ಕನ್ನಡ ಸುದ್ದಿ  /  Lifestyle  /  Health News Ovarian Cancer Ovarian Cancer Is Becoming Deadly For Women Don't Ignore These Symptoms Rst

Ovarian Cancer: ಮಹಿಳೆಯರಿಗೆ ಮಾರಕವಾಗುತ್ತಿದೆ ಅಂಡಾಶಯದ ಕ್ಯಾನ್ಸರ್‌; ಓವರಿಯನ್‌ ಕ್ಯಾನ್ಸರ್‌ನ ಈ ಲಕ್ಷಣಗಳನ್ನ ನಿರ್ಲಕ್ಷ್ಯ ಮಾಡದಿರಿ

ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಅಂಡಾಶಯದ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಮಹಿಳೆಯರಲ್ಲಿ ಆಗುತ್ತಿರುವ ಕ್ಯಾನ್ಸರ್ ಸಂಬಂಧಿತ ಸಾವುಗಳಲ್ಲಿ ಓವರಿಯನ್ ಕ್ಯಾನ್ಸರ್ ಐದನೇ ಸಾಮಾನ್ಯ ಕಾರಣವಾಗಿದೆ. ಇದರ ಲಕ್ಷಣಗಳು ಹಾಗೂ ಚಿಕಿತ್ಸೆಯ ಬಗ್ಗೆ ವಿವರಣೆ ನೀಡಿದ್ದಾರೆ ಡಾ. ರಾಜಶೇಖರ್ ಸಿ ಜಾಕಾ

ಮಹಿಳೆಯರಿಗೆ ಮಾರಕವಾಗುತ್ತಿದೆ ಅಂಡಾಯದ ಕ್ಯಾನ್ಸರ್‌
ಮಹಿಳೆಯರಿಗೆ ಮಾರಕವಾಗುತ್ತಿದೆ ಅಂಡಾಯದ ಕ್ಯಾನ್ಸರ್‌

ವಿಶ್ವದಾದ್ಯಂತ ಹೆಚ್ಚು ಜನರ ಸಾವಿಗೆ ಕಾರಣವಾಗುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಕ್ಯಾನ್ಸರ್‌ ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ ದಿನೇ ದಿನೇ ಕ್ಯಾನ್ಸರ್‌ ರೋಗಿಗಳ ಪ್ರಮಾಣ ಹೆಚ್ಚುತ್ತಿದೆ. ಮಹಿಳೆಯರು ಕ್ಯಾನ್ಸರ್‌ ರೋಗಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಏರಿಕೆಯಾಗುತ್ತಿದೆ. ಸ್ತನ ಕ್ಯಾನ್ಸರ್‌ ಮಹಿಳೆಯರನ್ನು ಹೆಚ್ಚು ಕಾಡುತ್ತಿದ್ದರೂ, ಇನ್ನೂ ಕೆಲವು ಕ್ಯಾನ್ಸರ್‌ಗಳು ಮಹಿಳೆಯರಿಗೆ ಮಾರಕವಾಗಿದೆ. ಅದರಲ್ಲಿ ಓವರಿಯನ್‌ ಕ್ಯಾನ್ಸರ್‌ ಅಥವಾ ಅಂಡಾಶಯದ ಕ್ಯಾನ್ಸರ್‌ ಕೂಡ ಒಂದು.

ಭಾರತದಲ್ಲಿ, ಪ್ರತಿವರ್ಷ ಸುಮಾರು 45,000 ಹೊಸ ಓವರಿಯನ್ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತವೆ, ಇದು ದೇಶದ ಮಹಿಳೆಯರಲ್ಲಿ ಕಾಡುತ್ತಿರುವ ಮೂರನೇ ಅತಿ ಹೆಚ್ಚು ಪ್ರಚಲಿತ ಕ್ಯಾನ್ಸರ್ ಪ್ರಕಾರವಾಗಿದೆ. ವಿಷಾದದ ಸಂಗತಿಯೆಂದರೆ, ಭಾರತದಲ್ಲಿ ಓವರಿಯನ್ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯನ್ನು ಜಾಗತಿಕ ಮಟ್ಟದಲ್ಲಿ ಮೀರಿಸಿರುವುದು ಚೀನಾ ಮಾತ್ರ, ಹಾಗಾಗಿ ಇದು ಜಗತ್ತಿನ ಜನಸಂಖ್ಯೆಯನ್ನು ಪರಿಗಣಿಸುವಾಗ ಅದರ ಗಮನಾರ್ಹ ಪರಿಣಾಮವನ್ನು ಒತ್ತಿ ಹೇಳುತ್ತದೆ.

ದಕ್ಷಿಣ ಮಧ್ಯ ಏಷ್ಯಾದ ಪ್ರದೇಶದಲ್ಲಿ ಓವರಿಯನ್ ಕ್ಯಾನ್ಸರ್‌ಗೆ ಸಂಬಂಧಿಸಿದ ಸುಮಾರು ಶೇ 76 ಪ್ರಕರಣಗಳು ಮತ್ತು ಶೇ 77 ಸಾವುಗಳಿಗೆ ಭಾರತ ಕಾರಣವಾಗಿದೆ. ಭಾರತದಲ್ಲಿ ಓವರಿಯನ್ ಕ್ಯಾನ್ಸರ್ ಕಠಿಣವಾದ ಸವಾಲನ್ನು ಪ್ರಸ್ತುತಪಡಿಸುತ್ತದೆ. ಇದು ಹೆಚ್ಚಾಗಿ ಕೊನೆಯ ಹಂತದಲ್ಲಿ ರೋಗ ನಿರ್ಣಯವಾಗುವ ಕಾರಣದಿಂದಾಗಿ ಬದುಕುಳಿಯುವ ಪ್ರಮಾಣವು ಕೇವಲ ಶೇ 45 ರಷ್ಟು ಆಗಿದೆ. ಇದು ಸಾಮಾನ್ಯವಾಗಿ ಹಂತ 3 ಅಥವಾ 4 ನೇ ಹಂತದಲ್ಲಿ ಕಂಡುಬರುತ್ತದೆ. ಖಚಿತವಾಗಿ ಗುರುತಿಸಬಲ್ಲ ಆರಂಭಿಕ ರೋಗಲಕ್ಷಣಗಳ ಕೊರತೆ ಮತ್ತು ಸ್ತನ ಕ್ಯಾನ್ಸರ್‌ಗೆ ಲಭ್ಯವಿರುವ ಪರೀಕ್ಷೆಗಳಿಗೆ ಹೋಲಿಸಿದರೆ ಪರಿಣಾಮಕಾರಿ ಸ್ಕ್ರೀನಿಂಗ್ ಪರೀಕ್ಷೆಗಳ ಅನುಪಸ್ಥಿತಿಯು ಭಾರತದಲ್ಲಿ ಓವರಿಯನ್ ಕ್ಯಾನ್ಸರ್‌ಗೆ ಸಂಬಂಧಿಸಿದ ಹೆಚ್ಚಿನ ಮರಣ ಪ್ರಮಾಣಕ್ಕೆ ಗಣನೀಯ ಕಾರಣವಾಗಿದೆ.

ಅಂಡಾಯದ ಕ್ಯಾನ್ಸರ್‌ನ ಲಕ್ಷಣಗಳಿವು

ಓವರಿಯನ್ ಕ್ಯಾನ್ಸರ್‌ನ ಲಕ್ಷಣಗಳಾದ ಕಿಬ್ಬೊಟ್ಟೆಯ ಉಬ್ಬುವಿಕೆ ಅಥವಾ ಗ್ಯಾಸ್ ಹೆಚ್ಚಾಗಿರುವ ಸಮಸ್ಯೆಗಳನ್ನು ಅನೇಕ ಜನರು ಗ್ಯಾಸ್ಟ್ರಿಟೈಟಿಸ್ ಎಂದು ತಪ್ಪಾಗಿ ಗ್ರಹಿಸುತ್ತಾರೆ. ದುರದೃಷ್ಟವಶಾತ್, ಈ ತಪ್ಪಾದ ಗ್ರಹಿಕೆಯು ರೋಗಿಗಳಿಗೆ ವೃತ್ತಿಪರ ವೈದ್ಯಕೀಯ ಸಲಹೆಯನ್ನು ಪಡೆಯುವ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ. ಹೆಚ್ಚಿನ ಜನರು ತಾವೇ ಕೆಲವು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ, ಇದರಿಂದಾಗಿ ರೋಗನಿರ್ಣಯವು ಕೊನೆಯ ಹಂತದಲ್ಲಿ ಆಗುತ್ತದೆ. ಅದೃಷ್ಟವಶಾತ್, ಉದ್ದೇಶಿತ ಚಿಕಿತ್ಸೆಗಳು ಮತ್ತು ವ್ಯಾಪಕವಾದ ಸೈಟೋರೆಡಕ್ಟಿವ್ ಶಸ್ತ್ರಚಿಕಿತ್ಸೆಯ ಜೊತೆಗೆ HIPEC ಮತ್ತು PIPAC ನಂತಹ ಅತ್ಯಾಧುನಿಕ ವಿಧಾನಗಳನ್ನು ಒಳಗೊಂಡಂತೆ ಅಂಡಾಶಯದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಗಮನಾರ್ಹ ಪ್ರಗತಿಗಳು ಕಂಡುಬಂದಿವೆ. ಈ ಬೆಳವಣಿಗೆಗಳು ಮರಣ ಪ್ರಮಾಣದಲ್ಲಿ ಗಮನಾರ್ಹ ಸುಧಾರಣೆಗೆ ಕಾರಣವಾಗಿವೆ. ಆದರೆ, ಆರಂಭಿಕ ಹಂತದ ಪತ್ತೆಹಚ್ಚುವಿಕೆ ಇಲ್ಲಿ ನಿರ್ಣಾಯಕ ಅಂಶವಾಗಿದೆ. ಇದು ಸರಿಯಾದ ಸಮಯಕ್ಕೆ ರೋಗನಿರ್ಣಯ ಮತ್ತು ಪರಿಣಾಮಕಾರಿ ಚಿಕಿತ್ಸೆಗಾಗಿ ಅರ್ಹ ತಜ್ಞರನ್ನು ಸಂಪರ್ಕಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ.

ಅಂಡಾಶಯದ ಕ್ಯಾನ್ಸರ್‌ಗೆ ಚಿಕಿತ್ಸೆ

ಭಾರತದಲ್ಲಿ ಓವರಿಯನ್ ಕ್ಯಾನ್ಸರ್ ಹರಡುವಿಕೆಯು ಹೆಚ್ಚಿನ ಜನಜಾಗೃತಿ ಮತ್ತು ಸಕ್ರಿಯ ಹೆಲ್ತ್ ಕೇರ್ ಅಭ್ಯಾಸಗಳ ಅಗತ್ಯವನ್ನು ಒತ್ತಿ ಹೇಳುತ್ತದೆ. ಅದರ ಆತಂಕಕಾರಿ ಅಂಕಿ-ಅಂಶಗಳು ದಕ್ಷಿಣ ಮಧ್ಯ ಏಷ್ಯಾದ ಪ್ರದೇಶದಲ್ಲಿ ಅದರ ಹರಡುವಿಕೆಯನ್ನು ಬಹಿರಂಗಪಡಿಸುತ್ತದೆ ಮತ್ತು ಕೊನೆಯ ಹಂತದ ರೋಗನಿರ್ಣಯಗಳಿಗೆ ಸಂಬಂಧಿಸಿದ ಸವಾಲಿನ ಮುನ್ನರಿವು, ಆರಂಭಿಕ ಪತ್ತೆ ಮತ್ತು ಚಿಕೆತ್ಸೆ ಪಡೆಯುವ ತುರ್ತುಸ್ಥಿತಿಯನ್ನು ಒತ್ತಿಹೇಳುತ್ತದೆ. ಉದ್ದೇಶಿತ ಚಿಕಿತ್ಸೆಗಳು ಮತ್ತು ವ್ಯಾಪಕವಾದ ಶಸ್ತ್ರಚಿಕಿತ್ಸಾ ಆಯ್ಕೆಗಳೊಂದಿಗೆ HIPEC ಮತ್ತು PIPAC ನಂತಹ ಸುಧಾರಿತ ಚಿಕಿತ್ಸೆಗಳ ಪ್ರಗತಿಯು ಸುಧಾರಿತ ಫಲಿತಾಂಶಗಳನ್ನು ನೀಡುವ ಹೊಸ ಭರವಸೆಯನ್ನು ನಮಗೆ ನೀಡುತ್ತಿದೆ. ಅದೇನೇ ಇರಲಿ, ಪ್ರಾಥಮಿಕವಾಗಿ ನಮ್ಮ ಗಮನವು ಶಿಕ್ಷಣ, ನಿಯಮಿತ ಸ್ಕ್ರೀನಿಂಗ್‌ಗಳು ಮತ್ತು ಅರ್ಹ ವೈದ್ಯಕೀಯ ವೃತ್ತಿಪರರೊಂದಿಗೆ ತ್ವರಿತ ಸಮಾಲೋಚನೆಯ ಮೇಲೆ ಇರಬೇಕು. ಆರಂಭಿಕ ಹಂತದಲ್ಲಿ ಪತ್ತೆಹಚ್ಚುವಿಕೆ ಮತ್ತು ತಿಳುವಳಿಕೆಯುಳ್ಳ ವೈದ್ಯಕೀಯ ನಿರ್ಧಾರ ತೆಗೆದುಕೊಳ್ಳುವ ಅಭ್ಯಾಸವನ್ನು ಬೆಳೆಸುವ ಮೂಲಕ, ನಾವು ಈ ಅಪಾಯಕಾರಿ ಕ್ಯಾನ್ಸರ್ ಅನ್ನು ತಡೆಯಲು ಪ್ರಯತ್ನಿಸಬಹುದು ಮತ್ತು ಭಾರತದಲ್ಲಿ ಮತ್ತು ಹೊರದೇಶಗಳಲ್ಲಿ ಓವರಿಯನ್ ಕ್ಯಾನ್ಸರ್ ಎದುರಿಸುತ್ತಿರುವ ವ್ಯಕ್ತಿಗಳ ಭವಿಷ್ಯವನ್ನು ಹಸನಾಗಿಸಲು ಪ್ರಯತ್ನಿಸಬಹುದು.

ಲೇಖಕರು: ಡಾ. ರಾಜಶೇಖರ್ ಸಿ ಜಾಕಾ, ಕನ್ಸಲ್ಟೆಂಟ್ - ಸರ್ಜಿಕಲ್ ಆಂಕೊಲಾಜಿ, ರೋಬೋಟಿಕ್ ಸರ್ಜರಿ, ಮಣಿಪಾಲ್ ಆಸ್ಪತ್ರೆ ವೈಟ್‌ಫೀಲ್ಡ್

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ