ಕನ್ನಡ ಸುದ್ದಿ  /  Nation And-world  /  Aap Secures Big Win In Delhi Mcd Elections

Delhi MCD elections: ದೆಹಲಿ ಪಾಲಿಕೆ ಚುನಾವಣೆಯಲ್ಲಿ ಎಎಪಿ ದಿಗ್ವಿಜಯ; 15 ವರ್ಷಗಳ ಬಿಜೆಪಿ ಆಳ್ವಿಕೆ ಅಂತ್ಯ

“ಈಗ ದೆಹಲಿಯಲ್ಲಿ ಕೆಲಸ ಮಾಡಲು ಬಿಜೆಪಿ ಮತ್ತು ಕಾಂಗ್ರೆಸ್‌ನ ಸಹಕಾರವನ್ನು ನಾನು ಬಯಸುತ್ತೇನೆ. ನಾನು ಕೇಂದ್ರಕ್ಕೆ ಮನವಿ ಮಾಡುತ್ತೇನೆ ಮತ್ತು ದೆಹಲಿಯನ್ನು ಉತ್ತಮಗೊಳಿಸಲು ಪ್ರಧಾನಿಯವರ ಆಶೀರ್ವಾದವನ್ನು ಕೇಳುತ್ತೇನೆ. ಮಹಾನಗರಪಾಲಿಕೆಯನ್ನು ಭ್ರಷ್ಟಾಚಾರ ಮುಕ್ತಗೊಳಿಸಬೇಕು. ಇಂದು, ದೆಹಲಿಯ ಜನರು ಇಡೀ ದೇಶಕ್ಕೆ ಸಂದೇಶವನ್ನು ನೀಡಿದ್ದಾರೆ” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.

ಆಮ್‌ ಆದ್ಮಿ ಪಕ್ಷಕ್ಕೆ ಗೆಲುವು
ಆಮ್‌ ಆದ್ಮಿ ಪಕ್ಷಕ್ಕೆ ಗೆಲುವು

ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್‌ ಆದ್ಮಿ ಪಕ್ಷವು ಬಿಜೆಪಿ ಎದುರು ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ನಗರದಲ್ಲಿ ಬಿಜೆಪಿಯ 15 ವರ್ಷಗಳ ಆಳ್ವಿಕೆ ಕೊನೆಗೊಂಡಿದೆ.

ಎಕ್ಸಿಟ್ ಪೋಲ್‌ಗಳಲ್ಲೂ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಎಎಪಿಯು ನಗರ ಆಡಳಿವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗುತ್ತದೆ ಎಂದು ಹೇಳಲಾಗಿತ್ತು. ಅದರಂತೆಯೇ ಆಮ್‌ ಆದ್ಮಿ ಪಕ್ಷವು ಬಹುಮತದೊಂದಿಗೆ ವಿಜಯ ಪತಾಕೆ ಹಾರಿಸಿದೆ. ಕಳೆದ ಹದಿನೈದು ವರ್ಷಗಳಿಂದ ನಗರದಲ್ಲಿ ಆಡಳಿತ ವಹಿಸಿದ್ದ ಬಿಜೆಪಿಯನ್ನು ಸೋಲಿಸುವಲ್ಲಿ ಎಎಪಿ ಯಶಸ್ವಿಯಾಗಿದೆ. ಇಂದು ಬಿಜೆಪಿ ಮತ್ತು ಎಎಪಿ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಬಿಜೆಪಿಯನ್ನು ಎರಡನೇ ಸ್ಥಾನಕ್ಕೆ ತಳ್ಳಿ, ಬಹುಮತ ಸಾಬೀತುಮಾಡಿದೆ.

ಪಕ್ಷದ ಗೆಲುವಿಗೆ ಆಪ್‌ ಕಾರ್ಯಕರ್ತರು, ಸಿಎಂ ಕೇಜ್ರಿವಾಲ್‌ ಹಾಗೂ ನಾಗರಿಕರ ಸಂಭ್ರಮ ಜೋರಾಗಿದೆ. ಗೆಲುವು ಖಚಿತವಾದ ಬೆನ್ನಲ್ಲೇ ಮಾತನಾಡಿದ ಕೇಜ್ರಿವಾಲ್, ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ. ನಗರದ ಏಳಿಗೆಗಾಗಿ ನಗರದ ಎಲ್ಲಾ ನಿವಾಸಿಗಳು ಒಟ್ಟಾಗಿ ಕೆಲಸ ಮಾಡುವಂತೆ ಒತ್ತಾಯಿಸಿದ್ದಾರೆ.

“ಈಗ ದೆಹಲಿಯಲ್ಲಿ ಕೆಲಸ ಮಾಡಲು ಬಿಜೆಪಿ ಮತ್ತು ಕಾಂಗ್ರೆಸ್‌ನ ಸಹಕಾರವನ್ನು ನಾನು ಬಯಸುತ್ತೇನೆ. ನಾನು ಕೇಂದ್ರಕ್ಕೆ ಮನವಿ ಮಾಡುತ್ತೇನೆ ಮತ್ತು ದೆಹಲಿಯನ್ನು ಉತ್ತಮಗೊಳಿಸಲು ಪ್ರಧಾನಿಯವರ ಆಶೀರ್ವಾದವನ್ನು ಕೇಳುತ್ತೇನೆ. ಮಹಾನಗರಪಾಲಿಕೆಯನ್ನು ಭ್ರಷ್ಟಾಚಾರ ಮುಕ್ತಗೊಳಿಸಬೇಕು. ಇಂದು, ದೆಹಲಿಯ ಜನರು ಇಡೀ ದೇಶಕ್ಕೆ ಸಂದೇಶವನ್ನು ನೀಡಿದ್ದಾರೆ” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.

ಮತ್ತೊಂದೆಡೆ ಪಕ್ಷದ ಗೆಲುವು ಖಚಿತವಾದ ಬೆನ್ನಲ್ಲೇ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡಾ ಟ್ವೀಟ್ ಮಾಡಿ ದೆಹಲಿಯ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

“ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ನಕಾರಾತ್ಮಕ ಪಕ್ಷವನ್ನು ಸೋಲಿಸುವ ಮೂಲಕ, ದೆಹಲಿಯ ಜನರು ತಕ್ಕ ಪಾಠ ಕಲಿಸಿದ್ದಾರೆ. ಪ್ರಾಮಾಣಿಕ ಕೆಲಸ ಮಾಡುವ ಅರವಿಂದ್ ಕೇಜ್ರಿವಾಲ್‌ ಅವರನ್ನು ಗೆಲ್ಲಿಸಿದ್ದಾರೆ” ಎಂದು ಅವರು ಹೇಳಿದರು.

“ನಮ್ಮ ಪಾಲಿಗೆ ಇದು ಕೇವಲ ವಿಜಯವಲ್ಲ. ದೆಹಲಿ ನಗರವನ್ನು ಸ್ವಚ್ಛ ಮತ್ತು ಉತ್ತಮವಾಗಿಸಲು ಇದು ದೊಡ್ಡ ಜವಾಬ್ದಾರಿಯಾಗಿದೆ,” ಎಂದು ಬಿಜೆಪಿಗೆ ಪೆಟ್ಟು ಕೊಟ್ಟಿದ್ದಾರೆ.

ಪಾಲಿಕೆ ಚುನಾವಣೆಯ ಫಲಿತಾಂಶ

ದೆಹಲಿ ರಾಜ್ಯ ಚುನಾವಣಾ ಆಯೋಗವು ನೀಡಿದ ಮಾಹಿತಿ ಪ್ರಕಾರ ಎಎಪಿ 134 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 104ರಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ 9ರಲ್ಲಿ ಗೆದ್ದು ಎರಡರಲ್ಲಿ ಮುನ್ನಡೆ ಸಾಧಿಸಿದೆ. ಆದರೆ, ಅದಾಗಲೇ ಬಹುಮತ ಸಾಬೀತಾಗಿರುವುದರಿಂದ ಎಎಪಿ ಚುನಾವಣೆಯನ್ನು ಗೆದ್ದಂತಾಗಿದೆ. ಇತರ ಮೂರು ವಾರ್ಡ್‌ಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ದೆಹಲಿ ಮಹಾನಗರಪಾಲಿಕೆಯು ಒಟ್ಟು 250 ವಾರ್ಡ್‌ಗಳನ್ನು ಹೊಂದಿದೆ. ಇಲ್ಲಿ ಬಹುಮತ ಸಾಬೀತಾಗಲು 126 ವಾರ್ಡ್‌ಗಳಲ್ಲಿ ಗೆಲ್ಲಬೇಕು.

2007ರಿಂದಲೂ ದೆಹಲಿ ಮಹಾನಗರ ಪಾಲಿಕೆಯನ್ನು ಬಿಜೆಪಿ ಆಳುತ್ತಿದೆ. 2013ರಿಂದ ಎಎಪಿ ರಾಜ್ಯ ಸರ್ಕಾರವನ್ನು ಮುನ್ನಡೆಸುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಕೂಡಾ, ಕೇಸರಿ ಪಕ್ಷವು ದೆಹಲಿ ಪಾಲಿಕೆ ಚುನಾವಣೆಯಲ್ಲಿ ಯಶಸ್ಸನ್ನು ಅನುಭವಿಸಿದೆ. 2017ರಲ್ಲಿ ಮತದಾನ ನಡೆದ 270 ವಾರ್ಡ್‌ಗಳಲ್ಲಿ ಬಿಜೆಪಿ 181ರಲ್ಲಿ ಗೆಲುವು ಸಾಧಿಸಿದರೆ, ಎಎಪಿ 48 ಮತ್ತು ಕಾಂಗ್ರೆಸ್ ಕೇವಲ 30ರಲ್ಲಿ ಗೆಲುವು ಸಾಧಿಸಿತ್ತು.

ದೆಹಲಿಯ 250 ವಾರ್ಡ್‌ಗಳಿಗೆ ಡಿಸೆಂಬರ್ 4 ರಂದು ಮತದಾನ ನಡೆದಿದ್ದು, ಶೇ.50ರಷ್ಟು ಮತದಾನವಾಗಿತ್ತು. ಒಟ್ಟು 1,349 ಅಭ್ಯರ್ಥಿಗಳು ಕಣದಲ್ಲಿದ್ದರು.

IPL_Entry_Point