ಕನ್ನಡ ಸುದ್ದಿ  /  ಜೀವನಶೈಲಿ  /  Baby Food Recipes: ಶಿಶು ಆಹಾರದ ಹುಡುಕಾಟದಲ್ಲಿದ್ದೀರಾ? ಇಲ್ಲಿದೆ 8 ಬೆಸ್ಟ್‌ ಟ್ರಡಿಷನಲ್ ಬೇಬಿ ಫುಡ್‌ ರೆಸಿಪಿಗಳು

Baby Food Recipes: ಶಿಶು ಆಹಾರದ ಹುಡುಕಾಟದಲ್ಲಿದ್ದೀರಾ? ಇಲ್ಲಿದೆ 8 ಬೆಸ್ಟ್‌ ಟ್ರಡಿಷನಲ್ ಬೇಬಿ ಫುಡ್‌ ರೆಸಿಪಿಗಳು

ದೊಡ್ಡದೊಡ್ಡ ಕಂಪನಿಗಳ ‘ಡಬ್ಬ’ ಶಿಶು ಆಹಾರಗಳಲ್ಲಿ ಮಕ್ಕಳ ಆರೋಗ್ಯಕ್ಕೆ ಹಾನಿಕಾರಕ ಅಂಶಗಳು ಪತ್ತೆಯಾಗಿದೆ. ನೀವೇಕೆ ನಿಮ್ಮ ಮಗುವಿನ ಆರೋಗ್ಯವನ್ನು ಸಂಕಷ್ಟಕ್ಕೆ ದೂಡಬೇಕು? ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಶಿಶು ಆಹಾರ ತಯಾರಿಸಬಹುದು. ಭಾರತದ ವಿವಿಧೆಡೆ ಬಳಕೆಯಲ್ಲಿರುವ 8 ಬೆಸ್ಟ್ ಬೇಬಿ ಫುಡ್ ರೆಸಿಪಿಗಳು ಇಲ್ಲಿವೆ. (ಬರಹ: ಅರ್ಚನಾ ವಿ. ಭಟ್)

ಮನೆಯಲ್ಲೇ ತಯಾರಿಸಬಹುದಾದ ಬೇಬಿ ಫುಡ್ ರೆಸಿಪಿಗಳು
ಮನೆಯಲ್ಲೇ ತಯಾರಿಸಬಹುದಾದ ಬೇಬಿ ಫುಡ್ ರೆಸಿಪಿಗಳು (canva.com)

ಶಿಶು ಆಹಾರ: ನಿಮ್ಮ ಮುದ್ದು ಮಗುವಿಗೆ ಏನು ಆಹಾರ ಕೊಡುವುದು ಎಂಬ ಗೊಂದಲದಲ್ಲಿದ್ದೀರಾ? ನಮ್ಮ ಅಜ್ಜಿ–ಅಮ್ಮಂದಿರು ತಯಾರಿಸುತ್ತಿದ್ದ ಸಾಂಪ್ರದಾಯಿಕ ಪೌಷ್ಟಿಕ ಆಹಾರಗಳೇ ಉತ್ತಮ. ಮಗುವಿಗೂ ಬೇರೆ ಬೇರೆ ರುಚಿ ಬೇಕಲ್ಲ, ಅದಕ್ಕಾಗಿ ಇಲ್ಲಿದೆ ಶಿಶು ಆಹಾರದ ರೆಸಿಪಿಗಳು. ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ನಿಮ್ಮ ಮಕ್ಕಳ ಮನಸ್ಸು ಗೆಲ್ಲಿರಿ.

ಟ್ರೆಂಡಿಂಗ್​ ಸುದ್ದಿ

ತಾಯ್ತನ ಅನ್ನುವುದು ಎಷ್ಟು ಸಂತೋಷದ ವಿಷಯವೋ ಅಷ್ಟೇ ಜವಾಬ್ದಾರಿಯು ಅದರಲ್ಲಿದೆ. ನವಜಾತ ಶಿಶುವಿನ ಆರೈಕೆಯಿಂದ ಹಿಡಿದು, ಮಕ್ಕಳು ಬೆಳೆದು ಅವರ ವಿದ್ಯಾಭ್ಯಾಸ, ಕೆಲಸ, ಅವರ ಜೀವನ ಪ್ರತಿ ಹಂತದಲ್ಲೂ ತಾಯಿಯ ಪಾತ್ರ ಹಿರಿದು. ಚಿಕ್ಕ ಮಕ್ಕಳಿಗೆ ಹಾಲುಣಿಸಿ, ಅಗತ್ಯ ಆಹಾರಗಳನ್ನು ನೀಡಿ ಜೋಪಾನ ಮಾಡುವ ತಾಯಿ ಮಕ್ಕಳ ಆರೋಗ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸುತ್ತಾಳೆ. ತನ್ನ ಮಗುವಿಗೆ ಏನು ತಿಂದರೆ ಆಗುತ್ತದೆ, ಯಾವುದು ಆಗುವುದಿಲ್ಲ ಎಂಬುದರ ಬಗ್ಗೆ ಸ್ಟಷ್ಟ ಅರಿವು ತಾಯಿಯಾದವಳಿಗೆ ಇರುತ್ತದೆ. ಮೊದಲೆಲ್ಲಾ ಮನೆಯಲ್ಲೇ ತಯಾರಿಸಿದ ಆಹಾರಗಳನ್ನು ಮಗುವಿಗೆ ನೀಡಲಾಗುತ್ತಿತ್ತು. ಕ್ರಮೇಣ ಕಾಲ ಬದಲಾಯಿತು. ಆಧುನಿಕ ಯುಗದಲ್ಲಿ ಮನೆಯ ಹೊರಗೂ ದುಡಿಯುವ ಅನಿವಾರ್ಯತೆ ತಲೆದೂರಿತು. ಮಕ್ಕಳ ಲಾಲನೆ ಪಾಲನೆಗೆ ಬೇಕಾಗುವಷ್ಟು ಸಮಯದ ಅಭಾವ ಉಂಟಾಯಿತು.

ಆಗ ತಾಯಂದಿರು ರೆಡಿ–ಟು–ಫೀಡ್‌ ಆಹಾರಗಳನ್ನು ನೆಚ್ಚಿಕೊಂಡರು. ಸೆರಲ್ಯಾಕ್‌ಗಳಂತಹ ಶಿಶು ಆಹಾರಗಳು ಮಾರುಕಟ್ಟೆಯಲ್ಲಿ ಅಧಿಪತ್ಯ ಸ್ಥಾಪಿಸಿದವು. ನಗರದಿಂದ ಹಿಡಿದು ಹಳ್ಳಿಯವರೆಗೆ ಶಿಶು ಆಹಾರವೆಂದರೆ ಸೆರಲ್ಯಾಕ್‌ ಎನ್ನುವಷ್ಟು ಖ್ಯಾತಿ ಗಳಿಸಿತು. ಮಗುವಿಗೆ ಏನು ತಿನ್ನಿಸುತ್ತೀರಿ ಎಂದು ಯಾರಾದರೂ ಕೇಳಿದರೆ ಥಟ್ಟಂತ ಸೆರಲ್ಯಾಕ್‌ ಎಂದು ಹೇಳುತ್ತಿದ್ದರು. ಇತ್ತೀಚೆಗೆ ಭಾರತದ ಸೆರಲ್ಯಾಕ್‌ನಲ್ಲಿ ಉಳಿದ ರಾಷ್ಟ್ರಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನು ಬೆರಸಲಾಗುತ್ತಿದೆ ಎಂಬ ವಿಷಯ ಕೇಳಿಬರುತ್ತಿದೆ. ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಅರಿವಾಗುತ್ತಿದ್ದಂತೆ ಅಮ್ಮಂದಿರು ಸಾಂಪ್ರದಾಯಿಕ ಆಹಾರವೇ ನಮ್ಮ ಮಗುವಿಗೆ ಬೆಸ್ಟ್‌ ಎಂದು ಯೋಚಿಸುತ್ತಿದ್ದಾರೆ. ಅಜ್ಜಿ–ಅಮ್ಮಂದಿರು ತಯಾರಿಸುತ್ತಿದ ಸಾಂಪ್ರದಾಯಿಕ ಪೌಷ್ಟಿಕ ಆಹಾರಗಳನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು ಎಂದು ಕಂಡುಕೊಂಡಿದ್ದಾರೆ.

ನವಜಾತ ಶಿಶುಗಳಿಗೆ ತಾಯಿಯ ಹಾಲನ್ನು ಮಾತ್ರ ಉಣಿಸಲಾಗುತ್ತದೆ. ಶಿಶು ಬೆಳೆದು ಸ್ವಲ್ಪ ದೊಡ್ಡದಾದ ಮೇಲೆ ಅದಕ್ಕೆ ಪೌಷ್ಟಿಕ ಆಹಾರಗಳನ್ನು ನೀಡುವುದು ತಾಯಂದಿರ ಕರ್ತವ್ಯವಾಗಿದೆ. ಕೆಲವು ಮಕ್ಕಳು ಹಣ್ಣು, ಅನ್ನ, ಧಾನ್ಯಗಳನ್ನು ಇಷ್ಟ ಪಟ್ಟು ತಿಂದರೆ, ಕೆಲವು ಮಕ್ಕಳು ಅಷ್ಟು ಸುಲಭವಾಗಿ ಅದಕ್ಕೆ ಒಗ್ಗಿಕೊಳ್ಳುವುದಿಲ್ಲ. ಆಗತಾನೆ ತಾಯಿಯಾದ ಸಂತೋಷದಲ್ಲಿರುವ ಅಮ್ಮಂದಿರಿಗೆ ಮಗುವಿಗೆ ಏನು ತನ್ನಿಸುವುದು ಎಂಬುದೇ ದೊಡ್ಡ ಗೊಂದಲವಾಗಿಬಿಡುತ್ತದೆ. ಮಕ್ಕಳಿಗೆ ಸುಲಭವಾಗಿ ಜೀರ್ಣವಾಗುವ ಮತ್ತು ಅವರು ಇಷ್ಟಪಡುವ ಆಹಾರಗಳನ್ನು ನೀಡಿ ಎಂದು ಶಿಶುವೈದ್ಯರು ಸಲಹೆ ನೀಡುತ್ತಾರೆ. ತಾಯ್ತನದ ಆನಂದದಲ್ಲಿರುವ ಅಮ್ಮಂದಿರು ಸುಲಭವಾಗಿ ತಯಾರಿಸಬಹುದಾದ ಪಾಕವಿಧಾನಗಳನ್ನು ನೀಡಲಾಗಿದೆ. ಇಲ್ಲಿ ಹೇಳಿರುವ ರೆಸಿಪಿಗಳನ್ನೊಮ್ಮೆ ನೋಡಿ, ನಿಮ್ಮಿಷ್ಟದ ಆಹಾರ ತಯಾರಿಸಿ, ನಿಮ್ಮ ಮಗುವಿಗೆ ನೀಡಿ. ಆಗ ನೀವು ಮತ್ತು ನಿಮ್ಮ ಮಗು ಇಬ್ಬರೂ ಸಂತೋಷದಿಂದಿರಲು ಸಾಧ್ಯ.

ಸುಲಭವಾಗಿ ತಯಾರಿಸಬಹುದಾದ ಶಿಶು ಆಹಾರಗಳ

1) ಉಕಡ್‌ (ಉದಕ): ಅನ್ನದ ಬದಲು ನೀಡಬಹುದಾದ ಮೆತ್ತಗಿನ ಶಿಶುಆಹಾರ

ಇದು ಚಮಚದಲ್ಲಿ ತಿನ್ನಿಸಬಹುದಾದ ಮೆತ್ತಗಿನ ಆಹಾರ. ಪ್ರತಿದಿನ ಅನ್ನ, ಬೇಳೆ ಬೇಯಿಸಿ ನೀಡುವುದರ ಬದಲಿಗೆ ಇದನ್ನು ನೀಡಬಹುದು. ಉಕಡ್‌ ಅಥವಾ ಉದಕವನ್ನು ಜೋಳದ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಜೋಳದ ಹಿಟ್ಟನ್ನು ಸಿಹಿ ಮಜ್ಜಿಗೆ ಅಥವಾ ನೀರಿನಲ್ಲಿ ಕಲಸಿ. ದೋಸೆ ಹಿಟ್ಟಿನ ಹದದಲ್ಲಿರಲಿ. ಒಂದು ಬಾಣಲೆಗೆ ತುಪ್ಪ, ಜೀರಿಗೆ ಸ್ವಲ್ಪ ಇಂಗು ಹಾಕಿ ಒಗ್ಗರಣೆ ಮಾಡಿ. ಅದಕ್ಕೆ ಕಲಸಿಟ್ಟುಕೊಂಡ ಹಿಟ್ಟನ್ನು ಸೇರಿಸಿ. ತಳ ಹಿಡಿಯದಂತೆ ತಿರುವಿಕೊಳ್ಳಿ. ಮೇಲಿನಿಂದ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಉಪ್ಪಿಟ್ಟಿಗಿಂಗ ಸ್ವಲ್ಪ ತೆಳುವಾಗಿರುವ ಉಕಡ್‌ ಮಕ್ಕಳಿಗೆ ಇಷ್ಟವಾಗುವುದರ ಜೊತೆಗೆ ಪೌಷ್ಟಿಕವೂ ಹೌದು.

2) ಕಡಲೆಬೇಳೆ ಅವಲಕ್ಕಿ ಮಿಕ್ಸ್‌: ಜೀರ್ಣಕ್ರಿಯೆಗೆ ಉತ್ತಮ

ಕಡಲೆಬೇಳೆ ಮತ್ತು ಅವಲಕ್ಕಿಯನ್ನು 1:4 ಪ್ರಮಾಣದಲ್ಲಿ ತೆಗೆದುಕೊಳ್ಳಿ. ಅದಕ್ಕೆ ಏಲಕ್ಕಿ ಪುಡಿ ಮತ್ತು ಶುಂಠಿ ಪುಡಿ ಸೇರಿಸಿ, ಚೆನ್ನಾಗಿ ಬೆರೆಸಿ. ಶುಂಠಿಯು ಜೀರ್ಣಕ್ರಿಯಗೆ ಉತ್ತಮವಾದದ್ದು. ಇದನ್ನು ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಟ್ಟುಕೊಂಡರೆ ತಿಂಗಳುಗಳವರೆಗೆ ಉಪಯೋಗಿಸಿಬಹುದು. ಒಂದು ಲೋಟ ಹಾಲಿಗೆ ಒಂದು ಚಮಚ ಪುಡಿಯನ್ನು ಬೆರೆಸಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಿ. ಅದನ್ನು ಗಂಜಿಯಂತೆ ಲಘುವಾಗಿ ಬೇಯಿಸಿ. ಮಗುವಿಗೆ ಸಪ್ಪೆ ಎನಿಸಿದರೆ ಸ್ವಲ್ಪ ಸಕ್ಕರೆ ಅಥವಾ ಬೆಲ್ಲದ ಪುಡಿ ಸೇರಿಸಿ. ಬಿಸಿಯಾರಿದ ಮೇಲೆ ಮಗುವಿಗೆ ತಿನ್ನಿಸಿ.

3) ಸಿರಿದಾನ್ಯಗಳ ಹುರಿ ಮಿಶ್ರಣ

ಇದು ವಿವಿಧ ಸಿರಿಧಾನ್ಯಗಳು ಮತ್ತು ದ್ವಿದಳ ಧಾನ್ಯಗಳನ್ನು ಹುರಿದು ತಯಾರಿಸುವ ಮಿಶ್ರಣವಾಗಿದೆ. ಇದು ಸಿರಿಧಾನ್ಯಗಳ ಮಿಶ್ರಣವಾಗಿರುವುದರಿಂದ ಮಕ್ಕಳಿಗೆ ಉತ್ತಮ ಆಹಾರವಾಗಿದೆ. ರಾಗಿ, ಜೋಳ, ಹಾರಕ, ಬಾಜ್ರಾ, ಕಡಲೆಬೇಳೆ, ಹೆಸರುಬೇಳೆ ಎಲ್ಲವನ್ನು ಸಮ ಪ್ರಮಾಣದಲ್ಲಿ ಪ್ರತ್ಯೇಕವಾಗಿ ಹುರಿದುಕೊಳ್ಳಿ. ಮಿಕ್ಸಿಗೆ ಹಾಕಿ ಪುಡಿ ಮಾಡಿಟ್ಟುಕೊಳ್ಳಿ. ನಿಮ್ಮ ಮಗುವಿನ ವಯಸ್ಸಿಗೆ ಅನುಗುಣವಾಗಿ ಈ ಮಿಶ್ರಣವನ್ನು ತೆಗೆದುಕೊಳ್ಳಿ. ಅದಕ್ಕೆ ಹಾಲು ಅಥವಾ ನೀರು ಸೇರಿಸಿ ಕಲಸಿಕೊಳ್ಳಿ. ನಂತರ ಗಂಜಿಯ ಹದಕ್ಕೆ ಬೇಯಿಸಿಕೊಳ್ಳಿ. ಒಣ ಹಣ್ಣುಗಳ ಪುಡಿಯನ್ನು ಸೇರಿಸಿ. ಸ್ವಲ್ಪ ಬೆಲ್ಲ ಸೇರಿಸಿ ಮಗುವಿಗೆ ತಿನ್ನಿಸಿ.

4) ಸಂಧಾ ಗುರಿ: ಅಕ್ಕಿಯ ಮ್ಯಾಜಿಕ್

ಇದು ಅಸ್ಸಾಂ ಭಾಗದಲ್ಲಿ ಕಾಣಬಹುದಾದ ಶಿಶು ಆಹಾರ. ಇದನ್ನು ಅಕ್ಕಿಯಿಂದ ತಯಾರಿಸಲಾಗುತ್ತದೆ. ಅಕ್ಕಿಯನ್ನು ಒಂದು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ನೀರು ಬಸಿದು ನೆರಳಿನಲ್ಲಿ ಒಣಗಿಸಿ. ಕಡಿಮೆ ಉರಿಯಲ್ಲಿ ಅಕ್ಕಿಯನ್ನು ಚೆನ್ನಾಗಿ ಹುರಿಯಿರಿ. ನಂತರ ಮಿಕ್ಸಿಗೆ ಹಾಕಿ ಪುಡಿಮಾಡಿಕೊಳ್ಳಿ. ಒಂದು ಲೋಟ ಬಿಸಿ ಹಾಲಿಗೆ ಒಂದು ಚಮಚ ಪುಡಿ ಬೆರೆಸಿ ಚೆನ್ನಾಗಿ ಕಲಸಿ. ಮಜ್ಜಿಗೆ ಅಥವಾ ಮೊಸರಿಗೂ ಇದನ್ನು ಸೇರಿಸಬಹುದು. ಅದಕ್ಕೆ ಚಿಕ್ಕದಾಗಿ ಕತ್ತರಿಸಿದ ಒಣ ಹಣ್ಣು ಮತ್ತು ಬೆಲ್ಲ ಸೇರಿಸಿ. ಇದು ಮಕ್ಕಳಿಗೆ ಬಹಳ ಬೇಗ ಜೀರ್ಣವಾಗಬಹುದಾದ ಆಹಾರ.

5) ಸೂಜಿ ರವಾ ಖೀರ್‌: ಮಗು ಹೊಟ್ಟೆಗೆ ಒಳ್ಳೇದು

ಸೂಜಿ ರವಾ ಮಕ್ಕಳಿಗೆ ಬಹಳ ಬೇಗ ಜೀರ್ಣವಾಗುವ ಆಹಾರ. ಬಾದಾಮಿ ಹಾಲು ಮತ್ತು ಫಾಕ್ಸ್‌ ನಟ್‌ (ತಾವರೆ ಬೀಜ) ಸೇರಿಸಿ ತಯಾರಿಸಿದ ಖೀರು ಮಕ್ಕಳಿಗೆ ಉತ್ತಮವಾದ ಆಹಾರವಾಗಿದೆ. ಇದು ಪ್ರೋಟೀನ್‌, ಕಾರ್ಬೋಹೈಡ್ರೇಟ್‌, ನಾರಿನ ಅಂಶ, ಮ್ಯಾಗ್ನೇಸಿಯಂ, ಪೋಟ್ಯಾಸಿಯಂ, ಫಾಸ್ಪರಸ್‌, ಕಬ್ಬಿಣ ಮತ್ತು ಝಿಂಕ್‌ ನಿಂದ ಸಮೃದ್ಧವಾಗಿದೆ. ಇದಕ್ಕೆ ಜೇನುತುಪ್ಪವನ್ನು ಬೆರೆಸುವುದರಿಂದ ಇದು ಮಕ್ಕಳ ಆರೋಗ್ಯಕ್ಕೆ ಸಕ್ಕರೆಗಿಂತಲೂ ಒಳ್ಳೆಯದು. ಮೊದಲಿಗೆ ತಾವರೆ ಬೀಜವನ್ನು ಸ್ವಲ್ಪ ತಪ್ಪದಲ್ಲಿ ಹುರಿದುಕೊಳ್ಳಿ. ಬಿಸಿ ಆರಿದ ನಂತರ ಪುಡಿ ಮಾಡಿ. ತುಪ್ಪದಲ್ಲಿ ಸೂಜಿ ರವಾವನ್ನು ಹುರಿಯಿರಿ. ಚಿಕ್ಕ ಉರಿಯಲ್ಲಿ ಅದಕ್ಕೆ ಹಾಲು ಸೇರಿಸಿ ಹದವಾಗಿ ಬೇಯಿಸಿ. ಅದಕ್ಕೆ ತಾವರೆ ಬೀಜದ ಪುಡಿ, ಜೇನುತುಪ್ಪ, ಏಲಕ್ಕಿ ಪುಡಿ ಮತ್ತು ಬಾದಾಮಿ ಹಾಲು ಸೇರಿಸಿ. ಗಂಜಿಯ ಹದಕ್ಕೆ ತಂದು ಮಗುವಿಗೆ ತಿನ್ನಿಸಿ.

6) ಪಾಲಕ್‌ ಕಿಚಡಿ: ಕಬ್ಬಿಣದ ಅಂಶದಿಂದ ಸಮೃದ್ಧ

ಹೆಸರು ಬೇಳೆ, ಅಕ್ಕಿ ಮತ್ತು ಪಾಲಕ್‌ ಸೇರಿಸಿ ತಯಾರಿಸಬಹುದಾದ ಖಿಚಡಿ ಇದಾಗಿದೆ. ಇದು ಕಬ್ಬಿಣ ಮತ್ತು ನಾರಿನಾಂಶದಿಂದ ಸಮೃದ್ಧವಾಗಿದೆ. ಇದನ್ನು ತಯಾರಿಸುವುದು ಬಹಳ ಸುಲಭ. ಪ್ರೆಶರ್‌ ಕುಕ್ಕರ್‌ಗೆ 1:2 ಅಳತೆಯ ಪ್ರಮಾಣದಲ್ಲಿ ಹೆಸರು ಬೇಳೆ ಮತ್ತು ಅಕ್ಕಿಯನ್ನು ಹಾಕಿ, ಮೃದುವಾಗಿ ಬೇಯಿಸಿ. ಪಾಲಕ್‌ ಸೊಪ್ಪನ್ನು ಬೇಯಿಸಿ ಅದರ ರಸ ತೆಗೆಯಿರಿ. ಅದನ್ನು ಬೆಂದ ಹೆಸರು ಬೇಳೆ ಮತ್ತು ಅಕ್ಕಿಗೆ ಸೇರಿಸಿ. ಚೆನ್ನಾಗಿ ಬೆರೆಸಿಕೊಳ್ಳಿ. ಉಪ್ಪು ಮತ್ತು ತುಪ್ಪ ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಕಲಸಿ. ನಿಮ್ಮ ಮುದ್ದು ಮಗುವಿಗಾಗಿ ಪಾಲಕ್‌ ಕಿಚಡಿ ಹೀಗೆ ತಯಾರಿಸಿ ತಿನ್ನಿಸಿ.

7) ಮೀನು ಮತ್ತು ಕ್ಯಾರೆಟ್‌ ಮ್ಯಾಶ್‌

ನಿಮ್ಮ ಮಗು 8 ತಿಂಗಳಿಗಿಂತ ಸ್ವಲ್ಪ ದೊಡ್ಡದಾಗಿದ್ದರೆ ಆಗ ನೀವು ಅದಕ್ಕೆ ಮೀನು ನೀಡಬಹುದು. ಮೀನಿನಲ್ಲಿ ಹೆಚ್ಚಿನ ಪ್ರಮಾಣದ ಅಮಿನೊ ಆಸಿಡ್ ಮತ್ತು ಒಮೆಗಾ–3 ಫ್ಯಾಟಿ ಆಸಿಡ್‌ ತುಂಬಿರುತ್ತದೆ. ಕ್ಯಾರೆಟ್‌ನಲ್ಲಿ ಖನಿಜಾಂಶಗಳು ಮತ್ತು ವಿಟಮಿನ್‌ ಎ ಸಮೃದ್ಧವಾಗಿದೆ. ಮೀನನ್ನು ಸರಿಯಾಗಿ ಸ್ವಚ್ಛಗೊಳಿಸಿ, ಅದರ ಗುಲಾಬಿ ಬಣ್ಣ ಹೋಗುವವರೆ ಬೇಯಿಸಿ. ಅದಕ್ಕೆ ಚಿಕ್ಕದಾಗಿ ಕತ್ತರಿಸಿದ ಕ್ಯಾರೆಟ್‌ ಸೇರಿಸಿ. ಮೆತ್ತಗಾಗುವವರೆಗೆ ಬೇಯಿಸಿ. ಅವೆರಡನ್ನೂ ಮ್ಯಾಶ್‌ ಮಾಡಿ. ಅದಕ್ಕೆ ಸ್ವಲ್ಪ ಜೀರಿಗೆ ಪುಡಿ ಮತ್ತು ಕಾಳು ಮೆಣಸಿನ ಪುಡಿ ಸೇರಿಸಿ. ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ. ತೆಳು ಸೂಪ್‌ ರೀತಿಯಲ್ಲಿರುವ ಈ ಆಹಾರವನ್ನು ಮಗುವಿಗೆ ಕೊಡಬಹುದು.

8) ರಾಗಿ ಸತ್ವದ ಹುರಿಹಿಟ್ಟು: ಇದು ಕರ್ನಾಟಕದ ಫೇವರಿಟ್ಟು

ಸಾಂಪ್ರದಾಯಿಕ ಶಿಶು ಆಹಾರಗಳಲ್ಲಿ ರಾಗಿ ಸತ್ವದ ಹುರಿಹಿಟ್ಟು ಬಹಳ ಹಿಂದಿನಿಂದಲೂ ಜನಪ್ರಿಯ. ಮೊಳಕೆಯೊಡೆದ ರಾಗಿಯ ಪುಡಿ ತಯಾರಿಸಿಕೊಳ್ಳಿ. ಅದಕ್ಕೆ ಬಾದಾಮಿ ಹಾಲು, ಗಸಗಸೆ ಪುಡಿ, ಉತ್ತುತ್ತೆ ಪುಡಿ ಸೇರಿಸಿ. ಅದಕ್ಕೆ ಸ್ವಲ್ಪ ಏಲಕ್ಕಿ ಮತ್ತು ಜಾಯಿಕಾಯಿ ಪುಡಿ ಸೇರಿಸಿ. ಸ್ವಲ್ಪ ಬೆಲ್ಲ ಹಾಕಿ ಚೆನ್ನಾಗಿ ಕಲಸಿ. ಎಲ್ಲಾ ಪುಡಿಗಳನ್ನು ಸೇರಿಸಿ ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಟ್ಟುಕೊಂಡರೆ ನಿಮಗೆ ಬೇಕಾದಾಗ ರಾಗಿ ಸತ್ವದ ಹುರಿಹಿಟ್ಟು ತಯಾರಿಸಿ ಮಗುವಿಗೆ ತಿನ್ನಿಸಬಹುದು. ಇದು ಕ್ಯಾಲ್ಸಿಯಂ, ವಿಟಮಿನ್‌ಗಳಿಂದ ಕೂಡಿರುವುದರಿಂದ ನಿಮ್ಮ ಮಗುವಿನ ಬೆಳವಣಿಗೆಗೆ ಒಳ್ಳೆಯದು.

(ಬರಹ: ಅರ್ಚನಾ ವಿ ಭಟ್)

ಗಮನಿಸಿ: ಮಕ್ಕಳ ಆರೋಗ್ಯದ ವಿಚಾರದಲ್ಲಿ ಹುಷಾರಾಗಿರಿ. ಮಕ್ಕಳ ಆರೋಗ್ಯದ ವಿಚಾರದಲ್ಲಿ ತಜ್ಞ ಶಿಶು ವೈದ್ಯರು, ಪೌಷ್ಟಿಕಾಂಶ ತಜ್ಞರು, ಕುಟುಂಬದ ಹಿರಿಯರು, ಅಜ್ಜಿ-ತಾಯಂದಿರ ಅನುಭವ ಬಹಳ ಮುಖ್ಯ. ಮಗುವಿಗೆ ಯಾವುದೇ ಆಹಾರ ನೀಡುವ ಮೊದಲು ನಿಮ್ಮ ಪರಿಸರಕ್ಕೆ ಅದು ಹೊಂದಿಕೊಳ್ಳುತ್ತದೆಯೇ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಿ. ಈ ಲೇಖನವನ್ನು ತಾಯಂದಿರಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಕೇವಲ ಮಾಹಿತಿ ರೂಪದಲ್ಲಿ ನೀಡಲಾಗಿದೆ. ಇದನ್ನು ಯಥಾವತ್ತಾಗಿ ಅನುಸರಿಸಬೇಕು ಎನ್ನುವುದು ಬರಹದ ಉದ್ದೇಶವಲ್ಲ. ಎಲ್ಲ ಮಕ್ಕಳಿಗೂ ಈ ಆಹಾರ ಹೊಂದುತ್ತದೆ ಎನ್ನುವುದು ಲೇಖಕರ ಅಭಿಪ್ರಾಯವಲ್ಲ.