Iran Morality Police: ನೈತಿಕ ಪೊಲೀಸ್‌ ಘಟಕ ರದ್ದುಗೊಳಿಸಿದ ಇರಾನ್:‌ ಹಿಜಾಬ್‌ ವಿರೋಧಿ ಆಂದೋಲನವೇ ರೀಸನ್!‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Iran Morality Police: ನೈತಿಕ ಪೊಲೀಸ್‌ ಘಟಕ ರದ್ದುಗೊಳಿಸಿದ ಇರಾನ್:‌ ಹಿಜಾಬ್‌ ವಿರೋಧಿ ಆಂದೋಲನವೇ ರೀಸನ್!‌

Iran Morality Police: ನೈತಿಕ ಪೊಲೀಸ್‌ ಘಟಕ ರದ್ದುಗೊಳಿಸಿದ ಇರಾನ್:‌ ಹಿಜಾಬ್‌ ವಿರೋಧಿ ಆಂದೋಲನವೇ ರೀಸನ್!‌

ಹಿಜಾಬ್‌ ವಿರೋಧಿ ಹೋರಾಟಗಾರರಿಗೆ ಮಣಿದಿರುವ ಇರಾನ್‌ ಸರ್ಕಾರ, ತನ್ನ ನೈತಿಕ ಪೊಲೀಸ್‌ ಘಟಕವನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದೆ.ಮಹಿಳಾ ವಸ್ತ್ರ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಬಂಧಿತರಾಗಿದ್ದ ಮೆಹ್ಸಾ ಅಮಿನಿ ಸಾವಿನ ಬಳಿಕ, ಇರಾನ್‌ನ ನೈತಿಕ ಪೊಲೀಸ್‌ ಘಟಕದ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಈ ಆರಂಭಿಕ ಜಯವನ್ನು ಹಿಜಾಬ್‌ ವಿರೋಧಿ ಹೋರಾಟಗಾರರು ಸ್ವಾಗತಿಸಿದ್ದಾರೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (AFP)

ಟೆಹ್ರನ್‌: ಒಗ್ಗಟ್ಟು, ಏಕತೆ ಹಾಗೂ ಸಕಲ ತ್ಯಾಗಕ್ಕೆ ಸಿದ್ಧವಾಗುವ ಯಾವುದೇ ಜನಪರ ಚಳುವಳಿಗಳು ಖಂಡಿತ ಯಶಸ್ಸು ಗಳಿಸುತ್ತವೆ ಎಂಬುದನ್ನು, ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್‌ ವಿರೋಧಿ ಚಳುವಳಿ ಮತ್ತೊಮ್ಮೆ ಸಾಬೀತುಪಡಿಸಿದೆ. ಇರಾನ್‌ನಲ್ಲಿ ಬದಲಾವಣೆಗಾಗಿ ಮತ್ತು ಮಹಿಳೆಯರ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಆರಂಭಿಕ ಜಯ ದೊರೆತಿದೆ.

ಹೌದು, ಹಿಜಾಬ್‌ ವಿರೋಧಿ ಹೋರಾಟಗಾರರಿಗೆ ಮಣಿದಿರುವ ಇರಾನ್‌ ಸರ್ಕಾರ, ತನ್ನ ನೈತಿಕ ಪೊಲೀಸ್‌ ಘಟಕವನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದೆ.ಮಹಿಳಾ ವಸ್ತ್ರ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಬಂಧಿತರಾಗಿದ್ದ ಮೆಹ್ಸಾ ಅಮಿನಿ ಸಾವಿನ ಬಳಿಕ, ಇರಾನ್‌ನ ನೈತಿಕ ಪೊಲೀಸ್‌ ಘಟಕದ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು.

ಮೆಹ್ಸಾ ಅಮಿನಿ ಸಾವಿನ ಬಳಿಕ ಇರಾನ್‌ನಲ್ಲಿ ಹಿಜಾಬ್‌ ವಿರೋಧಿ ಪ್ರತಿಭಟನೆ ಭುಗಿಲೆದ್ದಿತು. ಇಷ್ಟು ದಿನಗಳ ಕಾಲ ಈ ಪ್ರತಿಭಟನೆಯನ್ನು ಅಮಾನುಷವಾಗಿ ಹತ್ತಿಕ್ಕುತ್ತಿದ್ದ ಇರಾನ್‌ ಸರ್ಕಾರ, ಇದೀಗ ಪ್ರತಿಭಟನಾಕಾರರ ಆಕ್ರೋಶಕ್ಕೆ ಮಣಿದು ನಥತಿಕ ಪೊಲೀಸ್‌ ಘಟಕವನ್ನು ರದ್ದುಗೊಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಇರಾನ್‌ ಅಟಾರ್ನಿ ಜನರಲ್ ಮೊಹಮ್ಮದ್ ಜಾಫರ್ ಮೊಂಟಜೆರಿ, ನೈತಿಕ ಪೊಲೀಸ್‌ ವಿಭಾಗದ ಅಸ್ತಿತ್ವಕ್ಕೆ ನ್ಯಾಯಾಂಗ ವಿರೋಧ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಗಷ್ಟ್- ಇ- ಎರ್ಷಾದ್ ಅಥವಾ 'ಗೈಡೆನ್ಸ್ ಪ್ಯಾಟ್ರೋಲ್' ಎಂದು ಕರೆಯಲಾಗುವ ನೈತಿಕ ಪೊಲೀಸ್ ವಿಭಾಗವನ್ನು‌, ಇರಾನ್‌ನ ಕಟ್ಟರ್ ಸಂಪ್ರದಾಯವಾದಿ ಅಧ್ಯಕ್ಷ ಮಹಮೌದ್ ಅಹ್ಮದಿನೇಜದ್ 2006ರಲ್ಲಿ ಸ್ಥಾಪಿಸಿದ್ದರು. ಮಹಿಳೆಯರು ಕಡ್ಡಾಯವಾಗಿ ತಲೆಯ ಭಾಗವನ್ನು ಮುಚ್ಚಿಕೊಳ್ಳುವಂತೆ, ವಸ್ತ್ರ ಸಂಹಿತೆ ಪಾಲಿಸುವುದನ್ನು ಖಾತರಿಪಡಿಸುವುದು ಈ ಘಟಕದ ಜವಾಬ್ದಾರಿಯಾಗಿತ್ತು.

ಇರಾನ್‌ನಲ್ಲಿ 1979ರಿಂದಲೇ ಹಿಜಾಬ್‌ ನಿರ್ಬಂಧ ಜಾರಿಯಲ್ಲಿದೆ. ಆರಂಭದಲ್ಲಿ ಹಿಜಾಬ್‌ ಧರಿಸದ ಮಹಿಳೆಯರಿಗೆ ಕೇವಲ ಎಚ್ಚರಿಕೆಯನ್ನು ಮಾತ್ರ ನೀಡಲಾಗುತ್ತಿತ್ತು. ಆದರೆ ಅಧ್ಯಕ್ಷರು ಬದಲಾದಂತೆ ಈ ನಿಯಮದಲ್ಲಿ ಕಠಿಣತೆ ಕೂಡ ನುಸುಳಿತು. ಹಿಜಾಬ್‌ ಧರಿಸದ ಮಹಿಳೆಯರನ್ನು ಬಂಧಿಸುವ ಪ್ರಕ್ರಿಯೆ ಆರಂಭವಾಯಿತು.

ಕಳೆದ ಜುಲೈನಲ್ಲಿ ಕಟ್ಟರ್ ಸಂಪ್ರದಾಯವಾದಿ ಇಬ್ರಾಹಿಂ ರೈಸಿ ಅವರು ಅಧಿಕಾರಕ್ಕೆ ಏರುತ್ತಿದ್ದಂತೇ, ಹಿಜಾಬ್‌ ಧರಿಸದ ಮಹಿಳೆಯರನ್ನು ಬಂಧಿಸುವುದಷ್ಟೇ ಅಲ್ಲದೇ, ಉಗ್ರವಾಗಿ ಶಿಕ್ಷಿಸುವ ಪರಿಪಾಠವೂ ಬೆಳೆಯಿತು. ಇಸ್ಲಾಂನ ಧಾರ್ಮಿಕ ಮೌಲ್ಯಗಳನ್ನು ಪಾಲಿಸದವರಿಗೆ ಕಠಿಣ ಶಿಕ್ಷೆಯೊಂದೇ ಮಾರ್ಗ ಎಂಬ ಸಂದೇಶವನ್ನು ರೈಸಿ ರವಾನಿಸಲು ಬಯಿಸಿದ್ದರು.

ಆದರೆ ಇತ್ತೀಚಿಗೆ ಹಿಜಾಬ್‌ ಧರಿಸದ ಕಾರಣಕ್ಕೆ ಬಂಧನಕ್ಕೊಳಗಾಗಿದ್ದ 22 ವರ್ಷದ ಕುರ್ದಿಶ್ ಯುವತಿ ಮಹ್ಸಾ ಅಮಿನಿ, ಪೊಲೀಸ್‌ ಕಸ್ಟಡಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಘಟನೆ ಇರಾನ್‌ನಲ್ಲಿ ಅನೇಕ ವರ್ಷಗಳಿಂದ ಸುಪ್ತವಾಗಿದ್ದ, ವಸ್ತ್ರ ಸಂಹಿತೆ ವಿರುದ್ಧದ ಮಹಿಳೆಯರ ಆಕ್ರೋಶ ಬೊರಬರಲು ಕಾರಣವಾಯಿತು.

ಕಳೆದ ಮೂರು ತಿಂಗಳಿನಿಂದ ಇರಾನ್‌ನಲ್ಲಿ ಹಿನಾಬ್‌ ವಿರೋಧಿ ಪ್ರತಿಭಟನೆಗಳು ನಡೆಯುತ್ತಿದ್ದು, ಈ ಜನಾಕ್ರೋಶ ಕಂಡು ಇರಾನ್‌ ಸರ್ಕಾರ ಅಕ್ಷರಶಃ ಬೆದರಿದೆ. ಈ ಹಿನ್ನೆಲೆಯಲ್ಲಿ ನೈತಿಕ ಪೊಲೀಸ್‌ ಘಟಕವನ್ನು ರದ್ದುಗೊಳಿಸುವ ಮೂಲಕ ಪ್ರತಿಭಟನಾಕಾರರನ್ನು ಶಾಂತಗೊಳಿಸುವ ಪ್ರಯತ್ನಕ್ಕೆ ಇರಾನ್‌ ಸರ್ಕಾರ ಕೈ ಹಾಕಿದೆಯಾದರೂ, ಹಿಜಾಬ್‌ ಧರಿಸುವುದನ್ನು ಕಡ್ಡಾಯಗೊಳಿಸುವ ಕಾನೂನು ರದ್ದತಿಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು ನಿಲ್ಲಿಸುವುದು ಸಾದ್ಯವಿಲ್ಲ ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಇಂದಿನ ಪ್ರಮುಖ ಸುದ್ದಿ

Operation Trident: ಏನಿದು ಆಪರೇಷನ್‌ ಟ್ರೈಡೆಂಟ್?:‌ ಕರಾಚಿ ಬಂದರು ಉಡೀಸ್‌ ಮಾಡಿದ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು?

ದೇಶಾದ್ಯಂತ ಇಂದು(ಡಿ.04-ಭಾನುವಾರ) ಭಾರತೀಯ ನೌಕಾಸೇನೆ ದಿನ ಆಚರಣೆ ನಡೆಯುತ್ತಿದ್ದು, ದೇಶದ ಸಮುದ್ರ ಗಡಿಗಳ ರಕ್ಷಣೆಯಲ್ಲಿ ನಿರತವಾಗಿರುವ ನೌಕಾ ವೀರರಿಗೆ ದೇಶ ನಮಿಸುತ್ತಿದೆ. ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ, ಭಾರತೀಯ ನೌಕಾಸೇನೆ ನಡೆಸಿದ 'ಆಪರೇಷನ್ ಟ್ರೈಡೆಂಟ್' ಹೆಸರಿನ ಕಾರ್ಯಾಚರಣೆ ಇತಿಹಾಸವನ್ನು ಸ್ಮರಿಸಲಾಗುತ್ತಿದೆ. 'ಆಪರೇಷನ್ ಟ್ರೈಡೆಂಟ್' ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.