Amritpal Singh Arrested: 100ಕ್ಕೂ ಹೆಚ್ಚು ಕಾರುಗಳಲ್ಲಿ ಚೇಸ್, ಅಮೃತ್ ಸಿಂಗ್ ಪಾಲ್ ಬಂಧನಕ್ಕೆ ಪೊಲೀಸರ ಪ್ರಯತ್ನ, ಪಂಜಾಬ್ ಹೈಡ್ರಾಮಾ
ವಿವಾದಿತ ಖಲಿಸ್ತಾನ ಬೆಂಬಲಿಗ ಅಮೃತಪಾಲ್ ಸಿಂಗ್‌ನನ್ನು ಇಂದು ಪೊಲೀಸರು ನೂರಕ್ಕೂ ಹೆಚ್ಚು ಕಾರುಗಳಲ್ಲಿ ಬೆನ್ನೆಟ್ಟಿದ್ದರೂ ಬಂಧಿಸಲು ವಿಫಲವಾಗಿದ್ದಾರೆ.
ಪಂಜಾಬ್: ಸಿನಿಮಾಗಳಲ್ಲಿ ಹಲವು ಪೊಲೀಸ್ ವಾಹನಗಳನ್ನು ಅಪರಾಧಿಗಳನ್ನು ಬೆನ್ನಟ್ಟುವ ದೃಶ್ಯ ನೋಡಿರುತ್ತೀರಿ. ಪಂಜಾಬ್‌ನಲ್ಲಿ ಇಂತಹದ್ದೇ ಹೈಡ್ರಾಮಾ ಇಂದು ನಡೆದಿದೆ. ವಿವಾದಿತ ಖಲಿಸ್ತಾನ ಉಗ್ರರ ಕುರಿತು ಸಹಾನುಭೂತಿ ಹೊಂದಿರುವ ಅಮೃತಪಾಲ್ ಸಿಂಗ್‌ನನ್ನು ಇಂದು ಪೊಲೀಸರು ನೂರಕ್ಕೂ ಹೆಚ್ಚು ಕಾರುಗಳಲ್ಲಿ ಬೆನ್ನೆಟ್ಟಿ ಬಂಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಟ್ರೆಂಡಿಂಗ್ ಸುದ್ದಿ
ಅಪ್‌ಡೇಟ್: ಆರಂಭದಲ್ಲಿ ಅಮೃತ್‌ಪಾಲ್ ಸಿಂಗ್‌ನ ಬಂಧನವಾಗಿದೆ ಎನ್ನಲಾಗಿತ್ತು. ಆದರೆ, ಇದೀಗ ಬಂದ ಅಪ್‌ಡೇಟ್ ಪ್ರಕಾರ ಅಮೃತ್‌ಪಾಲ್ ಸಿಂಗ್ ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ. ಆತನ ಪತ್ತೆ ಕಾರ್ಯ ಮುಂದುವರೆದಿದೆ ಎನ್ನಲಾಗಿದೆ.
ಇದರೊಂದಿಗೆ ಅಮೃತಪಾಲ್‌ನ ಆರು ಸಹಚರರನ್ನೂ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ಬಳಿಕ ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ ಇಂಟರ್‌ನೆಟ್ ಸೇವೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಅಲ್ಲಿನ ಜನರು ಈಗ ಇಂಟರ್ನೆಟ್ ಇಲ್ಲದೆ ಪರದಾಡುತ್ತಿದ್ದಾರೆ.
ಇದೇ ಸಮಯದಲ್ಲಿ ಅಮೃತಪಾಲ್ ಸಿಂಗ್ ನಿವಾಸದ ಬಳಿಯೂ ಪೊಲೀಸರು ಬಿಗಿಬಂದೋಬಸ್ತ್ ಕೈಗೊಂಡಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ಜನರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ. ಪೊಲೀಸರ ಕಾರ್ಯಾಚರಣೆಗೆ ಸಹಕರಿಸುವಂತೆ ಕೋರಿದ್ದಾರೆ.
ಈ ತಿಂಗಳ ಆರಂಭದಲ್ಲಿ ಅಮೃತ್‌ಪಾಲ್ ಸಿಂಗ್‌ನ ನಿಕಟ ಸಹಚರರಾದ ವಾರಿಸ್ ಪಂಜಾಬ್ ದೇ ಮುಖ್ಯಸ್ಥನನ್ನು ಪೊಲೀಸರು ಬಂಧಿಸಿದ್ದರು. ಆತ ಅಮೃತಸರ ವಿಮಾನನಿಲ್ದಾಣದ ಮೂಲಕ ಎಸ್ಕೇಪ್ ಆಗಲು ಪ್ರಯತ್ನಿಸಿದಾಗ ಪೊಲೀಸರು ಬಂಧಿಸಿದ್ದರು.
ಕಳೆದ ಕೆಲವು ದಿನಗಳಿಂದ ಪಂಜಾಬ್‌ನಲ್ಲಿ ಖಲಿಸ್ತಾನ ಹೋರಾಟ ಭುಗಿಲೆದ್ದಿದ್ದು, ಖಲಿಸ್ತಾನ ಮುಖಂಡ , ವಾರಿಸ್ ಪಂಜಾಬ್ ದೇ ಸಂಘಟನೆ ನಾಯಕ ಲವ್‌ಪ್ರೀತ್ ಸಿಂಗ್ ಬಂಧನ ವಿರೋಧಿಸಿ ಪ್ರತಿಭಟನೆ, ಹೋರಾಟ ತೀವ್ರಗೊಂಡಿತ್ತು. ಈತ ಅಮೃತಪಾಲ್ ಸಿಂಗ್‌ನ ಆಪ್ತನ ಅಪಹರಣದ ಆರೋಪಿಯೂ ಹೌದು.
ಪಂಜಾಬ್‌ನ ಜನರ ಪ್ರತಿಭಟನೆಗೆ ಹೆದರಿದ ಪಂಜಾಬ್‌ನ ಆಮ್ ಆದ್ಮಿ ಸರಕಾರವು ಬಳಿಕ ಆರೋಪಿಯನ್ನು ಜೈಲಿನಿಂದ ಬಿಡುಗಡೆ ಮಾಡಿತ್ತು.
ಇದಾದ ಬಳಿಕ ಅಮೃತ್‌ಪಾಲ್ ಸಿಂಗ್ ನೇತೃತ್ವದಲ್ಲಿ ಹೋರಾಟ ನಡೆದಿತ್ತು. ವಾರಿಸ್ ಪಂಜಾಬ್ ದೇ ಸಂಘಟನೆಯ ಕಾರ್ಯಕರ್ತರು ಖಡ್ಗ, ಬಂದೂಕು, ದೊಣ್ಣೆ ಹಿಡಿದುಕೊಂಡು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು.
ಜನರ ಬೆದರಿಕೆಗೆ ಮಣಿದು ಆರೋಪಿಯನ್ನು ಬಿಡುಗಡೆ ಮಾಡಿರುವ ಆಮ್ ಆದ್ಮಿ ಕ್ರಮದ ಕುರಿತು ಸಾಕಷ್ಟು ಟೀಕೆಗಳೂ ಎದ್ದಿದ್ದವು.
1984ರಲ್ಲಿ ಪಂಜಾಬ್‌ನಲ್ಲಿ ಇಂತಹದ್ದೇ ಪರಿಸ್ಥಿತಿ ಎದುರಾಗಿತ್ತು. ಆ ಸಮಯದಲ್ಲಿ ಉಗ್ರರ ಪಡೆ ಅಮೃತಸರದ ಸ್ವರ್ಣಮಂದಿರವನ್ನು ಆಕ್ರಮಿಸಿತ್ತು ಬಳಿಕ ಭಾರತೀಯ ಸೇನೆ ಮಧ್ಯಪ್ರವೇಶ ಮಾಡಿತ್ತು. ಆಪರೇಷನ್ ಬ್ಲೂಸ್ಟಾರ್ ಮೂಲಕ ಖಲಿಸ್ತಾನಿ ಉಗ್ರರನ್ನು ನಿಗ್ರಹಿಸಲಾಗಿತ್ತು.
ಖಲಿಸ್ತಾನ ಉಗ್ರ ಸಂಘಟನೆಯನ್ನು ಭಾರತದಲ್ಲಿ ನಿಷೇಧ ಮಾಡಲಾಗಿದ್ದರೂ ಹಲವು ಹೆಸರುಗಳಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ವಿದೇಶಗಳಲ್ಲಿರುವ ಖಲಿಸ್ತಾನ ಪಡೆಗಳು ಭಾರತದಲ್ಲಿ ಭಾರತ ವಿರೋಧಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿವೆ.