ಕನ್ನಡ ಸುದ್ದಿ  /  Sports  /  Dhawan Breaks Silence After India Snub In Odis

Shikhar Dhawan: 'ನನ್ನ ಪಾಲಿಗೆ ಬರಬೇಕಾದ್ದು ಬರುತ್ತದೆ, ಆ ಬಗ್ಗೆ ನಾನು ಹತಾಶನಾಗುವುದಿಲ್ಲ'; ಮೌನಮುರಿದ ಧವನ್

“ಏರಿಳಿತಗಳು ಜೀವನದ ಒಂದು ಭಾಗವಾಗಿದೆ. ಕಾಲಾನಂತರದಲ್ಲಿ, ಅನುಭವದೊಂದಿಗೆ ಅವುಗಳನ್ನು ಸುಲಭವಾಗಿ ಹೇಗೆ ನಿರ್ವಹಿಸಬೇಕೆಂದು ಕಲಿಯುತ್ತೇವೆ. ನಾನು ಅದರಿಂದ ಸಾಕಷ್ಟು ಶಕ್ತಿಯನ್ನು ಪಡೆದಿದ್ದೇನೆ. ನಾನು ನನ್ನ ಕೈಲಾದಷ್ಟು ಮಾಡಿದ್ದೇನೆ. ಯಾರಾದರೂ ನನಗಿಂತ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಅದು ನನಗೆ ಸಂತೋಷವೇ” ಎಂದು ಧವನ್ ಹೇಳಿದ್ದಾರೆ.

ಶಿಖರ್‌ ಧವನ್
ಶಿಖರ್‌ ಧವನ್ (AP)

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ 2021ರ ಜೂನ್ ತಿಂಗಳಲ್ಲಿ ಭಾರತ ತಂಡವು ಶ್ರೀಲಂಕಾ ಪ್ರವಾಸ ಕೈಗೊಂಡಿತ್ತು. ಈ ವೇಳೆ ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ಅವರನ್ನು ಭಾರತ ತಂಡದ ನಾಯಕನಾಗಿ ಮಾಡಲಾಗಿತ್ತು. ಭಾರತದ ನಾಯಕತ್ವ ಗುಂಪಿನ ಅವಿಭಾಜ್ಯ ಅಂಗವಾಗಿರುವ ಧವನ್, 2022ರ ಕ್ರಿಕೆಟ್‌ ಋತುವಿನಲ್ಲಿ ಭಾರತವನ್ನು ಮುನ್ನಡೆಸಿದ ಏಳನೇ ನಾಯಕರಾಗಿದ್ದರು. ಆದರೂ, ಏಕದಿನ ವಿಶ್ವಕಪ್ ಇರುವ ಈ ವರ್ಷದಲ್ಲಿ ಹಿರಿಯ ಬ್ಯಾಟರ್ ಅನ್ನು ತಂಡಕ್ಕೆ ಪರಿಗಣಿಸುವ ಸಾಧ್ಯತೆ ಮಾತ್ರ ತುಂಬಾ ಕಡಿಮೆ.

ಒಂದು ಕಾಲದಲ್ಲಿ ಅತ್ಯುತ್ತಮ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಧವನ್‌, ಸದ್ಯ ಭಾರತ ತಂಡದಲ್ಲಿ ಸ್ಥಾನ ಪಡೆಯುತ್ತಿಲ್ಲ. ಇನ್-ಫಾರ್ಮ್ ಆರಂಭಿಕರಾದ ಇಶಾನ್ ಕಿಶನ್ ಮತ್ತು ಶುಬ್ಮನ್ ಗಿಲ್ ಭಾರತ ತಂಡಕ್ಕೆ ಕಾಲಿಟ್ಟ ಬಳಿಕ, ಧವನ್ ಅವರನ್ನು ಭಾರತೀಯ ಏಕದಿನ ತಂಡದಿಂದ ಹೊರಗಿಡಲಾಗಿದೆ. ರೋಹಿತ್‌ ಅನುಪಸ್ಥಿತಿಯಲ್ಲಿ ವೈಟ್ ಬಾಲ್ ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ಹೊರಹೊಮ್ಮಿದ್ದಾರೆ. ಹೀಗಾಗಿ 2023ರಲ್ಲೂ ಇಂತಹ ಸನ್ನಿವೇಶದಲ್ಲಿ ಹೆಚ್ಚೇನೂ ಬದಲಾವಣೆಯಾಗುವ ಸಾಧ್ಯತೆ ಇಲ್ಲ.

ತಾತ್ಕಾಲಿಕವಾಗಿ ಮಾತ್ರ ಭಾರತದ ಪರ ಆಡಿದದ ಧವನ್, ಕಳೆದ ವರ್ಷ ಕೇವಲ 34.40 ಸರಾಸರಿ ಮತ್ತು 74.21 ಸ್ಟ್ರೈಕ್ ರೇಟ್ ಸಾಧಿಸಿದ್ದಾರೆ. 2013ರಲ್ಲಿ ತಂಡಕ್ಕೆ ಪುನರಾಗಮನ ಮಾಡಿದ ನಂತರ ಧವನ್ ದಾಖಲಿಸಿದ ಕಡಿಮೆ ಸಂಖ್ಯೆಗಳು ಇದಾಗಿವೆ. ಈ ಬಗ್ಗೆ ಸುದ್ದಿಸಂಸ್ಥೆ ಪಿಟಿಐ ಜೊತೆಗೆ ಮಾತನಾಡಿದ ಧವನ್‌, ಏಕದಿನ ತಂಡದಿಂದ ತಮ್ಮನ್ನು ಹೊರಗಿಟ್ಟ ಬಗ್ಗೆ ಸುದೀರ್ಘವಾಗಿ ಮಾತನಾಡಿದರು.

“ಏರಿಳಿತಗಳು ಜೀವನದ ಒಂದು ಭಾಗವಾಗಿದೆ. ಕಾಲಾನಂತರದಲ್ಲಿ, ಅನುಭವದೊಂದಿಗೆ ಅವುಗಳನ್ನು ಸುಲಭವಾಗಿ ಹೇಗೆ ನಿರ್ವಹಿಸಬೇಕೆಂದು ಕಲಿಯುತ್ತೇವೆ. ನಾನು ಅದರಿಂದ ಸಾಕಷ್ಟು ಶಕ್ತಿಯನ್ನು ಪಡೆದಿದ್ದೇನೆ. ನಾನು ನನ್ನ ಕೈಲಾದಷ್ಟು ಮಾಡಿದ್ದೇನೆ. ಯಾರಾದರೂ ನನಗಿಂತ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಅದು ನನಗೆ ಸಂತೋಷವೇ” ಎಂದು ಧವನ್ ಹೇಳಿದ್ದಾರೆ.

ಭಾರತದ ಏಕದಿನ ತಂಡದಲ್ಲಿ ಯಶಸ್ವಿಯಾಗಿ ಧವನ್ ಸ್ಥಾನವನ್ನು ಪಡೆದಿರುವ ಇನ್-ಫಾರ್ಮ್ ಆಟಗಾರ ಗಿಲ್, ಈ ವರ್ಷ ವಿಶ್ವಕಪ್ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಆರಂಭಿಕ ಆಟಗಾರ ಗಿಲ್, ಟೀಮ್ ಇಂಡಿಯಾ ಪರ ತಮ್ಮ ಕೊನೆಯ ಏಳು ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಅಂತಾರಾಷ್ಟ್ರೀಯ ಶತಕಗಳನ್ನು ಸಿಡಿಸಿದ್ದಾರೆ.

ವಿಶ್ವಕಪ್ ವರ್ಷದಲ್ಲಿ ಧವನ್ ಭಾರತ ತಂಡದಿಂದ ಹೊರಗುಳಿದಿದ್ದರೂ, ಅನುಭವಿ ಬ್ಯಾಟರ್ ವೈಟ್-ಬಾಲ್ ತಂಡಕ್ಕೆ ಮರಳುವ ಆಶಾವಾದ ಹೊಂದಿದ್ದಾರೆ. “ನಾನು ಎಲ್ಲೇ ಇದ್ದರೂ ನಾನು ತುಂಬಾ ಸಂತೋಷ ಮತ್ತು ತೃಪ್ತಿ ಹೊಂದಿದ್ದೇನೆ. ಖಂಡಿತವಾಗಿಯೂ ನಾನು ತಂಡಕ್ಕೆ ಹಿಂತಿರುಗುವ ಅವಕಾಶ ಯಾವಾಗಲೂ ಇರುತ್ತದೆ. ಅದು ಒಳ್ಳೆಯದು. ಅದು ಬರದಿದ್ದರೆ ಅದು ಕೂಡ ಒಳ್ಳೆಯದು. ನಾನು ಬಹಳಷ್ಟು ಸಾಧಿಸಿದ್ದೇನೆ ಮತ್ತು ಅದರಲ್ಲಿ ನನಗೆ ಸಂತೋಷವಿದೆ. ನನ್ನ ಪಾಲಿಗೆ ಬರಬೇಕಾದ್ದು ಬರುತ್ತದೆ. ನಾನು ಅದರ ಬಗ್ಗೆ ಹತಾಶನಾಗುವುದಿಲ್ಲ,” ಎಂದು ಧವನ್ ಹೇಳಿದ್ದಾರೆ.

37ರ ಹರೆಯದ ಅವರು, ಟೀಂ ಇಂಡಿಯಾ ಪರ 34 ಟೆಸ್ಟ್, 167 ಏಕದಿನ ಮತ್ತು 68 ಟಿ20 ಪಂದ್ಯಗಳನ್ನು ಆಡಿದ್ದಾರೆ. 50 ಓವರ್‌ಗಳ ಮಾದರಿಯಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿರುವ ಭಾರತದ ಪರ ಧವನ್ 6,793 ರನ್‌ಗಳನ್ನು ಸಿಡಿಸಿದ್ದಾರೆ. ಹಿರಿಯ ಆರಂಭಿಕ ಆಟಗಾರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಮುನ್ನಡೆಸಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಮಾಜಿ ಆಟಗಾರ 206 ಐಪಿಎಲ್ ಪಂದ್ಯಗಳಲ್ಲಿ 6,243 ರನ್ ಗಳಿಸಿದ್ದಾರೆ.