ಕನ್ನಡ ಸುದ್ದಿ  /  ಕ್ರೀಡೆ  /  Kerala Blasters: ಗೋಲು ವಿವಾದ.. ಕೇರಳ ವಾಕೌಟ್.. ಈಗ ಪಂದ್ಯ ಮರು ಆರಂಭಿಸುವಂತೆ ಪತ್ರ ಬರೆದ ಬ್ಲಾಸ್ಟರ್ಸ್​​

Kerala Blasters: ಗೋಲು ವಿವಾದ.. ಕೇರಳ ವಾಕೌಟ್.. ಈಗ ಪಂದ್ಯ ಮರು ಆರಂಭಿಸುವಂತೆ ಪತ್ರ ಬರೆದ ಬ್ಲಾಸ್ಟರ್ಸ್​​

ಮಾರ್ಚ್​​ 3ರಂದು ನಡೆದ ಸುನಿಲ್​ ಛೆಟ್ರಿ ಗೋಲು ವಿವಾದಕ್ಕೆ ಸಂಬಂಧಿಸಿ ಕೇರಳ ಬ್ಲಾಸ್ಟರ್ಸ್​​​​ ಎಫ್​ಸಿ ತಂಡವು, ಅಖಿಲ ಭಾರತ ಫುಟ್ಬಾಲ್​​​ ಅಸೋಸಿಯೇಷನ್​ಗೆ (AIFF) ಮನವಿ ಸಲ್ಲಿಸಿದ್ದು, ಬೆಂಗಳೂರು ಎಫ್​ಸಿ ವಿರುದ್ಧದ ಪ್ಲೇ ಆಫ್​ ಪಂದ್ಯವನ್ನು ಮರು ಪ್ರಾರಂಭಿಸುವಂತೆ ಕೇಳಿದೆ.

ಕೇರಳ ಬ್ಲಾಸ್ಟರ್ಸ್​​​​​
ಕೇರಳ ಬ್ಲಾಸ್ಟರ್ಸ್​​​​​ (Twitter)

ಇಂಡಿಯನ್​ ಸೂಪರ್​​ ಲೀಗ್​​​ನಲ್ಲಿ ಮಾರ್ಚ್​​ 3ರಂದು ನಡೆದ ಸುನಿಲ್​ ಛೆಟ್ರಿ ಸಿಡಿಸಿದ ವಿವಾದಾತ್ಮಕ ಗೋಲಿಗೆ ಸಂಬಂಧಿಸಿ ಕೇರಳ ಬ್ಲಾಸ್ಟರ್ಸ್​​​​ ಎಫ್​ಸಿ ತಂಡವು (Kerala Blasters), ಅಖಿಲ ಭಾರತ ಫುಟ್ಬಾಲ್​​​ ಅಸೋಸಿಯೇಷನ್​ಗೆ (AIFF) ಮನವಿ ಸಲ್ಲಿಸಿದ್ದು, ಬೆಂಗಳೂರು ಎಫ್​ಸಿ ವಿರುದ್ಧದ ಪ್ಲೇ ಆಫ್​ ಪಂದ್ಯವನ್ನು ಮರು ಪ್ರಾರಂಭಿಸುವಂತೆ ಕೇಳಿದೆ. ಸದ್ಯ ಎಐಎಫ್‌ಎಫ್ ತನ್ನ ಶಿಸ್ತು ಸಮಿತಿ ಸಭೆ ಕರೆದಿದ್ದು, ನಾಳೆಯೇ (ಮಾರ್ಚ್​​​​​​ 7) ಆದೇಶ ಹೊರಡಿಸುವ ಸಾಧ್ಯತೆ ಇದೆ. ಈ ಬಗ್ಗೆ ತಕ್ಷಣವೇ ಎಐಎಫ್‌ಎಫ್ ಚರ್ಚಿಸಲು ಮುಂದಾಗಿದೆ.

ಎಐಎಫ್‌ಎಫ್‌ಗೆ ಸಲ್ಲಿಸಿದ ಅಧಿಕೃತ ಮನವಿಯಲ್ಲಿ ರೆಫರಿ ಕ್ರಿಸ್ಟಲ್ ಜಾನ್ ನಮಗೆ ಅನ್ಯಾಯ ಮಾಡಿದ್ದಾರೆ. ಅವರು 30 ಸೆಕೆಂಡುಗಳ ನಂತರ ಪ್ರಾಂಪ್ಟ್ ಫ್ರೀ-ಕಿಕ್ ತೆಗೆದುಕೊಳ್ಳಲು ಛೆಟ್ರಿಗೆ ಅವಕಾಶ ನೀಡಿದ್ದರು. ಇದು ಮಾನ್ಯವಲ್ಲದಿದ್ದರೂ ಗೋಲು ನೀಡುವ ಮೂಲಕ ನಮಗೆ ಮೋಸ ಮಾಡಿದ್ದಾರೆ. ಹಾಗಾಗಿ ಇದಕ್ಕೆ ಪೂರ್ವಾಪರ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.

ಬೆಂಗಳೂರಿನ ಶ್ರೀಕಂಠೀರವ ಸ್ಟೇಡಿಯಂನಲ್ಲಿ ನಡೆದ ಪ್ಲೇ ಆಫ್​ ಪಂದ್ಯದಲ್ಲಿ ಭಾರತೀಯ ಫುಟ್‌ಬಾಲ್​​ ಇತಿಹಾಸದಲ್ಲಿ ಯಾವುದೇ ತಂಡವೂ ವಾಕ್‌ಔಟ್ ಮಾಡಿರಲಿಲ್ಲ. ಅದರ ಖ್ಯಾತಿಗೆ ಕೇರಳ ಬ್ಲಾಸ್ಟರ್ಸ್​​​ ಒಳಗಾಗಿದೆ. ಆದರೆ ಈ ವಾಕ್​​ಔಟ್​ ಪ್ರಕರಣದ ನಂತರ ಎಐಎಫ್‌ಎಫ್ ಅಥವಾ ಕೇರಳ ಬ್ಲಾಸ್ಟರ್ಸ್​​ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಕೇರಳ ಮೈದಾನದಿಂದ ಹೊರ ನಡೆದ ಕಾರಣ ಬೆಂಗಳೂರು ಸೆಮಿಫೈನಲ್​ಗೆ ಪ್ರವೇಶ ನೀಡಿತು.

ಮುಂಬೈ ಸಿಟಿ ಮತ್ತು ಬೆಂಗಳೂರು ಎಫ್​ಸಿ ಸೆಮಿಫೈನಲ್​​ನಲ್ಲಿ ಮುಖಾಮುಖಿ ಆಗಲಿದ್ದು, ಮಾರ್ಚ್​​ 7ರಂದು ಪಂದ್ಯ ನಡೆಯಲಿದೆ. ಹಾಗಾಗಿ ಎಐಎಫ್‌ಎಫ್ ಮುಂದಿನ 24 ಗಂಟೆಗಳ ಒಳಗೆ ಪ್ರತಿಭಟನೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕೇರಳ ಬ್ಲಾಸ್ಟರ್ಸ್, ಎಐಎಫ್‌ಎಫ್‌ಗೆ ಮನವಿ ಮಾಡಿದೆ. ಜೊತೆಗೆ ರೆಫರಿ ಕ್ರಿಸ್ಟಲ್ ಜಾನ್ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ಅಂದು ನಡೆದಿದ್ದೇನು..?

ಹೆಚ್ಚುವರಿ ಸಮಯಕ್ಕೆ ವಿಸ್ತರಿಸಲ್ಪಟ್ಟ ಪ್ಲೇ ಆಫ್​ ಪಂದ್ಯದಲ್ಲಿ ಬೆಂಗಳೂರು ಫುಟ್​​ಬಾಲ್ ಕ್ಲಬ್​​ ಕ್ಯಾಪ್ಟನ್​​ ಸುನಿಲ್​ ಛೆಟ್ರಿ (Sunil Chhetri) 97ನೇ ನಿಮಿಷದಲ್ಲಿ ಸಿಡಿಸಿದರು. ಈ ಗೋಲು ಮಾನ್ಯಗೊಳಿಸಿದ ರೆಫ್ರಿ ನಿರ್ಧಾರವನ್ನು ಪ್ರತಿಭಟಿಸಿದ ಕೇರಳ ಬ್ಲಾಸ್ಟರ್ಸ್ ತಂಡ ಪಂದ್ಯ ತ್ಯಜಿಸಿ ಮೈದಾನದಿಂದ ಹೊರ ನಡೆಯಿತು.​​​ ಇದರಿಂದ 1 - 0 ರಿಂದ ಗೆದ್ದ ಬಿಎಫ್​​ಸಿ ಸೆಮಿಫೈನಲ್​​​​​ ಪ್ರವೇಶಿಸಿತ್ತು.

ನಿಗದಿತ ಸಮಯದಲ್ಲಿ ಉಭಯ ತಂಡಗಳು ಗೋಲು ಗಳಿಸಲಿಲ್ಲ. 90 ನಿಮಿಷಗಳ ಅವಧಿಯಲ್ಲಿ ಎರಡೂ ತಂಡಗಳು ಗೋಲು ಗಳಿಸುವಲ್ಲಿ ವಿಫಲವಾದ ಕಾರಣ, ಹೆಚ್ಚುವರಿ 30 ನಿಮಿಷಗಳಿಗೆ ಆಟವನ್ನು ವಿಸ್ತರಿಸಲಾಯಿತು. ಈ ಅವಧಿಯಲ್ಲಿ ಫುಟ್ಬಾಲ್ ತಾರೆ ಸುನಿಲ್ ಛೆಟ್ರಿ 97ನೇ ನಿಮಿಷದಲ್ಲಿ ಬೆಂಗಳೂರು ಎಫ್‌ಸಿಗೆ ಗೋಲು ಗಳಿಸಿಕೊಟ್ಟರು. ಆದರೆ, ಈ ಗೋಲು ಭಾರೀ ವಿವಾದಕ್ಕೆ ಕಾರಣವಾಯಿತು.

ಅಲ್ಲದೆ, ಈ ಗೋಲು ಅಮಾನ್ಯ ಎಂದು ಕೇರಳ ಬ್ಲಾಸ್ಟರ್ಸ್ ಮೈದಾನದಿಂದಲೇ ಹೊರನಡೆದ ಘಟನೆ ನಡೆಯಿತು. ಬೆಂಗಳೂರು ಎಫ್‌ಸಿ ಹೊಡೆದ ಫ್ರೀ ಕಿಕ್ ಕಾನೂನು ಬಾಹಿರ. ಅದನ್ನು ಮಾನ್ಯ ಮಾಡುವಂತಿಲ್ಲ ಎಂದು ಕೇರಳ ತಂಡದ ಆಟಗಾರರು ವಾದಿಸಿದ್ದರು. ಗೋಲು ಅಮಾನ್ಯ ಮಾಡುವಂತೆ ಕೇರಳ ತಂಡದ ಆಟಗಾರರು, ಒತ್ತಾಯಿಸಿದ್ದರು. ಆದರೆ, ರೆಫ್ರಿ ಅದಕ್ಕೆ ಸೊಪ್ಪು ಹಾಕಲಿಲ್ಲ. ಈ ಗೋಲನ್ನು ಅಮಾನ್ಯಗೊಳಿಸುವಂತೆ ಪ್ರತಿಭಟಿಸಿದ್ದರು.

ಹೆಚ್ಚುವರಿ ಆಟದ ಸಮಯದಲ್ಲಿ ಸುನಿಲ್ ಛೆಟ್ರಿ ಫ್ರೀ ಕಿಕ್ ಹೊಡೆಯಲು ಬಂದರು. ಛೆಟ್ರಿ ಬಲ ಭಾಗದಿಂದ ಚೆಂಡನ್ನು ಹೊಡೆದು ಗೋಲು ಪೆಟ್ಟಿಗೆಗೆ ನುಗ್ಗಿಸಿದರು. ಗೋಲು ಗಳಿಸುತ್ತಿದ್ದಂತೆ ಕೇರಳ ಬ್ಲಾಸ್ಟರ್ಸ್ ತಾವು ರಕ್ಷಣಾ ಗೋಡೆ ನಿರ್ಮಿಸುತ್ತಿದ್ದಾಗ ಛೆಟ್ರಿ ಗೋಲು ಹೊಡೆದಿದ್ದಾರೆ. ಇದನ್ನು ಅಮಾನ್ಯ ಮಾಡಬೇಕು ಎಂದು ರೆಫ್ರಿಗೆ ತಿಳಿಸಿದರು. ರೆಫರಿ ಕ್ರಿಸ್ಟಲ್ ಜಾನ್ ಗೋಲು ನ್ಯಾಯಯುತವಾಗಿದೆ ಎಂದು ಹೇಳಿದ್ದರು. ರೆಫ್ರಿ ಸೂಚನೆ ನೀಡಿದ ನಂತರವೇ ಗೋಲು ಗಳಿಸಿದ್ದು ಎಂದು ಸುನಿಲ್ ಛೆಟ್ರಿ ಸ್ಪಷ್ಟಪಡಿಸಿದ್ದರು.