ಕನ್ನಡ ಸುದ್ದಿ  /  ಕ್ರೀಡೆ  /  Dc Vs Rcb: ಡೆಲ್ಲಿ ವಿರುದ್ಧ ಮತ್ತೊಂದು ಜಯದ ನಿರೀಕ್ಷೆಯಲ್ಲಿ ಆರ್‌ಸಿಬಿ; ಸಂಭಾವ್ಯ ತಂಡ ಹೀಗಿದೆ

DC vs RCB: ಡೆಲ್ಲಿ ವಿರುದ್ಧ ಮತ್ತೊಂದು ಜಯದ ನಿರೀಕ್ಷೆಯಲ್ಲಿ ಆರ್‌ಸಿಬಿ; ಸಂಭಾವ್ಯ ತಂಡ ಹೀಗಿದೆ

ಉಭಯ ತಂಡಗಳು ಐಪಿಎಲ್‌ನಲ್ಲಿ ಇದುವರೆಗೆ 29 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಡೆಲ್ಲಿ ತಂಡವು 10 ಬಾರಿ ಗೆದ್ದಿದ್ದರೆ, ಆರ್‌ಸಿಬಿಯು ಒಟ್ಟು 18 ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದೆ.

ಆರ್‌ಸಿಬಿ ತಂಡ
ಆರ್‌ಸಿಬಿ ತಂಡ

ಐಪಿಎಲ್‌ನ ಈ ದಿನದ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡವನ್ನು ಎದುರಿಸುತ್ತಿದೆ. ಕೊನೆಯ ಪಂದ್ಯದಲ್ಲಿ ಲಖನೌ ವಿರುದ್ಧ ರೋಚಕ ಜಯ ಸಾಧಿಸಿದ ಆರ್‌ಸಿಬಿ, ಡೆಲ್ಲಿ ವಿರುದ್ಧವೂ ಗೆದ್ದು ಗೆಲುವನ್ನು ವಿಸ್ತರಿಸುವ ವಿಶ್ವಾಸದಲ್ಲಿದೆ.

ಡೆಲ್ಲಿ ತಂಡವು ಈ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿದೆ. ಸದ್ಯ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯಗಳಲ್ಲಿ ಗೆದ್ದಿರುವ ತಂಡವು, ಐಪಿಎಲ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಕುಳಿತಿದೆ. ಆದರೆ, ಇತ್ತೀಚೆಗಷ್ಟೇ ಗುಜರಾತ್ ಟೈಟಾನ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿರುವ ವಾರ್ನರ್‌ ಪಡೆ, ನೈತಿಕ ಸ್ಥೈರ್ಯವನ್ನು ಹೆಚ್ಚಿಸಿಕೊಂಡು ಫಾಫ್‌ ಪಡೆಯ ವಿರುದ್ಧ ಕಣಕ್ಕಿಳಿಯಲಿದೆ.

ಆರ್‌ಸಿಬಿಯು ಈವರೆಗೆ ಉತ್ತಮ ಪ್ರದರ್ಶನ ನೀಡಿದೆ. ಆ ಮೂಲಕ ಪ್ಲೇ ಆಫ್‌ ರೇಸ್‌ನಲ್ಲಿದೆ. ಮುಂದೆಯೂ ಸತತವಾಗಿ ಒಂದೆರಡು ಗೆಲುವುಗಳನ್ನು ದಾಖಲಿಸುವ ಮೂಲಕ ನಾಕೌಟ್‌ ಹಂತಕ್ಕೆ ಲಗ್ಗೆ ಹಾಕಲು ದಾರಿಯನ್ನು ಸುಗಮಗೊಳಿಸುವ ಇರಾದೆ ಹೊಂದಿದೆ. ಅಂಕಪಟ್ಟಿಯ ಅಗ್ರ ನಾಲ್ಕು ಸ್ಥಾನಗಳಲ್ಲಿ ಒಂದನ್ನು ಪಡೆಯಲು ತಂಡ ಪ್ರಯತ್ನಿಸಬೇಕಿದೆ. ತವರಿನಲ್ಲಿ ನಡೆದ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯವನ್ನು ಗೆದ್ದಿದ್ದ ಆರ್‌ಸಿಬಿ, ಇಂದು ಡೆಲ್ಲಿ ಮೈದಾನದಲ್ಲಿಯೂ ಅದೇ ಲಯ ಕಂಡುಕೊಳ್ಳುವ ನಿರೀಕ್ಷೆಯಲ್ಲಿದೆ.

ಮುಖಾಮುಖಿ ದಾಖಲೆ

ಉಭಯ ತಂಡಗಳು ಐಪಿಎಲ್‌ನಲ್ಲಿ ಇದುವರೆಗೆ 29 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಡೆಲ್ಲಿ ತಂಡವು 10 ಬಾರಿ ಗೆದ್ದಿದ್ದರೆ, ಆರ್‌ಸಿಬಿಯು ಈ ಋತುವಿನ ಒಂದು ಗೆಲುವಿನೊಂದಿಗೆ ಒಟ್ಟು 18 ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದೆ.

ಉಭಯ ತಂಡಗಳ ಅಪ್ಡೇಟ್

ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಯಾರೂ ಗಾಯಾಳುಗಳಿಲ್ಲ. ಗುಜರಾತ್ ಟೈಟಾನ್ಸ್ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಗೆಲುವು ದಕ್ಕಿಸಿಕೊಂಡ ಡೆಲ್ಲಿ ತಂಡವು, ಅದೇ ತಂಡವನ್ನು ಫಾಫ್‌ ಪಡೆಯ ವಿರುದ್ಧವೂ ಕಣಕ್ಕಿಳಿಸಬಹುದು. ಇದೇ ವೇಳೆ ಸರ್ಫರಾಜ್ ಖಾನ್ ಬದಲಿಗೆ ಪೃಥ್ವಿ ಶಾಗೆ ಮತ್ತೊಂದು ಅವಕಾಶ ನೀಡಬಹುದು. ಮತ್ತೊಂದೆಡೆ, ಲಖನೌ ವಿರುದ್ಧದ ಕೊನೆಯ ಪಂದ್ಯದಲ್ಲಿ ಆರ್‌ಸಿಬಿಯು ಸಂಘಟಿತ ಪ್ರದರ್ಶನ ನೀಡಿತ್ತು. ಅದರಲ್ಲೂ ಬೌಲಿಂಗ್‌ ಮತ್ತು ಫೀಲ್ಡಿಂಗ್‌ನಲ್ಲಿ ಯಾವುದೇ ತಪ್ಪುಗಳಿಗೆ ಅವಕಾಶ ನೀಡಲಿಲ್ಲ. ಹೀಗಾಗಿ ಅದೇ ತಂಡವನ್ನು ಕಣಕ್ಕಿಳಿಸಲು ತಂಡವು ಬಹುತೇಕ ಸಿದ್ಧವಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ಸಂಭಾವ್ಯ ಆಡುವ ಬಳಗ

ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ಫಿಲಿಪ್ ಸಾಲ್ಟ್, ಮನೀಶ್ ಪಾಂಡೆ, ಮಿಚೆಲ್‌ ಮಾರ್ಷ್, ಅಕ್ಷರ್ ಪಟೇಲ್, ರಿಪಲ್ ಪಟೇಲ್, ಅಮನ್ ಖಾನ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಇಶಾಂತ್ ಶರ್ಮಾ.

ಆರ್‌ಸಿಬಿ ಸಂಭಾವ್ಯ ಆಡುವ ಬಳಗ

ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ಮಹಿಪಾಲ್ ಲೊಮ್ರರ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್.