ಕನ್ನಡ ಸುದ್ದಿ  /  Lifestyle  /  Kitchen Tips How To Become Good Cook How To Fry Onion In Proper Way Cooking Tips In Kannada Rsa

Kitchen Tips: ಸರಿಯಾದ ರೀತಿಯಲ್ಲಿ ಈರುಳ್ಳಿಯನ್ನು ಹುರಿದುಕೊಳ್ಳುವುದು ಹೇಗೆ; ಈ 6 ಟಿಪ್ಸ್‌ ಪಾಲಿಸಿ ಒಳ್ಳೆ ಕುಕ್‌ ಎನಿಸಿಕೊಳ್ಳಿ

Kitchen Tips: ಅಡುಗೆ ಮಾಡುವಾಗ ಈರುಳ್ಳಿ ಹುರಿಯುವುದು ಸರಳ ಕೆಲಸ ಎನಿಸಿದರೂ ಅನೇಕರಿಗೆ ಇದನ್ನು ಸರಿಯಾಗಿ ಫ್ರೈ ಮಾಡಲು ಬರುವುದಿಲ್ಲ. ನಾವು ಮಾಡುವ ಚಿಕ್ಕ ಪುಟ್ಟ ತಪ್ಪುಗಳಿಂದಲೇ ಈರುಳ್ಳಿ ಸರಿಯಾಗಿ ಫ್ರೈ ಆಗುವುದಿಲ್ಲ. ಈರುಳ್ಳಿ ಹುರಿದುಕೊಳ್ಳುವ ಮುನ್ನ ನಾವು ಯಾವೆಲ್ಲ ವಿಚಾರದ ಬಗ್ಗೆ ಗಮನ ಹರಿಸಬೇಕು ಎಂಬುದಕ್ಕೆ ಮಾಹಿತಿ ಇಲ್ಲಿದೆ ನೋಡಿ.

ಈರುಳ್ಳಿಯನ್ನು ಸರಿಯಾದ ರೀತಿ ಹುರಿಯಲು ಟಿಪ್ಸ್‌
ಈರುಳ್ಳಿಯನ್ನು ಸರಿಯಾದ ರೀತಿ ಹುರಿಯಲು ಟಿಪ್ಸ್‌ (PC: Unsplash)

Kitchen Tips: ದಿನನಿತ್ಯದ ಅಡುಗೆಗೆ ಸಾಮಾನ್ಯವಾಗಿ ಈರುಳ್ಳಿ ಬಳಸುತ್ತೇವೆ. ಆಹಾರಕ್ಕೆ ಒಳ್ಳೆಯ ಘಮ ನೀಡಲು, ರುಚಿಯನ್ನು ಹೆಚ್ಚಿಸಲು ಈರುಳ್ಳಿ ಸಹಾಯ ಮಾಡುತ್ತದೆ. ಕೆಲವು ಆಹಾರಗಳಿಗೆ ಹಸಿ ಈರುಳ್ಳಿಯನ್ನೂ ಬಳಕೆ ಮಾಡಲಾಗುತ್ತದೆ. ಆದರೆ ಈ ಈರುಳ್ಳಿಯನ್ನು ಎಣ್ಣೆಯಲ್ಲಿ ಹುರಿಯುವ ಸಂದರ್ಭದಲ್ಲಿ ಅನೇಕ ಬಾರಿ ಅದು ಹೆಚ್ಚು ಬೆಂದು ಸುಟ್ಟ ವಾಸನೆ ಬಂದು ಬಿಡುತ್ತದೆ. ಇದು ಸಂಪೂರ್ಣ ಖಾದ್ಯದ ರುಚಿಯನ್ನೇ ಹಾಳು ಮಾಡಿಬಿಡಬಹುದು. ಹೀಗಾಗಿ ಸರಿಯಾದ ಕ್ರಮದಲ್ಲಿ ಈರುಳ್ಳಿಯನ್ನು ಹುರಿದುಕೊಳ್ಳುವುದು ಹೇಗೆ ಎಂಬುದಕ್ಕೆ ಸಲಹೆ ಇಲ್ಲಿದೆ ನೋಡಿ

1. ಸಮನಾಗಿ ಕತ್ತರಿಸಬೇಕು: ಈರುಳ್ಳಿಯನ್ನು ಸಮನಾಗಿ ಕತ್ತರಿಸುವ ಮೂಲಕ ಈರುಳ್ಳಿ ಕರಟಿ ಹೋಗದಂತೆ ನೀವು ಎಚ್ಚರಿಕೆ ವಹಿಸಬಹುದಾಗಿದೆ. ಸಮನಾಗಿ ಕತ್ತರಿಸದಿದ್ದರೆ ಕೆಲವೊಂದು ಈರುಳ್ಳಿ ತುಂಡುಗಳು ಬೇಗ ಬೇಯ್ದರೆ ಇನ್ನೂ ಕೆಲವು ಬೇಯುವುದೇ ಇಲ್ಲ. ಹೀಗಾಗಿ ಈರುಳ್ಳಿಯನ್ನು ತೆಳುವಾಗಿ, ಸಮನಾದ ಗಾತ್ರದಲ್ಲಿ ಕತ್ತರಿಸಿಕೊಳ್ಳಬೇಕು.

2. ಕಡಿಮೆ - ಮಧ್ಯಮ ಉರಿಯಲ್ಲಿ ಬೇಯಿಸಿ : ಈರುಳ್ಳಿಯನ್ನು ಹುರಿಯುವಾಗ ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಇನ್ನೊಂದು ವಿಚಾರ ಏನೆಂದರೆ ಯಾವ ಉರಿಯಲ್ಲಿ ನೀವು ಅದನ್ನು ಬೇಯಿಸುತ್ತೀರಿ ಎನ್ನುವುದು ಮುಖ್ಯ. ಅನೇಕರು ಹೆಚ್ಚಿನ ಉರಿಯಲ್ಲಿ ಈರುಳ್ಳಿಯನ್ನು ಹುರಿಯುತ್ತಾರೆ. ಇದರಿಂದ ಈರುಳ್ಳಿ ಸುಡುವ ಸಾಧ್ಯತೆ ಹೆಚ್ಚಿರುತ್ತದೆ. ಎಂದಿಗೂ ಈರುಳ್ಳಿಯನ್ನು ಹುರಿದುಕೊಳ್ಳುವಾಗ ಕಡಿಮೆ ಅಥವಾ ಮಧ್ಯಮ ಉರಿ ಇರುವಂತೆ ನೋಡಿಕೊಳ್ಳುವುದು ಉತ್ತಮ.

3. ಸಾಕಷ್ಟು ಎಣ್ಣೆ ಬಳಸಿ : ನೀವು ಈರುಳ್ಳಿಯನ್ನು ಹುರಿದುಕೊಳ್ಳುವಾಗ ಎಷ್ಟು ಎಣ್ಣೆ ಬಳಕೆ ಮಾಡುತ್ತೀರಿ ಎಂಬುದೂ ಮುಖ್ಯವಾಗಿದೆ. ನೀವು ಈರುಳ್ಳಿಯನ್ನು ಹುರಿದುಕೊಳ್ಳುವಾಗ ತುಸು ಹೆಚ್ಚೇ ಎಣ್ಣೆಯನ್ನು ಬಳಸಿಕೊಳ್ಳಿ. ಇಲ್ಲವಾದಲ್ಲಿ ಈರುಳ್ಳಿ ಸರಿಯಾಗಿ ಬೇಯುವುದಿಲ್ಲ. ಹಾಗಂತ ಅತಿಯಾಗಿ ಎಣ್ಣೆಯನ್ನು ಹೊಯ್ಯುವುದೂ ಕೂಡ ಬೇಡ. ಹೀಗಾಗಿ ಸರಿಯಾದ ಪ್ರಮಾಣದಲ್ಲಿ ಎಣ್ಣೆಯನ್ನು ಬಳಕೆ ಮಾಡುವುದು ಮುಖ್ಯ. ಒಂದು ವೇಳೆ ಎಣ್ಣೆ ಹೆಚ್ಚಾಗಿದೆ ಎನಿಸಿದಲ್ಲಿ ಹೆಚ್ಚುವರಿ ಎಣ್ಣೆಯನ್ನು ತೆಗೆದು ಬೇರೆ ಅಡುಗೆಗೆ ಬಳಸಬಹುದು.

4. ಬಿಡದಂತೆ ಹುರಿಯುತ್ತಲೇ ಇರಬೇಕು: ಮಧ್ಯಮ ಉರಿಯಲ್ಲಿ ಸಮ ಪ್ರಮಾಣದ ಎಣ್ಣೆಯನ್ನು ಹಾಕಿ ಸಮನಾಗಿ ಕತ್ತರಿಸಿದ ಈರುಳ್ಳಿಯನ್ನು ಹಾಕಿದ ಮಾತ್ರಕ್ಕೆ ಅಲ್ಲಿಗೆ ನಿಮ್ಮ ಕೆಲಸ ಮುಗಿಯುವುದಿಲ್ಲ. ಈರುಳ್ಳಿಯನ್ನು ಹಾಕಿದ ಬಳಿಕ ನೀವು ಈರುಳ್ಳಿ ಪಾತ್ರೆಗೆ ಅಂಟದಂತೆ ನೋಡಿಕೊಳ್ಳಲು ಸೌಟಿನಿಂದ ಈರುಳ್ಳಿಯನ್ನು ಅಲುಗಾಡಿಸುತ್ತಲೇ ಇರಬೇಕು. ಆಗ ಮಾತ್ರ ಈರುಳ್ಳಿ ಚೆನ್ನಾಗಿ ಫ್ರೈ ಆಗುತ್ತದೆ.

5. ಅರಿಶಿಣ ಹಾಗೂ ಉಪ್ಪು ಬಳಕೆ : ಈರುಳ್ಳಿಯನ್ನು ಹುರಿದುಕೊಳ್ಳುವ ಸಂದರ್ಭದಲ್ಲಿ ಚಿಟಕೆ ಉಪ್ಪು ಹಾಗೂ ಅರಿಶಿಣದ ಪುಡಿಯನ್ನು ಸೇರಿಸಿಕೊಳ್ಳಬೇಕು. ಅರಿಶಿಣವು ಈರುಳ್ಳಿಗೆ ಚಂದನೆಯ ಹೊಂಬಣ್ಣವನ್ನು ನೀಡಿದರೆ ಉಪ್ಪು ಈರುಳ್ಳಿ ಕರಟಲು ಬಿಡುವುದಿಲ್ಲ. ಹೀಗಾಗಿ ಎಣ್ಣೆ ಕಾದ ಬಳಿಕ ಈರುಳ್ಳಿಯನ್ನು ಹಾಕಿ ಕೂಡಲೇ ಚಿಟಿಕೆ ಉಪ್ಪು ಹಾಗೂ ಅರಿಶಿಣ ಸೇರಿಸುವುದನ್ನು ಮರೆಯಬೇಡಿ. ಕೆಲವರು ಸಕ್ಕರೆಯನ್ನೂ ಸೇರಿಸುತ್ತಾರೆ.

6. ತಾಳ್ಮೆ ಇರಲಿ: ನೀವು ಉತ್ತಮ ಕುಕ್‌ ಆಗಲು ನಿಮಗೆ ಇರಬೇಕಾದ ಮೊದಲ ಲಕ್ಷಣವೆಂದರೆ ತಾಳ್ಮೆ. ಈರುಳ್ಳಿ ಹುರಿಯುವಾಗ ಕೂಡ ಇದೇ ತತ್ವ ಬಳಕೆಯಾಗುತ್ತದೆ. ತಾಳ್ಮೆ ಇಲ್ಲದವಂತೆ ನೀವು ಹೆಚ್ಚಿನ ಉರಿಯಲ್ಲಿ ಈರುಳ್ಳಿ ಬೇಯಿಸಲಾಗದು. ಹಾಗಂತ ಗಡಿಬಿಡಿಯಲ್ಲಿ ಬೇಗನೇ ಸ್ಟೌ ಬಂದ್ ಮಾಡಿದರೂ ಕೂಡ ಈರುಳ್ಳಿ ಸರಿಯಾಗಿ ಬೇಯುವುದಿಲ್ಲ. ತಾಳ್ಮೆಯಿಂದ ಈರುಳ್ಳಿ ಸರಿಯಾಗಿ ಫ್ರೈ ಮಾಡಲು ಸಮಯ ಕೊಟ್ಟು ಅಡುಗೆ ಮಾಡಿದರೆ ನಿಮ್ಮವರು ನಿಮ್ಮ ಕೈ ರುಚಿಯನ್ನು ಖಂಡಿತ ಹೊಗಳುತ್ತಾರೆ.

ವಿಭಾಗ