ಕನ್ನಡ ಸುದ್ದಿ  /  Nation And-world  /  Sidhu Moosewala Murder Case: Gangster Goldy Brar Detained In Us

Sidhu Moosewala murder case:​ ಅಮೆರಿಕದಲ್ಲಿ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಮಾಸ್ಟರ್​ಮೈಂಡ್ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ ಬಂಧನ

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್ ಕೆನಡಾ ಮೂಲದ ಗ್ಯಾಂಗ್​​ಸ್ಟರ್​ ಸತೀಂದರ್‌ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ನನ್ನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.

ಸಿಧು ಮೂಸೆವಾಲಾ - ಗೋಲ್ಡಿ ಬ್ರಾರ್
ಸಿಧು ಮೂಸೆವಾಲಾ - ಗೋಲ್ಡಿ ಬ್ರಾರ್

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್ ಕೆನಡಾ ಮೂಲದ ಗ್ಯಾಂಗ್​​ಸ್ಟರ್​ ಸತೀಂದರ್‌ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ನನ್ನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಶುಕ್ರವಾರ ಹೇಳಿದ್ದಾರೆ.

"ಇಂದು ಬೆಳಗ್ಗೆ ದೃಢಪಟ್ಟ ಸುದ್ದಿಯೊಂದು ಇದೆ. ಕೆನಡಾದಲ್ಲಿ ಕುಳಿತಿರುವ ದೊಡ್ಡ ಗ್ಯಾಂಗ್​​ಸ್ಟರ್ ಗೋಲ್ಡಿ ಬ್ರಾರ್ ಅನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ ಎಂದು ರಾಜ್ಯದ ಮುಖ್ಯಸ್ಥನಾಗಿ ನಾನು ನಿಮಗೆ ಹೇಳುತ್ತೇನೆ" ಎಂದು ಭಗವಂತ್ ಮಾನ್ ಗುಜರಾತ್​ನ ಅಹಮದಾಬಾದ್​ನಲ್ಲಿ ​ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಪಂಜಾಬ್ ಸಿಎಂ ಮಾನ್​ ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆಗೆ ತಮ್ಮ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ.

ಗೋಲ್ಡಿ ಬ್ರಾರ್, ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ಮತ್ತು ಮೂಸೆವಾಲಾ ಹತ್ಯೆಗೆ ಸಂಚು ರೂಪಿಸಿದ ಗ್ಯಾಂಗ್ ಲೀಡರ್ ಲಾರೆನ್ಸ್ ಬಿಷ್ಣೋಯ್​ನ ಆಪ್ತನಾಗಿದ್ದಾನೆ. ಮಾಹಿತಿಯ ಪ್ರಕಾರ ಗೋಲ್ಡಿ ಬ್ರಾರ್ ವಿದ್ಯಾರ್ಥಿ ವೀಸಾದಲ್ಲಿ ಕೆನಡಾಕ್ಕೆ ಹೋಗಿದ್ದನು ಮತ್ತು ನಂತರ ಹಿಂತಿರುಗಲಿಲ್ಲ. ಗೋಲ್ಡಿ ಬ್ರಾರ್ ಹಾಗೂ ಲಾರೆನ್ಸ್ ಬಿಷ್ಣೋಯ್, ಇವರಿಬ್ಬರ ಸಹಚರರಾದ ಗಗನ್‌ದೀಪ್ ಸಿಂಗ್ ಅಲಿಯಾಸ್ ಗಾಗಿ ಮತ್ತು ಗುರುಪ್ರೀತ್ ಸಿಂಗ್ ಅಲಿಯಾಸ್ ಗೋಪಿ ಎಂಬವರನ್ನು ಪಂಜಾಬ್​ ಪೊಲೀಸರು ಈ ಹಿಂದೆ ಬಂಧಿಸಿದ್ದರು.

ಮೇ ತಿಂಗಳಲ್ಲಿ ಗೋಲ್ಡಿ ಬ್ರಾರ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಪಂಜಾಬಿ ಗಾಯಕನ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದನು ಎಂದು ವರದಿಯಾಗಿದೆ. ಮೂಸೆವಾಲಾ ಹತ್ಯೆ ಹಿಂದೆ ಗ್ಯಾಂಗ್​ಸ್ಟರ್​ ಲಾರೆನ್ಸ್ ಬಿಷ್ಣೋಯ್ ಗುಂಪಿನ ಕೈವಾಡವಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು. ಬಳಿಕ ಸ್ವತಃ ಲಾರೆನ್ಸ್ ಬಿಷ್ಣೋಯ್ ಇದನ್ನು ಒಪ್ಪಿಕೊಂಡಿದ್ದನು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಗುರ್ಲಾಲ್ ಸಿಂಗ್ ಪೆಹಲ್ವಾನ್ ಹತ್ಯೆ ಸೇರಿದಂತೆ ಗೋಲ್ಡಿ ಬ್ರಾರ್ ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಗುರ್ಲಾಲ್ ಸಿಂಗ್ ಪೆಹಲ್ವಾನ್ ಹತ್ಯೆಗೆ ಸಂಬಂಧಿಸಿ ಫರೀದ್‌ಪುರ ನ್ಯಾಯಾಲಯವು ಈ ತಿಂಗಳ ಆರಂಭದಲ್ಲಿ ಗೋಲ್ಡಿ ಬ್ರಾರ್ ವಿರುದ್ಧ ಮುಕ್ತ ಜಾಮೀನು ರಹಿತ ಬಂಧನಕ್ಕೆ ವಾರಂಟ್ ಹೊರಡಿಸಿತ್ತು.

ಸಿಧು ಮೂಸೆವಾಲಾ ಹತ್ಯೆ

ಮೇ 29ರಂದು ಪಂಜಾಬ್​ನ ಮಾನ್ಸಾ ಜಿಲ್ಲೆಯ ಜವಾಹರ್ಕೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕಾಂಗ್ರೆಸ್​ ನಾಯಕನೂ ಆಗಿರುವ ಪಂಜಾಬ್​ ಗಾಯಕ ಸಿಧು ಮೂಸೆ ವಾಲಾ ಅವರನ್ನು ಹತ್ಯೆಗೈಯ್ಯಲಾಗಿತ್ತು. ಗುಂಡಿನ ದಾಳಿಯಲ್ಲಿ ಮೂಸ್ ವಾಲಾ ಜೊತೆಗೆ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಇವರಲ್ಲಿ ಒಬ್ಬರು ಮೃತಪಟ್ಟಿದ್ದರು.. ದಾಳಿಕೋರರು ಕನಿಷ್ಠ 30 ಸುತ್ತು ಗುಂಡು ಹಾರಿಸಿದ್ದರು. ಮೂಸ್ ವಾಲಾ ಅವರನ್ನು ಗಂಭೀರ ಸ್ಥಿತಿಯಲ್ಲಿ ಮಾನ್ಸಾದ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿತ್ತು.

ಸಿಧು ಮೂಸೆ ವಾಲಾ ಅವರು ಪಂಜಾಬ್​ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್​ ಸೇರಿಕೊಂಡು ಎಲೆಕ್ಷನ್​​ನಲ್ಲಿ ಮಾನ್ಸಾ ಕ್ಷೇತ್ರದಿಂದ ಸ್ಫರ್ಧಿಸಿದ್ದರು. ಆದರೆ ಆಮ್​ ಆದ್ಮಿ ಪಕ್ಷದ ಡಾ. ವಿಜಯ್​ ಸಿಂಗ್ಲಾ ವಿರುದ್ಧ ಸೋತಿದ್ದರು. ರಾಜ್ಯದಲ್ಲಿ ಆಮ್​ ಆದ್ಮಿ ಪಕ್ಷ ಬಂದು ಭಗವಂತ್​ ಮಾನ್​ ಮುಖ್ಯಮಂತ್ರಿಯಾದರು. ಗುಂಡಿನ ದಾಳಿ ನಡೆಯುವ ಒಂದು ದಿನದ ಮುಂದಷ್ಟೇ ಭಗವಂತ್​ ಮಾನ್ ಸರ್ಕಾರ ಸಿಧು ಮೂಸೆ ವಾಲಾ ಸೇರಿದಂತೆ 420 ಕ್ಕೂ ಹೆಚ್ಚು ಜನರಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆದು ಆದೇಶ ಹೊರಡಿಸಿತ್ತು.

ಆದಾಗ್ಯೂ, ಮೂಸೆ ವಾಲಾ ಭದ್ರತೆಗಾಗಿ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಹೊಂದಿದ್ದರು ಮತ್ತು ಕೇವಲ ಇಬ್ಬರು ಬಂದೂಕುಧಾರಿಗಳನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿತ್ತು. ಆದರೆ ಘಟನೆಯ ಸಮಯದಲ್ಲಿ ಮೂಸೆ ವಾಲಾ ತಮ್ಮೊಂದಿಗೆ ಇಬ್ಬರು ಬಂದೂಕುಧಾರಿಗಳನ್ನು ಕರೆದುಕೊಂಡು ಹೋಗಿರಲಿಲ್ಲ ಎಂದು ಮಾನ್ಸಾ ಎಸ್‌ಎಸ್‌ಪಿ ಗೌರವ್ ಟೂರಾ ಹೇಳಿದ್ದರು.

IPL_Entry_Point

ವಿಭಾಗ