀಕರಣ ದಿನ ಎಂದು ಕರೆಯುವುದ ಸೂಕ್ತ ಎಂದು ಹೇಳಿದ್ದಾರೆ.

ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೈದರಾಬಾದ್‌ಗೆ ತೆರಳಲಿದ್ದಾರೆ. ಅದಕ್ಕೂ ಮೊದಲು ಸಿಎಂ ಅವರನ್ನು ಅವಮಾನಿಸುವ ರೀತಿಯಲ್ಲಿ ʼ40 ಪರ್ಸೆಂಟ್‌ ಸಿಎಂಗೆ ಸ್ವಾಗತʼ ಬೋರ್ಡ್‌ನ್ನು ಟಿಆರ್‌ಎಸ್‌ ಅಳವಡಿಸಿದೆ.

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳ ಮಹಾ ಮೈತ್ರಿಕೂಟ ರಚಿಸಲು ಕಸರತ್ತು ನಡೆದಿದ್ದು, ಟಿಆರ್‌ಎಸ್‌ ಮುಖ್ಯಸ್ಥ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಈ ಪ್ರಯತ್ನದಲ್ಲಿ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಬಿಜೆಪಿಯನ್ನು ಟಾರ್ಗೆಟ್‌ ಮಾಡಲು ಸಾಧ್ಯವಾದ ಎಲ್ಲಾ ಅವಕಾಶಗಳನ್ನೂ ಬಳಸಿಕೊಳ್ಳುತ್ತಿರುವ ಟಿಆರ್‌ಎಸ್‌, ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೇಳಿ ಬರುತ್ತಿರುವ ʼ40 ಪರ್ಸೆಂಟ್‌ ಕಮಿಷನ್‌ ಆರೋಪವನ್ನೂ ಬಳಸಿಕೊಂಡಿದೆ.

ಕಾಂಗ್ರೆಸ್‌ ಕೈಗೆ ಹೊಸ ಅಸ್ತ್ರ:

ಇನ್ನು ಹೈದರಾಬಾದ್‌ನಲ್ಲಿ ಅಳವಡಿಸಲಾಗಿರುವ ʼ40 ಪರ್ಸೆಂಟ್‌ ಸಿಎಂಗೆ ಸ್ವಾಗತʼ ಬೋರ್ಡ್‌, ಪ್ರತಿಪಕ್ಷ ಕಾಂಗ್ರೆಸ್‌ಗೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹೊಸ ಅಸ್ತ್ರವನ್ನು ಒದಗಿಸಿದೆ. ಬಿಜೆಪಿ ರಾಜ್ಯದ ಗೌರವ ಮಣ್ಣು ಪಾಲು ಮಾಡಿದೆ ಎಂದು ಕಾಂಗ್ರೆಸ್‌ ಕಿಡಿಕಾರಿದೆ. ಸಿಎಂ ಈ ಅವಮಾನವನ್ನು ತಡೆದುಕೊಂಡಿರುವುದು ಆಶ್ಚರ್ಯ ತಂದಿದೆ ಎಂದು ಕಾಂಗ್ರೆಸ್‌ ತೀವ್ರ ವಾಗ್ದಾಳಿ ನಡೆಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಘಟಕ, ʼʼರಾಜ್ಯ ಬಿಜೆಪಿ ಸರ್ಕಾರದ 40 ಪರ್ಸೆಂಟ್‌ ಕಮಿಷನ್‌ ಕುಖ್ಯಾತಿ ಇದೀಗ ದೇಶದೆಲ್ಲೆಡೆ ಪಸರಿಸಿದೆ.ಮಬಿಜೆಪಿ ಸರ್ಕಾರದಿಂದ ಕರ್ನಾಟಕಕ್ಕೆ ಇದ್ದ ಪ್ರಜ್ಞಾವಂತರ ನಾಡು, ಪ್ರಗತಿಪರ ರಾಜ್ಯ ಎಂಬ ಹೆಗ್ಗಳಿಕೆ ಕಳೆದು ಭ್ರಷ್ಟಾಚಾರದ ರಾಜ್ಯ ಎಂಬ ಹಣೆಪಟ್ಟಿ ಬಂದಿದ್ದು ದುರದೃಷ್ಟಕರ. ಭ್ರಷ್ಟಾಚಾರದ ಮಹಾಪೋಷಕರಾದ ಸಿಎಂಗೆ ತೆಲಂಗಾಣದಲ್ಲಿನ ಈ ಬೋರ್ಡ್‌ಗಳನ್ನು ವಿರೋಧಿಸುವ ದಮ್ ಇಲ್ಲದಾಗಿದೆ..ʼʼಎಂದು ಕಿಡಿಕಾರಿದೆ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.
IPL_Entry_Point