ಕನ್ನಡ ಸುದ್ದಿ  /  Nation And-world  /  Coimbatore Car Blast: 5 Held By Tamil Nadu Police Uapa Invoked As 1 Dies In Coimbatore Car Blast

Coimbatore car blast: ಕುತೂಹಲಕಾರಿ ಕೊಯಮತ್ತೂರು ಕಾರ್‌ ಬ್ಲಾಸ್ಟ್‌ ಕೇಸ್‌; ಕಾರಿನಲ್ಲಿತ್ತು ಭಾರಿ ಸ್ಫೋಟಕ, ಬಂಧಿತರ ಕೇಸ್‌ ಹಿಸ್ಟರಿ ವಿವರ

Explainer- Coimbatore car blast: ಕೊಯಮತ್ತೂರಿನಲ್ಲಿ ನಡೆದ ಕಾರು ಸ್ಫೋಟಕ್ಕೆ ಸಂಬಂಧಿಸಿ ಯುಎಪಿಎ ಪ್ರಕಾರ ತನಿಖೆ ನಡೆಸುತ್ತಿರುವ ತಮಿಳುನಾಡು ಪೊಲೀಸರು, ಐವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾರು ಸ್ಫೋಟದಲ್ಲಿ 25 ವರ್ಷದ ಜಮೀಶಾ ಮುಬಿನ್ ಸಾವನ್ನಪಿದ್ದ.

ಕೊಯಮತ್ತೂರಿನಲ್ಲಿ ಮಾರುತಿ 800 ಕಾರಿನಲ್ಲಿ ಸಿಲಿಂಡರ್ ಸ್ಫೋಟಗೊಂಡ ನಂತರ ಪೊಲೀಸರು ಸೋಮವಾರ ವಾಹನಗಳನ್ನು ಪರಿಶೀಲಿಸಿದರು.
ಕೊಯಮತ್ತೂರಿನಲ್ಲಿ ಮಾರುತಿ 800 ಕಾರಿನಲ್ಲಿ ಸಿಲಿಂಡರ್ ಸ್ಫೋಟಗೊಂಡ ನಂತರ ಪೊಲೀಸರು ಸೋಮವಾರ ವಾಹನಗಳನ್ನು ಪರಿಶೀಲಿಸಿದರು. (ANI)

ಚೆನ್ನೈ: ಕೊಯಮತ್ತೂರಿನಲ್ಲಿ ಅಕ್ಟೋಬರ್‌ 23ರಂದು ನಡೆದ ಕಾರು ಸ್ಫೋಟ ಪ್ರಕರಣವನ್ನು ತಮಿಳುನಾಡು ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅನ್ವಯ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಾರು ಸ್ಫೋಟದಲ್ಲಿ ಮೃತನಾದ ಜಮೀಶಾ ಮುಬಿನ್‌ ಸಹಚರರಾದ ಐವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕೊಯಮತ್ತೂರಿನ ದೇವಸ್ತಾನದ ಸಮೀಪ ಮಾರುತಿ 800 ಕಾರು ಸ್ಫೋಟಗೊಂಡಿತ್ತು. ಅದರಲ್ಲಿ ಅಳವಡಿಸಿದ್ದ ಎಲ್‌ಪಿಜಿ ಸಿಲಿಂಡರ್‌ ಸ್ಫೋಟಗೊಂಡದ್ದು ದುರಂತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ನಿರ್ಧರಿಸಲಾಗಿತ್ತು. ಆದರೆ, ಅನುಮಾನಾಸ್ಪದ ನಡೆಗಳ ಕಾರಣ ಸಂದೇಹಕ್ಕೆ ಒಳಗಾದ ಪೊಲೀಸರು, ಪ್ರಕರಣವನ್ನು ಯುಎಪಿಎ ಅಡಿ ದಾಖಲಿಸಿ, ತನಿಖೆ ಶುರುಮಾಡಿದರು.

ಬಂಧಿತರು ಯಾರು?

ತಮಿಳುನಾಡು ಪೊಲೀಸರು ಸೋಮವಾರ ರಾತ್ರಿ ಐವರನ್ನು ಬಂಧಿಸಿದ್ದಾರೆ. ಅವರನ್ನು ಮೊಹಮ್ಮದ್‌ ಥಲ್ಕಾ (25), ಮೊಹಮ್ಮದ್ದ ಅಸರುದ್ದೀನ್‌ (25), ಮುಹಮ್ಮದ್‌ ರಿಯಾಜ್‌ (27), ಫಿರೋಜ್‌ ಇಸ್ಮಾಯಿಲ್‌ (27), ಮೊಹಮ್ಮದ್‌ ನವಾಜ್‌ ಇಸ್ಮಾಯಿಲ್‌ (27) ಎಂದು ಗುರುತಿಸಲಾಗಿದೆ.

ಸಂದೇಹ ಯಾಕೆ ಬಂತು?

ಕಾರು ಸ್ಫೋಟದಲ್ಲಿ ಅಕ್ಟೋಬರ್‌ 23ರಂದು ಮೃತನಾದ ಮುಬಿನ್‌ ಅನ್ನು ಈ ಹಿಂದೆ 2019ರಲ್ಲಿ ನ್ಯಾಷನಲ್‌ ಇನ್‌ವೆಸ್ಟಿಗೇಶನ್‌ ಏಜೆನ್ಸಿ ವಿಚಾರಣೆಗೆ ಒಳಪಡಿಸಿತ್ತು.

ಈ ಅಪಘಾತದ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ಸಿಸಿಟಿವಿ ಫೂಟೇಜ್‌ ಹರಿದಾಡತೊಡಗಿತ್ತು. ಅದರಲ್ಲಿ ಮುಬಿನ್‌ ಮತ್ತು ಇತರರು ಅಕ್ಟೋಬರ್‌ 22ರಂದು ರಾತ್ರಿ 11.30ರ ವೇಳೆಯಲ್ಲಿ ತಮ್ಮ ಮನೆಯಿಂದ ಬೀದಿಗೆ ಅನುಮಾನಾಸ್ಪದ ರೀತಿಯಲ್ಲಿ ಇಳಿದಿದ್ದರು. ಬಿಳಿಬಟ್ಟೆಯಲ್ಲಿ ಏನೋ ಭಾರವಾದ ವಸ್ತುವನ್ನು ಮುಚ್ಚಿದ್ದರು. ಇದಾದ ಬಳಿಕ ಅವರು ಎರಡು ಎಲ್‌ಪಿಜಿ ಸಿಲಿಂಡರ್‌ಗಳನ್ನು ಮತ್ತು ಮೂರು ಕ್ಯಾನ್‌ಗಳನ್ನು ಸಾಗಿಸಿದ್ದರು. ಈ ಕ್ಯಾನ್‌ಗಳನ್ನು ವಶಪಡಿಸಿದ್ದು, ಫಾರೆನ್ಸಿಕ್‌ ವಿಶ್ಲೇಷಣೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಘಟಿತ ಪಿತೂರಿ ಎಂದ ನಗರ ಪೊಲೀಸ್‌ ಆಯುಕ್ತ

ರಿಯಾಜ್‌, ನವಾಜ್‌ ಮತ್ತು ಫಿರೋಜ್‌ ಮೂವರು ಮುಬಿನ್‌ಗೆ ಸಿಲಿಂಡರ್‌ ಮತ್ತು ಸ್ಫೋಟಕಗಳನ್ನು ಆತನ ಮನೆಯಿಂದ ಸಾಗಿಸಲು ನೆರವಾಗಿದ್ದರು. ಇನ್ನೊಬ್ಬ ವ್ಯಕ್ತಿ ಸಮನ್ವಯಕ್ಕೆ ಸಹಕರಿಸಿದರೆ, ಮತ್ತೊಬ್ಬ ಮಾರುತಿ 800 ಕಾರು ಕೊಟ್ಟಿದ್ದ. ಹೀಗಾಗಿ ಕೊಯಮತ್ತೂರಿನ ಕಾರು ಸ್ಫೋಟ ಸಂಘಟಿತ ಪಿತೂರಿ ಎಂದು ಕೊಯಮತ್ತೂರು ನಗರ ಪೊಲೀಸ್‌ ಆಯುಕ್ತ ಕೆ. ಬಾಲಕೃಷ್ಣನ್‌ ಹೇಳಿದ್ದಾರೆ.

ಸಿಲಿಂಡರ್‌ ಮೂಲಕ ಬಾಂಬ್‌ ಸ್ಫೋಟವಾಗಿದೆ. ಫಾರೆನ್ಸಿಕ್‌ ಪರಿಣತರು ಅದಕ್ಕೆ ಬಳಸಿದ ಮೆಟೀರಿಯಲ್ಸ್‌ ಅನ್ನು ಗುರುತಿಸುತ್ತಿದ್ದಾರೆ. ನಾವು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಬಾಲಕೃಷ್ಣನ್‌ ವಿವರಿಸಿದ್ದಾರೆ.

ಯುಎಪಿಎ ಅನ್ವಯ ತನಿಖೆ ಯಾಕೆ?

ಕಾರು ಸ್ಫೋಟದಲ್ಲಿ ಸ್ಫೋಟಕಗಳು ಪತ್ತೆಯಾದ ಕಾರಣ, ಬಳಕೆಯಾದ ಕಾರಣ ಯುಎಪಿಎ ಅನ್ವಯ ಪ್ರಕರಣ ದಾಖಲಿಸುವುದು ಅಗತ್ಯವಾಗಿದೆ. ಆರೋಪಿಗಳು ಕಸ್ಟಡಿಯಲ್ಲಿದ್ದಾರೆ. ಈಗಾಗಲೇ ಈ ಪ್ರಕರಣ ಸಂಬಂಧ 20 ಜನರ ವಿಚಾರಣೆ ನಡೆಸಿದ್ದೇವೆ. ಇನ್ನೂ ಶೋಧ ಮುಂದುವರಿಯಲಿದೆ. ಶಂಕಿತರ ಚಲನವಲನ, ಮನೆ ಶೋಧಕ್ಕೆ ಸಿದ್ಧತೆ ನಡೆದಿದೆ ಎಂದು ಬಾಲಕೃಷ್ಣನ್‌ ವಿವರಿಸಿದ್ದಾರೆ.

ಏನಿದು ಕಾರು ಸ್ಫೋಟ ಪ್ರಕರಣ

ಕೊಯಮತ್ತೂರಿನ ಕೋಟೈ ಈಶ್ವರನ್‌ ದೇವಸ್ಥಾನದ ಹತ್ತಿರ ದೀಪಾವಳಿ ಹಬ್ಬದ ಮುನ್ನಾದಿನವಾದ ಭಾನುವಾರ ನಸುಕಿನ 4 ಗಂಟೆಗೆ ಈ ಕಾರು ಸ್ಪೋಟವಾಗಿತ್ತು. ಮಾರುತಿ 800 ಕಾರಿನಲ್ಲಿದ್ದ ಎರಡು ಸಿಲಿಂಡರ್‌ಗಳ ಪೈಕಿ ಒಂದು ಸ್ಫೋಟವಾಗಿ ದುರಂತ ಸಂಭವಿಸಿತ್ತು.

ಪೊಲೀಸ್‌ ಪ್ಯಾಟ್ರೋಲ್‌ನಿಂದ 200 ಮೀಟರ್‌ ದೂರದಲ್ಲಿ ಈ ಘಟನೆ ಆಗಿತ್ತು. ಪೊಲೀಸ್‌ ಪ್ಯಾಟ್ರೋಲ್‌ ಕಂಡ ಕಾರಣ, ಕಾರು ನಿಲ್ಲಿಸಿ ಕಾಯುತ್ತಿದ್ದಾಗ ಸ್ಫೋಟ ಆದುದಾಗಿರಲೂ ಬಹುದು. ಸ್ಫೋಟ ದೇವಸ್ಥಾನದ ಹೊರಗೆ ಆಗಿದೆ. ಕನಿಷ್ಠ ಹಾನಿ ಆಗಿದೆ. ಇದನ್ನು ಆತ್ಮಹತ್ಯಾ ದಾಳಿ ಎಂದು ಹೇಳಲಾಗದು. ನಸುಕಿನ 3.30ಕ್ಕೆ ಕಾರು ಅಲ್ಲಿಗೆ ಬಂದಿದೆ. ಪೊಲೀಸರ ಭೀತಿಯ ಕಾರಣ ಆತ ಕಾರನ್ನು ಮುಂದಕ್ಕೆ ಕೊಂಡು ಹೋಗಿರಲಿಕ್ಕಿಲ್ಲ.

ಮುಬಿನ್‌ ಉಕ್ಕಡಂನಲ್ಲೇ ಮನೆ ಹೊಂದಿದ್ದ ಕಾರಣ, ಮೊಹಮ್ಮದ್‌ ಅಜರುದ್ದೀನ್‌ ಸಂಪರ್ಕ ಬೆಳೆದಿತ್ತು. ಉಕ್ಕಡಂ ಕೋಮು ಸೂಕ್ಷ್ಮ ಪ್ರದೇಶ. ಮೊಹಮ್ಮದ್‌ ಅಜರುದ್ದೀನ್‌ 250 ಜನರ ಸಾವಿಗೆ ಕಾರಣವಾದ 2019ರ ಶ್ರೀಲಂಕಾದ ಈಸ್ಟರ್‌ ಸಂಡೇ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಜೈಲಿನಲ್ಲಿದ್ದಾನೆ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಪೊಲೀಸ್‌ ಅಧಿಕಾರಿ ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

ಮಾರುತಿ 800 ಕಾರು ಮತ್ತು ಅದರ ಪ್ರವರ

ಮಾರುತಿ 800 ಕಾರು 10 ಸಲ ಮಾರಾಟವಾಗಿದ್ದು, ಎಲ್ಲ ಮಾಲೀಕರನ್ನು ಪತ್ತೆ ಹಚ್ಚಲಾಗಿದೆ. ಮುಬಿನ್‌ ಈ ಕಾರನ್ನು ಜೂನ್‌ ತಿಂಗಳ ಆರಂಭದಲ್ಲಿ ಪಡೆದುಕೊಂಢಿದ್ದ. ಅದರಲ್ಲೇ ಆತ ಡ್ರೈವಿಂಗ್‌ ಕಲಿತಿದ್ದ. ಕಾರು ಯಾವ ಸ್ಥಿತಿಯಲ್ಲಿ ಇತ್ತು ಎಂದರೆ ಅದನ್ನು ಪ್ರಯಾಣಕ್ಕೆ ಬಳಸುವಂತೆ ಇರಲಿಲ್ಲ. ಮುಬಿನ್‌ ಮತ್ತು ಸಹಚರರ ಕೇಸ್‌ ಹಿಸ್ಟರಿ ಬಹಳ ಹಳೆಯದು. ಅದನ್ನು ಎನ್‌ಐಎ ನಡೆಸಿದ ಇತ್ತೀಚಿನ ಪಿಎಫ್‌ಐ ಪ್ರಕರಣಕ್ಕೆ ನಂಟು ಕಲ್ಪಿಸಲಾಗದು ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಪೊಲೀಸ್‌ ಅಧಿಕಾರಿ ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

ಮುಬಿನ್‌ ಮನೆಯಲ್ಲಿತ್ತು ಭಾರಿ ಪ್ರಮಾಣದ ಸ್ಫೋಟಕ

ಉಕ್ಕಡಂನಲ್ಲಿರುವ ಮುಬಿನ್‌ ಮನೆಯಿಂದ ಭಾರಿ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಲಾಗಿದೆ. ಇದರಲ್ಲಿ 75 ಕಿಲೋ ಪೊಟಾಷಿಯಂ ನೈಟ್ರೇಟ್‌, ಚಾರ್ಕೋಲ್‌, ಅಲ್ಯೂಮಿನಿಯಂ ಪೌಡರ್‌, ಸಲ್ಫರ್‌ ಇದ್ದವು. ಇವೆಲ್ಲವೂ ಸ್ಫೋಟಕ ತಯಾರಿಗೆ ಬೇಕಾದ ಕಚ್ಚಾ ವಸ್ತುಗಳು. ಈ ಪ್ರಕರಣ ಗಂಭೀರವಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈ ಕಾರು ಸ್ಫೋಟ ಪ್ರಕರಣ ರಾಜಕೀಯ ಚರ್ಚೆಗೂ ಕಾರಣವಾಗಿದ್ದು, ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ.

IPL_Entry_Point