Fumio Kishida: ಜಪಾನ್ ಪ್ರಧಾನಿ ಸಭೆಯಲ್ಲಿ ಬಾಂಬ್ ದಾಳಿ: ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಫುಮಿಯೊ ಕಿಶಿಡಾ
ಜಪಾನ್ ಪ್ರಧಾನಮಂತ್ರಿ ಫುಮಿಯೊ ಕಿಶಿಡಾ ಅವರ ಸಭೆಯೊಂದರಲ್ಲಿ ಬಾಂಬ್ ದಾಳಿ ನಡೆದಿದ್ದು, ಭದ್ರತಾ ಅಧಿಕಾರಿಗಳು ಫುಮಿಯೊ ಕಿಶಿಡಾ ಅವರನ್ನು ಕೂಡಲೇ ಸ್ಥಳದಿಂದ ಸುರಕ್ಷಿತವಾಗಿ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಪಾನ್ ಪ್ರಧಾನಮಂತ್ರಿ ಫುಮಿಯೊ ಕಿಶಿಡಾ ಅವರ ಸಭೆಯೊಂದರಲ್ಲಿ ಬಾಂಬ್ ದಾಳಿ ನಡೆದಿದ್ದು, ಭದ್ರತಾ ಅಧಿಕಾರಿಗಳು ಫುಮಿಯೊ ಕಿಶಿಡಾ ಅವರನ್ನು ಕೂಡಲೇ ಸ್ಥಳದಿಂದ ಸುರಕ್ಷಿತವಾಗಿ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಪಾನ್‌ನ ವಕಾಯಾಮಾ ಬಂದರು ಪಟ್ಟಣದಲ್ಲಿ ಫುಮಿಯೊ ಕಿಶಿಡಾ ಅವರ ಸಭೆ ಏರ್ಪಡಿಸಲಾಗಿತ್ತು. ಈ ವೇಳೆ ಕಿಶಿಡಾ ಅವರು ಮಾತನಾಡಲು ಮುಂದಾಗುತ್ತಿದ್ದಂಯತೇ, ಭಾರೀ ಶಬ್ಧದೊಂದಿಗೆ ಬಾಂಬ್ ಸ್ಫೋಟ ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಈ ಕುರಿತು ವರದಿ ಬಿತ್ತರಿಸಿರುವ ಜಪಾನ್‌ನ ಕ್ಯೋಡೋ ನ್ಯೂಸ್ ಏಜೆನ್ಸಿ, ಬಾಂಬ್ ಸ್ಫೋಟದ ಕಾರಣಕ್ಕೆ ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿದೆ ಎಂದು ತಿಳಿಸಿವೆ. ಆದರೆ ಘಟನೆಯಲ್ಲಿ ಪ್ರಧಾನಿ ಕಿಶಿಡಾ ಸೇರಿದಂತೆ ಯಾರಿಗೂ ಗಂಭೀರವಾದ ಗಾಯಗಳಾಗಿಲ್ಲ ಎಂದು ಜಪಾನ್ ಮಾಧ್ಯಮಗಳು ಖಚಿತಪಡಿಸಿವೆ.
ಇನ್ನು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಕಾಯಾಮಾ ಪೊಲೀಸರು ಓರ್ವ ಶಂಕಿತನನ್ನು ಬಂಧಿಸಿದ್ದಾರೆ ಎನ್ನಲಾಗಿದ್ದು, ಈ ಕುರಿತು ಪೊಲೀಸರು ಯಾವುದೇ ಸ್ಪಷ್ಟೀಕರಣ ನೀಡಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ಜುಲೈ 2022ರಲ್ಲಿ ಚುನಾವನಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡುವಾಗ, ಗುಂಡು ಹಾರಿಸಿ ಕೊಲ್ಲಲ್ಪಟ್ಟ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಹತ್ಯೆಯ ನಂತರ, ಜಪಾನ್ ಪ್ರಧಾನಿಗೆ ನೀಡಲಾಗುವ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಉತ್ತರ ಸಪ್ಪೊರೊ ಮತ್ತು ನಾಗಾನೊದ ಕರುಯಿಜಾವಾ ನಗರದಲ್ಲಿ ಮತ್ತು ಹಿರೋಷಿಮಾದಲ್ಲಿ ಜಪಾನ್ G7 ಮಂತ್ರಿಗಳ ಕಾರ್ಯಕ್ರಮಗಳನ್ನು- ಆಯೋಜಿಸಲಾಗಿತ್ತು. ಈ ಸಭೆಯನ್ನುದ್ದೇಶಿಸಿ ಪ್ರಧಾನಿ ಕಿಶಿಡಾ ಮಾತನಾಡುತ್ತಿದ್ದಾಗ ಬಾಂಬ್ ಸ್ಫೋಟ ಸಂಭವಿಸಿದೆ.
ಘಟನೆಯ ಕುರಿತು ಸರ್ಕಾರವಾಗಲಿ, ಪೊಲೀಸರಾಗಲಿ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲವಾದರೂ, ರಾಜಕೀಯ ದ್ವೇಷದ ಕಾರಣಕ್ಕೆ ಈ ದಾಳಿ ನಡೆದಿರಬಹುದು ಎಂದು ಜಪಾನ್ ಮಾಧ್ಯಮಗಳು ಶಂಕಿಸಿವೆ.
ಶೃಂಗಸಭೆಗೂ ಮುನ್ನ ಜಪಾನ್ ಪ್ರಧಾನಿ ಮೇಲೆ ಈ ದಾಳಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದ್ದು, ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ವ್ಯಕ್ತಪಡಿಸಿದ್ದಾರೆ.
ಶಿಂಜೋ ಅಬೆ ಅವರ ರಾಜಕೀಯ ನಿವೃತ್ತಿ ನಂತರ ಜಪಾನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದ ಫುಮಿಯೊ ಕಿಶಿಡಾ, ಭಾರತ, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಜಪಾನ್‌ನನ್ನು ಒಳಗೊಂಡ ಕ್ವಾಡ್ ಸಂಘಟನೆಯನ್ನು ಬಲಪಡಿಸುವಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಪ್ರಮುಖವಾಗಿ ಇಂಡೋ-ಪೆಸಿಫಿಕ್ ಭಾಗದಲ್ಲಿ ಚೀನಾವನ್ನು ನಿಯಂತ್ರಿಸುವ ಮತ್ತು ಮುಕ್ತ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ, ಕ್ವಾಡ್ ಸಂಘಟನೆಯನ್ನು ರಚನೆ ಮಾಡಲಾಗಿದೆ.
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಅತ್ಯಂತ ಆತ್ಮೀಯ ಸಂಬಂಧ ಹೊಂದಿರುವ ಫುಮಿಯೋ ಕಿಶಿಡಾ, ಇತ್ತೀಚಿಗಷ್ಟೇ ಭಾರತ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಉಭಯ ದೇಶಗಳ ನಡುವೆ ರಕ್ಷಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಒಡಂಬಡಿಕೆ ಏರ್ಪಟ್ಟಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.
ಇಂದಿನ ಪ್ರಮುಖ ಸುದ್ದಿ
Rahul Gandhi: 'ಎಲ್ಲಿಗೆ ಪಯಣ..' ಮನೆ 'ಖಾಲಿ' ಮಾಡಿ ಬೀಗದ 'ಕೈ' ಕೊಟ್ಟು ಹೊರಟ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸರ್ಕಾರ ಆದೇಶದಂತೆ ತಮ್ಮ ಅಧಿಕೃತ ಸರ್ಕಾರಿ ಬಂಗಲೆಯನ್ನು ತೊರೆದಿದ್ದಾರೆ. ರಾಹುಲ್ ಗಾಂಧಿ ಅವರಿಗೆ ತಮ್ಮ ಸರ್ಕಾರಿ ಬಂಗಲೆಯನ್ನು ಏಪ್ರಿಲ್ 22ರೊಳಗಾಗಿ ಖಾಲಿ ಮಾಡುವಂತೆ ಸೂಚನೆ ನೀಡಲಾಗಿತ್ತು. ನಿಗದಿತ ದಿನಾಂಕಕ್ಕೂ ಮೊದಲೇ ರಾಹುಲ್ ಗಾಂಧಿ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.
ವಿಭಾಗ