Parenting Tips: ಬೇಸಿಗೆ ಕಾಲದಲ್ಲಿ ನವಜಾತ ಶಿಶುವಿನ ಆರೈಕೆ ಹೇಗಿರಬೇಕು? ಇಲ್ಲಿದೆ 7 ಟಿಪ್ಸ್
ನವಜಾತ ಶಿಶುಗಳ ಅಳುವಿನ ಹಿಂದಿರುವ ಕಾರಣ ಹೆತ್ತ ಅಮ್ಮನಿಂದಲೂ ಊಹಿಸುವುದು ಕಷ್ಟ ಎಂಬ ಮಾತಿದೆ. ಹೀಗಿರುವಾಗ ಮಗುವಿನ ಅಳುವಿನ ಕಾರಣ ಹಸಿವೆಯೇ, ಹೊಟ್ಟೆ ನೋವೇ ಎಂದು ಹೆತ್ತವರೇ ತಿಳಿದು ಆರೈಕೆ ಮಾಡಬೇಕಿದೆ. ಆದರೆ ಬೇಸಿಗೆ ಕಾಲದಲ್ಲಿ ಇನ್ನೂ ಅನೇಕ ಕಾರಣಗಳಿಗೆ ಶಿಶುಗಳು ಅಳುವುದಿದೆ. ಬೇಸಿಗೆ ಕಾಲದಲ್ಲಿ ನವಜಾತ ಶಿಶುವಿನ ಆರೈಕೆ ಬಗ್ಗೆ ಇಲ್ಲಿದೆ ಮಾಹಿತಿ.

ಬೇಸಿಗೆಕಾಲ ಶುರುವಾಯಿತೆಂದರೆ ಸಾಕಪ್ಪಾ ಸಾಕು ಈ ಬಿಸಿಲ ಧಗೆ, ಚರ್ಮ ಸುಟ್ಟುಹೋಗುವಂತಿದೆ ಅಂತ ಮನೆಯಲ್ಲೇ ಕೂರುವ ಮಂದಿ ನಮ್ಮಲ್ಲಿ ಅನೇಕರು. ಚರ್ಮದ ಆರೈಕೆ, ಕೂದಲಿನ ಕಾಳಜಿ ಸೇರಿದಂತೆ ಬೇಸಿಗೆಯಲ್ಲಿ ಶರೀರದ ಒಟ್ಟು ಆರೈಕೆಯತ್ತ ಹೆಚ್ಚಿನ ಜನರು ಗಮನ ಹರಿಸುತ್ತಾರೆ. ಅಂಥದರಲ್ಲಿ ಈ ವರ್ಷ ಫೆಬ್ರವರಿ ತಿಂಗಳಿನಿಂದಲೇ ಬೇಸಿಗೆ ಪ್ರಾರಂಭವಾಗಿದೆ. ಮೇ ತಿಂಗಳ ಅಂತ್ಯದವರೆಗೂ ಸುಡು ಬಿಸಿಲಿನ ಬೇಗೆಯಲ್ಲಿ ನವಜಾತ ಶಿಶುಗಳ ಪರಿಸ್ಥಿತಿಯನ್ನು ಚಿಂತಿಸಿ ನೋಡಿ. ಬೇಸಿಗೆಯು ವಯಸ್ಕರಿಗೆ ಮಾತ್ರವಲ್ಲದೆ ಶಿಶುಗಳ ಮೇಲೂ ಪರಿಣಾಮವನ್ನು ಬೀರುತ್ತದೆ. ಬೇಸಿಗೆಯಲ್ಲಿ ನೀವು ಮಗುವನ್ನು ತಾಪಮಾನಕ್ಕೆ ಹೆದರಿ ಅದೆಷ್ಟು ಜಾಗರೂಕತೆಯಿಂದ ಮನೆಯೊಳಗೆ ಇರಿಸಿದರೂ ಅವರ ಚರ್ಮವು ಹವಾಮಾನಕ್ಕೆ ಒಡ್ಡಿಕೊಳ್ಳುತ್ತಲೇ ಬಹಳಷ್ಟು ಕಿರಿಕಿರಿಯುಂಟಾಗುತ್ತದೆ.
ಶಾಖ ಮತ್ತು ತ್ವಚೆಯ ಸಮಸ್ಯೆಗಳಿಗೆ ಮಕ್ಕಳು ತುತ್ತಾಗುತ್ತಾರೆ. ಆದ್ದರಿಂದ ಬೇಸಿಗೆಯಲ್ಲಿ ಹೆತ್ತವರು ಮಗುವಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ನವಜಾತ ಶಿಶುಗಳ ಅಳುವಿನ ಹಿಂದಿರುವ ಕಾರಣ ಹೆತ್ತ ಅಮ್ಮನಿಂದಲೂ ಊಹಿಸುವುದು ಕಷ್ಟ ಎಂಬ ಮಾತಿದೆ. ಅಂಥದರಲ್ಲಿ ಮಗುವಿನ ಅಳುವಿನ ಕಾರಣ ಹಸಿವೆಯೇ, ಹೊಟ್ಟೆ ನೋವೇ, ಸೆಖೆಯ ಕಾರಣವೇ ಅಥವಾ ಇನ್ಯಾವುದಾದರೂ ಕಾರಣಗಳಿವೇ ಎಂದು ಹೆತ್ತವರೇ ತಿಳಿದು ಆರೈಕೆ ಮಾಡಬೇಕಿದೆ. ಇದಕ್ಕಾಗಿ ಒಂದಿಷ್ಟು ಸಲಹೆಗಳು ಇಲ್ಲಿವೆ..
1.ಬೇಸಿಗೆ ಕಾಲಕ್ಕೆ ಸೂಕ್ತ ಉಡುಗೆಯಿರಲಿ:
ನವಜಾತ ಶಿಶು ಬೆಚ್ಚನೆ ಇರಬೇಕು, ಕಿವಿ ಹಾಗೂ ತಲೆಯ ನೆತ್ತಿಯ ಭಾಗ ಮುಚ್ಚುವಂತೆ ಟೋಪಿ ಧರಿಸಬೇಕು ಎಲ್ಲವೂ ನಿಜವೇ. ಆದರೆ ಬೇಸಿಗೆ ಕಾಲಕ್ಕೆ ಇಂತಹ ರೀತಿ ರಿವಾಜುಗಳಿಗೆ ಸ್ವಲ್ಪ ಬ್ರೇಕ್ ಹಾಕಲೇ ಬೇಕು..ಶಿಶುವನ್ನು ಬೆಚ್ಚನೆ ಇರಿಸುವುದೇ ಆದರೆ ಸಡಿಲವಾದ ಹತ್ತಿಯ ಬಟ್ಟೆಗಳನ್ನೇ ಬಳಸಿ. ಆಗ ಅದರ ತ್ವಚೆಯಲ್ಲಿ ಗಾಳಿಯಾಡಲು ಅನುಕೂಲ. ಹೀಗಾಗಿ ಹತ್ತಿ ಉಡುಗೆಗಳು ಶಿಶುಗಳಿಗೆ ಲಾಭಕಾರಿ, ಹೆಚ್ಚಿನ ಆರಾಮ ಕೂಡ ಸಿಗುತ್ತದೆ. ಅನಿವಾರ್ಯವಾಗಿ ಹೊರಗೆ ಹೋಗಲೇಬೇಕಾದಲ್ಲಿ, ಮಗುವಿಗೆ ತಲೆಗೊಂದು ಹಿತಕರ ಟೋಪಿ ಹಾಕಿಡಿ. ಹೀಟ್ ಸ್ಟ್ರೋಕ್ ಆಗದಂತೆ ಮತ್ತೆ ಮತ್ತೆ ಎಚ್ಚರ ವಹಿಸಿ. ಇಷ್ಟಾಗಿಯೂ ಶಿಶುಗಳಿಗೆ ಬೇಸಿಗೆಯಲ್ಲಿ ಬೆವರು ಸಾಲೆಯಂಥ ಚರ್ಮದ ಕಿರಿಕಿರಿ ಬರಬಹುದು. ತಂಪಾಗಿ ಮೈ ಒರೆಸಿ, ಬೆವರು ಕಡಿಮೆಯಾಗುವಂತೆ ನೋಡಿಕೊಳ್ಳಿ.
2. ಎದೆಹಾಲುಣಿಸುವದಕ್ಕಿರಲಿ ಮೊದಲ ಪ್ರಾಶಸ್ತ್ಯ
ತಾಯಿಯ ಎದೆಹಾಲಿನಲ್ಲಿದೆ ಮಗುವಿನ ರೋಗನಿರೋಧಕ ಶಕ್ತಿ. ಆದ್ದರಿಂದ ಮಗುವಿಗೆ ಬೇಕೆನ್ನಿಸಿದಾಗಲೆಲ್ಲ ಎದೆಹಾಲನ್ನು ಉಣಿಸುತ್ತಿರಬೇಕು. ಮಗು ಹೆಚ್ಚಿನ ಮಲಗುವ ಅಭ್ಯಾಸವುಳ್ಳದ್ದಾದರೂ 2 ಗಂಟೆಗಳಿಗೊಮ್ಮೆ ಮಗುವನ್ನು ಎಬ್ಬಿಸಿ, ಎದೆಹಾಲುಣಿಸುತ್ತಿರಬೇಕು. ಮಗುವಿನ ಪ್ರತಿರಕ್ಷಣಾ ವ್ಯವಸ್ಥೆಯು ಸಾಕಷ್ಟು ಬಲವಾಗಿ ಬೆಳೆಯುವವರೆಗೆ ನೀವು ಅವನ್ನು ರಕ್ಷಿಸಬೇಕು.
3.ಮಗುವಿನ ಡೈಪರ್ ಅನ್ನು ಆಗಾಗ ಪರೀಕ್ಷಿಸಿ
ಮಗುವಿಗೆ ದಿನವಿಡೀ ಡೈಪರ್ ಹಾಕುವವರು ನೀವಾದರೆ ತಿಳಿಯಬೇಕಿರುವ ವಿಚಾರವಿದೆ. ಎದೆಹಾಲು ಸೇವಿಸುವ ಶಿಶುಗಳು ದಿನಕ್ಕೆ ಹಲವಾರು ಬಾರಿ ಮೂತ್ರ ಹಾಗೂ ಮಲವಿಸರ್ಜನೆ ಮಾಡುತ್ತಾರೆ. ಆದ್ದರಿಂದ, ನಿಯಮಿತವಾಗಿ ನಿಮ್ಮ ಮಗುವಿನ ಡೈಪರ್ ಅನ್ನು ಪರೀಕ್ಷಿಸುತ್ತಿರಿ, ಕೆಲವು ಗಂಟೆಗಳ ಅವಧಿಯಲ್ಲಿ ಡೈಪರ್ ಬದಲಿಸಿ. ಅದಕ್ಕೂ ಮುನ್ನ ಮಕ್ಕಳ ಖಾಸಗಿ ಭಾಗಗಳನ್ನ ಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಆ ಪ್ರದೇಶವನ್ನು ಸಂಪೂರ್ಣವಾಗಿ ಒಣ ಬಟ್ಟೆಯಿಂದ ಒರೆಸಿರಿ. ಬೇಕಾದಲ್ಲಿ ಸೂಕ್ತವಾದ ಡೈಪರ್ ರ್ಯಾಶ್ ಕ್ರೀಮ್ ಬಳಕೆ ಮಾಡಬಹುದು.
4. ತಪ್ಪದೇ ಮಾಡುತ್ತಿರಿ ಎಣ್ಣೆ ಮಸಾಜ್
ಬೇಸಿಗೆ ಕಾಲದಲ್ಲೂ ನವಜಾತಶಿಶುವಿಗೆ ಎಣ್ಣೆ ಮಸಾಜ್ ಮಾಡುವುದು ಉತ್ತಮ. ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆಯಂಥ ತೈಲಗಳಿಂದ ನವಿರಾಗಿ ಮಸಾಜ್ ಸಾಕಾಗುತ್ತದೆ. ಅಗತ್ಯಕ್ಕಿಂತ ಹೆಚ್ಚಿನ ಎಣ್ಣೆ ಬಳಸಿದರೆ ಅದನ್ನು ತೆಗೆಯುವುದಕ್ಕೆ ಮತ್ತೆ ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಬೇಕಾಗುತ್ತದೆ. ಆದ್ದರಿಂದ ಎಣ್ಣೆಯನ್ನು ತೆಳ್ಳನೆಯ ಲೇಪ ಮಾಡಿ ಮಸಾಜ್ ಮಾಡಿಕೊಳ್ಳಿ.
5. ಉಗುರು ಬೆಚ್ಚನೆ ನೀರಿನಲ್ಲಿ ಸ್ನಾನ ಮಾಡಿಸಿ
ಜನಿಸಿದ ಕೂಡಲೇ ಎಲ್ಲರೂ ಕೇಳುವ ಮಾತು ಮಗು ರಾತ್ರಿ ಚೆನ್ನಾಗಿ ನಿದ್ರಿಸುತ್ತಾ ಅನ್ನೋದು. ಇಲ್ಲವೆಂಧರೆ ಸಾಕು ಬಿಸಿ ಬಿಸಿ ನೀರಲ್ಲಿ ಸ್ನಾನ ಮಾಡಿಸಿ ಮಲಗಿಸಿ ನೋಡಿ ಎಂಬಂತೆ ಸಾಕಷ್ಟು ಸಲಹೆಗಳು ಸಿಗುವುದು ಸಾಮಾನ್ಯ. ಆದ್ರೆ ಬೇಸಿಗೆ ಕಾಲದಲ್ಲಿ ಹೆತ್ತವರು ಸ್ವಲ್ಪ ಜಾಗರೂಕತೆಯಿಂದಿರಬೇಕು. ಯಾಕೆಂದರೆ ಮಗು ನಿದ್ರಿಸಲಿ ಅಂತ ಅತಿಯಾದ ಬಿಸಿನೀರಲ್ಲಿ ಸ್ನಾನ ಮಾಡಿಸಿದರೆ ಉರಿ ಹಾಗೂ ಬೆವರು ಗುಳ್ಳೆಗಳ ಸಮಸ್ಯೆ ಕಾಡಬಹುದು. ಅದಕ್ಕಾಗಿ ಉಗುರು ಬಿಸಿ ನೀರಲ್ಲಿ ಸ್ನಾನ ಮಾಡಿಸಿ. ಸೂಕ್ತವಾದ ಬೇಬಿ ಪೌಡರ್ ಬಳಕೆ ಮಾಡಿ.
6. ತಾಯಿ-ಶಿಶುವಿನ ಮಲಗುವ ಕೋಣೆ ಹೇಗಿರಬೇಕು?
ಬೆಳಕು ಗಾಳಿಯಿಂದ ಕೂಡಿದ ಕೋಣೆಯನ್ನೇ ಮಲಗಲು ಸಿದ್ಧಪಡಿಸಿ. ಕೋಣೆಗೆ ನೇರವಾಗಿ ಬಿಸಿಲು ಬರುವಂತಿದ್ದರೆ ಪರದೆಗಳನ್ನು ಹಾಕಿ ಕೋಣೆಯನ್ನು ತಂಪಾಗಿಡಿ. ಸಾಧಾರಣವಾಗಿ 25 ಡಿಗ್ರಿ ಸೆಲ್ಸಿಯಸ್ನಷ್ಟು ಉಷ್ಣತೆ ಹಿತಕರವಾಗಿರುತ್ತದೆ. ಏರ್ ಕೂಲರ್ ಅಥವಾ ಕಂಡೀಶನರ್ ಬಳಸುತ್ತಿದ್ದರೆ, ಅವುಗಳನ್ನು ಕಾಲಕಾಲಕ್ಕೆ ಸ್ವಚ್ಛ ಮಾಡುವುದು ಅಗತ್ಯ. ಮಗುವನ್ನು ಹೊರಗೆ ಕರೆದೊಯ್ಯುವಾಗ ಆದಷ್ಟು ಮಧ್ಯಾಹ್ನ 12ರಿಂದ 4 ಗಂಟೆಯ ಹೊತ್ತನ್ನು ತಪ್ಪಿಸಿ. ತೀಕ್ಷ್ಣ ಬಿಸಿಲಿಗೆ ಎಳೆ ಚರ್ಮ ಬೇಗನೆ ಸುಡುತ್ತದೆ.
7. ನವಜಾತ ಶಿಶುವಿಗೆ ನೀರು ಕುಡಿಸಬೇಡಿ
ನವಜಾತಶಿಶುವಿಗೆ ತಾಯಿಯ ಹಾಲಿನ ಹೊರತಾಗಿ ಏನನ್ನೂ ಕುಡಿಸುವ ಅಗತ್ಯವಿಲ್ಲ. ತಾಪಮಾನ ತೀವ್ರವಾಗಿದ್ದರೆ, ಪದೇಪದೆ ಹಾಲೂಣಿಸಿ. ಇದರಿಂದ ಮಗುವಿನ ಶರೀರ ನಿರ್ಜಲೀಕರಣಗೊಳ್ಳದು.
ನವಜಾತ ಶಿಶುಗಳಿಗೆ ಬೇಸಿಗೆಯ ಬೇಗೆ ಸಾಕಷ್ಟು ಕಿರಿಕಿರಿ ಉಂಟುಮಾಡುತ್ತದೆ. ಅವರ ಕೋಮಲ ತ್ವಚೆಯು ತೀವ್ರ ಬಿಸಿಲಿಗೆ ಸ್ಪಂದಿಸುವುದು ಕಷ್ಟವೆನ್ನಿಸಬಹುದು. ಇದರಿಂದಾಗಿ ಮಗು ಜೋರಾಗಿ ಚೀರಾಡಿ ಅಳುವುದನ್ನು ಕಾಣಬಹುದು. ಅದೇನೇ ಆದರೂ ಬೇಸಿಗೆಯ ತಾಪಮಾನಕ್ಕೆ ಸೂಕ್ತವೆನ್ನುವ ಆರೈಕಿಯಿದ್ದರೆ ನವಜಾತಶಿಶು ಆರೋಗ್ಯದಿಂದರಲು ಸಾಧ್ಯ.
