ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  New York Police: ಡೊನಾಲ್ಡ್‌ ಟ್ರಂಪ್‌ ಬಂಧನ ಸಾಧ್ಯತೆ: ಹೈ ಅಲರ್ಟ್‌ ಮೋಡ್‌ಗೆ ಜಾರಿದ ನ್ಯೂಯಾರ್ಕ್‌ ಪೊಲೀಸ್‌!

New York Police: ಡೊನಾಲ್ಡ್‌ ಟ್ರಂಪ್‌ ಬಂಧನ ಸಾಧ್ಯತೆ: ಹೈ ಅಲರ್ಟ್‌ ಮೋಡ್‌ಗೆ ಜಾರಿದ ನ್ಯೂಯಾರ್ಕ್‌ ಪೊಲೀಸ್‌!

ಟ್ರಂಪ್‌ ಅವರು ಮುಂಬರುವ ಲೋವರ್ ಮ್ಯಾನ್‌ಹ್ಯಾಟನ್‌ನ ಕ್ರಿಮಿನಲ್ ಕೋರ್ಟ್‌ ಕಟ್ಟಡದಲ್ಲಿ, ನ್ಯಾಯಾಧೀಶರ ಮುಂದೆ ಶರಣಾಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಒಂದು ವೇಳೆ ಆದೇಶ ನೀಡಿದರೆ, ಟ್ರಂಪ್‌ ಅವರನ್ನು ಬಂಧಿಸಲು ನ್ಯೂಯಾರ್ಕ್‌ ಪೊಲೀಸ್‌ ಇಲಾಖೆ ಸಜ್ಜಾಗಿದೆ. ಟ್ರಂಪ್‌ ವಿಚಾರಣೆ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ ಪೊಲೀಸ್‌ ಹೈ ಅಲರ್ಟ್‌ಗೆ ಜಾರಿದೆ.

ನ್ಯೂಯಾರ್ಕ್‌ ಪೊಲೀಸ್(ಸಂಗ್ರಹ ಚಿತ್ರ)
ನ್ಯೂಯಾರ್ಕ್‌ ಪೊಲೀಸ್(ಸಂಗ್ರಹ ಚಿತ್ರ) (Bloomberg)

ನ್ಯೂಯಾರ್ಕ್:‌ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನೀಲಿಚಿತ್ರ ತಾರೆಯೋರ್ವಳಿಗೆ ಹಣ ಪಾವತಿಸಿದ ಆರೋಪ ಎದುರಿಸುತ್ತಿರುವ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ನ್ಯಾಯಾಲಯದಿಂದ ಕ್ರಿಮಿನಲ್‌ ಆರೋಪ ಎದುರಿಸುತ್ತಿರುವ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿಗೆ ಗುರಿಯಾಗಿದ್ದಾರೆ.

ಟ್ರಂಪ್‌ ಅವರು ಮುಂಬರುವ ಮಂಗಳವಾರ ಲೋವರ್ ಮ್ಯಾನ್‌ಹ್ಯಾಟನ್‌ನ ಕ್ರಿಮಿನಲ್ ಕೋರ್ಟ್‌ ಕಟ್ಟಡದಲ್ಲಿ, ನ್ಯಾಯಾಧೀಶರ ಮುಂದೆ ಶರಣಾಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಒಂದು ವೇಳೆ ಆದೇಶ ನೀಡಿದರೆ, ಟ್ರಂಪ್‌ ಅವರನ್ನು ಬಂಧಿಸಲು ನ್ಯೂಯಾರ್ಕ್‌ ಪೊಲೀಸ್‌ ಇಲಾಖೆ ಸಂಪೂರ್ಣ ಸಜ್ಜಾಗಿದೆ.

ಟ್ರಂಪ್‌ ವಿಚಾರಣೆ ಹಿನ್ನೆಲೆಯಲ್ಲಿ ಹೈ ಅಲರ್ಟ್‌ ಮೋಡ್‌ಗೆ ಜಾರಿರುವ ನ್ಯೂಯಾರ್ಕ್‌ ಪೊಲೀಸ್‌ ಇಲಾಖೆ, ರಜೆ ಮೇಲೆ ತೆರಳಿರುವ ಮತ್ತು ರಜೆ ಪಡೆಯಲಿಚ್ಛಿಸಿರುವ ಎಲ್ಲಾ ಪೊಲೀಸ್‌ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸ್ಪಷ್ಟ ಸೂಚನೆ ನೀಡಿದೆ. ಸಂಭಾವ್ಯ ಹಿಂಸಾತ್ಮಕ ಪ್ರತಿಭಟನೆಗಳನ್ನು ಎದುರಿಸಲು ಸಜ್ಜಾಗುವಂತೆ ತನ್ನ ಅಧಿಕಾರಿಗಳಿಗೆ ನ್ಯೂಯಾರ್ಕ್‌ ಪೊಲೀಸ್‌ ಇಲಾಖೆ ಆದೇಶ ನೀಡಿದೆ.

ತಮ್ಮ ವಿರುದ್ಧದ ದೋಷಾರೋಪಣೆ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿರುವ ಡೊನಾಲ್ಡ್‌ ಟ್ರಂಪ್‌, ಇದು ಈಗಾಗಲೇ ಧ್ರುವೀಕರಣಗೊಂಡ ಸಮಾಜ ಮತ್ತು ಮತದಾರರನ್ನು ವಿಭಜಿಸುತ್ತದೆ ಎಂದು ಎಚ್ಚರಿಸಿದ್ದಾರೆ. ಅಲ್ಲದೇ ಹಿಂಸಾತ್ಮಕ ಪ್ರತಿಭಟನೆಗಳ ಪರಿಣಾಮವಾಗಿ ಸಾವು-ನೋವು ಸಂಭವಿಸುವ ಅಪಾಯವೂ ಇದೆ ಎಂದು ಡೊನಾಲ್ಡ್‌ ಟ್ರಂಪ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಟ್ರಂಪ್‌ ಬೆಂಬಲಿಗರು ಮಂಗಳವಾರ ನ್ಯೂಯಾರ್ಕ್‌ ನಗರದ ಬೀದಿಗಿಳಿಯುವ ಸಾಧ್ಯತೆ ಇದ್ದು, ಯುಎಸ್‌ ಕ್ಯಾಪಿಟಲ್‌ ಹಿಂಸಾಚಾರದಿಂದ ಎಚ್ಚೆತ್ತುಕೊಂಡಿರುವ ನ್ಯೂಯಾರ್ಕ್‌ ಪೊಲೀಸ್‌ ಇಲಾಖೆ, ಸೂಕ್ರತ ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದೆ. ಹಿಂಸಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕಲು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ನಾವು ಸರ್ವ ಸನ್ನದ್ಧರಾಗಿದ್ದೇವೆ ಎಂದು ನ್ಯೂಯಾರ್ಕ್‌ ಪೊಲೀಸ್‌ ಡಿಪಾರ್ಟ್‌ಮೆಂಟ್‌ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ.

ಕೇವಲ ನ್ಯೂಯಾರ್ಕ್‌ ಮಾತ್ರವಲ್ಲದೇ ಫ್ಲೋರಿಡಾ ಸೇರಿದಂತೆ ಇತರ ರಾಜ್ಯಗಳಲ್ಲೂ ಆಯಾ ಪೊಲೀಸ್‌ ಇಲಾಖೆಗಳು ಹೈ ಅಲರ್ಟ್‌ ಘೋಷಣೆ ಮಾಡಿವೆ. ರಿಪಬ್ಲಿಕನ್‌ ಪಕ್ಷದ ಬಿಗಿ ಹಿಡಿತವಿರುವ ಫ್ಲೋರಿಡಾದಲ್ಲೂ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಟ್ರಂಪ್‌ ಅವರು 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಬಳಿಕ ಹಿಂಸಾಚಾರದ ಎಚ್ಚರಿಕೆಯನ್ನು ನೀಡಿದ್ದರು. ಅವರ ಎಚ್ಚರಿಕೆಯ ಕೆಲವೇ ಗಂಟೆಗಳಲ್ಲಿ ಯುಎಸ್‌ ಕ್ಯಾಪಿಟಲ್‌ ಮೇಲೆ ಟ್ರಂಪ್‌ ಬೆಂಬಲಿಗರು ದಾಳಿ ನಡೆಸಿದ್ದರು.

ಇದೀಗ ತಮ್ಮ ದೋಷಾರೋಪಣೆ ವಿರುದ್ಧವೂ ತಮ್ಮ ಬೆಂಬಲಿಗರು ಹಿಂಸಾಚಾರದಲ್ಲಿ ತೊಡಗಬಹುದು ಎಂದು ಟ್ರಂಪ್‌ ಎಚ್ಚರಿಸಿದ್ದಾರೆ. ಮಾಜಿ ಅಧ್ಯಕ್ಷರೊಬ್ಬರು ನೇರ ಹಿಂಸಾಚಾರದ ಮಾತುಗಳನ್ನಾಡುತ್ತಿರುವುದು ಖಂಡನೀಯ ಎಂದು ಡೆಮಾಕ್ರೆಟಿಕ್‌ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಒಟ್ಟಿನಲ್ಲಿ ಯುಎಸ್‌ ಕ್ಯಾಪಿಟಲ್‌ ಹಿಂಸಾಚಾರದ ಬಳಿಕ, ಅಮೆರಿಕ ಮತ್ತೊಂದು ಸಂಭವನೀಯ ಹಿಂಸಾಚಾರದ ಭೀತಿ ಎದುರಿಸುತ್ತಿದೆ. ಟ್ರಂಪ್‌ ದೋಷಾರೋಪಣೆ ವಿಚಾರಣೆ ನ್ಯೂಯಾರ್ಕ್‌ ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ ಎಂದು ಹೇಳಿದರೆ ಅತಿಶೋಕ್ತಿಯಲ್ಲ.

ಸಂಬಂಧಿತ ಸುದ್ದಿ:

Donald Trump: ಕೈಕೋಳ, ಬೆರಳಚ್ಚು, ಫೋಟೋ.. ಹೀಗಿರಲಿದೆ ಡೊನಾಲ್ಡ್ ಟ್ರಂಪ್‌‌ ಸಂಭವನೀಯ ಬಂಧನ ಪ್ರಕ್ರಿಯೆ..!

ನ್ಯೂಯಾರ್ಕ್‌ ಗ್ರ್ಯಾಂಡ್‌ ಜ್ಯೂರಿ ದೋಷಾರೋಪಣೆಯಿಂದಾಗಿ, ಡೊನಾಲ್ಡ್‌ ಟ್ರಂಪ್‌ ಬಂಧನ ಭೀತಿ ಎದುರಿಸುತ್ತಿದ್ದಾರೆ. ಟ್ರಂಪ್‌ ಮುಂಬರುವ ಮಂಗಳವಾರ ಶರಣಾಗುವ ಸಾಧ್ಯತೆ ಇದ್ದು, ಅವರ ಬಂಧನ ಪ್ರಕ್ರಿಯೆ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಅಪರಾಧ ಪ್ರಕರಣಗಳ ಬಂಧನ ಪ್ರಕ್ರಿಯೆಯೇ ಟ್ರಂಪ್‌ ಅವರಿಗೂ ಅನ್ವಯಿಸಲಿದೆ ಎಂಬುದು ವಿಶೇಷ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

IPL_Entry_Point

ವಿಭಾಗ