ಕನ್ನಡ ಸುದ್ದಿ  /  ಜೀವನಶೈಲಿ  /  Flu Viruses: ರಾಜ್ಯದಲ್ಲಿ ಹೆಚ್ಚುತ್ತಿರುವ ರೂಪಾಂತರಿ ವೈರಸ್‌ಗಳ ನರ್ತನ; ಮುನ್ನೆಚ್ಚರಿಕೆಯೇ ಮದ್ದು

flu viruses: ರಾಜ್ಯದಲ್ಲಿ ಹೆಚ್ಚುತ್ತಿರುವ ರೂಪಾಂತರಿ ವೈರಸ್‌ಗಳ ನರ್ತನ; ಮುನ್ನೆಚ್ಚರಿಕೆಯೇ ಮದ್ದು

flu viruses: ರಾಜ್ಯದಲ್ಲಿ ಕೋವಿಡ್‌ ರೂಪಾಂತರಿ ತಳಿಗಳ ಹಾವಳಿ ಹೆಚ್ಚಿದೆ. ಇದರಿಂದ ಕೋವಿಡ್‌ ಪ್ರಕರಣಗಳಲ್ಲೂ ಇದ್ದಕ್ಕಿದ್ದಂತೆ ಏರಿಕೆಯಾಗುತ್ತಿದೆ. ಇತ್ತೀಚೆಗೆ ಹೊಸತೊಂದು ತಳಿ ಪತ್ತೆಯಾಗಿದ್ದು, ಇದಕ್ಕೆ ಎಕ್ಸ್‌ಬಿಬಿ 1.16 ಎಂದು ಹೆಸರಿಲಾಗಿದೆ.

ಫ್ಲೂ ಜ್ವರ
ಫ್ಲೂ ಜ್ವರ

ಕೋವಿಡ್‌ ಸಾಂಕ್ರಾಮಿಕ ರೋಗ ಜಗತ್ತನ್ನು ಆವರಿಸಿದ ಬಳಿಕ ದಿನಕ್ಕೊಂದು ರೂಪಾಂತರಿ ವೈರಸ್‌ಗಳ ಹೆಸರು ಕೇಳುತ್ತಿದ್ದೇವೆ. ಇತ್ತೀಚೆಗಷ್ಟೇ ಎಚ್‌3ಎನ್‌2 ರೂಪಾಂತರಿ ವೈರಸ್ ದಾಳಿ ನಡೆಸಿತ್ತು. ಇದೀಗ ವೈರಸ್‌ನ ಹೊಸತೊಂದು ತಳಿ ಪತ್ತೆಯಾಗಿದೆ. ಈ ತಳಿಯು ಭಾರತ ಸೇರಿದಂತೆ ಪ್ರಪಂಚದ ವಿವಿಧಡೆ ಕೊರೊನಾ ಪ್ರಕರಣಗಳ ಏರಿಕೆಗೆ ಮೂಲವಾಗಿದೆ.

ಟ್ರೆಂಡಿಂಗ್​ ಸುದ್ದಿ

ಈ ಹೊಸ ರೂಪಾಂತರಿ ತಳಿಯ ಹೆಸರು ಎಕ್ಸ್‌ಬಿಬಿ 1.16. ಇದು ಕೋವಿಡ್‌ ಪ್ರಕರಣಗಳ ಹೆಚ್ಚಳಕ್ಕೆ ಮೂಲವಾಗಿದೆ ಎನ್ನಲಾಗುತ್ತಿದೆ. ಈ ವೈರಸ್‌ನ ಹರಡುವಿಕೆಯ ಪ್ರಮಾಣ ಅಧಿಕವಾಗಿದೆ ಹಾಗೂ ಇದು ಸುಲಭವಾಗಿ ದೇಹ ಪ್ರತಿರಕ್ಷೆಗಳಿಂದ ತಪ್ಪಿಸಿಕೊಳ್ಳುವ ಗುಣ ಹೊಂದಿದೆ.

ಕೋವಿಡ್‌, ಎಚ್‌3ಎನ್‌2, ಎಚ್‌1ಎನ್‌1 ಮತ್ತು ಅಡೆನೊವೈರಸ್‌ನಂತಹ ಇನ್ಫ್ಲಯೆಂಜಾ ತರಹದ ಸೋಂಕುಗಳು ಹಾಗೂ ಉಸಿರಾಟಕ್ಕೆ ತೊಂದರೆ ಉಂಟು ಮಾಡುವ ಸೋಂಕುಗಳ ಹರಡುವಿಕೆಯ ಪ್ರಮಾಣವು ಜನವರಿಯಿಂದ ಕರ್ನಾಟಕದಲ್ಲಿ ಹೆಚ್ಚುತ್ತಿದೆ.

ಜನವರಿ ತಿಂಗಳ ಆರಂಭದ ವಾರದಲ್ಲಿ ಋತುಮಾನವು ಬದಲಾದ ಕಾರಣ ಎಲ್ಲಾ ವಯಸ್ಸಿನವರಲ್ಲೂ ಜ್ವರದಂತಹ ರೋಗಲಕ್ಷಣಗಳು ಕಂಡುಬಂದಿತ್ತು.

ಜನವರಿಯಿಂದಲೇ ಎಕ್ಸ್‌ಬಿಬಿ 1.16ಹಾವಳಿ

ಜನವರಿ ತಿಂಗಳಿನಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿ ಎಕ್ಸ್‌ಬಿಬಿ 1.16 ಪ್ರಕರಣ ದಾಖಲಾಗಿತ್ತು. ಸದ್ಯ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕೇಂದ್ರಾಡಳಿತ ಪ್ರದೇಶವೂ ಸೇರಿ 11 ರಾಜ್ಯಗಳಲ್ಲಿ ಈ ಸೋಂಕು ತನ್ನ ಇರುವನ್ನು ಸಾರಿದೆ. ಕರ್ನಾಟಕದಲ್ಲಿ 86 ಪ್ರಕರಣ, ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ತಲಾ 164 ಪ್ರಕರಣ ಹಾಗೂ ತೆಲಂಗಾಣದಲ್ಲಿ 93 ಪ್ರಕರಣಗಳು ದಾಖಲಾಗಿವೆ.

ಮುಂಜಾಗೃತೆ ಇರಲಿ

ಸೀಸನಲ್‌ ಫ್ಲೂ ಅಥವಾ ಇನ್ಫ್ಲುಯೆಂಜಾವು ಸೋಂಕಿತ ವ್ಯಕ್ತಿಯ ಕೆಮ್ಮು ಅಥವಾ ಸೀನಿನ ಮೂಲಕ ಮೂಲಕ ಹರಡುವ ಸಾಂಕ್ರಾಮಿಕ ರೋಗವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸೀಸನಲ್‌ ಫ್ಲೂ ಅಥವಾ ಇನ್ಫ್ಲುಯೆಂಜಾವು 38 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿನ ಜ್ವರ, ಹತ್ತು ದಿನಗಳ ಕಾಲ ಕೆಮ್ಮು ಇರುವ ತೀವ್ರವಾದ ಉಸಿರಾಟದ ಸೋಂಕು ಹೊಂದಿರುವುದಾಗಿದೆ. ಈ ರೋಗಲಕ್ಷಣಗಳು ತನ್ನಿಂದ ತಾನೇ ಕಡಿಮೆಯಾಗುತ್ತವೆ. ಸಾಮಾನ್ಯವಾಗಿ 5 ರಿಂದ 7 ದಿನಗಳವರೆಗೆ ರೋಗಲಕ್ಷಣಗಳು ಇರುತ್ತವೆ. ಇವು ಮಾರಣಾಂತಿಕವಲ್ಲ. ಆದರೆ ಚಿಕ್ಕ ಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗೂ ದೀರ್ಘಕಾಲದ ಆರೋಗ್ಯ ಸಮಸ್ಯೆ ಇರುವವರು ಎಚ್ಚರದಿಂದಿರಬೇಕು.

ಏನಿದು ಎಕ್ಸ್‌ಬಿಬಿ 1.16?

ಎಕ್ಸ್‌ಬಿಬಿ 1.16, ವೈರಸ್‌ನ ಮರುಸಂಯೋಜಿತ ವಂಶಾವಳಿಯಾಗಿದೆ. ಇದು ಪ್ರಸ್ತುತ ಭಾರತ ಹಾಗೂ ವಿದೇಶಗಳಲ್ಲಿ ಸದ್ದು ಮಾಡುತ್ತಿರುವ ಕೋವಿಡ್‌ ವೈರಸ್‌ ಎಕ್ಸ್‌ಬಿಬಿಯ ಉಪತಳಿಯಾಗಿದೆ. ಹೊಸ ರೂಪಾಂತರವು ಹೆಚ್ಚು ಸಾಂಕ್ರಾಮಿಕವಾಗಿದೆ ಮತ್ತು ರೋಗನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗುತ್ತದೆ.

ಅಪಾಯವಿಲ್ಲ; ಆದರೂ ಎಚ್ಚರಿಕೆ ಅಗತ್ಯ

ಮೂಗು ಕಟ್ಟುವುದು, ಗಂಟಲುನೋವು, ತಲೆನೋವು, ಜ್ವರ, ಸ್ನಾಯು ಸೆಳೆತ ಮತ್ತು ಇತರ ರೋಗಲಕ್ಷಣಗಳನ್ನು ಉಂಟುಮಾಡುವ ಈ ರೂಪಾಂತರವು ನಾಲ್ಕು ದಿನಗಳವರೆಗೆ ಇರುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಯಾವುದೇ ದೊಡ್ಡ ಮಟ್ಟದ ಚಿಕಿತ್ಸೆ ಮತ್ತು ಆಸ್ಪತ್ರೆ ಅಗತ್ಯವಿಲ್ಲದೇ ರೋಗಿಗಳು ಗುಣಮುಖರಾಗುತ್ತಾರೆ. ಆದರೆ ವಯಸ್ಸಾದವರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬುದು ತಜ್ಞರ ಅಭಿಪ್ರಾಯ.

ರೋಗಲಕ್ಷಣಗಳು

ಜ್ವರ, ಶೀತ, ಅಸ್ವಸ್ಥತೆ, ಹಸಿವಿನ ಕೊರತೆ, ವಾಕರಿಕೆ, ಸೀನುವಿಕೆ ಮತ್ತು ಮೂರು ವಾರಗಳವರೆಗೆ ಇರುವ ಒಣ ಕೆಮ್ಮು ಇದರ ಸಾಮಾನ್ಯ ಲಕ್ಷಣಗಳಾಗಿವೆ. ಕೋವಿಡ್ ಹಾಗೂ ಇತರ ರೂಪಾಂತರಿ ವೈರಸ್‌ಗಳ ಲಕ್ಷಣಗಳು ಪ್ರಾಥಮಿಕವಾಗಿ ಒಂದೇ ರೀತಿ ಆಗಿರುತ್ತವೆ. ಕೋವಿಡ್ ರೋಗಲಕ್ಷಣಗಳು 2 ರಿಂದ 14 ದಿನಗಳ ನಂತರ ಕಾಣಿಸಿಕೊಳ್ಳುತ್ತವೆ, ಆದರೆ ಇನ್ಫ್ಲುಯೆಂಜಾ ಲಕ್ಷಣಗಳು 1 ರಿಂದ 4 ದಿನಗಳಲ್ಲಿ ಕಾಣಿಸಿಕೊಳ್ಳುತ್ತವೆ.

ಮುನ್ನೆಚ್ಚರಿಕಾ ಕ್ರಮಗಳು

  • ಕೆಮ್ಮುವಾಗ/ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ
  • ಸಾಬೂನು, ಹ್ಯಾಂಡ್‌ವಾಶ್‌ನಿಂದ ಆಗಾಗ ಕೈಗಳನ್ನು ತೊಳೆಯಿರಿ
  • ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ಮತ್ತು ಜನಸಂದಣಿಯನ್ನು ತಪ್ಪಿಸಿ.
  • ಸಾಕಷ್ಟು ನೀರು ಕುಡಿಯುವುದು ಮತ್ತು ಪೌಷ್ಟಿಕ ಆಹಾರ ಸೇವನೆ ಅವಶ್ಯ.
  • ಪದೇ ಪದೇ ಕಣ್ಣು ಮತ್ತು ಮೂಗು ಮುಟ್ಟುವುದನ್ನು ತಪ್ಪಿಸಿ
  • ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ
  • ವೈದ್ಯರನ್ನು ಸಂಪರ್ಕಿಸದ ಆಂಟಿಬಯಾಟಿಕ್‌ ಸೇವನೆ ಬೇಡ.

ವಿಭಾಗ