ಕನ್ನಡ ಸುದ್ದಿ  /  Lifestyle  /  Summer And Child Protection: How To Protect Children From Hotty Summer?

summer and child protection: ಏರುತ್ತಿರುವ ತಾಪಮಾನಕ್ಕೆ ಮುದುಡಿದೆ ಮಕ್ಕಳ ಮನ: ಪೋಷಕರಿಗಿರಲಿ ಮಕ್ಕಳ ಮೇಲೆ ಗಮನ

summer and child protection: ಬಿಸಿಲು ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಬಹುದು. ಆ ಕಾರಣಕ್ಕೆ ಪೋಷಕರು ಹಾಗೂ ಶಿಕ್ಷಕರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಶಾಲೆಯಲ್ಲಿ, ಮನೆಯಲ್ಲಿ, ಹೊರಗಡೆ ಹೋಗುವಾಗ ಒಂದಿಷ್ಟು ಸೂಕ್ತ ಕ್ರಮಗಳನ್ನು ಅನುಸರಿಸುವುದು ಮುಖ್ಯವಾಗುತ್ತದೆ.

ಬಿಸಿಲಿನಲ್ಲಿ ನೀರಾಟವಾಡುತ್ತಿರುವ ಮಗು
ಬಿಸಿಲಿನಲ್ಲಿ ನೀರಾಟವಾಡುತ್ತಿರುವ ಮಗು

ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈ ವರ್ಷ ತಾಪಮಾನ ಏರಿಕೆಯ ಪ್ರಮಾಣ ಹೆಚ್ಚಾಗಿದೆ. ಬಿಸಿಲಿನ ತಾಪದಿಂದ ಮಕ್ಕಳನ್ನು ಕಾಪಾಡಿಕೊಳ್ಳುವುದು ಅವಶ್ಯ. ಅಧಿಕ ತಾಪಮಾನದಿಂದ ಮಕ್ಕಳನ್ನು ರಕ್ಷಿಸುವ ಸಲುವಾಗಿ ಕೆಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ಮಾರ್ಗಸೂಚಿಯನ್ನೂ ನೀಡಲಾಗಿದೆ.

ಅದೇನೆ ಇದ್ದರೂ ಪೋಷಕರು ಬಿಸಿಲಿನಿಂದ ಮಕ್ಕಳನ್ನು ಕಾಪಾಡುವ ಬಗ್ಗೆ ಯೋಚಿಸುವುದು ಅವಶ್ಯ. ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಎರಡಕ್ಕೂ ಬಿಸಿಲಿನಿಂದ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆ ಕಾರಣಕ್ಕೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಶಾಲೆಗೆ ಕಳುಹಿಸುವಾಗ, ಮನೆಯಲ್ಲಿ ಇರುವಾಗ ಒಂದಿಷ್ಟು ಸಲಹೆ ಸೂಚನೆಗಳನ್ನು ಪಾಲಿಸುವುದು ಅವಶ್ಯ.

ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ

ಬೇಸಿಗೆಯಲ್ಲಿ ಮಕ್ಕಳಿಗೆ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಅವರಿಗೆ ಸಾಕಷ್ಟು ನೀರು ಕುಡಿಯಲು ಹೇಳಬೇಕು. ನೀರು ಕುಡಿಯದೇ ಇರುವುದರಿಂದಾಗುವ ಅಪಾಯಗಳ ಬಗ್ಗೆ ಎಚ್ಚರಿಸಬೇಕು. ಶಾಲೆಗೆ ಕಳುಹಿಸುವಾಗ ಮರೆಯದೇ ಬಾಟಲಿಯಲ್ಲಿ ನೀರು ತುಂಬಿಸಿ ಕಳುಹಿಸಬೇಕು. ನೀರು ಕುಡಿಯಲು ಮಕ್ಕಳು ಹಿಂದೇಟು ಹಾಕುತ್ತಾರೆ. ಆ ಕಾರಣಕ್ಕೆ ಜ್ಯೂಸ್‌, ಸೂಪ್‌, ನೀರಿನಂಶ ಇರುವ ಹಣ್ಣುಗಳನ್ನು ನೀಡುವ ಮೂಲಕ ದೇಹದಲ್ಲಿ ನೀರಿನಂಶ ಸಂಗ್ರಹವಾಗುವಂತೆ ನೋಡಿಕೊಳ್ಳಬೇಕು.

ಆರೋಗ್ಯಕರ ಡಯೆಟ್‌

ಮಕ್ಕಳಿಗೆ ಬೇಸಿಗೆಯಲ್ಲಿ ಹಣ್ಣು, ತರಕಾರಿಗಳ ಸೇವನೆಗೆ ಹೆಚ್ಚು ಒತ್ತು ಕೊಡಬೇಕು. ಸಿಟ್ರಸ್‌ ಅಂಶ ಅಧಿಕವಿರುವ ಹಣ್ಣುಗಳ ಸೇವನೆಯಿಂದ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಹಾಗೂ ವಿಟಮಿನ್‌ಗಳು ಸರಬರಾಜಾಗುತ್ತವೆ. ಕಲ್ಲಂಗಡಿ, ಕರ್ಬೂಜದಂತಹ ಹಣ್ಣುಗಳನ್ನು ನೀಡಬಹುದು.

ಕೊಡೆ, ಟೋಪಿ ಕಳುಹಿಸಿ

ಮಕ್ಕಳು ಶಾಲೆಗೆ ಅಥವಾ ಹೊರಗಡೆ ಎಲ್ಲೇ ಹೋಗಲಿ ಟೋಪಿ ಹಾಕಿ ಕಳುಹಿಸಿ. ಇದರಿಂದ ಸೂರ್ಯನ ಬಿಸಿಲು ನೇರವಾಗಿ ಮಗುವಿನ ನೆತ್ತಿ ಹಾಗೂ ಕಣ್ಣಿನ ಮೇಲೆ ಬೀಳುವುದನ್ನು ತಪ್ಪಿಸಬಹುದು. ಬ್ಯಾಗ್‌ನಲ್ಲಿ ಕೊಡೆ ಅಥವಾ ಛತ್ರಿ ಇರಿಸಿ. ಬಿಸಿಲಿನಲ್ಲಿ ಹೋಗುವಾಗ ತಪ್ಪದೆ ಕೊಡೆ ಬಿಡಿಸಿಕೊಂಡು ಹೋಗಬೇಕು ಎಂಬುದನ್ನು ನೆನಪಿಸಿ.

ಹೊರಾಂಗಣ ಕ್ರೀಡೆಗಳಿಗೆ ಕಳುಹಿಸಬೇಡಿ

ಬಿಸಿಲಿನ ಅತಿಯಾದ ತಾಪವು ಮಕ್ಕಳ ಚರ್ಮ, ಕಣ್ಣಿನಂತಹ ಇಂದ್ರೀಯಗಳಿಗೆ ತೊಂದರೆ ಉಂಟು ಮಾಡಬಹುದು. ಅದರೊಂದಿಗೆ ಇನ್ನಿತರ ಆರೋಗ್ಯ ಸಮಸ್ಯೆ ಉಂಟಾಗಲು ಇದು ಕಾರಣವಾಗಬಹುದು. ಆ ಕಾರಣಕ್ಕೆ ಮಕ್ಕಳನ್ನು ಹೊರಾಂಗಣ ಕ್ರೀಡೆಯಲ್ಲಿ ತೊಡಗದಂತೆ ನೋಡಿಕೊಳ್ಳುವುದು ಮುಖ್ಯ. ಅದರ ಬದಲು ಚೆಸ್‌, ಕೇರಂ, ಲುಡೋದಂತಹ ಒಳಾಂಗಣ ಕ್ರೀಡೆಯಲ್ಲಿ ಭಾಗವಹಿಸಲು ಉತ್ತೇಜಿಸಬೇಕು. ಹೊರಗಡೆ ಆಟವಾಡಲು ಮಗು ಹಟ ಮಾಡಿದರೆ ಸಂಜೆಯ ಮೇಲೆ ಕಳುಹಿಸಿ.

ಸನ್‌ಸ್ಕ್ರೀನ್‌ ಕ್ರೀಮ್‌ ಹಚ್ಚಿ

ಸನ್‌ಸ್ಕ್ರೀನ್‌ ಕ್ರೀಮ್‌ ಅನ್ನು ದೊಡ್ಡವರು ಅಥವಾ ಹೆಣ್ಣುಮಕ್ಕಳು ಮಾತ್ರ ಬಳಸುವುದು ಅಂತೇನಿಲ್ಲ. ಸೌಮ್ಯ ಸ್ವಭಾವದ, ಮಕ್ಕಳ ಚರ್ಮಕ್ಕೆ ಹೊಂದುವಂತಹ ಸನ್‌ಸ್ಕ್ರೀನ್‌ ಕ್ರೀಮ್‌ ಹಚ್ಚುವುದು ಅವಶ್ಯ. ಮಕ್ಕಳು ಶಾಲೆಗೆ ಹೋಗುವಾಗ, ಹೊರಗಡೆ ತಿರುಗಾಡಲು ಹೋಗುವಾಗ ಮರೆಯದೇ ಸನ್‌ಸ್ಕ್ರೀನ್‌ ಕ್ರೀಮ್‌ ಹಚ್ಚಿ. ಮಕ್ಕಳ ಚರ್ಮ ಸೂಕ್ಷ್ಮವಾಗಿರುವ ಕಾರಣ ಸೂರ್ಯನ ಅತಿ ನೇರಳ ಕಿರಣಗಳು ನೇರವಾಗಿ ಚರ್ಮಕ್ಕೆ ತಾಕುವುದರಿಂದ ದದ್ದು, ಕೆಂಪಾಗುವುದು ಇಂತಹ ಸಮಸ್ಯೆಗಳು ಉಂಟಾಗಬಹುದು. ಇದಕ್ಕೆ ಸನ್‌ಸ್ಕ್ರೀನ್‌ ಬಳಕೆ ಉತ್ತಮ.

ಸೂಕ್ತ ಉಡುಪು ಹಾಕಿಸಿ

ಬೇಸಿಗೆಯಲ್ಲಿ ಬಟ್ಟೆಗಳಿಂದ ಕೆಲವೊಮ್ಮೆ ಕಿರಿಕಿರಿ ಉಂಟಾಗುತ್ತದೆ. ಸಿಂಥೆಟಿಕ್‌ ಬಟ್ಟೆ ಅಥವಾ ಮೈಗಂಟುವ ಬಟ್ಟೆಗಳು ಚರ್ಮಕ್ಕೆ ಕಿರಿಕಿರಿ ಉಂಟು ಮಾಡಬಹುದು. ಆ ಕಾರಣಕ್ಕೆ ಸಾಧ್ಯವಾದಷ್ಟು ಕಾಟನ್‌ ಬಟ್ಟೆಯನ್ನೇ ಹಾಕಿ, ಅದರೊಂದಿಗೆ ಸಡಿಲವಾಗಿರುವ ಬಟ್ಟೆಯನ್ನು ತೊಡಿಸುವುದೂ ಉತ್ತಮ. ತಿಳಿ ಬಣ್ಣದ ಬಟ್ಟೆಗಳನ್ನು ಹೆಚ್ಚು ತೊಡಿಸಿ. ಇದರಿಂದ ಬಿಸಿಲಿನ ತಾಪ ಮೈಗೆ ಸೋಕುವ ಪ್ರಮಾಣ ಕಡಿಮೆಯಾಗುತ್ತದೆ.

ವಿಭಾಗ