Uddhav Thackeray: ಭಿನ್ನ ಸ್ವರೂಪದ ರಾವಣ ಕೂಡ ಸುಟ್ಟು ಭಸ್ಮವಾಗುತ್ತಾನೆ: ಶಿಂಧೆ ವಿರುದ್ಧ ಉದ್ಧವ್ ಕಿಡಿ!
ಶಿವಸೇನೆ ಪಕ್ಷ ಸ್ಥಾಪನೆಯಾಗಿ 56 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ, ಪಕ್ಷದ ಎರಡು ಭಿನ್ನ ಬಣಗಳಿಂದ ಪ್ರತ್ಯೇಕ ದಸರಾ ರ‍್ಯಾಲಿ ನಡೆದಿದ್ದು, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣ ಈ ಬಾರಿ ಪ್ರತ್ಯೇಕ ದಸರಾ ರ‍್ಯಾಲಿಯನ್ನು ಆಯೋಜಿದ್ದವು. ಮಹಾರಾಷ್ಟ್ರ ರಾಜಧಾನಿ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ದಸರಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಮುಂಬೈ: ಶಿವಸೇನೆ ಪಕ್ಷ ಸ್ಥಾಪನೆಯಾಗಿ 56 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ, ಪಕ್ಷದ ಎರಡು ಭಿನ್ನ ಬಣಗಳಿಂದ ಪ್ರತ್ಯೇಕ ದಸರಾ ರ‍್ಯಾಲಿ ನಡೆದಿದ್ದು, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣ ಈ ಬಾರಿ ಪ್ರತ್ಯೇಕ ದಸರಾ ರ‍್ಯಾಲಿಯನ್ನು ಆಯೋಜಿದ್ದವು. ಮಹಾರಾಷ್ಟ್ರ ರಾಜಧಾನಿ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ದಸರಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಈ ಬಾರಿ ರಾವಣನ ಸ್ವರೂಪ ಬದಲಾಗಿದೆ. ಭಿನ್ನ ಅವತಾರದ ರಾವಣ ನಮ್ಮೆದುರಿಗೆ ನಿಂತಿದ್ದಾನೆ. ಅಧಿಕಾರದ ಮೋಹ, ದುರಂಹಕಾರ, ವಿಶ್ವಾಸದ್ರೋಹವೇ ಈ ರಾವಣನ ಗುಣಲಕ್ಷಣ ಎಂದು ಪರೋಕ್ಷವಾಗಿ, ಭಿನ್ನಮತೀಯರ ನಾಯಕ ಸಿಎಂ ಏಕನಾಥ್ ಶಿಂಧೆ ವಿರುದ್ಧ ಉದ್ಧವ್ ಠಾಕ್ರೆ ಕಿಡಿಕಾರಿದರು.
ಶಿವಸೇನೆಯ ಭವಿಷ್ಯವೇನು ಎಂದು ಹಲವರು ನನ್ನ ಬಳಿ ಪ್ರಶ್ನಿಸುತ್ತಾರೆ. ಇಲ್ಲಿರುವ ಜನಸಮೂಹವನ್ನು ನೋಡಿದರೆ ಇದಕ್ಕೆ ಉತ್ತರ ಗೊತ್ತಾಗುತ್ತದೆ. ಆದರೆ ಈಗ ನಮ್ಮ ಮುಂದಿರುವ ಪ್ರಶ್ನೆ ಪಕ್ಷ ದ್ರೋಹಿಗಳಿಗೆ ಏನಾಗುತ್ತದೆ ಎಂಬುದು. ಪ್ರತಿ ವರ್ಷದಂತೆ ಈ ಬಾರಿಯೂ ರಾವಣ ಸುಟ್ಟು ಭಸ್ಮವಾಗುತ್ತಾನೆ. ಆದರೆ ಈ ಬಾರಿಯ ರಾವಣ ಭಿನ್ನವಾಗಿದ್ದಾನೆ ಎಂದು ಶಿವಾಜಿ ಪಾರ್ಕ್‌ನಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಉದ್ಧವ್ ಠಾಕ್ರೆ ಹೇಳಿದರು.
ಶಿವಸೇನೆ ಮತ್ತು ಬಿಜೆಪಿ ನಡುವೆ ಮೈತ್ರಿ ಮುರಿದು ಬೀಳಲು ಬಿಜೆಪಿಯ ವಿಶ್ವಾಸದ್ರೋಹವೇ ಕಾರಣ. ಅರ್ಧ ಅವಧಿಗೆ ಅಧಿಕಾರ ಹಂಚಿಕೆ ಬಗ್ಗೆ ನಮ್ಮ ನಡುವೆ ಮಾತುಕತೆ ನಡೆದಿತ್ತು. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂತಹ ಯಾವುದೇ ಮಾತುಕತೆ ನಡೆದಿರಲಿಲ್ಲ ಎಂದು ಹೇಳುತ್ತಿದ್ದಾರೆ. ಎರಡುವರೆ ವರ್ಷದ ಅಧಿಕಾರ ಹಂಚಿಕೆ ಬಗ್ಗೆ ಮಾತುಕತೆ ನಡೆದಿತ್ತು ಎಂದು ನಾನು ನನ್ನ ಪೋಷಕರ ಮೇಲೆ ಪ್ರಮಾಣ ಮಾಡಿ ಹೇಳಬಲ್ಲೆ ಎಂದು ಉದ್ಧವ್ ಠಾಕ್ರೆ ಹೇಳಿದರು.
ಉದ್ಧವ್ ಠಾಕ್ರೆಯವರ ಕೋಪದ ಭಾಷಣದ ಬಹುಪಾಲು ಏಕನಾಥ್ ಶಿಂಧೆ ಅವರಿಗೆ ಮೀಸಲಾಗಿತ್ತು. ಶಿಂಧೆ ಪಕ್ಷಕ್ಕೆ ದ್ರೋಹ ಮಾಡಿದ್ದು, ಅಧಿಕಾರಕ್ಕಾಗಿ ತಮ್ಮ ತಂದೆ ಹಾಗೂ ಶಿವಸೇನಾ ಸಂಸ್ಥಾಪಕ ಭಾಳ್ ಠಾಕ್ರೆ ಅವರ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ನೈಜ ಶಿವಸೇನೆ ಯಾವುದು ಎಂಬುದನ್ನು ನ್ಯಾಯಾಲಯ ತೀರ್ಮಾನ ಮಾಡಲಿದೆ. ಆದರೆ ರಾಜ್ಯದ ಜನತೆಗೆ ನೈಜ ಶಿವಸೇನೆ ಯಾವುದು ಎಂಬುದು ಗೊತ್ತಿದೆ. ಇದಕ್ಕೆ ಇತ್ತೀಚಿಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶವೇ ಸಾಕ್ಷಿ. ಈ ಚುನಾವಣೆಯಲ್ಲಿ ನಮ್ಮ ಬಣದ ಬೆಂಬಲಿತ ಅಭ್ಯರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ಗೆದ್ದಿದ್ದು, ರಾಜ್ಯದ ಜನ ನಮ್ಮ ಪರವಾಗಿದ್ದಾರೆ ಎಂಬುದರ ಸಂಕೇತ ಎಂದು ಉದ್ಧವ್ ಠಾಕ್ರೆ ಹೇಳಿದರು.
ಅಧಿಕಾರಕ್ಕಾಗಿ ಪಕ್ಷಕ್ಕೆ ದ್ರೋಹ ಮಾಡಿದವರಿಗೆ ರಾಜ್ಯದ ಜನರೇ ಶಿಕ್ಷೆ ನೀಡಲಿದ್ದಾರೆ. ಪಕ್ಷ ಒಡೆದು ಅಧಿಕಾರ ಅನುಭವಿಸುತ್ತಿರುವವರು ಮುಂದನ ದಿನಗಳಲ್ಲಿ ಭಾರೀ ಸಂಕಷ್ಟಗಳನ್ನು ಎದುರಿಸಲಿದ್ದಾರೆ. ಭಾಳ್ ಠಾಕ್ರೆ ಸ್ಥಾಪಿತ ಶಿವಸೇನೆಯನ್ನು ರಾಜ್ಯದ ಜನರು ಕೈಬಿಡುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದು ಉದ್ಧವ್ ಠಾಕ್ರೆ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.
ಸದ್ಯ ಶಿವಸೇನೆಯ ಬಿಲ್ಲು ಬಾಣದ ಚಿಹ್ನೆಯ ಹಕ್ಕಿನ ಹೋರಾಟ ಚುನಾವಣಾ ಆಯೋಗದ ಮೆಟ್ಟಿಲೇರಿದೆ. ನಿಜವಾದ ಶಿವಸೇನೆ ಯಾವುದು ಎಂದು ಚುನಾವಣಾ ಆಯೋಗ ನಿರ್ಧರಿಸುವುದನ್ನು ತಡೆಯಲು ಸುಪ್ರೀಂಕೋರ್ಟ್ ನಿರಾಕರಿಸಿದ ನಂತರ, ಬಹುಮತದ ಆಡಳಿತದ ಪಾರದರ್ಶಕ ಪ್ರಕ್ರಿಯೆಯನ್ನು ಅನ್ವಯಿಸಿ ಈ ಕುರಿತು ನಿರ್ಧರಿಸುವುದಾಗಿ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.