Friendship Story: ಸ್ನೇಹಿತರ ಆಯ್ಕೆಯಲ್ಲಿ ಹುಷಾರಾಗಿರಿ; ಹಿತೋಪದೇಶ ಪುಸ್ತಕದಲ್ಲಿ ಜಿಂಕೆ, ಕಾಗೆ, ನರಿಯ ಕಥೆ ಸಾರುವ ಸಂದೇಶವಿದು
ಕನ್ನಡ ಸುದ್ದಿ  /  ಜೀವನಶೈಲಿ  /  Friendship Story: ಸ್ನೇಹಿತರ ಆಯ್ಕೆಯಲ್ಲಿ ಹುಷಾರಾಗಿರಿ; ಹಿತೋಪದೇಶ ಪುಸ್ತಕದಲ್ಲಿ ಜಿಂಕೆ, ಕಾಗೆ, ನರಿಯ ಕಥೆ ಸಾರುವ ಸಂದೇಶವಿದು

Friendship Story: ಸ್ನೇಹಿತರ ಆಯ್ಕೆಯಲ್ಲಿ ಹುಷಾರಾಗಿರಿ; ಹಿತೋಪದೇಶ ಪುಸ್ತಕದಲ್ಲಿ ಜಿಂಕೆ, ಕಾಗೆ, ನರಿಯ ಕಥೆ ಸಾರುವ ಸಂದೇಶವಿದು

Hitopadesha: ಪ್ರಪಂಚ ನಾವು ಅಂದುಕೊಂಡಷ್ಟು ಒಳ್ಳೆಯದೂ ಅಲ್ಲ, ಅಂದುಕೊಳ್ಳದೇ ಇರುವಷ್ಟು ಕೆಟ್ಟದ್ದೂ ಅಲ್ಲ. ಕೆಟ್ಟ ಉದ್ದೇಶದಿಂದ ನಮ್ಮ ಸ್ನೇಹಿತರಾಗಲು ಪ್ರಯತ್ನಿಸುವ ಜನರೂ ಇರುತ್ತಾರೆ. ಅಂತವರ ವಿಚಾರದಲ್ಲಿ ಜಾಗರೂಕರಾಗಿರಬೇಕು. ಸ್ನೇಹಿತರ ಆಯ್ಕೆ ಹೇಗಿರಬೇಕು ಎಂಬ ಕುರಿತು 'ಹಿತೋಪದೇಶ' ಪುಸ್ತಕದಲ್ಲಿರುವ ಒಂದು ಕಥೆ ಇದೆ ಕೇಳಿ.

ಸ್ನೇಹಿತರ ಆಯ್ಕೆಯಲ್ಲಿ ಹುಷಾರಾಗಿರಿ (ಪ್ರಾತಿನಿಧಿಕ ಚಿತ್ರ)
ಸ್ನೇಹಿತರ ಆಯ್ಕೆಯಲ್ಲಿ ಹುಷಾರಾಗಿರಿ (ಪ್ರಾತಿನಿಧಿಕ ಚಿತ್ರ)

ಸ್ನೇಹ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಸ್ನೇಹ ಯಾವ ಸಂದರ್ಭದಲ್ಲಾರೂ ಹುಟ್ಟಬಹುದು. ಹಾಗಂತ ಒಬ್ಬರ ಜನಪ್ರಿಯತೆ, ಶ್ರೀಮಂತಿಕೆ, ಸೌಂದರ್ಯ ನೋಡಿ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಬಾರದು. ಪ್ರಪಂಚ ನಾವು ಅಂದುಕೊಂಡಷ್ಟು ಒಳ್ಳೆಯದೂ ಅಲ್ಲ, ಅಂದುಕೊಳ್ಳದೇ ಇರುವಷ್ಟು ಕೆಟ್ಟದ್ದೂ ಅಲ್ಲ. ಕೆಟ್ಟ ಉದ್ದೇಶದಿಂದ ನಮ್ಮ ಸ್ನೇಹಿತರಾಗಲು ಪ್ರಯತ್ನಿಸುವ ಜನರೂ ಇರುತ್ತಾರೆ. ಅಂತವರ ವಿಚಾರದಲ್ಲಿ ಜಾಗರೂಕರಾಗಿರಬೇಕು. ಸ್ನೇಹಿತರ ಆಯ್ಕೆ ಹೇಗಿರಬೇಕು ಎಂಬ ಕುರಿತು 'ಹಿತೋಪದೇಶ' ಪುಸ್ತಕದಲ್ಲಿರುವ ಒಂದು ಕಥೆ ಇದೆ ಕೇಳಿ.

ಚಂಪಕ್ ವನ್ ಎಂಬ ಅರಣ್ಯದಲ್ಲಿ ಜಿಂಕೆ ಮತ್ತು ಕಾಗೆ ಆತ್ಮೀಯ ಸ್ನೇಹಿತರಾಗಿ ವಾಸಿಸುತ್ತಾ ಇರುತ್ತಾರೆ. ಒಂದು ದಿನ, ಒಂದು ಗುಳ್ಳೆನರಿ ಕಾಡಿನಲ್ಲಿ ಜಿಂಕೆ ಮೇಯುವುದನ್ನು ನೋಡಿತು. ಈ ಜಿಂಕೆಯ ಮಾಂಸವನ್ನು ಹೇಗಾದರೂ ತಿನ್ನಬೇಕು ಎಂದು ಬಯಸಿತು. ಜಿಂಕೆಗೆ ಹತ್ತಿರವಾಗಲು ಅದರ ಸ್ನೇಹ ಮಾಡಬೇಕೆಂದು ನಿರ್ಧರಿಸಿತು. ಜಿಂಕೆ ಬಳಿ ಬಂದ ನರಿ "ನಾನು ಇಲ್ಲಿಯವರೆಗೆ ಯಾವುದೇ ಸ್ನೇಹಿತರಿಲ್ಲದೆ ಬದುಕಿದ್ದೇನೆ, ಆದರೆ ಈಗ ನಾನು ನಿನ್ನನ್ನು ಭೇಟಿಯಾಗಿದ್ದೇನೆ, ಈಗ ನನಗೆ ನಾನು ಸಾಕಷ್ಟು ಸ್ನೇಹಿತರೊಂದಿಗೆ ಹೊಸ ಜೀವನವನ್ನು ಪ್ರಾರಂಭಿಸಬೇಕು ಎಂದೆನಿಸುತ್ತಿದೆ" ಎಂದು ಹೇಳಿತು. ಜಿಂಕೆ ಹೆಚ್ಚು ಯೋಚಿಸದೆ ನರಿಯ ಸ್ನೇಹವನ್ನು ಒಪ್ಪಿಕೊಂಡಿತು.

ಸೂರ್ಯ ಮುಳುಗುತ್ತಿದ್ದಂತೆ ಜಿಂಕೆಯು ನರಿಯೊಂದಿಗೆ ಚಂಪಕ ಮರದ ಕೆಳಗಿರುವ ತನ್ನ ಮನೆಗೆ ಹಿಂದಿರುಗಿತು. ಮರದ ಮೇಲೆ ಜಿಂಕೆಯ ಸ್ನೇಹಿತ ಕಾಗೆ ವಾಸಿಸುತ್ತಿತ್ತು. ಜಿಂಕೆಯು ನರಿಯನ್ನು ತನ್ನ ಹೊಸ ಸ್ನೇಹಿತ ಎಂದು ಕಾಗೆಗೆ ಪರಿಚಯಿಸಿತು. ಕಾರಣವಿಲ್ಲದೆ ಬರುವ ಅಪರಿಚಿತರನ್ನು ನಂಬುವುದು ಸರಿಯಲ್ಲ ಎಂದು ಕಾಗೆ ಹೇಳಿತು. ಕಾಗೆಯ ಬುದ್ಧಿವಾದವನ್ನು ಜಿಂಕೆ ಲೆಕ್ಕಿಸಲಿಲ್ಲ. ಬದಲಾಗಿ ಮೂವರೂ ಒಳ್ಳೆ ಸ್ನೇಹಿತರಾಗಿ ಸುಖವಾಗಿ ಬಾಳೋಣವೆಂದು ಹೇಳಿತು.

ನರಿ ಇಬ್ಬರು ಸ್ನೇಹಿತರೊಂದಿಗೆ ವಾಸಿಸಲು ಪ್ರಾರಂಭಿಸಿತು. ನರಿಯು ಒಂದು ದಿನ ಜಿಂಕೆಗೆ ಜೋಳದಿಂದ ತುಂಬಿದ ಹೊಲವೊಂದನ್ನು ತೋರಿಸಿತು. ರೈತ ಹಾಕುವ ಬಲೆಗೆ ಜಿಂಕೆ ಸಿಕ್ಕಿಬಿದ್ದಲ್ಲಿ ರೈತನಿಗೆ ಸಿಗುವ ಜಿಂಕೆ ಮಾಂಸದಲ್ಲಿ ತಾನೂ ಪಾಲು ಕೇಳಬಹುದೆಂದು ಈ ಉಪಾಯ ಮಾಡಿತು. ಒಂದು ದಿನ ಜಿಂಕೆ ಅಲ್ಲಿ ಮೇಯುತ್ತಿದ್ದಾಗ ರೈತ ಹಾಕಿದ ಬಲೆಗೆ ಸಿಕ್ಕಿಬಿದ್ದಿತು. ಬಲೆಯನ್ನು ಕತ್ತರಿಸಲು ಜಿಂಕೆ ನರಿಯನ್ನು ವಿನಂತಿಸಿತು. ಆದರೆ ನರಿ ನಿರಾಕರಿಸಿತು. ಇಂದು ನನ್ನ ಉಪವಾಸದ ದಿನ, ಈ ದಿನ ನಾನು ಚರ್ಮದಿಂದ ಮಾಡಿದ ಬಲೆಯನ್ನು ಮುಟ್ಟುವಂತಿಲ್ಲ ಎಂದು ಸುಳ್ಳು ಹೇಳಿತು.

ಜಿಂಕೆ ಮನೆಗೆ ಹಿಂತಿರುಗದಿದ್ದಾಗ ಕಾಗೆ ಹುಡುಕಲು ಆರಂಭಿಸಿತು. ಆದರೆ ಅಷ್ಟರಲ್ಲಾಗಲೇ ರೈತ ಹರಿತವಾದ ಆಯುಧವೊಂದನ್ನು ಹಿಡಿದು ಹೊಲದೆಡೆ ಬರುತ್ತಿದ್ದ. ಆಗ ಕಾಗೆ ಉಪಾಯವೊಂದನ್ನು ಮಾಡಿತು. ಜಿಂಕೆಯ ಬಳಿ ಸತ್ತಂತೆ ವರ್ತಿಸು ಎಂದು ಹೇಳಿತು. ಜಿಂಕೆ ಸತ್ತಂತೆ ನೆಲದ ಮೇಲೆ ಮಲಗಿತು. ಜಿಂಕೆ ಮೃತಪಟ್ಟಿದೆ ಎಂದುಕೊಂಡ ರೈತ ಬಲೆಯನ್ನು ಕತ್ತರಿಸುತ್ತಾನೆ. ಆಗ ಕಾಗೆ ಕೂಗಿತು. ಆಗ ಜಿಂಕೆ ಎದ್ದು ಓಡಿತು. ಕೋಪಗೊಂಡ ರೈತ ಆಯುಧವನ್ನು ಜಿಂಕೆಯೆಡೆ ಎಸೆಯುತ್ತಾನೆ. ಆದರೆ ಅದು ಗುರಿ ತಪ್ಪಿ ಪೊದೆಯಯಲ್ಲಿ ಅಡಗಿಕೊಂಡಿದ್ದ ನರಿಗೆ ತಗುಲಿ ನರಿ ಸಾಯುತ್ತದೆ. ಸ್ನೇಹಿತರ ಆಯ್ಕೆಯಲ್ಲಿ ಹುಷಾರಾಗಿ ಇರಬೇಕು ಎಂಬುದು ಈ ಕಥೆಯ ಸಾರಾಂಶವಾಗಿದೆ.

Whats_app_banner