ಕನ್ನಡ ಸುದ್ದಿ  /  ಜೀವನಶೈಲಿ  /  ಹಳ್ಳಿ ಬದುಕು: ಮನುಷ್ಯ ಸತ್ತರೆ ಭೂಮಿಗೆ, ಭೂಮಿಯೇ ಸತ್ತರೆ ಎಲ್ಲಿಗೆ; ಭೂಮ್ತಾಯಿ ನಂಬಿ ಬದುಕು ಕಟ್ಟಿಕೊಂಡ ರೈತನ ಅರ್ಥಪೂರ್ಣ ಪ್ರಶ್ನೆಯಿದು

ಹಳ್ಳಿ ಬದುಕು: ಮನುಷ್ಯ ಸತ್ತರೆ ಭೂಮಿಗೆ, ಭೂಮಿಯೇ ಸತ್ತರೆ ಎಲ್ಲಿಗೆ; ಭೂಮ್ತಾಯಿ ನಂಬಿ ಬದುಕು ಕಟ್ಟಿಕೊಂಡ ರೈತನ ಅರ್ಥಪೂರ್ಣ ಪ್ರಶ್ನೆಯಿದು

Rural Life in Karnataka: ಮನುಷ್ಯ ಸತ್ತರೆ ಭೂಮಿಗೆ, ಆದರೆ ಭೂಮಿಯೇ ಸತ್ತರೆ ಎಲ್ಲಿಗೆ? ಸೂಕ್ಷ್ಮ ಮನಸ್ಸಿನ ಪತ್ರಕರ್ತ ರಾಘವೇಂದ್ರ ಎಂ.ವೈ. ಅವರನ್ನು ಬಹುವಾಗಿ ಕಾಡಿದ ಪ್ರಶ್ನೆಯಿದು. ಈ ಪ್ರಶ್ನೆಯ ಬೆನ್ನುಹತ್ತಿದ ಅವರಿಗೆ ಭೂಮ್ತಾಯಿಯನ್ನು ನಂಬಿ ಬದುಕು ಕಟ್ಟಿಕೊಂಡ ಸಾಧಕರೊಬ್ಬರು ಬೆಳಕಾಗಿ ಕಂಡರು. ರೈತ ಸಾಧಕ ಕೆ.ಎಂ.ರಾಜಣ್ಣ ಅವರ ಪರಿಚಯ ಇಲ್ಲಿದೆ.

ರೈತ ಸಾಧಕ ಕೆಎಲ್ ರಾಜಣ್ಣ ಇಂದು ತಮಗಿರುವ ಜಮೀನಿನಲ್ಲಿ ವರ್ಷಕ್ಕೆ 50 ರಿಂದ 60 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ರೈತ ಸಾಧಕ ಕೆಎಲ್ ರಾಜಣ್ಣ ಇಂದು ತಮಗಿರುವ ಜಮೀನಿನಲ್ಲಿ ವರ್ಷಕ್ಕೆ 50 ರಿಂದ 60 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಭೂಮಿ ಇಲ್ಲದಿದ್ದರೆ ಈ ನರ ಮನುಷ್ಯ ಬದುಕೋಕೆ ಸಾಧ್ಯವೇ ಇಲ್ಲ. ನಾವು ಭೂಮಿಯನ್ನು ಎಷ್ಟು ಚೆನ್ನಾಗಿ ನೋಡಿಕೊಂಡರೆ ಅದು ಕೂಡ ನಮ್ಮನ್ನು ಅಷ್ಟೇ ಚೆನ್ನಾಗಿ ಉಳಿಸಿಕೊಳ್ಳುತ್ತೆ. ಹಳ್ಳಿ ಬದುಕು ಅಂತೇಳಿ ಮನುಷ್ಯ ಹಾಗೂ ಭೂಮಿಯ ಸಂಬಂಧದ ಬಗ್ಗೆ ಹೇಳೋಕೆ ಹೊರಟಿರುವಂತೆ ಇದೆ ಅಂತ ಅನಿಸಬಹುದು. ಹಳ್ಳಿ ಬದುಕು ಸಾಕಾಗಿ ಪಟ್ಟಣ ಸೇರಿಕೊಂಡವರು, ಕೃಷಿ ಬದುಕು ಸಾಕಪ್ಪ ಅನಿಸಿದವರು, ಹೊಸದಾಗಿ ಕೃಷಿ ಮಾಡಬೇಕೆಂದುಕೊಂಡವರಿಗಾಗಿ ಇಲ್ಲೊಬ್ಬ ಪ್ರಗತಿಪರ, ಮಾದರಿ ರೈತನ ಬಗ್ಗೆ ಹೇಳಬೇಕಿದೆ. ಇವರನ್ನು ಕೃಷಿ ವಿಜ್ಞಾನಿ ಅಂತ ಕರೆದರೂ ತಪ್ಪಾಗಲಾರದು.

ನಿವೃತ್ತಿ ಹೊಂದಿರುವ ಕೆಎಎಸ್ ಅಧಿಕಾರಿಗಳು, ಉಪನ್ಯಾಸಕರು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವು ಮಂದಿ ಇವರಿಗೆ ಫೋನ್ ಮಾಡಿ ನಮಗೂ ನೀವು ಮಾಡುವಂಥ ಕೃಷಿ ಬಗ್ಗೆ ಹೇಳಿಕೊಡಿ, ಯಾವ ಬೆಳೆ ಹಾಕಬೇಕು ಇತ್ಯಾದಿ ಮಾಹಿತಿಯನ್ನು ಕೇಳುತ್ತಾರೆ. 'ಅರೇ ಬೇಸಾಯದ ಬಗ್ಗೆ ಕೃಷಿ ಇಲಾಖೆ, ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಬೇಕು ನನ್ನೇಕೆ ಕೇಳ್ತಾರೆ' ಅಂತ ಇವರು ನಗೆ ಚಟಾಕಿ ಹಾರಿಸುತ್ತಾರೆ.

ಮಹಾತ್ಮ ಗಾಂಧಿಜೀ ಅವರು ಆರಂಭಿಸಿದ್ದ 2024ಕ್ಕೆ ನೂರು ವರ್ಷಗಳನ್ನು ಪೂರೈಸುತ್ತಿರುವ 'ಹಿಂದೂಸ್ತಾನ್ ಟೈಮ್ಸ್‌'ನ ಸೋದರ ಸಂಸ್ಥೆಯಾದ 'ಹಿಂದೂಸ್ತಾನ್ ಟೈಮ್ಸ್ ಕನ್ನಡ ಡಿಜಿಟಲ್‌'ನಲ್ಲಿ ಇಂದಿನಿಂದ (ಜೂನ್ 7) ಪ್ರತಿ ಬುಧವಾರ ಪ್ರಕಟವಾಗಲಿರುವ 'ಹಳ್ಳಿ ಬದುಕು' ಹೊಸ ಅಂಕಣದಲ್ಲಿ ಗ್ರಾಮೀಣ ಭಾಗದ ಜನರ ಬದುಕು, ಜೀವನ, ಕೃಷಿ, ಕಲೆ, ಸಾಹಿತ್ಯ, ಸಂಸ್ಕೃತಿ, ಪದ್ದತಿ, ಹೀಗೆ ಒಟ್ಟಾರೆ ಇಲ್ಲಿನ ಜನರ ಬದುಕಿಗೆ ಸಂಬಂಧಿಸಿದ ವಿಚಾರಗಳು ಅಂಕಣದಲ್ಲಿ ಪ್ರಕಟವಾಗಲಿದೆ.

ಟ್ರೆಂಡಿಂಗ್​ ಸುದ್ದಿ

ಇಂದಿನ ಅಂಕಣ ಬರಹವು ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ಕೃಷ್ಣಾಪುರ ಗ್ರಾಮದ ಕೆ.ಎಂ.ರಾಜಣ್ಣ ಅವರ ಜೀವನ ಹಾಗೂ ಸಾಧನೆಯ ಕುರಿತಾಗಿದೆ. ಬಡತನದಿಂದ ಜೀವನ ಆರಂಭಿಸಿದ್ದ ರಾಜಣ್ಣ ಇವತ್ತು ವರ್ಷಕ್ಕೆ ಕನಿಷ್ಠ 50 ರಿಂದ 60 ಲಕ್ಷ ರೂಪಾಯಿ ಆದಾಯವನ್ನು ಕೃಷಿಯಿಂದಲೇ ಗಳಿಸುತ್ತಿದ್ದಾರೆ. ತಂದೆಯಿಂದ ಬಂದಿದ್ದ 3 ಎಕರೆ ಕೃಷಿ ಭೂಮಿಯನ್ನು ಇವತ್ತು 28 ಎಕರೆಗೆ ಹೆಚ್ಚಿಸಿಕೊಂಡಿದ್ದಾರೆ. ಅವರು ಇಂದು ಈ ಮಟ್ಟಕ್ಕೆ ಬರಬೇಕಾದರೆ ಎದುರಿಸಿದ ಸವಾಲುಗಳು, ಕಷ್ಟಗಳು ಅವರಿಗೇ ಗೊತ್ತು.

ತೋಟದಲ್ಲಿ ಕೆಲಸ ಮಾಡುತ್ತಲೇ ಮಾತಿಗಿಳಿದರು ರೈತ ರಾಜಣ್ಣ. ಅವರ ಬದುಕಿನ ಕಥಾನಕವನ್ನು ಅವರದೇ ಮಾತುಗಳಲ್ಲಿ ಕಟ್ಟಿಕೊಡಲಾಗಿದೆ...

ಕೃಷಿ ಬಗ್ಗೆ ತುಂಬಾ ಆಸಕ್ತಿ ಇದ್ದ ಕಾರಣ 18ನೇ ವಯಸ್ಸಿನಿಂದಲೇ ಬೇಸಾಯ ಮಾಡಲು ಆರಂಭಿಸಿದೆ. ಪ್ರಾಥಮಿಕ ಶಿಕ್ಷಣವನ್ನು ಹಳ್ಳಿಯಲ್ಲೇ ಮಾಡಿದ್ದೇನೆ. ಪದವಿಯಲ್ಲಿ ಬಿಕಾಂ ಮುಗಿಸಿ, ವಿವಿಪುರಂನ ಸಂಜೆ ಕಾಲೇಜಿನಲ್ಲಿ ಲಾ ಮಾಡಿದೆ. ಈ ಕೋರ್ಸ್ ಮುಗಿದ ಮೇಲೆ ಲಾ ಪ್ರಾಕ್ಟೀಸ್‌ಗೆ ಹೋಗಬೇಕಿತ್ತು. ಆದರೆ ಅದ್ಯಾಕೋ ಬಡತನದಿಂದ ಬಂದಿದ್ದ ನನಗೆ ಪ್ರಾಕ್ಟೀಸ್ ಮಾಡಬೇಕು ಅಂತ ಅನಿಸಿಲ್ಲ. ವ್ಯವಸಾಯದಲ್ಲೇ ಏನಾದರೂ ಮಾಡಬೇಕು ಅಂತ ನಿರ್ಧಾರ ಮಾಡಿದೆ.

ನಾವು ಮೂರು ಜನ ಅಣ್ಣ ತಮ್ಮಂದಿರು. 9 ಎಕರೆ ಆಸ್ತಿಯಲ್ಲಿ ನಮ್ಮ ತಂದೆ ನನಗೆ ಮೂರು ಎಕರೆ ಭಾಗವಾಗಿ ಕೊಟ್ರು. ಆರಂಭದಲ್ಲಿ ಕೃಷಿಗೆ ಇಳಿದಾಗ ತುಂಬಾ ಏರುಪೇರುಗಳನ್ನು ಕಾಣಬೇಕಾಯಿತು. ಹಿಂದೆ ಬಾವಿಯಿಂದ ನೀರು ತೆಗೆದು ಬೆಳೆ ಬೆಳೆಯಬೇಕಾಗಿತ್ತು. ನಂತರದ ದಿನಗಳಲ್ಲಿ ಆ ಬಾವಿಯಲ್ಲಿ ನೀರು ಬತ್ತಿಹೋಯ್ತು. ಮತ್ತೆ ಬೋರ್ ವೆಲ್ ಹಾಕಬೇಕೆಂದರೆ ನಮ್ಮ ತಂದೆಯವರು ಹಳೆ ಕಾಲದವರು ಆದ ಕಾರಣ ಬೋರ್‌ವೆಲ್ ಕೊರೆಸುವುದಕ್ಕೆ ಬಿಡುತ್ತಿರಲಿಲ್ಲ. ಅದರೂ ಕೂಡ ಪಟ್ಟು ಬಿಡದೆ ಒಂದೆರಡು ಫೇಲೂರ್ ಆದ್ರೂ ಮೂರನೇ ಬೋರ್‌ವೆಲ್‌ನಲ್ಲಿ ಇನ್ಮೂರು ಮುನ್ನೂರು ಅಡಿಗಳಿಗೆ ನೀರು ಸಿಕ್ಕಿತು.

ವ್ಯವಸಾಯದಲ್ಲೇ ಸಾಧನೆ ಮಾಡಬೇಕೆಂದು ಛಲದಿಂದ ಲಾ ಪ್ರಾಕ್ಟೀಸ್ ಬಿಟ್ಟು ಬಂದ ನನಗೆ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಯಿತು. ಸಮಗ್ರ ಕೃಷಿಯನ್ನು ಆಯ್ಕೆ ಮಾಡಿಕೊಂಡು ಈ ಕ್ಷೇತ್ರಕ್ಕೆ ಬಂದಾಗ ಹಳೆಯ ಪದ್ದತಿಗಳನ್ನು ಬಿಟ್ಟು ಹೊಸ ಪದ್ದತಿಗಳಲ್ಲಿ ವ್ಯವಸಾಯ ಮಾಡಬೇಕೆಂದು ತೀರ್ಮಾನ ಮಾಡಿದೆ. ಯಾವುದೇ ಬೆಳೆಯನ್ನು ಬೆಳೆಯಬೇಕಾದರೂ ಮೊದಲು ಮಣ್ಣು, ನೀರನ್ನು ಪರೀಕ್ಷೆ ಮಾಡಿಸಲು ಆರಂಭಿಸಿದೆ. ಇದರ ಆಧಾರದಲ್ಲಿ ರಸಗೊಬ್ಬರ ಬಳಕೆಯನ್ನು ಕಡಿಮೆ ಮಾಡಿದೆ. ತಿಪ್ಪೆಗೊಬ್ಬರ, ಕಾಂಪೋಸ್ಟ್ ಹಾಗೂ ಜೈವಿಕ ಗೊಬ್ಬರ ಬಳಕೆಯನ್ನು ಆರಂಭಿಸಿದೆ.

ಮಣ್ಣನ್ನು ಉಳಿಸಿದರೆ ಮಣ್ಣು ನಮ್ಮನ್ನು ಉಳಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡು. ಭೂಮಿಯನ್ನು ಕಾಪಾಡಬೇಕೆಂಬ ಉದ್ದೇಶದಿಂದ ಕಡಿಮೆ ಕೀಟನಾಶ ಹಾಗೂ ರಸಾಯನಿಕ ರಸಗೊಬ್ಬರಗಳನ್ನು ಕಡಿಮೆ ಮಾಡಿದೆ. ಏರುಪೇರುಗಳನ್ನು ಕಂಡರೂ ಪರ್ಯಾಯ ಕೃಷಿ ಪದ್ದತಿಯಲ್ಲೇ ಮುಂದುವರೆದೆ. ಉದಾಹರಣೆಗೆ ರಾಗಿ ಬೆಳೆದ ನಂತರ ಅದೇ ಭೂಮಿಯಲ್ಲಿ ಜೋಳ ಬೆಳೆಯುತ್ತಿದ್ದೆ. ಹೀಗೆ ದ್ವಿದಳ ಬೆಳೆಗಳನ್ನು ಬೆಳೆದೆ.

ವ್ಯವಸಾಯದಿಂದ ಮಾಡಿದ ಸಂಪಾದನೆಯಲ್ಲಿ ಇವತ್ತು 25 ಎಕರೆ ಭೂಮಿಯನ್ನು ಖರೀದಿಸಿದ್ದೇನೆ. ಒಟ್ಟಾರೆಯಾಗಿ 28 ಎಕರೆಯಲ್ಲಿ ಹಣ್ಣು, ತರಕಾರಿ ಸೇರಿದಂತೆ ಸಮಗ್ರ ಕೃಷಿಯನ್ನು ಮಾಡುತ್ತಿದ್ದೇನೆ. ಬಾಳೆ, ದಾಳಿಂಬೆ, ಸೀಬೆ, ಮಾವು, ನೇರಳ, ರಾಗಿ, ಭತ್ತ, ಅವರೆ, ತೊಗರಿ, ಕಡ್ಲೆ, ಎಲ್ಲಾ ರೀತಿಯ ತರಕಾರಿ ಬೆಳೆಗಳನ್ನು ಬೆಳೆದೆ. ವ್ಯವಸಾಯದಲ್ಲಿ ಸಕ್ಸಸ್ ಆದೆ ಎನ್ನುವ ಮಟ್ಟಕ್ಕೆ ಬರುವಷ್ಟರಲ್ಲಿ 2015-16ರಲ್ಲಿ ಬರಗಾಲ ಆರಂಭವಾಯಿತು. ಬೋರ್‌ವೆಲ್‌ಗಳಲ್ಲಿ ನೀರು ನಿಂತುಹೋಯ್ತು. 25 ಎಕರೆ ಬೆಳೆ ಮಾಡುತ್ತಿದ್ದ ನನಗೆ 10 ಬೋರ್‌ವೆಲ್‌ಗಳಿಂದ ಕನಿಷ್ಠ ಎರಡ್ಮೂರು ಎಕರೆ ಬೆಳೆ ತೆಗೆಯಲು ಸಾಧ್ಯವಾಗುತ್ತಿರಲಿಲ್ಲ. ಎರಡು ಸಾವಿರ ಅಡಿಗಳಷ್ಟು ಕೊಳವೆ ಬಾವಿ ಕೊರೆಸಿದರೂ ಅರ್ಧ ಇಂಚು ನೀರು ಬರ್ತಾ ಇತ್ತು. ಇಂತಹ ಪರಿಸ್ಥಿತಿಯಲ್ಲಿ ತೋಟಗಾರಿಕೆ ಇಲಾಖೆಯವರು ನನಗೆ ತುಂಬಾ ಸಹಕಾರ ಕೊಟ್ಟರು.

ಪಾಲಿ ಹೌಸ್ ಮಾಡುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿ ಸಲಹೆ ನೀಡಿದರು. ಆದರೆ ಇಲಾಖೆಗೆ ಮನವಿ ಮಾಡಿದರೂ ದೊಡ್ಡ ರೈತರು ಅಂತ ನನಗೆ ಪಾಲಿಹೌಸ್ ಕೊಡಲಿಲ್ಲ. ಯಾವ ರೈತರೂ ಈ ಸೌಲಭ್ಯವನ್ನು ಪಡೆಯದಿದ್ದಾಗ ಕೊನೆಗೆ ನನಗೆ ಕೊಟ್ರು. ನೀರಿಲ್ಲ, ವ್ಯವಸಾಯ ಮಾಡೋಕೆ ಆಗಲ್ಲ ಹೀಗಾಗಿ ಯಾವುದಾದರೂ ಗಿಡಗಳನ್ನು ನೆಟ್ಟುಬಿಡೋಣ ಅಂತ ಅಂದುಕೊಳ್ಳುವಷ್ಟರಲ್ಲಿ 2016ರಲ್ಲಿ ಸಿಕ್ಕ ಪಾಲಿ ಹೌಸ್ ನನ್ನ ಕೃಷಿ ಜೀವನಕ್ಕೆ ದೊಡ್ಡ ತಿರುವನ್ನು ನೀಡಿತು.

ಪಾಲಿಹೌಸ್ ನಿರ್ಮಾಣ ಮಾಡಿಕೊಂಡು ಇದರ ಮೇಲೆ ಬೀಳುವ ಮಳೆ ನೀರಿನ ಸಂಗ್ರಹಕ್ಕಾಗಿ ಕೃಷಿ ಹೊಂಡಾ ಮಾಡಿದೆ. 150 ಅಡಿ ಉದ್ದ, 85 ರಿಂದ 90 ಅಡಿ ಅಗಲ, 20 ಅಡಿ ಆಳದ ಕೃಷಿ ಹೊಂಡಾದಲ್ಲಿ 60 ಲಕ್ಷ ಗ್ಯಾಲ್ ನೀರು ಸಂಗ್ರಹವಾಗುಂತಹದ್ದು. ಅದು ಒಮ್ಮೆ ತುಂಬಿದರೆ ಎರಡು ಎಕರೆಯಲ್ಲಿ ಕನಿಷ್ಠ 1 ಬೆಳೆ ಬೆಳೆ ತೆಗೆದೆ. ಆ ಬಳಿಕ ಇನ್ನಷ್ಟು ವೈಜ್ಞಾನಿಕವಾಗಿ ವ್ಯವಸಾಯ ಮಾಡಲು ಆರಂಭಿಸಿದೆ. ಮೂರು ಕೃಷಿ ಹೊಂಡಗಳನ್ನು ಮಾಡಿಸಿದೆ. ಪಾಲಿ ಹೌಸ್‌ ಮೇಲೆ ಬೀಳುವ ಮಳೆ ನೀರನ್ನು ಶೇಖರಣೆ ಮಾಡಿಕೊಂಡು ಮತ್ತೆ 15 ರಿಂದ 20 ಎಕರೆ ವ್ಯವಸಾಯ ಮಾಡಲು ಆರಂಭಿಸಿದೆ.

ಕಾರಣ ಇಷ್ಟೇ ಆಗ ಯಾವ ಸಮಯಕ್ಕೆ ಯಾವ ಬೆಳೆ ಬೆಳೆದರೆ ಉತ್ತಮ ಆದಾಯ ಬರುತ್ತೆ ಎಂಬುದನ್ನು ಅರ್ಥಮಾಡಿಕೊಂಡೆ. ಬೇರೆ ರಾಜ್ಯಗಳಲ್ಲಿ ನೆರೆಯಿಂದ ಬೆಳೆ ಬೆಳೆಯಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬೆಳೆಯುವ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತದೆ. ಈಗ ನನಗೆ 60 ವರ್ಷ. 18ನೇ ವಯಸ್ಸಿಗೆ ಕೃಷಿ ಮಾಡಲು ಆರಂಭಿಸಿದವನು. ನನ್ನ ಅನುಭವದಲ್ಲಿ 6 ಅಥವಾ 7ನೇ ತಿಂಗಳಿನಿಂದ ಹಿಡಿದು 9 ಅಥವಾ 10ನೇ ತಿಂಗಳವರೆಗೆ, ಅಂದರೆ ಜೂನ್‌ನಿಂದ ಅಕ್ಟೋಬರ್ ಅವಧಿಯಲ್ಲಿ ಏನು ಬೆಳೆ ಬೆಳೆದರೂ ಒಳ್ಳೆ ಬೆಲೆ ಸಿಗುತ್ತದೆ. ಕಾರಣ ಇಷ್ಟೇ ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳ, ಒಡಿಶಾ, ಅಸ್ಸಾಂ ಇಂತಹ ರಾಜ್ಯಗಳಲ್ಲಿ ಈ ಅವಧಿಯಲ್ಲಿ ಕೃಷಿಗೆ ವಾತಾವರಣ ಸರಿ ಇರುವುದಿಲ್ಲ. ನೆರೆ ಹಾವಳಿ ಜಾಸ್ತಿ ಇರುತ್ತದೆ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ರೈತರಿಗೆ ವರದಾನ ಆಗುವಂತಹ ವಾತಾವರಣ ಇರುತ್ತೆ.

ಇಂತಹ ಸಮಯದಲ್ಲಿ ನಾನು ಎಲ್ಲಾ ರೀತಿಯ ಬೆಳೆಗಳನ್ನು ಬೆಳೆದು ಯಶಸ್ಸು ಕಂಡಿದ್ದೇನೆ. ಪಾಲಿಹೌಸ್‌ನಲ್ಲಿ ಕ್ಯಾಪ್ಸಿಕಂ (ದೊಣ್ಣಮೆಣಸಿನಕಾಯಿ) ಬೆಳೆಯುತ್ತೇನೆ. 1 ವರ್ಷ ಇರುತ್ತೆ, ಆ ನಂತರ ಇಂಗ್ಲಿಷ್ ಕುಕುಂಬರ್ ಬೆಳಿತೀನಿ, ಪರ್ಯಾಯ ಪದ್ದತಿಯಾಗಿ ಸೇವಂತಿ ನಾಟಿ ಮಾಡುತ್ತೇನೆ. ಇದರಿಂದ ಭೂಮಿ ಫಲವತ್ತಾಗುತ್ತಿತ್ತು. ಹೂವಿನಲ್ಲಿ ಇರುವಂತ ದ್ರವ ರೂಪದ ಶಕ್ತಿ ವೈರಸ್, ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತಿತ್ತು. ಪಾಲಿಹೌಸ್‌ನಲ್ಲಿ ರಾಗಿ ಕೂಡ ಬೆಳೆದಿದ್ದೇನೆ. ತಂತ್ರಜ್ಞಾನವನ್ನು ಬಳಸಿಕೊಂಡೆ, ಕೃಷಿ, ತೋಟಗಾರಿಕೆ ಸೇರಿದಂತೆ ಬೇಸಾಯಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಗಳೊಂದಿಗೆ ನಿಕಟವರ್ತಿಯಾಗುತ್ತಿದೆ. ಕೃಷಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದೆ. 42 ವರ್ಷಗಳಿಂದ ಬೇಸಾಯ ಮಾಡುತ್ತಿದ್ದರೂ ಇಂದಿಗೂ ನಮ್ಮ ಜಮೀನಿನಲ್ಲಿ ಇರುವ ಮಣ್ಣು ಹಾಳಾಗಿಲ್ಲ. ಕಡಿಮೆ ರಸಾಯನಿಕಗಳನ್ನು ಬಳಸಿ ವೈಜ್ಞಾನಿಕವಾಗಿ ಬೇಸಾಯ ಮಾಡುತ್ತಿದ್ದೇನೆ.

ಸ್ನೇಹಿತ ಚಂದ್ರಶೇಖರ್ ಒಂದು ಮಾತು ಹೇಳ್ತಾ ಇರೋರು ಮನುಷ್ಯ ಸತ್ತರೆ ಭೂಮಿಗೆ ಭೂಮಿ ಸತ್ತರೆ ಎಲ್ಲಿಗೆ ಅಂತ. ಆ ಮಾತು ನಿಜಕ್ಕೂ ಉತ್ತಮವಾಗಿದೆ. ಒಮ್ಮೆ ಭೂಮಿ ಸತ್ತರೆ ನಾವೆಲ್ಲರೂ ಸಾಯಬೇಕಾಗುತ್ತದೆ. ಆದ್ದರಿಂದ ಎಷ್ಟೇ ಮುಂದುವರಿದರೂ, ಭೂಮಿಯನ್ನು ಜೊತೆಯಲ್ಲೇ ಕಾಪಾಡಿಕೊಂಡು ಹೋದರೆ ಇನ್ನೂ ಅತ್ಯುತ್ತಮ ಬೆಳೆಗಳನ್ನು ಬೆಳೆದು, ಹತ್ತಾರು ಜನರಿಗೆ ಕೆಲಸ ಕೊಡಬಹುದು.

ನಾನು ಈಗ 4 ಎಕರೆಯಲ್ಲಿ ಸೀಬೆ, 4 ಎಕರೆಗೆ ನೇರಳೆ, 8 ಎಕರೆಗೆ ವಿವಿಧ ತಳಿಯ ಮಾವು, ಉಳಿದಂತ ಭೂಮಿಯ 4 ಎಕರೆಗೆ ಏಲಕ್ಕಿ ಬಾಳೆ ಹಾಕಿದ್ದೇನೆ, ಒಂದು ಪಾಲಿ ಹೌಸ್‌ನಲ್ಲಿ ಕ್ಯಾಪ್ಸಿಕಂ ಇದೆ, ಮತ್ತೊಂದು ಪಾಲಿಹೌಸ್‌ನಲ್ಲಿ ಹೂ ಹಾಕಿದ್ದೇನೆ. 4 ಎಕರೆ ದಾಳಿಂಬೆ ಹಾಕಿದ್ದಾನೆ. ದಾಳಿಂಬೆ ಹಾಕಿರುವ ಪ್ರದೇಶದಲ್ಲಿ ಬೆಳೆ ಪರ್ಯಾಯ ಪದ್ದತಿ ಮಾಡಿದ್ದೇನೆ. ದಾಳಿಂಬೆ ವರ್ಷಕ್ಕೆ ಫಸಲ ನೀಡುವ ಬೆಳೆಯಾಗಿರುವುದರಿಂದ ಅದರಲ್ಲಿ ಸ್ಥಳ ವ್ಯರ್ಥವಾಗುತ್ತೆ ಅಂತ ಬೆಡ್ ಮಾಡಿ ಸೆಂಟ್ ಯಲ್ಲೋ ಹೂ, ಉಳಿದ ಜಾಗದಲ್ಲಿ ಗಡ್ಡೆ ಕೋಸು ಹಾಕಿದ್ದಾನೆ.

ನನ್ನ ಈ ಸಾಧನೆಯನ್ನು ಗಮನಿಸಿ ಈ ಹಿಂದೆ ಕೃಷಿ ಸಚಿವರು, ಕೃಷಿ ಇಲಾಖೆ ಆಯುಕ್ತರು, ಹಿರಿಯ ಅಧಿಕಾರಿಗಳು ನಮ್ಮ ಭೂಮಿಗೆ ಬಂದಿದ್ದರು. ಇದನ್ನೆಲ್ಲಾ ನೋಡಿ ತುಂಬಾ ಖುಷಿ ಪಟ್ಟರು. ನೀವು ಬೇರೆ ರೈತರಿಗೆ ಮಾದರಿಯಾಗಿದ್ದೀರಿ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕೃಷಿ ಇಲಾಖೆಯಿಂದ ಯುವ ರೈತ ಪ್ರಶಸ್ತಿ, ತೋಟಗಾರಿಕೆ ವಿಶ್ವವಿದ್ಯಾಲಯ ಬಾಗಲಕೋಟೆಯಿಂದ ಅತ್ಯುತ್ತಮ ರೈತ ಪ್ರಶಸ್ತಿ, ಜಿಕೆವಿಕೆಯಿಂದ ಕೃಷಿ ಪಂಡಿತ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳನ್ನು ಬಂದಿವೆ. ಎಲ್ಲಾ ರೈತರು ಹೀಗೆ ವೈಜ್ಞಾನಿಕವಾಗಿ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು ಎಂಬುದಷ್ಟೇ ನನ್ನ ಮನವಿ ಎಂದು ಅವರು ಮಾತು ಮುಗಿಸಿದರು.

ಕೊನೆಯಲ್ಲಿ ನನ್ನ ಈ ಸಾಧನೆಯ ಹಿಂದೆ ನನ್ನ ಪತ್ನಿ ಸೇರಿ ಕುಟುಂಬದ ಪಾತ್ರ ದೊಡ್ಡದಿದೆ ಎಂದು ಹೇಳುವುದನ್ನು ಮರೆಯಲಿಲ್ಲ.