Kitchen Tips: ಮಾವಿನ ಹಣ್ಣುಗಳನ್ನು ಈ ರೀತಿ ಶೇಖರಿಸಿದರೆ 6 ತಿಂಗಳ ಕಾಲ ಕೆಡುವುದಿಲ್ಲ; ಸೀಸನ್ ಮುಗಿದ ನಂತರವೂ ತಿನ್ನಬಹುದು
Kitchen Tips: ಬೇಸಿಗೆಕಾಲ ಬಂತು ಎಂದರೆ ಸಾಕು ಮಾವಿನ ಹಣ್ಣಿನ ಋತು ಶುರುವಾದಂತೆ. ಯಾರ ಮನೆಯಲ್ಲಿ ನೋಡಿದರೂ ಮಾವಿನ ಹಣ್ಣಿನ ಘಮ. ಆದರೆ 2-3 ತಿಂಗಳ ನಂತರ ಮಾವಿನ ಸೀಸನ್ ಮುಗಿಯುತ್ತದೆ. ಈ ಮಾವಿನ ಹಣ್ಣುಗಳನ್ನು ಅರ್ಧ ವರ್ಷಗಳ ಕಾಲ ಕೆಡದಂತೆ ನೋಡಿಕೊಳ್ಳಲು ಇಲ್ಲಿದೆ ಸರಳ ವಿಧಾನ.

Kitchen Tips: ಹೆಚ್ಚು ಕಡಿಮೆ ಮಾರ್ಚ್ ತಿಂಗಳಿಂದಲೇ ಮಾರುಕಟ್ಟೆಗಳಲ್ಲಿ ಮಾವಿನ ಹಣ್ಣು ಸಿಗಲು ಶುರುವಾಗುತ್ತದೆ. ಆದರೆ ಮಾವಿನ ಹಣ್ಣುಗಳನ್ನು ಖರೀದಿ ಮಾಡಿ ಮನೆಗೆ ತಂದ ಬಳಿಕ ಅವುಗಳನ್ನು ಹೇಗೆ ಶೇಖರಣೆ ಹೇಗೆ ಎನ್ನುವುದೇ ದೊಡ್ಡ ಸಮಸ್ಯೆ. ಮಾವಿನ ಹಣ್ಣುಗಳಲ್ಲಿ ದಿನ ಕಳೆದಂತೆ ಇನ್ನಷ್ಟು ಮೆದುವಾಗಿ ತಮ್ಮ ರುಚಿಯನ್ನು ಕಳೆದುಕೊಂಡು ಬಳಿಕ ಸಂಪೂರ್ಣ ಹಾಳಾಗಿಬಿಡುತ್ತದೆ. ಮಾವಿನ ಹಣ್ಣಿನಿಂದ ವಾಸನೆ ಬರುವುದು ಮಾತ್ರವಲ್ಲದೇ ಒಳಗೆ ಹುಳುಗಳು ಕಾಣಿಸಿಕೊಳ್ಳಲು ಆರಂಭಿಸುತ್ತದೆ.
ಮಾವಿನ ಹಣ್ಣುಗಳನ್ನು ಸರಿಯಾದ ರೀತಿಯಲ್ಲಿ ಶೇಖರಿಸುವುದು ಹೇಗೆ..?
ನೀವು ಮಾವಿನ ಹಣ್ಣುಗಳನ್ನು ಹೇಗೆ ಸಂರಕ್ಷಿಸಿಕೊಳ್ಳುತ್ತೀರಿ ಎಂಬುವುದು ಅವುಗಳು ಹಣ್ಣಾಗಿದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಅವಲಂಬಿತವಾಗುತ್ತದೆ. ಇನ್ನೂ ಮಾಗದ ಮಾವಿನ ಹಣ್ಣುಗಳನ್ನು ಎಂದಿಗೂ ರೆಫ್ರಿಜರೇಟರ್‌ನಲ್ಲಿ ಶೇಖರಿಸಿ ಇಡಬಾರದು. ಅವುಗಳನ್ನು ನೈಸರ್ಗಿಕ ಉಷ್ಣಾಂಶದ ನಡುವೆಯೇ ಶೇಖರಿಸಿ ಇಡಬೇಕು. ಹೀಗೆ ಇಟ್ಟಾಗ ಮಾತ್ರ ಅವುಗಳು ಕೆಲವು ದಿನಗಳ ಬಳಿಕ ಹಣ್ಣಾಗುತ್ತದೆ. ನಿಮಗೆ ಮಾವಿನ ಕಾಯಿ ಬೇಗ ಹಣ್ಣಾಗಬೇಕು ಎಂದಿದ್ದರೆ ಒಂದು ಬಾಕ್ಸಿನಲ್ಲಿ ಮಾವಿನ ಕಾಯಿಗಳನ್ನು ಇಟ್ಟು ಅವುಗಳಿಗೆ ಹುಲ್ಲು ಹಾಕಿ ಮುಚ್ಚಬೇಕು.
ನೀವು ಮಾರುಕಟ್ಟೆಯಿಂದ ಖರೀದಿಸಿ ತಂದಿರುವ ಮಾವಿನ ಹಣ್ಣುಗಳು ಅದಾಗಲೇ ಹಣ್ಣಾಗಿದ್ದರೆ ತಿಂದು ಮುಗಿಸುವುದು ಒಳ್ಳೆಯದು. ಒಂದೇ ಬಾರಿಗೆ ನಿಮಗೆ ತಿನ್ನಲು ಸಾಧ್ಯವಿಲ್ಲ ಎಂದಾದರೆ ನೀವು ಅವುಗಳನ್ನು ಚೆನ್ನಾಗಿ ತೊಳೆದು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಮಾಗಿದ ಹಣ್ಣುಗಳಿಂದ ಸ್ಮೂದಿ ಅಥವಾ ಮಿಲ್ಕ್‌ಶೇಕ್ ತಯಾರಿಸಿ ಕುಡಿಯಲು ಸಹಾ ಖುಷಿ ಎನಿಸುತ್ತದೆ.
ರೆಫ್ರಿಜರೇಟರ್‌ನಲ್ಲಿ ಮಾವಿನ ಹಣ್ಣುಗಳನ್ನು ಹೇಗೆ ಇಡಬೇಕು..?
ಈಗಾಗಲೇ ಸಂಪೂರ್ಣವಾಗಿ ಮಾಗಿರುವ ಮಾವಿನ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬಹುದು. ರೆಫ್ರಿಜರೇಟರ್‌ನಲ್ಲಿರುವ ತಾಪಮಾನವು ಮಾವಿನ ಹಣ್ಣು ಇನ್ನಷ್ಟು ಮಾಗುವುದನ್ನು ನಿಧಾನಗೊಳಿಸುತ್ತದೆ. ಹೀಗಾಗಿ ಇನ್ನೂ ಕೆಲವು ದಿನಗಳ ಕಾಲ ನೀವು ಆರಾಮದಾಯಕವಾಗಿ ಮಾವಿನ ಹಣ್ಣುಗಳನ್ನು ಸೇವನೆ ಮಾಡಬಹುದಾಗಿದೆ. ಮಾಗಿದ ಮಾವಿನ ಹಣ್ಣುಗಳು ಫ್ರಿಡ್ಜ್‌ನಲ್ಲಿ 5 ದಿನಗಳ ಕಾಲ ಬಾಳಿಕೆ ಬರುತ್ತವೆ .
ಕತ್ತರಿಸಿದ ಮಾವಿನ ಹಣ್ಣುಗಳನ್ನು ಶೇಖರಿಸುವುದು ಹೇಗೆ..?
ಈಗಾಗಲೇ ನೀವು ಮಾವಿನ ಹಣ್ಣುಗಳನ್ನು ಕತ್ತರಿಸಿಬಿಟ್ಟಿದ್ದೀರಿ. ಆದರೆ ಸಂಪೂರ್ಣವಾಗಿ ತಿಂದು ಮುಗಿಸಲು ನಿಮ್ಮಿಂದ ಸಾಧ್ಯವಾಗಿಲ್ಲ ಎಂದಾದಲ್ಲಿ ನೀವು ಮಾವಿನ ಹಣ್ಣುಗಳ ತುಂಡುಗಳನ್ನು ಗಾಳಿಯಾಡದ ಬಾಕ್ಸ್‌ನಲ್ಲಿ ಹಾಕಬೇಕು. ಇದನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟರೆ ಐದಾರು ದಿನಗಳವರೆಗೆ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ. ಇದಕ್ಕೂ ಹೆಚ್ಚು ಸಮಯ ಇಟ್ಟರೆ ಹುಳಿ ವಾಸನೆ ಬರುವ ಸಾಧ್ಯತೆ ಇರುತ್ತದೆ.
6 ತಿಂಗಳ ಕಾಲ ನೀವು ಮಾವಿನ ಹಣ್ಣುಗಳನ್ನು ಶೇಖರಿಸಬಹುದು..!
ಇದು ನಿಮಗೆ ಆಶ್ಚರ್ಯವೆನಿಸಿದರೂ ಕೂಡ ಸತ್ಯ. ಇದಕ್ಕಾಗಿ ನೀವು ಮಾಡಬೇಕಾಗಿರೋದು ಇಷ್ಟೇ. ಮಾರುಕಟ್ಟೆಯಲ್ಲಿ ಸಿಗುವ ಬೇಕಿಂಗ್ ಶೀಟ್‌ಗಳನ್ನು ಮನೆಗೆ ತನ್ನಿ. ಇವುಗಳನ್ನು ಮಾವಿನ ಹಣ್ಣುಗಳ ತುಂಡನ್ನು ಇಟ್ಟು ಚೆನ್ನಾಗಿ ಸುತ್ತಿ. ಒಂದು ಮಾವಿನ ಹಣ್ಣಿನ ತುಂಡು ಇನ್ನೊಂದಕ್ಕೆ ತಾಗದಂತೆ ಇರಲಿ.
ಈಗ ಬೇಕಿಂಗ್ ಶೀಟ್‌ಗಳನ್ನು ಸುಮಾರು 2-3 ಗಂಟೆಗಳ ಕಾಲ ಫ್ರೀಜರ್‌ನಲ್ಲಿಟ್ಟು ಮಾವಿನ ಹಣ್ಣುಗಳನ್ನು ಫ್ರೀಜ್ ಮಾಡಿ. ಒಮ್ಮೆ ಮಾವಿನ ಹಣ್ಣು ಸರಿಯಾಗಿ ಫ್ರೀಜ್ ಆದ ಬಳಿಕ ಇವುಗಳನ್ನು ಫ್ರೀಜರ್ ಸುರಕ್ಷಿತ ಬ್ಯಾಗ್ ಒಳಗೆ ಹಾಕಿ. ಆ ಬ್ಯಾಗ್‌ನಲ್ಲಿ ಸ್ವಲ್ಪವೂ ಗಾಳಿ ಶೇಖರಣೆಯಾಗಿರದಂತೆ ನೋಡಿಕೊಳ್ಳಿ. ಚೀಲವನ್ನು ಗಟ್ಟಿಯಾಗಿ ಲಾಕ್ ಮಾಡಿ ಯಾವ ದಿನಾಂಕದಂದು ನೀವು ಮಾವಿನ ಹಣ್ಣನ್ನು ಈ ರೀತಿ ಫ್ರೀಜ್ ಮಾಡಿದ್ದೀರಿ ಎಂದು ಬರೆದಿಡಿ.
ಈ ವಿಧಾನದ ಮೂಲಕ ನೀವು ಮಾವಿನ ಹಣ್ಣುಗಳನ್ನು ಆರು ತಿಂಗಳುಗಳ ಕಾಲ ತಾಜಾತನ ಹಾಗೆಯೇ ಇರುವಂತೆ ನೋಡಿಕೊಳ್ಳಬಹುದಾಗಿದೆ. ಈ ಮಾವಿನ ಹಣ್ಣುಗಳನ್ನು ಬಳಸಬೇಕು ಎಂದಾದಾಗ ಪಾತ್ರೆಯೊಂದಕ್ಕೆ ತಣ್ಣೀರನ್ನು ಹಾಕಿ ಇದರಲ್ಲಿ ಫ್ರೀಜ್ ಮಾಡಿರುವ ಮಾವಿನ ಹಣ್ಣುಗಳನ್ನು ಸುಮಾರು ಮೂರು ಗಂಟೆಗಳ ಕಾಲ ಇರಿಸಿದರೆ ಮಾವಿನ ಹಣ್ಣು ಸಾಮಾನ್ಯ ಸ್ಥಿತಿಗೆ ಬಂದು ತಲುಪುತ್ತದೆ. ತಾಜಾ ಮಾವಿನ ಹಣ್ಣಿಗೆ ಹೋಲಿಕೆ ಮಾಡಿದರೆ ಈ ಹಣ್ಣುಗಳು ಹೆಚ್ಚು ಮೆದುವಾಗಿರುತ್ತದೆ. ಆದರೆ ರುಚಿಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ.

ವಿಭಾಗ