ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Explainer: ನಿಮಗೆ 100 ತಲೆಗಳಿವೆಯಾ? - ಖರ್ಗೆ ಹೇಳಿಕೆ ವಿವಾದ: ಬಿಜೆಪಿ ತೀವ್ರ ಆಕ್ಷೇಪ- ಯಾರು ಏನು ಹೇಳಿದ್ರು?

Explainer: ನಿಮಗೆ 100 ತಲೆಗಳಿವೆಯಾ? - ಖರ್ಗೆ ಹೇಳಿಕೆ ವಿವಾದ: ಬಿಜೆಪಿ ತೀವ್ರ ಆಕ್ಷೇಪ- ಯಾರು ಏನು ಹೇಳಿದ್ರು?

ಗುಜರಾತ್‌ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಖಾರ್ಜುನ ಖರ್ಗೆ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು 'ರಾವಣ' ಎಂದು ಕರೆಯುವ ಮೂಲಕ ಇಂತದ್ದೇ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಪ್ರಧಾನಿ ಮೋದಿ ಬಗ್ಗೆ ಖರ್ಗೆ ಹೇಳಿದ್ದೇನು? ಖರ್ಗೆ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯೆ ಹೇಗಿತ್ತು? ಖರ್ಗೆ ಹೇಳಿಕೆಯನ್ನು ರಾಜಕೀಯ ವಲಯ ಹೇಗೆ ವಿಶ್ಲೇಷಿಸುತ್ತಿದೆ ಎಂಬ ಮಾಹಿತಿ ಇಲ್ಲಿದೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (HT)

ಅಹಮದಾಬಾದ್:‌ ರಾಜಕೀಯದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪ ಸಹಜ. ಅದರಲ್ಲೂ ಚುನಾವಣೆ ಸಮಯದಲ್ಲಿ ರಾಜಕೀಯ ನಾಯಕರ ಜಿದ್ದಾಜಿದ್ದಿ ತುಸು ಹೆಚ್ಚೇ ಎಂದು ಹೇಳಬಹುದು. ಆದರೆ ಪರಸ್ಪರರನ್ನು ದೂಷಿಸುವ ಭರದಲ್ಲಿ ನಾಲಿಗೆಯ ಮೇಲೆ ಹಿಡಿತ ಕಳೆದುಕೊಂಡರೆ, ಅಪಾಯ ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಹಲವು ಉದಾಹರಣೆಗಳನ್ನು ನೀಡಬಹುದು.

ಅದೇ ರೀತಿ ಗುಜರಾತ್‌ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಖಾರ್ಜುನ ಖರ್ಗೆ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು 'ರಾವಣ' ಎಂದು ಕರೆಯುವ ಮೂಲಕ ಇಂತದ್ದೇ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಹೌದು, ಗುಜರಾತ್‌ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು 'ರಾವಣ'ನಿಗೆ ಹೋಲಿಕೆ ಮಾಡಿದ್ದರು. ಖರ್ಗೆ ಅವರ ಹೇಳಿಕೆ ಆ ಕ್ಷಣಕ್ಕೆ ನೆರೆದ ಕಾಂಗ್ರೆಸ್‌ ಕಾರ್ಯಕರ್ತರ ಚಪ್ಪಾಳೆ ಗಿಟ್ಟಿಸಿತಾದರೂ, ಆ ಬಳಿಕ ರಾಜಕೀಯ ಅಲ್ಲೋಲಕಲ್ಲೋಲವನ್ನು ಸೃಷ್ಟಿಸಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ.

ಖರ್ಗೆ ಹೇಳೀದ್ದೇನು?

ಅಹಮದಾಬಾದ್‌ನ ಬೆಹ್ರಾಂಪುರ ಪ್ರದೇಶದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಯನ್ನು 'ರಾವಣ' ಎಂದು ಬಣ್ಣಿಸಿದ್ದರು. ಬಿಜೆಪಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಪ್ರಧಾನಿ ಮೋದಿ ತಮ್ಮ ಬಗ್ಗೆ ಮಾತ್ರ ಮಾತನಾಡುತ್ತಾರೆ. ‘ಬೇರೆ ಯಾರನ್ನೂ ನೋಡಬೇಡಿ, ಮೋದಿಯನ್ನು ನೋಡಿ ಮತ ಹಾಕಿ’ ಎಂದು ಹೇಳುತ್ತಾರೆ. ನಿಮ್ಮ ಮುಖವನ್ನು ಎಷ್ಟು ಬಾರಿ ನೋಡಬೇಕು? ನೀವು ಎಷ್ಟು ರೂಪಗಳನ್ನು ಹೊಂದಿದ್ದೀರಿ? ನಿಮಗೆ ರಾವಣನಂತೆ 100 ತಲೆಗಳಿವೆಯೇ?” ಎಂದು ಖರ್ಗೆ ಪ್ರಶ್ನಿಸಿದ್ದರು.

ಬಿಜೆಪಿ ಪ್ರತಿಕ್ರಿಯೆ ಹೇಗಿತ್ತು?

ಇನ್ನು ಪ್ರಧಾನಿ ಮೋದಿ ಕುರಿತಾದ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯಿಂದ ಬಿಜೆಪಿ ಕೆಂಡಾಮಂಡಲವಾಗಿದೆ. ಅದರಲ್ಲೂ ಪ್ರಧಾನಿ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ ನೆಲದಲ್ಲಿ, ಮೋದಿ ಅವರನ್ನು ಹೀಯಾಳಿಸಿರುವುದು ಕೇಸರಿ ಪಡೆಯನ್ನು ಕೆರಳಿಸಿದೆ. ಖರ್ಗೆ ಅವರ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿರುವ ಬಿಜೆಪಿ, ಈ ಕೂಡಲೇ ಅವರು ಪ್ರಧಾನಿ ಮೋದಿ ಅವರಲ್ಲಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದೆ.

ಬಿಜೆಪಿ ನಾಯಕರು ಏನಂದರು?

ಪ್ರಧಾನಿ ಮೋದಿ ಕುರಿತಾದ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಹಲವು ಬಿಜೆಪಿ ನಾಯಕರು ಟೀಕಿಸಿದ್ದು, ಖರ್ಗೆ ಕೇವಲ ಪ್ರಧಾನಿ ಮೋದಿ ಅವರಿಗೆ ಮಾತ್ರವಲ್ಲದೇ ಸಮಸ್ತ ಗುಜರಾತಿಗಳಿಗೆ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಈ ಕುರಿತು ಮಾತನಾಡಿರುವ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ, ಗುಜರಾತ್‌ನ ಮಣ್ಣಿನ ಸುಪುತ್ರ ಪ್ರಧಾನಿ ಮೋದಿ ಬಗ್ಗೆ ಇಂತಹ ಭಾಷೆ ಬಳಸುವುದು ಸೂಕ್ತವಲ್ಲ ಎಂದು ಹರಿಹಾಯ್ದಿದ್ದಾರೆ.

ಪ್ರಧಾನಿ ಮೋದಿ ಕುರಿತಾದ ಖರ್ಗೆ ಅವರ ಹೇಳಿಕೆ ಕಾಂಗ್ರೆಸ್‌ನ ಮನಸ್ಥಿತಿಯನ್ನು ತೋರಿಸುತ್ತದೆ. ಹತಾಶ ಕಾಂಗ್ರೆಸ್‌ ನಾಯಕರು ಇದೀಗ ವೈಯಕ್ತಿಕ ಟೀಕೆಗಳನ್ನು ಆರಂಭಿಸಿರುವುದು ಖಂಡನೀಯ ಎಂದು ಸಂಬಿತ್‌ ಪಾತ್ರಾ ಕಿಡಿಕಾರಿದ್ದಾರೆ.

ವಿಜಯ್‌ ರೂಪಾನಿ:

ಇನ್ನು ಧಾನಿ ಮೋದಿ ಕುರಿತಾದ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಗುಜರಾತ್‌ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ, ಖರ್ಗೆ ಅವರ ಈ ಹೇಳಿಕೆಯ ಫಲವನ್ನು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಉಣ್ಣಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಖರ್ಗೆ ಅವರು ಪ್ರಧಾನಿ ಮೋದಿ ಅವರನ್ನು 'ರಾವಣ' ಎಂದು ಕರೆದು , ಗುಜರಾತ್‌ ಗೆಲವುನ್ನು ಬಿಜೆಪಿಗೆ ತಟ್ಟೆಯಲ್ಲಿ ಇಟ್ಟು ಕೊಟ್ಟಿದ್ದಾರೆ ಎಂದು ವಿಜಯ್‌ ರೂಪಾನಿ ಮಾರ್ಮಿಕವಾಗಿ ಹೇಳಿದ್ದಾರೆ.

ಭೂಪೇಂದ್ರ ಪಟೇಲ್:‌

ಅದೇ ರೀತಿ ಪ್ರಧಾನಿ ಮೋದಿ ಕುರಿತಾದ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿರುವ ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌, ಯಾವುದೇ ಅಭಿವೃದ್ಧಿ ಅಜೆಂಡಾ ಮತ್ತು ಜನರ ಬೆಂಬಲವಿಲ್ಲದೆ, ಕಾಂಗ್ರೆಸ್ ಗುಜರಾತ್ ಮತ್ತು ಗುಜರಾತಿಗಳನ್ನು ನಿಂದಿಸಲು ಹೊರಟಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಒಟ್ಟಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ಕುರಿತು ಮಲ್ಲಿಖಾರ್ಜುನ ಖರ್ಗೆ ನೀಡಿರುವ ಒಂದು ಹೇಳಿಕೆ, ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹಾನಿ ಮಾಡಲಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

ಆದರೆ ಈ ಕುರಿತು ಕಾಂಗ್ರೆಸ್‌ ಇದುವರೆಗೂ ಯಾವುದೇ ಹೇಳಿಕೆ ನೀಡದಿರುವುದು ಕುತೂಹಲ ಕೆರಳಿಸಿದೆ. ಕಾಂಗ್ರೆಸ್‌ ಖರ್ಗೆ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವುದು ಅದರ ಮೌನದಿಂದಲೇ ತಿಳಿಯುತ್ತದೆ ಎಂದು ಹಲವರು ಅಂದಾಜಿಸಿದ್ದಾರೆ.

IPL_Entry_Point