Stomach Cancer: ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹೊಟ್ಟೆಯ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚುತ್ತಿರುವುದೇಕೆ?
ಕನ್ನಡ ಸುದ್ದಿ  /  ಜೀವನಶೈಲಿ  /  Stomach Cancer: ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹೊಟ್ಟೆಯ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚುತ್ತಿರುವುದೇಕೆ?

Stomach Cancer: ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹೊಟ್ಟೆಯ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚುತ್ತಿರುವುದೇಕೆ?

Stomach Cancer: ಗ್ಯಾಸ್ಟ್ರಿಕ್‌ ಕ್ಯಾನ್ಸರ್‌ ಅಥವಾ ಹೊಟ್ಟೆಯ ಕ್ಯಾನ್ಸರ್‌ಗೆ ನಿಖರ ಕಾರಣಗಳು ಇಲ್ಲದಿದ್ದರೂ ಅನುವಂಶಿಕ, ಧೂಮಪಾನ, ಮದ್ಯಪಾನ, ಮಸಾಲೆಯುಕ್ತ ಆಹಾರ ಪದಾರ್ಥಗಳು, ತಂಬಾಕು ಸೇವನೆಯೇ ಕಾರಣ ಎಂದು ವೈದ್ಯರು ಹೇಳುತ್ತಾರೆ.

ಭಾರತದಲ್ಲಿ ಹೆಚ್ಚುತ್ತಿರುವ ಹೊಟ್ಟೆಯ ಕ್ಯಾನ್ಸರ್‌ ಪ್ರಕರಣಗಳು
ಭಾರತದಲ್ಲಿ ಹೆಚ್ಚುತ್ತಿರುವ ಹೊಟ್ಟೆಯ ಕ್ಯಾನ್ಸರ್‌ ಪ್ರಕರಣಗಳು (PC: Unsplash)

Stomach Cancer: ಜನರು ಎದುರಿಸುತ್ತಿರುವ ಗಂಭೀರ ಆರೋಗ್ಯ ಸಮಸ್ಯೆಗಳಲ್ಲಿ ಕ್ಯಾನ್ಸರ್‌ ಕೂಡಾ ಒಂದು. ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಹೊಟ್ಟೆ ಕ್ಯಾನ್ಸರ್‌ ಹೆಚ್ಚಾಗುತ್ತಿದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ದಿನೇ ದಿನ ಈ ಪ್ರಕರಣ ಹೆಚ್ಚುತ್ತಲೇ ಇದೆ. ಪುರುಷರಲ್ಲಿ ಹೊಟ್ಟೆಯ ಕ್ಯಾನ್ಸರ್‌ 5ನೇ ಹಾಗೂ ಮಹಿಳೆಯರಲ್ಲಿ 7ನೇ ಕ್ಯಾನ್ಸರ್‌ ಆಗಿದೆ. ಜಾಗತಿಕವಾಗಿ ಹೊಟ್ಟೆಯ ಕ್ಯಾನ್ಸರ್‌ 2ನೇ ಸಾಮಾನ್ಯ ಕಾರಣವಾಗಿದೆ.

ಭಾರತದ ಆಹಾರ ಪದ್ದತಿ ಪ್ರಮುಖ ಕಾರಣ

ಜೀವನ ಶೈಲಿ, ಭಾರತದ ಆಹಾರ ಪದ್ಧತಿ, ಆಲ್ಕೋಹಾಲ್‌ ಸೇವನೆ ಸೇರಿದಂತೆ ಇನ್ನಿತರ ಅಂಶಗಳು ಹೊಟ್ಟೆಯ ಕ್ಯಾನ್ಸರ್‌ಗೆ ಕಾರಣ ಎನ್ನಲಾಗುತ್ತಿದೆ. ನಿರಂತರ ಹೊಟ್ಟೆ ನೋವು, ಅಸ್ವಸ್ಥತೆ, ತೂಕ ನಷ್ಟ, ಹಸಿವು ಆಗದೆ ಇರುವುದು, ನುಂಗಲು ತೊಂದರೆ, ವಾಕರಿಗೆ, ಮಲದಲ್ಲಿ ರಕ್ತ ಹಾಗೂ ಇನ್ನಿತರ ಅಂಶಗಳು ಹೊಟ್ಟೆಯ ಕ್ಯಾನ್ಸರ್‌ ಲಕ್ಷಣಗಳಾಗಿವೆ. ಆರಂಭಿಕ ಹಂತದ ಹೊಟ್ಟೆಯ ಕ್ಯಾನ್ಸರ್‌ ಗಮನಾರ್ಹ ಲಕ್ಷಣಗಳನ್ನು ಹೊಂದಿಲ್ಲದೆ ಇರುವ ಕಾರಣ 40 ವರ್ಷ ತುಂಬಿದ ನಂತರ ಹೆಚ್ಚಿನ ಅಪಾಯವನ್ನು ತಪ್ಪಿಸಲು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಅವಶ್ಯಕ ಎಂದು ವೈದ್ಯರು ಸೂಚಿಸುತ್ತಾರೆ. ಅಡೆನೊಕಾರ್ಸಿನೊಮಾ, ಪಿಂಫೋಮಾ, ಸ್ಟೋಮಲ್‌ ಟ್ಯೂಮರ್‌ಗಗಳು ಹೊಟ್ಟೆಯ ಕ್ಯಾನ್ಸರ್‌ನ ವಿಧಗಳು. ಹೊಟ್ಟೆಯ ಕ್ಯಾನ್ಸರ್‌ ಮಾರಣಾಂತಿಕವಾಗಿದೆ.

ಆರಂಭಿಕ ಹಂತದಲ್ಲಿ ಚಿಕಿತ್ಸೆ ಸಾಧ್ಯ

ಗ್ಯಾಸ್ಟ್ರಿಕ್‌ ಕ್ಯಾನ್ಸರ್‌ ಅಥವಾ ಹೊಟ್ಟೆಯ ಕ್ಯಾನ್ಸರ್‌ಗೆ ನಿಖರ ಕಾರಣಗಳು ಇಲ್ಲದಿದ್ದರೂ ಅನುವಂಶಿಕ, ಧೂಮಪಾನ, ಮದ್ಯಪಾನ, ಮಸಾಲೆಯುಕ್ತ ಆಹಾರ ಪದಾರ್ಥಗಳು, ತಂಬಾಕು ಸೇವನೆಯೇ ಕಾರಣ ಎಂದು ವೈದ್ಯರು ಹೇಳುತ್ತಾರೆ. ಆರಂಭದಲ್ಲಿ ಹೊಟ್ಟೆಯ ಕ್ಯಾನ್ಸರ್‌ ಗುರುತಿಸಿದರೆ ಶಸ್ತ್ರಚಿಕಿತ್ಸೆ, ರೆಡಿಯೋಥೆರಪಿ, ಕೀಮೊಥೆರಪಿ ಸೇರಿದಂತೆ ವಿವಿಧ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು. ಆದರೆ ಇದು ಒಂದೊಂದೇ ಹಂತ ದಾಟಿದಲ್ಲಿ ಚಿಕಿತ್ಸೆಗೆ ದೇಹವು ಸ್ಪಂದಿಸುವುದಿಲ್ಲ. ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಹೊಟ್ಟೆಯ ಕ್ಯಾನ್ಸರ್‌ ಅಪಾಯವು ಇಳಿಮುಖವಾಗಿದೆ. ಆದರೆ ಭಾರತದಂಥ ದೇಶದಲ್ಲಿ ಇತರ ದೇಶಗಳಿಗಿಂತ ವಿಭಿನ್ನ ಜೀವನಶೈಲಿ, ಆಹಾರ ಪದಾರ್ಥ, ವ್ಯಸನಗಳು ಹೊಟ್ಟೆಯ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದೆ.

ಜೀವನಶೈಲಿ ಬದಲಾವಣೆಗೆ ಶಿಫಾರಸು

ಹೊಟ್ಟೆಯ ಕ್ಯಾನ್ಸರ್‌ ಅಪಾಯವನ್ನು ತಪ್ಪಿಸಲು ಜೀವನಶೈಲಿ ಬದಲಾಗಬೇಕು, ಧೂಮಪಾನ, ಮದ್ಯಪಾನ, ಹೆಚ್ಚಿನ ಮಸಾಲೆಯುಕ್ತ ಆಹಾರ ಸೇವನೆಯನ್ನು ಬಿಡಬೇಕು. ಆಹಾರ ಪದ್ದತಿ ಸುಧಾರಿಸಬೇಕಿದೆ. ತಾಜಾ ಹಣ್ಣು ತರಕಾರಿಗಳು, ತಮತೋಲಿತ ಆಹಾರ ಸೇವನೆ, ಸಂಸ್ಕರಿಸಿದ ಆಹಾರ ಸೇವನೆಯನ್ನು ನಿಲ್ಲಿಸುವುದು, ಧೂಮಪಾನ, ಆಲ್ಕೋಹಾಲ್‌ ತ್ಯಜಿಸುವುದು, ನಿಯಮಿತ ವೈದ್ಯಕೀಯ ತಪಾಸಣೆ ಮೂಲಕ ಹೊಟ್ಟೆಯ ಕ್ಯಾನ್ಸರ್‌ ಬರುವುದನ್ನು ತಡೆಗಟ್ಟಬಹುದು. ಅದರಲ್ಲೂ ಅನುವಂಶೀಯ ಸಮಸ್ಯೆ ಇರುವವರು ತಪ್ಪದೆ ಆಗ್ಗಾಗ್ಗೆ ಚೆಕಪ್‌ ಮಾಡಿಸಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

Whats_app_banner