ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Mohan Bhagwat: ಭಾರತದ ಮುಸ್ಲಿಮರು ಭಯಪಡುವ ಅಗತ್ಯ ಇಲ್ಲ; ಆದರೆ ಒಂದು ಸಲಹೆ ಇದೆ ಎಂದ ಆರೆಸ್ಸೆಸ್‌ ಮುಖ್ಯಸ್ಥ ಭಾಗವತ್‌

Mohan Bhagwat: ಭಾರತದ ಮುಸ್ಲಿಮರು ಭಯಪಡುವ ಅಗತ್ಯ ಇಲ್ಲ; ಆದರೆ ಒಂದು ಸಲಹೆ ಇದೆ ಎಂದ ಆರೆಸ್ಸೆಸ್‌ ಮುಖ್ಯಸ್ಥ ಭಾಗವತ್‌

Mohan Bhagwat: ಭಾರತದ ಮುಸ್ಲಿಮರು ಭಯಪಡುವ ಅಗತ್ಯ ಇಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್‌ ಭಾಗವತ್‌ (RSS Chief Mohan Bhagwat) ಹೇಳಿದ್ದಾರೆ. ಆದರೆ, ಅವರಿಗೆ ಕೆಲವೊಂದು ಸಲಹೆಯನ್ನೂ ಭಾಗವತ್‌ ಕೊಟ್ಟಿದ್ದಾರೆ.

 ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್‌ ಭಾಗವತ್‌
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್‌ ಭಾಗವತ್‌ (ANI Photo / HT_PRINT )

ಭಾರತದ ಮುಸಲ್ಮಾನರು ಭಯಪಡುವ ಅಗತ್ಯವೇ ಇಲ್ಲ. ಆದರೆ ಅವರು ಪರಮಾಧಿಕಾರದ ಹೇಳಿಕೆಗಳನ್ನು ಕೈಬಿಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್‌ ಭಾಗವತ್‌ (RSS Chief Mohan Bhagwat) ಹೇಳಿದ್ದಾರೆ.

ಹಿಂದು ಎಂಬುದು ನಮ್ಮ ಅಸ್ಮಿತೆ. ರಾಷ್ಟ್ರೀಯತೆ, ಪ್ರತಿಯೊಬ್ಬರೂ ತಮ್ಮವರೆಂದು ಒಟ್ಟಿಗೆ ಕರೆದೊಯ್ಯುವ ಸಂಸ್ಕೃತಿ ನಮ್ಮದು ಎಂದು ವಿವರಿಸಿದ ಭಾಗವತ್‌, ನಮ್ಮ ದೇಶದಲ್ಲಿ ಇಸ್ಲಾಂ ಧರ್ಮಕ್ಕೆ ಯಾವುದೇ ಬೆದರಿಕೆ ಇಲ್ಲ. ಆದರೆ ಅದು 'ನಾವು ದೊಡ್ಡವರು' ಎಂಬ ಭಾವನೆಯನ್ನು ಬಿಡಬೇಕಾಗುತ್ತದೆ ಎಂದು ಹೇಳಿದರು. ಮೋಹನ್‌ ಭಾಗವತ್‌ ಅವರು 'ಆರ್ಗನೈಸರ್' ಮತ್ತು 'ಪಾಂಚಜನ್ಯ' ನಿಯತಕಾಲಿಕೆಗಳಿಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರಗಳನ್ನು ವಿವರಿಸಿದ್ದಾರೆ.

ಎಲ್‌ಜಿಬಿಟಿ ಸಮುದಾಯದ ಗೌಪ್ಯತೆಗೆ ಗೌರವ

ದೇಶದಲ್ಲಿ ಎಲ್‌ಜಿಬಿಟಿ ಸಮುದಾಯದ ಖಾಸಗಿತನವನ್ನು ಗೌರವಿಸಬೇಕು. ಇಂತಹ ಜನರು ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಯಾವಾಗಲೂ ಇರುತ್ತಾರೆ. ಮನುಷ್ಯ ಅಸ್ತಿತ್ವಕ್ಕೆ ಬಂದ ಆ ದಿನಗಳಿಂದೂ ಈ ರೀತಿ ಒಲವು ಇರುವಂಥವರು ಇದ್ದಾರೆ. ಇದು ಜೈವಿಕ ಮತ್ತು ಒಂದು ಜೀವನ ವಿಧಾನ. ಎಲ್‌ಜಿಬಿಟಿ ಸಮುದಾಯಕ್ಕೆ ತಮ್ಮ ಗೌಪ್ಯತೆ ಹಕ್ಕು ಇರಬೇಕು ಮತ್ತು ಅವರು ಅದನ್ನು ಅನುಭವಿಸಬೇಕು ಎಂದು ನಾವು ಬಯಸುತ್ತೇವೆ. ಬದುಕಿನ ಸಾಮಾನ್ಯ ವಿಚಾರ ಇದು. ಈ ಕಲ್ಪನೆಯನ್ನು ಸಂಘವು ಬೆಂಬಲಿಸುತ್ತದೆ ಎಂದು ಮೋಹನ್ ಭಾಗವತ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಟ್ರಾನ್ಸ್‌ಜೆಂಡರ್‌ಗಳು ಸಮಸ್ಯೆ ಅಲ್ಲ

ಟ್ರಾನ್ಸ್‌ಜೆಂಡರ್‌ಗಳು ಅಥವಾ ಲಿಂಗಪರಿವರ್ತಿತರು ಸಮಾಜದಲ್ಲಿ ಸಮಸ್ಯೆ ಅಲ್ಲ. ಅವರು ತಮ್ಮದೇ ಆದ ಆರಾಧನೆಯನ್ನು ಹೊಂದಿದವರು. ಅವರದೇ ಆದ ದೇವ ದೇವತೆಯರನ್ನು ಹೊಂದಿರುವಂಥವರು. ಅವರದ್ಧೇ ಆದ ಮಹಾಮಂಡಲೇಶ್ವರ ಇದೆ. ಈ ವಿಚಾರದಲ್ಲಿ ಸಂಘಕ್ಕೆ ಭಿನ್ನ ಅಭಿಪ್ರಾಯ ಇಲ್ಲ.

ಹಿಂದು ಸಂಪ್ರದಾಯವು ಈ ವಿಷಯಗಳೆಲ್ಲವನ್ನೂ ಪರಿಗಣಿಸಿದೆ. ಹಿಂದು ಎಂಬುದು ನಮ್ಮ ಅಸ್ಮಿತೆ, ರಾಷ್ಟ್ರೀಯತೆ ಮತ್ತು ಎಲ್ಲರನ್ನೂ ನಮ್ಮವರೆಂದು ಪರಿಗಣಿಸುವ ಮತ್ತು ಅವರನ್ನು ಜತೆಗೆ ಕರೆದೊಯ್ಯುವ ಪ್ರವೃತ್ತಿಯನ್ನು ಹೊಂದಿರುವಂಥದ್ದು ಎಂದು ಮೋಹನ್‌ ಭಾಗವತ್‌ ವಿವರಿಸಿದ್ದಾರೆ.

ಭಾರತದಲ್ಲಿ ಮುಸಲ್ಮಾನರು ತೊರೆಯಬೇಕಾದ್ದು ಒಂದೇ…

ಹಿಂದುಸ್ತಾನವು ಹಿಂದುಸ್ತಾನವಾಗಿಯೇ ಉಳಿಯಬೇಕು. ಇದು ಬಹಳ ಸರಳವಿಚಾರ. ಭಾರತದಲ್ಲಿ ಮುಸ್ಲಿಮರು ಯಾರಿದ್ದಾರೋ ಅವರಿಗೆ ಯಾವುದೇ ಹಾನಿ ಇಲ್ಲ. ಅವರು ಇದ್ದಾರೆ ಮತ್ತು ಅವರು ಇಲ್ಲೇ ಇರಲು ಬಯಸುತ್ತಾರೆ. ಇರಲಿ. ಪೂರ್ವಜರ ಬಳಿಗೆ ಮರಳಲು ಬಯಸಿದರೆ ಮರಳಿ ಬರಲಿ. ಇದು ಅವರ ಮನಸ್ಸಿನಲ್ಲಿದೆ. ಆದರೆ, ಭಾರತದಲ್ಲಿ ಇಸ್ಲಾಂ ಧರ್ಮಕ್ಕೆ ಯಾವುದೇ ಬೆದರಿಕೆ ಇಲ್ಲ. ಆದರೆ ನಾವು ಒಂದಾನೊಂದು ಕಾಲದಲ್ಲಿ ರಾಜರಾಗಿದ್ದೆವು. ನಾವು ದೊಡ್ಡವರು, ಮತ್ತೆ ರಾಜರಾಗುತ್ತೇವೆ ಎಂಬ ಭಾವನೆಗಳನ್ನು ತೊರೆಯಬೇಕಾಗುತ್ತದೆ. ಅದು ಹಿಂದು ಆಗಿದ್ದರೂ, ಕಮ್ಯೂನಿಸ್ಟ್‌ ಆಗಿದ್ದರೂ ಪ್ರತಿಯೊಂದು ಸಮುದಾಯದವರೂ ಈ ಭಾವನೆಯನ್ನು ತೊರೆಯಬೇಕು. ಹೊಂದಿರಬಾರದು ಎಂದು ಭಾಗವತ್‌ ಹೇಳಿದರು.

ಜನಸಂಖ್ಯೆಗೆ ದೂರಗಾಮಿ ನೀತಿ ರಚಿಸಿ

ಜನಸಂಖ್ಯೆ ನೀತಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಮೋಹನ್ ಭಾಗವತ್, ಜನಸಂಖ್ಯೆಯು ಒಂದು ಹೊರೆ ಮತ್ತು ಉಪಯುಕ್ತ ವಿಷಯವಾಗಿದೆ. ಅಂತಹ ದೂರದ ಮತ್ತು ಆಳ ಚಿಂತನೆಯೊಂದಿಗೆ ಜನಸಂಖ್ಯೆ ನೀತಿ ರೂಪಿಸಬೇಕು. ಈ ನೀತಿಯು ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು. ಆದರೆ ಅದು ಬಲವಂತವಾಗಿ ಅಲ್ಲ. ಇದಕ್ಕಾಗಿ ಶಿಕ್ಷಣ ಒದಗಿಸಬೇಕು. ಜನಸಂಖ್ಯೆಯ ಅಸಮತೋಲನವು ಅಸಮರ್ಥನೀಯ ವಿಷಯವಾಗಿದೆ. ಏಕೆಂದರೆ ಅಂತಹ ಅಸಮತೋಲನ ಎಲ್ಲೆಲ್ಲಿ ಸಂಭವಿಸಿದೆಯೋ, ಅಲ್ಲೆಲ್ಲ ಅಂತಹ ದೇಶ ಅವನತಿಹೊಂದಿದೆ. ಪ್ರಪಂಚದಾದ್ಯಂತ ಇದಕ್ಕೆ ನಿದರ್ಶನಗಳಿವೆ ಎಂದು ವಿವರಿಸಿದರು.

ಹಿಂದು ಸಮಾಜ ಆಕ್ರಮಣಕಾರಿಯಲ್ಲ

ಆಕ್ರಮಣಕಾರಿಯಲ್ಲದ ಏಕೈಕ ಸಮಾಜ ಹಿಂದು ಎಂದು ಭಾಗವತ್ ಹೇಳಿದರು. ಅದಕ್ಕೇ ಅಹಿಂಸೆ, ಪ್ರಜಾಪ್ರಭುತ್ವ, ಜಾತ್ಯತೀತತೆ... ಎಲ್ಲವನ್ನೂ ಉಳಿಸಿಕೊಳ್ಳಬೇಕಿದೆ. ಟಿಮೋರ್, ಸುಡಾನ್, ಪಾಕಿಸ್ತಾನ ರಚನೆ ಆಗಿರುವುದನ್ನು ನಾವು ನೋಡಿದ್ದೇವೆ, ಇದನ್ನೂ ನೋಡಿದ್ದೇವೆ. ಇದು ಏಕೆ ಸಂಭವಿಸಿತು? ರಾಜಕೀಯವನ್ನು ಬಿಟ್ಟು ತಟಸ್ಥವಾಗಿ ಯೋಚಿಸಿದರೆ ಪಾಕಿಸ್ತಾನ ಏಕೆ ರೂಪುಗೊಂಡಿತು? ಭಾರತ ಒಂದಾಗಿತ್ತು. ಬ್ರಿಟಿಷರ ದಾಳಿ ಮತ್ತು ಬ್ರಿಟಿಷರು ಹೋದ ನಂತರ ಈ ದೇಶ ಹೇಗೆ ಒಡೆದು ಹೋಯ್ತು... ಅಂದು ನಾವೆಲ್ಲ ಹಿಂದು ಚೇತನವನ್ನು ಮರೆತಿದ್ದರಿಂದಲೇ ಇಷ್ಟೆಲ್ಲ ನರಳಬೇಕಾಯಿತು ಎಂದು ಅವರು ವಿವರಿಸಿದರು.

ಈಗ ಸ್ವಾತಂತ್ರ್ಯಕ್ಕೆ ಭಂಗ ತರುವ ಶಕ್ತಿ ಯಾರಿಗೂ ಇಲ್ಲ

ಈಗ ನಮ್ಮ ರಾಜಕೀಯ ಸ್ವಾತಂತ್ರ್ಯವನ್ನು ಕದಡುವ ಶಕ್ತಿ ಯಾರಿಗೂ ಇಲ್ಲ. ಹಿಂದು ಈ ದೇಶದಲ್ಲಿ ಉಳಿಯುತ್ತಾನೆ, ಹಿಂದು ಎಲ್ಲಿಯೂ ಹೋಗುವುದಿಲ್ಲ ಎಂಬುದು ಈಗ ದೃಢಪಟ್ಟಿದೆ. ಹಿಂದುಗಳು ಈಗ ಜಾಗೃತರಾಗಿದ್ದಾರೆ. ಈಗ ನಾವು ನಮ್ಮೊಳಗಿನ ಸಮರವನ್ನು ಜಯಿಸಬೇಕು ಮತ್ತು ನಮ್ಮಲ್ಲಿರುವ ಪರಿಹಾರವನ್ನು ಪ್ರಸ್ತುತಪಡಿಸಬೇಕು ಎಂದು ಭಾಗವತ್‌ ಸ್ಪಷ್ಟಪಡಿಸಿದರು.

IPL_Entry_Point