ಕನ್ನಡ ಸುದ್ದಿ  /  ಜೀವನಶೈಲಿ  /  Onion For Hair: ಮಾರುಕಟ್ಟೆಯಿಂದ ಆನಿಯನ್‌ ಶಾಂಪೂ, ಆನಿಯನ್‌ ಆಯಿಲ್‌ ತರೋ ಬದಲಿಗೆ ಮನೆಯಲ್ಲೇ ಮಾಡಿ..ಕೂದಲು ಹೇಗೆ ಬೆಳೆಯುತ್ತೆ ನೋಡಿ

Onion for Hair: ಮಾರುಕಟ್ಟೆಯಿಂದ ಆನಿಯನ್‌ ಶಾಂಪೂ, ಆನಿಯನ್‌ ಆಯಿಲ್‌ ತರೋ ಬದಲಿಗೆ ಮನೆಯಲ್ಲೇ ಮಾಡಿ..ಕೂದಲು ಹೇಗೆ ಬೆಳೆಯುತ್ತೆ ನೋಡಿ

ನಾಲ್ಕೈದು ಚಮಚ ಈರುಳ್ಳಿ ರಸಕ್ಕೆ ಎರಡು ಚಮಚ ಹರಳೆಣ್ಣೆ ಬೆರೆಸಿ ಈ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿ. ಎರಡು ಗಂಟೆಗಳ ನಂತರ, ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ಇದರ ರಿಕಿನೋಲಿಕ್ ಆಮ್ಲ, ಒಮೆಗಾ-6 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್‌ಗಳು ರಕ್ತ ಪರಿಚಲನೆ ಸುಧಾರಿಸುತ್ತದೆ.

ಕೂದಲಿನ ಆರೋಗ್ಯಕ್ಕೆ ಈರುಳ್ಳಿ ಎಣ್ಣೆ
ಕೂದಲಿನ ಆರೋಗ್ಯಕ್ಕೆ ಈರುಳ್ಳಿ ಎಣ್ಣೆ (PC: Freepik)

ಈರುಳ್ಳಿ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯವನ್ನು ಕಾಪಾಡುತ್ತದೆ. ಕೂದಲಿನ ಆರೈಕೆಗೂ ಈರುಳ್ಳಿ ಸಹಕಾರಿ, ಆದ್ದರಿಂದ ಈಗಂಗೂ ಮಾರುಕಟ್ಟೆಯಲ್ಲಿ ಈರುಳ್ಳಿ ಹೇರ್‌ ಆಯಿಲ್‌, ಈರುಳ್ಳಿ ಶಾಂಪೂ ಹೆಚ್ಚಾಗಿ ಸೇಲ್‌ ಆಗುತ್ತಿದೆ. ಈರುಳ್ಳಿಯಲ್ಲಿರುವ ಸತು, ಸಲ್ಫರ್, ಫೋಲಿಕ್ ಆಮ್ಲ, ಬಿ ವಿಟಮಿನ್ ಮತ್ತು ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳಿದ್ದು ಇದರಿಂದ ನೀವು ಉದ್ದವಾದ ಹಾಗೂ ದಪ್ಪ ಕೂದಲನ್ನು ಪಡೆಯಬಹುದು.

ಈರುಳ್ಳಿಯಲ್ಲಿರುವ ಸಲ್ಫರ್, ಕ್ಯಾಟಲೇಸ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ಕೂದಲಿನ ಬೆಳವಣಿಗೆಗೆ ಕಾರಣವಾದ ಕಿಣ್ವವಾಗಿದೆ, ಇದು ರಕ್ತ ಪರಿಚಲನೆ ಸುಧಾರಿಸಿ, ಕೂದಲನ್ನು ರಕ್ಷಿಸುತ್ತದೆ. ಈರುಳ್ಳಿ ರಸವನ್ನು ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಎಂದು ಸಂಶೋಧನೆಯೊಂದು ಸ್ಪಷ್ಟಪಡಿಸಿದೆ. ಈರುಳ್ಳಿಯಲ್ಲಿರುವ ಸತು, ಸಲ್ಫರ್, ಫೋಲಿಕ್ ಆಮ್ಲ, ಬಿ ವಿಟಮಿನ್ ಮತ್ತು ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳೊಂದಿಗೆ ಕೂದಲಿನ ಬಹುತೇಕ ಸಮಸ್ಯೆಯನ್ನು ಗುಣಪಡಿಸಬಹುದು. ಈರುಳ್ಳಿಯಲ್ಲಿರುವ ಪೋಷಕಾಂಶಗಳು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳನ್ನು ತಡೆಯುತ್ತದೆ ಮತ್ತು ತಲೆಹೊಟ್ಟನ್ನು ದೂರವಿಡುತ್ತದೆ. ಈರುಳ್ಳಿಯಿಂದ ಹೊಳೆಯುವ ಮತ್ತು ದಟ್ಟವಾದ ಕೂದಲನ್ನು ಕೂಡಾ ಪಡೆಯಬಹುದು.

ತಲೆಹೊಟ್ಟು ನಿವಾರಿಸಲು: ಆರು ಚಮಚ ಈರುಳ್ಳಿ ರಸವನ್ನು ಎರಡು ಚಮಚ ಮೊಸರಿನೊಂದಿಗೆ ಬೆರೆಸಿ ನೆತ್ತಿ ಮತ್ತು ಕೂದಲಿಗೆ ಹಚ್ಚಿ 40 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ವಾರಕ್ಕೊಮ್ಮೆ ಹೀಗೆ ಮಾಡಿದರೆ ತಲೆಹೊಟ್ಟು ಹಾಗೂ ಮುಂತಾದ ಸಮಸ್ಯೆಗಳು ದೂರವಾಗುತ್ತವೆ. ಇದು ಉತ್ತಮ ಕಂಡೀಷನರ್ ಆಗಿ ಕೆಲಸ ಮಾಡುತ್ತದೆ ಮತ್ತು ಕೂದಲನ್ನು ನಯವಾಗಿಸುತ್ತದೆ. ಮೇದೋಗ್ರಂಥಿಗಳ ಸ್ರಾವದ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ನೆತ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ.

ಕೂದಲು ದಟ್ಟವಾಗಿ ಬೆಳೆಯಲು: ನಾಲ್ಕೈದು ಚಮಚ ಈರುಳ್ಳಿ ರಸಕ್ಕೆ ಎರಡು ಚಮಚ ಹರಳೆಣ್ಣೆ ಬೆರೆಸಿ ಈ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿ. ಎರಡು ಗಂಟೆಗಳ ನಂತರ, ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ಇದರ ರಿಕಿನೋಲಿಕ್ ಆಮ್ಲ, ಒಮೆಗಾ-6 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್‌ಗಳು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ.

ಜೇನುತುಪ್ಪದೊಂದಿಗೆ ಹಚ್ಚಿ: ಎರಡು ಚಮಚ ಈರುಳ್ಳಿ ರಸವನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿ 20 ನಿಮಿಷಗಳ ನಂತರ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ. ಅಲ್ಲದೆ ರೇಷ್ಮೆಯಂತಾಗುತ್ತದೆ.

ಕೂದಲಿನ ಬೇರು ಸ್ಟ್ರಾಂಗ್‌ ಆಗಲು: ಒಂದು ಬೌಲ್‌ನಲ್ಲಿ ಒಂದು ಮೊಟ್ಟೆಯನ್ನು ಬೀಟ್‌ ಮಾಡಿ. ನಾಲ್ಕರಿಂದ ಐದು ಚಮಚ ಈರುಳ್ಳಿ ರಸ ಮತ್ತು 3 ಹನಿ ಟೀ-ಟ್ರೀ ಎಣ್ಣೆಯನ್ನು ಸೇರಿಸಿ ಎಲ್ಲವನ್ನೂ ಮಿಕ್ಸ್‌ ಮಾಡಿ. ಇದನ್ನು ತಲೆಗೆ ಹಚ್ಚಿ ಅರ್ಧ ಗಂಟೆಯ ನಂತರ ಸ್ನಾನ ಮಾಡಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ, ಕೂದಲಿನ ಬೇರುಗಳು ಸ್ಟ್ರಾಂಗ್ ಆಗುತ್ತವೆ.

ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ: ಅರ್ಧ ಕಪ್ ತೆಂಗಿನ ಎಣ್ಣೆಗೆ ಒಂದು ಈರುಳ್ಳಿ ಪೇಸ್ಟ್ ಸೇರಿಸಿ ಮಿಕ್ಸ್‌ ಮಾಡಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಒಂದೆರಡು ನಿಮಿಷ ಮಸಾಜ್‌ ಮಾಡಿ. ಅರ್ಧ ಗಂಟೆ ನಂತರ ಕೂದಲು ತೊಳೆಯಿರಿ. ಈ ಮಿಶ್ರಣವನ್ನು ವಾರಕ್ಕೆ ಎರಡು ಬಾರಿ ಹಚ್ಚಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ.

ಕೂದಲು ಬೆಳ್ಳಗಾಗುವುದಿಲ್ಲ: ಒಂದು ಈರುಳ್ಳಿಯಿಂದ ರಸವನ್ನು ತೆಗೆದು ಪಕ್ಕಕ್ಕೆ ಇಡಿ. ಒಂದು ಹಿಡಿ ಒಣಗಿದ ಕರಿಬೇವಿನ ಸೊಪ್ಪನ್ನು ಪುಡಿ ಮಾಡಿ ಈರುಳ್ಳಿ ರಸವನ್ನು ಸೇರಿಸಿ ಮಿಕ್ಸ್‌ ಮಾಡಿ, ಇದನ್ನು ತಲೆಗೆ ಹಚ್ಚಿಕೊಳ್ಳಿ. ಒಂದು ಗಂಟೆಯ ನಂತರ ಸ್ನಾನ ಮಾಡಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ಕೂದಲು ಬಿಳಿಯಾಗುವುದು ಕೂದಲು ಉದುರುವುದು ಕಡಿಮೆಯಾಗುತ್ತದೆ.

ಈರುಳ್ಳಿ ಎಣ್ಣೆ ತಯಾರಿಸುವ ವಿಧಾನ: ಎರಡು ಈರುಳ್ಳಿಯನ್ನು ಚಿಕ್ಕ ಚೂರುಗಳನ್ನಾಗಿ ಕತ್ತರಿಸಿಕೊಳ್ಳಿ, ಇದಕ್ಕೆ 4-5 ಸ್ಪೂನ್‌ ತೆಂಗಿನೆಣ್ಣೆ ಸೇರಿಸಿ ನುಣ್ಣಗೆ ಗ್ರೈಂಡ್‌ ಮಾಡಿ, ಒಂದು ಬಾಣಲೆಯಲ್ಲಿ ಗ್ರೈಂಡ್‌ ಮಾಡಿಕೊಂಡ ಮಿಶ್ರಣ, 2 ಕಪ್‌ ತೆಂಗಿನೆಣ್ಣೆ ಸೇರಿಸಿ ಕಡಿಮೆ ಉರಿಯಲ್ಲಿ ಎಣ್ಣೆಯನ್ನು ಕುದಿಸಿ. ಎಣ್ಣೆ ಬಣ್ಣ ಬದಲಾಗುತ್ತಿದ್ದಂತೆ ಸ್ಟೋವ್‌ ಆಫ್‌ ಮಾಡಿ. ತಣ್ಣಗಾದ ನಂತರ ಈ ಮಿಶ್ರಣವನ್ನು ಒಂದು ಜರಡಿಯಲ್ಲಿ ಶೋಧಿಸಿ ಸ್ಟೋರ್‌ ಮಾಡಿ, ಬೇಕಾದಾಗ ಬಳಸಬಹುದು. ಹಾಗೇ ಮಾರುಕಟ್ಟೆಯಿಂದ ಶಾಂಪೂ ಬೇಸ್‌ ತಂದು ಅದರೊಂದಿಗೆ ಆನಿಯನ್‌ ಪೌಡರ್‌ ಸೇರಿಸಿ ಶಾಂಪೂ ರೀತಿ ಬಳಸಬಹುದು.

ವಿಭಾಗ