ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm On G20 Presidency: "ಜಾಗತಿಕ ಮನಸ್ಥಿತಿ ಬದಲಾವಣೆ"ಯ ಸಮಯ: ಭಾರತಕ್ಕೆ ಜಿ20 ಅಧ್ಯಕ್ಷ ಸ್ಥಾನವನ್ನು ವಿಶ್ಲೇಷಿಸಿದ ಮೋದಿ

PM on G20 Presidency: "ಜಾಗತಿಕ ಮನಸ್ಥಿತಿ ಬದಲಾವಣೆ"ಯ ಸಮಯ: ಭಾರತಕ್ಕೆ ಜಿ20 ಅಧ್ಯಕ್ಷ ಸ್ಥಾನವನ್ನು ವಿಶ್ಲೇಷಿಸಿದ ಮೋದಿ

ಭಾರತವು ಇಂದು(ಡಿ.01-ಗುರುವಾರ) ಔಪಚಾರಿಕವಾಗಿ ಜಿ20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದು, ಈ ಐತಿಹಾಸಿಕ ಕ್ಷಣ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದು ಎಂದು ಬಣ್ಣಿಸಲಾಗಿದೆ. ಈ ಕುರಿತು ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಇದನ್ನು "ಜಾಗತಿಕ ಮನಸ್ಥಿತಿಯ ಬದಲಾವಣೆ " ಸಮಯ ಎಂದು ಕರೆದಿದ್ದಾರೆ. ಭಾರತದ ವರ್ಷಾವಧಿಯ ಜಿ20 ಅಧ್ಯಕ್ಷ ಸ್ಥಾನವು, ಎಲ್ಲರನ್ನೂ ಒಳಗೊಳ್ಳಲಿದೆ ಎಂದು ಮೋದಿ ಭರವಸೆ ನೀಡಿದ್ದಾರೆ.

ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
ಪ್ರಧಾನಿ ಮೋದಿ (ಸಂಗ್ರಹ ಚಿತ್ರ) (MINT_PRINT)

ನವದೆಹಲಿ: ಭಾರತವು ಇಂದು(ಡಿ.01-ಗುರುವಾರ) ಔಪಚಾರಿಕವಾಗಿ ಜಿ20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದು, ಈ ಐತಿಹಾಸಿಕ ಕ್ಷಣ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದು ಎಂದು ಬಣ್ಣಿಸಲಾಗಿದೆ. ಈ ಕುರಿತು ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಇದನ್ನು "ಜಾಗತಿಕ ಮನಸ್ಥಿತಿಯ ಬದಲಾವಣೆ " ಸಮಯ ಎಂದು ಕರೆದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಒಟ್ಟಾರೆಯಾಗಿ ಮಾನವೀಯತೆಗೆ ಪ್ರಯೋಜನವಾಗುವಂತೆ ಮೂಲಭೂತ ಮನಸ್ಥಿತಿಯನ್ನು ನಾವು ಬದಲಾಯಿಸಬೇಕಿದೆ. ಭಾರತದ ವರ್ಷಾವಧಿಯ ಜಿ20 ಅಧ್ಯಕ್ಷ ಸ್ಥಾನವು, ಎಲ್ಲರನ್ನೂ ಒಳಗೊಳ್ಳುವ, ಮಹತ್ವಾಕಾಂಕ್ಷೆಯ, ನಿರ್ಣಾಯಕ ಮತ್ತು ಕಾರ್ಯಾಧಾರಿತ ಜವಾಬ್ದಾರಿಯಾಗಿರುತ್ತದೆ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ.

ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳಿಂದ ಉಂಟಾಗುವ ಅಪಾಯಗಳನ್ನು ತಗ್ಗಿಸುವ ಮತ್ತು ಜಾಗತಿಕ ಭದ್ರತೆಯನ್ನು ಹೆಚ್ಚಿಸುವ ಬಗ್ಗೆ ಪ್ರಾಮಾಣಿಕ ಸಂಭಾಷಣೆಯನ್ನು ಈ ಶೃಂಗಸಭೆ ಉತ್ತೇಜಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಭಯೋತ್ಪಾದನೆ ನಿಗ್ರಹ ಮತ್ತು ಆರ್ಥಿಕ ಮಂದಗತಿ ಮತ್ತು ಹವಾಮಾನ ಬಿಕ್ಕಟ್ಟಿನಂತಹ ಜಾಗತಿಕ ಸವಾಲುಗಳನ್ನು ನಿಭಾಯಿಸುವಲ್ಲಿ, ಏಕತೆ ಮತ್ತು ಒಗ್ಗಟ್ಟನ್ನು ಕೇಂದ್ರೀಕರಿಸುವ ಮೂಲಕ ಭಾರತ ಇಂದು ತನ್ನ ಜಿ20 ಅಧ್ಯಕ್ಷತೆಯನ್ನು ಪ್ರಾರಂಭಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಭಾರತದ ಜಿ20 ಯೋಜನೆಗಳು ಸ್ಟಾರ್ಟ್‌ಅಪ್‌ಗಳ ಮೇಲೆ ವಿಶೇಷ ಗಮನವನ್ನು ಮತ್ತು ಡಿಜಿಟಲ್ ವಿಭಜನೆಯನ್ನು ಕಡಿಮೆಗೊಳಿಸುವುದನ್ನು ಒಳಗೊಂಡಿವೆ. ಮುಂದಿನ ಒಂದು ವರ್ಷದಲ್ಲಿ ಭಾರತವು ದೇಶಾದ್ಯಂತ ಸುಮಾರು 200 ಸಭೆಗಳನ್ನು ಆಯೋಜಿಸುತ್ತದೆ. ಮೊದಲನೆಯ ಸಭೆ ಈ ವಾರದ ಕೊನೆಯಲ್ಲಿ ಉದಯಪುರದಲ್ಲಿ ಆಯೋಜನೆಗೊಳ್ಳಲಿದ್ದು, ಜಿ20 ಶೃಂಗಸಭೆ 2023ರ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ಆಯೋಜನಗೊಳ್ಳಲಿದೆ.

ಇದೇ ವಿಚಾರವಾಗಿ ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್, ಪ್ರಮುಖ ದೇಶಗಳ ನಡುವೆ ಪ್ರಮುಖ ವಿಷಯಗಳ ಬಗ್ಗೆ ಸಾಮಾನ್ಯ ನೆಲೆಯನ್ನು ರೂಪಿಸಲು ಜಿ20 ವೇದಿಕೆಯು ಪ್ರಯತ್ನಿಸುತ್ತದೆ. ಜಿ20 ಅಧ್ಯಕ್ಷರಾಗಿ ನಮ್ಮ ಪ್ರಯತ್ನವು ವಿಶಾಲವಾದ ಸಮಾಲೋಚನೆಯ ಮೂಲಕ ಒಮ್ಮತವನ್ನು ಹೆಚ್ಚು ಪ್ರಸ್ತುತವಾಗಿಸುವುದೇ ಆಗಿದೆ ಎಂದು ಹೇಳಿದರು.

ಇಂದಿನಿಂದ, ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು ಸೇರಿದಂತೆ, ದೇಶಾದ್ಯಂತ 100 ಐತಿಹಾಸಿಕ ಸ್ಮಾರಕಗಳು ಒಂದು ವಾರದವರೆಗೆ ಜಿ20 ಲೋಗೋವನ್ನು ಹೈಲೈಟ್ ಮಾಡಲಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ತಿಂಗಳು ಭಾರತದ ಜಿ 20 ಅಧ್ಯಕ್ಷ ಸ್ಥಾನದ ಲೋಗೋ ಮತ್ತು ಥೀಮ್ ಅನ್ನು ಅನಾವರಣಗೊಳಿಸಿದ್ದರು.

ಇನ್ನು ಭಾರತದ ಜಿ20 ಅಧ್ಯಕ್ಷ ಸ್ಥಾನದ ಥೀಮ್ "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಆಗಿದ್ದು, ಇದು 'ವಸುಧೈವ ಕುಟುಂಬಕಂ' (ಜಗತ್ತು ಒಂದು ಕುಟುಂಬ) ಬಗೆಗಿನ ಅದರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಕಳೆದ ನವೆಂಬರ್ 15 ಮತ್ತು 16 ರಂದು ಇಂಡೋನೇಷ್ಯಾದ ಬಾಲಿಯಲ್ಲಿ ಆಯೋಜಿಸಿದ್ದ ಹಿಂದಿನ ಜಿ20 ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ, ಪ್ರಭಾವಿ ಬಣದ ಅಧ್ಯಕ್ಷ ಸ್ಥಾನವನ್ನು ಭಾರತಕ್ಕೆ ಹಸ್ತಾಂತರಿಸಲಾಗಿತ್ತು.

ಜಿ20 ಪ್ರಪಂಚದ ಪ್ರಮುಖ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳ ಅಂತರ್ ಸರ್ಕಾರಿ ವೇದಿಕೆಯಾಗಿದೆ. ಇದು ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುಕೆ, ಯುಎಸ್ ಮತ್ತು ಯುರೋಪಿಯನ್ ದೇಶಗಳನ್ನು ಒಳಗೊಂಡಿರುವ ಒಕ್ಕೂಟವಾಗಿದೆ.

ಒಟ್ಟಿನಲ್ಲಿ ಈ ಬಾರಿಯ ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ಲಭಿಸಿದ್ದು, ಇಡೀ ಜಗತ್ತು ಭಾರತ ಕಡೆ ತಿರುಗಿ ನೋಡುತ್ತಿರುವುದು ಗಮನಾರ್ಹ ಸಂಗತಿ.

IPL_Entry_Point

ವಿಭಾಗ