ಕನ್ನಡ ಸುದ್ದಿ  /  Nation And-world  /  Odisha Train Mishap Pm Narendra Modi Arrives At Crash Site In Balasore To Meet Survivors In Hospital Train Accident Uks

Odisha train mishap: ಒಡಿಶಾ ರೈಲು ದುರಂತ ಸ್ಥಳಕ್ಕಾಗಮಿಸಿದ ಪ್ರಧಾನಿ ಮೋದಿ; ಆಸ್ಪತ್ರೆಯಲ್ಲಿ ಸಂತ್ರಸ್ತರ ಭೇಟಿ

Odisha train mishap: ಒಡಿಶಾದಲ್ಲಿ ನಡೆದ ಭೀಕರ ರೈಲು ಅಪಘಾತದ ಸ್ಥಳಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (ಜೂ.3) ಭೇಟಿ ನೀಡಿದರು. ಸ್ಥಳ ಪರಿಶೀಲಿಸಿದ ಬಳಿಕ ಅವರು ಜಿಲ್ಲಾ ಆಸ್ಪತ್ರೆಗೆ ತೆರಳಿ ಸಂತ್ರಸ್ತರನ್ನು ಮಾತನಾಡಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಇದರ ವಿವರ ಇಲ್ಲಿದೆ.

ಒಡಿಶಾದಲ್ಲಿ ರೈಲು ಅಪಘಾತ ಸ್ಥಳಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (ವಿಡಿಯೋ ಗ್ರ್ಯಾಬ್)
ಒಡಿಶಾದಲ್ಲಿ ರೈಲು ಅಪಘಾತ ಸ್ಥಳಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (ವಿಡಿಯೋ ಗ್ರ್ಯಾಬ್) (ANI)

ಬಾಲಸೋರ್‌ (ಒಡಿಶಾ): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಒಡಿಶಾದ ರೈಲು ಅಪಘಾತ ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳಪರಿಶೀಲನೆ ಬಳಿಕ ಅವರು ಸಂತ್ರಸ್ತರ ಭೇಟಿಗೆ ಆಸ್ಪತ್ರೆಗೆ ತೆರಳಿದರು.

ಇತ್ತೀಚಿನ ಅತ್ಯಂತ ಭೀಕರ ರೈಲು ಅಪಘಾತಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟ ನಿನ್ನೆಯ ಅಪಘಾತದ ನೇರ ಪರಿಶೀಲನೆಯನ್ನು ಅವರು ಕೈಗೊಂಡರು. ಇತ್ತೀಚಿನ ಅಂದಾಜಿನ ಪ್ರಕಾರ 261 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 1000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ನಿಲ್ದಾಣದಲ್ಲಿ ದುರಂತ ನಡೆದ ಸ್ಥಳದ ಸಮೀಪವೇ ಪ್ರಧಾನಿ ನರೇಂದ್ರ ಮೋದಿ ಅವರು ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಬಂದಿಳಿದರು. ಅಪಘಾತದಲ್ಲಿ ಬದುಕುಳಿದವರನ್ನು ಭೇಟಿ ಮಾಡಲು ಅವರು ಬಾಲಸೋರ್ ಜಿಲ್ಲಾ ಆಸ್ಪತ್ರೆಗೆ ತೆರಳಿದ್ದು, ಅಲ್ಲಿ ಗಾಯಾಳುಗಳನ್ನು ಭೇಟಿ ಮಾಡಲಿದ್ದಾರೆ.

ಇಂದು ಮುಂಜಾನೆ, ರೈಲು ಅಪಘಾತಕ್ಕೆ ಸಂಬಂಧಿಸಿ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ಮೋದಿ ಸಭೆ ಕರೆದಿದ್ದರು.

ಅಪಘಾತ ಸಂಭವಿಸಿದ್ದು ಹೇಗೆ?

ಎರಡು ಪ್ಯಾಸೆಂಜರ್ ರೈಲುಗಳು - ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಅಪಘಾತಕ್ಕೀಡಾದ ರೈಲುಗಳು. ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ನಿಲ್ದಾಣದಲ್ಲಿ ಈ ರೈಲುಗಳು ಹಳಿ ತಪ್ಪಿ ದುರಂತ ಸಂಭವಿಸಿದೆ. ಶುಕ್ರವಾರ ಮುಸ್ಸಂಜೆ ಸಂಭವಿಸಿದ ಅಪಘಾತದಲ್ಲಿ ಪ್ಯಾಸೆಂಜರ್ ರೈಲುಗಳ 17 ಬೋಗಿಗಳು ಹಳಿ ತಪ್ಪಿ ತೀವ್ರವಾಗಿ ಹಾನಿಗೀಡಾಗಿವೆ. ಅಪಾರ ಸಾವು ನೋವು ಸಂಭವಿಸಿದೆ.

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಾಥಮಿಕ ವರದಿಯ ಪ್ರಕಾರ, 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತ ಸಂಖ್ಯೆ 238 ರಿಂದ 261 ಕ್ಕೆ ಏರಿದೆ ಎಂದು ಪಿಟಿಐ ವರದಿ ಹೇಳಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF)ಯ ಏಳು ತಂಡಗಳು, ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ODRAF)ಯ ಐದು ಘಟಕಗಳು ಮತ್ತು ಅಗ್ನಿಶಾಮಕ ಸೇವೆಗಳು ಮತ್ತು ತುರ್ತು ಘಟಕಗಳ 24 ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಈಸ್ಟರ್ನ್ ಕಮಾಂಡ್ ಪ್ರಕಾರ, ಭಾರತೀಯ ವಾಯುಪಡೆ (IAF) ಮೃತರು ಮತ್ತು ಗಾಯಗೊಂಡವರ ಸ್ಥಳಾಂತರಕ್ಕಾಗಿ Mi-17 ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ. IAF ನಾಗರಿಕ ಆಡಳಿತ ಮತ್ತು ಭಾರತೀಯ ರೈಲ್ವೆಯೊಂದಿಗೆ ರಕ್ಷಣಾ ಪ್ರಯತ್ನಗಳನ್ನು ಸಂಯೋಜಿಸುತ್ತಿದೆ.

ಸ್ಥಳಕ್ಕೆ ಭೇಟಿ ನೀಡಿದ ಇತರ ಗಣ್ಯರು

ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಸ್ಥಳಕ್ಕೆ ಭೇಟಿ ನೀಡಿ "ಉನ್ನತ ಮಟ್ಟದ" ತನಿಖೆಗೆ ನಿರ್ದೇಶಿಸಿದ್ದಾರೆ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೂಡ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.

ಬಿಹಾರದಲ್ಲಿ ರೈಲು ನದಿಗೆ ಬಿದ್ದು ಸಂಭವಿಸಿತ್ತು 800 ಮಂದಿ ಸಾವು

ಒಡಿಶಾ ರೈಲು ಅಪಘಾತ: 6 ಜೂನ್ 1981 ರಂದು ಬಿಹಾರದಲ್ಲಿ, ಮಾನ್ಸಿ ಮತ್ತು ಸಹರ್ಸಾ ನಡುವಿನ ಸೇತುವೆಯನ್ನು ದಾಟುವಾಗ ರೈಲು ಹಳಿತಪ್ಪಿ ಏಳು ಬೋಗಿಗಳು ಬಾಗ್ಮತಿ ನದಿಗೆ ಬಿದ್ದವು. ಈ ಅಪಘಾತದಲ್ಲಿ 800 ಪ್ರಯಾಣಿಕರು ಸಾವನ್ನಪ್ಪಿದ್ದರು. ಈ ರೀತಿ ಇತಿಹಾಸದ ಪುಟದಲ್ಲಿ ದಾಖಲಾಗಿರುವ ಆಘಾತಕಾರಿ ರೈಲು ಅಪಘಾತಗಳ ಪಟ್ಟಿ ಇಲ್ಲಿದೆ 👉🏻 ಇತಿಹಾಸಪುಟದಿಂದ ಆಘಾತಕಾರಿ ರೈಲು ಅಪಘಾತಗಳ ಪಟ್ಟಿ

IPL_Entry_Point