ಕನ್ನಡ ಸುದ್ದಿ  /  Nation And-world  /  All You Need To Know About The Possible Arrest Procedure Of Former Us President Donald Trump

Donald Trump: ಕೈಕೋಳ, ಬೆರಳಚ್ಚು, ಫೋಟೋ.. ಹೀಗಿರಲಿದೆ ಡೊನಾಲ್ಡ್ ಟ್ರಂಪ್‌‌ ಸಂಭವನೀಯ ಬಂಧನ ಪ್ರಕ್ರಿಯೆ..!

ನ್ಯೂಯಾರ್ಕ್‌ ಗ್ರ್ಯಾಂಡ್‌ ಜ್ಯೂರಿ ದೋಷಾರೋಪಣೆಯಿಂದಾಗಿ, ಡೊನಾಲ್ಡ್‌ ಟ್ರಂಪ್‌ ಬಂಧನ ಭೀತಿ ಎದುರಿಸುತ್ತಿದ್ದಾರೆ. ಟ್ರಂಪ್‌ ಮುಂಬರುವ ಮಂಗಳವಾರ ಶರಣಾಗುವ ಸಾಧ್ಯತೆ ಇದ್ದು, ಅವರ ಬಂಧನ ಪ್ರಕ್ರಿಯೆ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಅಪರಾಧ ಪ್ರಕರಣಗಳ ಬಂಧನ ಪ್ರಕ್ರಿಯೆಯೇ ಟ್ರಂಪ್‌ ಅವರಿಗೂ ಅನ್ವಯಿಸಲಿದೆ ಎಂಬುದು ವಿಶೇಷ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

ಡೊನಾಲ್ಡ್‌ ಟ್ರಂಪ್‌ (ಸಂಗ್ರಹ ಚಿತ್ರ)
ಡೊನಾಲ್ಡ್‌ ಟ್ರಂಪ್‌ (ಸಂಗ್ರಹ ಚಿತ್ರ) (REUTERS)

ವಾಷಿಂಗ್ಟನ್:‌ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನೀಲಿಚಿತ್ರ ತಾರೆಯೋರ್ವಳಿಗೆ ಹಣ ಪಾವತಿಸಿದ ಆರೋಪ ಎದುರಿಸುತ್ತಿರುವ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ನ್ಯಾಯಾಲಯದಿಂದ ಕ್ರಿಮಿನಲ್‌ ಆರೋಪ ಎದುರಿಸುತ್ತಿರುವ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿಗೆ ಗುರಿಯಾಗಿದ್ದಾರೆ.

ಈ ಮಧ್ಯೆ ನ್ಯೂಯಾರ್ಕ್‌ ಗ್ರ್ಯಾಂಡ್‌ ಜ್ಯೂರಿ ದೋಷಾರೋಪಣೆಯಿಂದಾಗಿ, ಡೊನಾಲ್ಡ್‌ ಟ್ರಂಪ್‌ ಬಂಧನ ಭೀತಿ ಎದುರಿಸುತ್ತಿದ್ದಾರೆ. ಟ್ರಂಪ್‌ ಮುಂಬರುವ ಮಂಗಳವಾರ ಶರಣಾಗುವ ಸಾಧ್ಯತೆ ಇದ್ದು, ಅವರ ಬಂಧನ ಪ್ರಕ್ರಿಯೆ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಅಪರಾಧ ಪ್ರಕರಣಗಳ ಬಂಧನ ಪ್ರಕ್ರಿಯೆಯೇ ಟ್ರಂಪ್‌ ಅವರಿಗೂ ಅನ್ವಯಿಸಲಿದೆ ಎಂಬುದು ವಿಶೇಷ.

ಟ್ರಂಪ್‌ ಅವರ ಬಂಧನ ಅನಿವಾರ್ಯವಾದರೆ ಅವರಿಗೆ ಮೊದಲು ಪೊಲೀಸರು ಕೈಕೋಳ ತೊಡಿಸಲಿದ್ದಾರೆ. ನಂತರ ಅವರ ಬೆರಳಚ್ಚು ಪಡೆಯಲಿರುವ ಪೊಲೀಸರು, ಸಾಮಾನ್ಯ ಅಪರಾಧಿಯಂತೆ ಅವರ ಛಾಯಾಚಿತ್ರವನ್ನು ತೆಗೆದುಕೊಳ್ಳಲಿದ್ದಾರೆ. ಅಪರಾಧ ಆರೋಪದ ಮೇಲೆ ಬಂಧಿತರಾಗುವವರಿಗೆ ಕೈಕೋಳ ಹಾಕುವುದು ಮಾನದಂಡವಾಗಿದ್ದರೂ, ಮಾಜಿ ಅಧ್ಯಕ್ಷರಿಗೆ ಇದರಿಂದ ವಿನಾಯಿತಿ ನೀಡಲಾಗುತ್ತದೆಯೇ ಎಂಬುದು ಇನ್ನೂ ಅಸ್ಪಷ್ಟವಾಗಿದೆ.

ಗಂಭೀರ ಸ್ವರೂಪದ ಅಪರಾಧ ಎಸಗಿರುವ ಆರೋಪಿಗಳನ್ನು ಸಾಮಾನ್ಯವಾಗಿ ಬೆನ್ನಿನ ಹಿಂದೆ ಕೈಗಳನ್ನು ಕಟ್ಟಿ ಬಂಧಿಸಲಾಗುತ್ತದೆ. ಆದರೆ ಸಾಮಾನ್ಯ ಮತ್ತು ಅಪಾಯರಹಿತ ಆರೋಪಿಗಳಿಗೆ ಶರೀರದ ಮುಂಭಾಗದಲ್ಲಿ ಕೈಕೋಳ ತೊಡಿಸಲಾಗುತ್ತದೆ. ಟ್ರಂಪ್‌ ಅವರ ಬಂಧನದ ವೇಳೆ ಪೊಲೀಸರು ಯಾವ ರೀತಿಯ ಮಾನದಂಡವನ್ನು ಅನುಸರಿಲಿದ್ದಾರೆ ಎಂಬುದು ಈಗ ಚರ್ಚಾಸ್ಪದವಾಗಿದೆ.

ಲೋವರ್ ಮ್ಯಾನ್‌ಹ್ಯಾಟನ್‌ನ ಕ್ರಿಮಿನಲ್ ಕೋರ್ಟ್‌ ಕಟ್ಟಡದಲ್ಲಿ, ಡೊನಾಲ್ಡ್‌ ಟ್ರಂಪ್‌ ಅವರು ನ್ಯಾಯಾಧೀಶರ ಮುಂದೆ ಶರಣಾಗಲಿದ್ದಾರೆ. ಈ ಸಂದರ್ಭದಲ್ಲಿ ಅಮೆರಿಕದ ರಹಸ್ಯ ಸೇವೆಯ ಸಶಸ್ತ್ರ ಏಜೆಂಟ್‌ಗಳು, ಡೊನಾಲ್ಡ್‌ ಟ್ರಂಪ್‌ ಅವರ ಭದ್ರತೆಗೆ ನಿಯೋಜನೆಗೊಳ್ಳಲಿದ್ದಾರೆ.

ನ್ಯಾಯಾಲಯದಲ್ಲಿ ಡೊನಾಲ್ಡ್‌ ಟ್ರಂಪ್‌ ಅವರಿಗೆ ಸ್ಟೇಟ್ಸ್ ನ್ಯಾಯಾಲಯದ ಅಧಿಕಾರಿಗಳು‌ ಭದ್ರತೆಯನ್ನುಒದಗಿಸುತ್ತಾರೆ. ಆದರೆ ಫೆಡರಲ್ ಏಜೆನ್ಸಿಯ ಮುಖ್ಯ ವಕ್ತಾರ ಆಂಥೋನಿ ಜೆ. ಗುಗ್ಲಿಯೆಲ್ಮಿ ಪ್ರಕಾರ, ಟ್ರಂಪ್‌ ಅವರ ಭದ್ರತೆಗಾಗಿ ಜಾರಿಗೆ ತರಲಾಗುವ ಕ್ರಮಗಳ ಬಗ್ಗೆ ಈಗಲೇ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಟ್ರಂಪ್‌ ವಿರುದ್ಧ ನ್ಯೂಯಾರ್ಕ್‌ ಗ್ರ್ಯಾಂಡ್‌ ಜ್ಯೂರಿ ದೋಷಾರೋಪಣೆ ಪ್ರಕಸಿದ ಬಳಿಕ, ಪ್ರಾಸಿಕ್ಯೂಟರ್‌ಗಳು ಟ್ರಂಪ್‌ ಪರ ವಕೀಲರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಟ್ರಂಪ್‌ ಅವರ ಶರಣಾಗತಿ ಪ್ರಕ್ರಿಯೆಯ ಬಗ್ಗೆ ಮಾತುಕತೆ ನಡೆದಿದೆ ಎಂದು ಮೂಲಗಳು ಖಚಿತಪಡಿಸಿವೆ. ಆದರೆ ಟ್ರಂಪ್‌ ಮುಂಬರುವ ಮಂಗಳವಾರ ಶರಣಾಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರ ಪರ ವಕೀಲರು, ಟ್ರಂಪ್‌ ಶರಣಾಗತಿಗೆ ಹೆಚ್ಚಿನ ಕಾಲಾವಕಾಶ ಕೋರಿದ್ದಾರೆ.

ಡೊನಾಲ್ಡ್‌ ಟ್ರಂಪ್‌ ವಿರುದ್ಧದ ದೋಷಾರೋಪಣೆಯು ಅಹಿಂಸಾತ್ಮಕ ಅಪರಾಧದ ಆರೋಪಗಳನ್ನು ಮಾತ್ರ ಒಳಗೊಂಡಿದ್ದು,ನ್ಯೂಯಾರ್ಕ್ ಕಾನೂನಿನಡಿಯಲ್ಲಿ ಅಂತಹ ಪ್ರಕರಣಗಳಲ್ಲಿ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದಾಗಿದೆ. ಹೀಗಾಗಿ ಟ್ರಂಪ್‌ ಬಂಧನವಾದರೂ, ಅದು ನೈಜ ರೂಪದಲ್ಲಿ ಕಾರ್ಯರೂಪಕ್ಕೆ ಬರುವುದು ಅನುಮಾನ ಎನ್ನಲಾಗಿದೆ.

ತಮ್ಮ ವಿರುದ್ಧದ ದೋಷಾರೋಪಣೆ ಆರೋಪಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿರುವ ಡೊನಾಲ್ಡ್‌ ಟ್ರಂಪ್‌, ನ್ಯೂಯಾರ್ಕ್‌ ಗ್ರ್ಯಾಂಡ್‌ ಜ್ಯೂರಿಯ ತೀರ್ಪನ್ನು ತಮ್ಮ ಅಧ್ಯಕ್ಷೀಯ ಚುನಾವಣಾ ಪ್ರಚಾರ ತಂತ್ರದ ಭಾಗವಾಗಿ ಬಳಸುತ್ತಿದ್ದಾರೆ. ಅಲ್ಲದೇ ಜೋ ಬೈಡನ್‌ ಈ ತಪ್ಪಿಗಾಗಿ ಭಾರೀ ಬೆಲೆ ತೆರಲಿದ್ದಾರೆ ಎಂದು ಟ್ರಂಪ್‌ ಎಚ್ಚರಿಸಿದ್ದಾರೆ.

ಮಾಜಿ ಅಧ್ಯಕ್ಷರು ಶರಣಾಗಲು ನಿರಾಕರಿಸುವ ಸಾಧ್ಯತೆಯಿಲ್ಲದ ಸಂದರ್ಭದಲ್ಲಿ, ಅವರನ್ನು ಹಸ್ತಾಂತರಿಸುವ ನ್ಯೂಯಾರ್ಕ್‌ ರಾಜ್ಯದ ಮನವಿಯನ್ನು ಪರುಸ್ಕರಿಸುವುದಿಲ್ಲ ಎಂದು ಫ್ಲೋರಿಡಾದ ರಿಪಬ್ಲಿಕನ್‌ ಗವರ್ನರ್‌ ರಾನ್‌ ಡಿಸಾಂಟಿಸ್‌ ಘೋಷಿಸಿದ್ದಾರೆ. ಆದರೆ ನ್ಯೂಯಾರ್ಕ್ ಪ್ರಾಸಿಕ್ಯೂಟರ್‌ಗಳು ವಾಸ್ತವವಾಗಿ ಟ್ರಂಪ್‌ ಅವರನ್ನು ಹಸ್ತಾಂತರಿಸುವಂತೆ ಕೋರಿಕೊಂಡರೆ, ಸ್ವತಃ ರಾನ್‌ ಡಿಸಾಂಟಿಸ್‌ ಅವರೇ ಕಾನೂನು ಕ್ರಮವನ್ನು ಎದುರಿಸುವ ಸಾಧ್ಯತೆಗಳಿವೆ.

IPL_Entry_Point

ವಿಭಾಗ