ಕನ್ನಡ ಸುದ್ದಿ  /  Lifestyle  /  Relationship: Some Tips For Healthy Relationship

Relationship: ಮಾತು ಮನೆ ಕೆಡಿಸದೆ, ಜಗಳ ಮನಸ್ಸು ಕೆಡಿಸದೆ ಸಂಬಂಧ ಉಳಿಸಿಕೊಳ್ಳಲು ಈ ದಾರಿ ಅನುಸರಿಸಿ

Relationship: ಒಬ್ಬರನ್ನು ಒಬ್ಬರು ದೂರುವುದು, ದೂಷಿಸುವುದು, ಅಪವಾದ, ಕೆಲವೊಮ್ಮೆ ಅಸಂಬದ್ಧ ವಾದವೂ ಸಂಬಂಧದಲ್ಲಿ ಗಂಭೀರ ಸ್ವರೂಪದ ಜಗಳಕ್ಕೆ ಕಾರಣವಾಗುತ್ತದೆ. ಜಗಳವನ್ನೇ ಪ್ರೀತಿಯನ್ನಾಗಿಸಿ, ಸಂಬಂಧಕ್ಕೆ ಗೌರವ ನೀಡುವ ಮೂಲಕ ಜಗಳಕ್ಕೆ ಪೂರ್ಣ ವಿರಾಮ ಹಾಕಬಹುದು, ಮಾತ್ರವಲ್ಲ ಬಾಂಧವ್ಯವನ್ನು ವೃದ್ಧಿಸಿಕೊಳ್ಳಬಹುದು.

ಸಂಬಂಧ
ಸಂಬಂಧ

ಸಂಬಂಧ ಎಂದ ಮೇಲೆ ಸಣ್ಣ ಪುಟ್ಟ ಜಗಳಗಳು ಸಾಮಾನ್ಯ. ಎಲ್ಲಿ ಜಗಳ ಹೆಚ್ಚಿರುತ್ತದೋ ಅಲ್ಲಿ ಪ್ರೀತಿಯೂ ಹೆಚ್ಚಿರುತ್ತದೆ ಎನ್ನುತ್ತಾರೆ. ಸಾಮಾನ್ಯ ಜಗಳಗಳು ಒಂದಿಷ್ಟು ಹೊತ್ತು ಬೆಚ್ಚಗಿದ್ದು, ನಿಧಾನಕ್ಕೆ ತಣ್ಣಗಾಗುತ್ತದೆ. ಪುನಃ ಸಂಬಂಧ ಎಂದಿನಂತೆ ಮುಂದುವರಿಯುತ್ತದೆ.

ಆದರೆ ಕೆಲವೊಮ್ಮೆ ಸಂಬಂಧದಲ್ಲಿನ ಜಗಳಗಳು ತೀವ್ರವಾಗುತ್ತವೆ, ಎಷ್ಟರ ಮಟ್ಟಿಗೆ ಎಂದರೆ ಬಿಡಿಸಲಾಗದ ಕಗ್ಗಂಟಿನಂತೆ. ಒಬ್ಬರನ್ನು ಒಬ್ಬರು ದೂರುವುದು, ದೂಷಿಸುವುದು, ಅಪವಾದ ಮಾಡುವುದು ಹೀಗೆ ಜಗಳ ಮುಂದುವರಿಯುತ್ತಲೇ ಇರುತ್ತದೆ. ಕೆಲವೊಮ್ಮೆ ಅಸಂಬದ್ಧ ವಾದವೂ ಗಂಭೀರ ಸ್ವರೂಪದ ಜಗಳಕ್ಕೆ ಕಾರಣವಾಗುತ್ತದೆ. ಇದರಿಂದ ಸಂಬಂಧದಲ್ಲಿ ಶಾಶ್ವತ ಬಿರುಕು ಮೂಡಬಹುದು.

ಆದರೆ ಜಗಳವನ್ನೇ ಪ್ರೀತಿಯನ್ನಾಗಿಸಿ, ಸಂಬಂಧಕ್ಕೆ ಗೌರವ ನೀಡುವ ಮೂಲಕ ಜಗಳಕ್ಕೆ ಪೂರ್ಣ ವಿರಾಮ ಹಾಕಬಹುದು, ಮಾತ್ರವಲ್ಲ ಸಂಬಂಧದಲ್ಲಿನ ಬಾಂಧವ್ಯವನ್ನೂ ವೃದ್ಧಿಸಿಕೊಳ್ಳಬಹುದು.

ಕೇಳಿಸಿಕೊಳ್ಳುವುದನ್ನು ಅಭ್ಯಾಸ ಮಾಡಿ

ಆರೋಗ್ಯಕರ ಸಂವಹನದಲ್ಲಿ ತಾಳ್ಮೆಯಿಂದ ಕೇಳಿಸಿಕೊಳ್ಳುವುದು ಬಹಳ ಮುಖ್ಯ. ನಿಮ್ಮ ಸಂಗಾತಿಯ ಮಾತುಗಳಿಗೆ ಕಿವಿಯಾಗಿ. ಅವರು ಯಾವ ವಿಷಯಕ್ಕೆ ಜಗಳ ತೆಗೆಯುತ್ತಿದ್ದಾರೆ ಎಂಬುದರ ಮೇಲೆ ಗಮನ ಕೊಡಿ. ಅವರ ಮಾತಿನ ದೃಷ್ಟಿಕೋನವನ್ನು ಅರ್ಥ ಮಾಡಿಕೊಳ್ಳಿ. ನಿಮ್ಮ ಸಂಗಾತಿ ಜಗಳ ಮಾಡುತ್ತಿದ್ದಾಗ ಮರು ಮಾತನಾಡದೆ ಅವರು ಹೇಳುವುದು ಕೇಳಿಸಿಕೊಳ್ಳಿ. ಅವರಿಗೆ ಮಾತನಾಡಲು ಅವಕಾಶ ಕೊಟ್ಟು ನಂತರ ನೀವು ಮಾತನಾಡಿ, ಇದರಿಂದ ಜಗಳ ನಿಧಾನಕ್ಕೆ ತಣ್ಣಗಾಗುತ್ತದೆ.

ಮಾತಿನ ಧಾಟಿ ಹಾಗೂ ಭಾಷೆಯ ಮೇಲೆ ಗಮನವಿರಲಿ

ನಿಮ್ಮ ಸಂಗಾತಿಯ ಜೊತೆ ನೀವು ಯಾವ ರೀತಿ ಮಾತನಾಡುತ್ತೀರಿ ಎಂಬುದು ಮುಖ್ಯವಾಗುತ್ತದೆ. ನಿಮ್ಮ ಮಾತಿನ ಧಾಟಿ ಹೀಗಿರುತ್ತದೆ ಅದೇ ಧಾಟಿಯಲ್ಲಿ ಎದುರಿನಿಂದ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಮರೆಯದಿರಿ. ಸಂಗಾತಿಯೊಂದಿಗೆ ಗೌರವದಿಂದ ಮಾತನಾಡುವುದೂ ಮುಖ್ಯವಾಗುತ್ತದೆ. ಮಾತಿನ ಭರದಲ್ಲಿ ಕೆಟ್ಟ ಪದಗಳನ್ನು ಬಳಸಬೇಡಿ. ಪ್ರತಿಯೊಂದು ವಿಷಯದಲ್ಲೂ ಸಂಗಾತಿಯನ್ನೇ ದೂಷಿಸುವ ತಪ್ಪು ಮಾಡದಿರಿ. ಅದರ ಬದಲು ನಿಮ್ಮ ಸಂಗಾತಿಗೆ ʼನೀನು ಮಾತನಾಡುವ ರೀತಿ ನನಗೆ ನೋವು ತರಿಸುತ್ತಿದೆʼ ಎಂದು ನೇರವಾಗಿ ಹೇಳಿ ಅರ್ಥ ಮಾಡಿಸಿ.

ವಿರಾಮ ತೆಗೆದುಕೊಳ್ಳಿ

ಜಗಳ ತೀವ್ರವಾದಾಗ ಭಾವನೆಗಳು ಹುಚ್ಚೆದ್ದು ಕುಣಿಯುತ್ತವೆ. ಅಂತಹ ಸಂದರ್ಭದಲ್ಲಿ ಆರೋಗ್ಯಕರ ರೀತಿಯಲ್ಲಿ ಸಂವಹನ ನಡೆಸುವುದು ಕಷ್ಟವಾಗುತ್ತದೆ. ಪರಿಸ್ಥಿತಿ ಕೈ ಮೀರುತ್ತಿದೆ ಎನ್ನಿಸಿದಾಗ ಆ ಪರಿಸ್ಥಿತಿ ದೂರ ಹೋಗಲು ನೋಡಿ, ಮಾತಿಗೆ ವಿರಾಮ ನೀಡಿ. ಮನಸ್ಸು ಶಾಂತವಾಗಲು ಸಮಯ ತೆಗೆದುಕೊಳ್ಳಿ. ನೀವು ಹಾಗೂ ಸಂಗಾತಿ ಆಡಿದ ಮಾತುಗಳ ಬಗ್ಗೆ ಯೋಚಿಸಿ.

ರಾಜಿಯಾಗುವ ದಾರಿ ಹುಡುಕಿ

ಆರೋಗ್ಯ ಸಂಬಂಧದಲ್ಲಿ ರಾಜಿಯಾಗುವುದು ಒಂದು ನಿರ್ಣಾಯಕ ಅಂಶವಾಗಿದೆ. ಸಂಗಾತಿಯ ಬಗ್ಗೆ ಯೋಚಿಸಿ. ನಾವಿಬ್ಬರೂ ಬೇರೆ ಬೇರೆ ಸ್ಥಳದಿಂದ, ಆಚಾರ-ವಿಚಾರಗಳಿಂದ, ಭಿನ್ನ ನಂಬಿಕೆಗಳಿರುವ ಪ್ರದೇಶದಿಂದ ಬಂದವರು. ಹಾಗಿದ್ದಾಗ ನಮ್ಮ ನಡುವೆ ವ್ಯತ್ಯಾಸಗಳು ಬರುವುದು ಸಾಮಾನ್ಯ ಎಂಬುದನ್ನು ಅರಿತುಕೊಳ್ಳಿ. ಸಂಗಾತಿಯೊಂದಿಗೆ ರಾಜಿಯಾಗಿ. ಪ್ರತಿ ಬಾರಿ ನೀವೇ ರಾಜಿಯಾಗಬೇಕು ಎಂಬ ಬೇಸರ ಬೇಡ. ನಿಮಗೆ ಸಂಬಂಧ ಉಳಿಯಬೇಕು ಎಂದಿದ್ದರೆ ಪ್ರೀತಿ ಬಾರಿ ನೀವೇ ರಾಜಿಯಾಗಿ.

ವಾದ, ಜಗಳದಲ್ಲಿ ಗೆಲುವು ಸಾಧಿಸಲು ಪ್ರಯತ್ನಿಸುವ ಬದಲು ಜಗಳಕ್ಕೆ ಪರಿಹಾರ ಕಂಡುಕೊಳ್ಳುವುದನ್ನು ಇಬ್ಬರು ಸೇರಿ ಪ್ರಯತ್ನಿಸಿ. ಇದರಿಂದ ನಿಮ್ಮ ಅಹಂಗೆ ಪೆಟ್ಟು ಬೀಳುತ್ತದೆ ಎಂದುಕೊಳ್ಳಬೇಡಿ. ಇದು ಸಂಬಂಧದಲ್ಲಿ ಶಾಂತಿ ಹಾಗೂ ಸಂತೋಷ ನೆಲೆಸುವಂತೆ ಮಾಡುತ್ತದೆ. ಅಲ್ಲದೆ ಶಾಶ್ವತ ಆರೋಗ್ಯಕರ ಸಂಬಂಧಕ್ಕೂ ಇದೇ ರಹದಾರಿ.

ವಿಭಾಗ