ಕನ್ನಡ ಸುದ್ದಿ  /  ಕ್ರೀಡೆ  /  D Gukesh: ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಇತಿಹಾಸ ನಿರ್ಮಿಸಿದ ಡಿ ಗುಕೇಶ್; ಈ ಸಾಧನೆ ಮಾಡಿದ ವಿಶ್ವದ ಅತ್ಯಂತ ಕಿರಿಯ ಆಟಗಾರ

D Gukesh: ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಇತಿಹಾಸ ನಿರ್ಮಿಸಿದ ಡಿ ಗುಕೇಶ್; ಈ ಸಾಧನೆ ಮಾಡಿದ ವಿಶ್ವದ ಅತ್ಯಂತ ಕಿರಿಯ ಆಟಗಾರ

Dommaraju Gukesh: ಅಂತಿಮ ಸುತ್ತಿನಲ್ಲಿ ಅಮೆರಿಕದ ಹಿಕಾರು ನಕಮುರಾ ವಿರುದ್ಧ ಡ್ರಾ ಸಾಧಿಸಿದ ಡಿ ಗುಕೇಶ್‌, ಕ್ಯಾಂಡಿಡೇಟ್ಸ್ ಚೆಸ್‌ ಟೂರ್ನಿ ಗೆದ್ದಿದ್ದಾರೆ. ಮುಂದೆ ವಿಶ್ವ ಚೆಸ್ ಚಾಂಪಿಯನ್ ಆಗುವ ಹೆದ್ದಾರಿಯಲ್ಲಿರುವ ಅವರು ಚೀನಾದ ಡಿಂಗ್ ಲಿರೆನ್ ಅವರನ್ನು ಎದುರಿಸಲಿದ್ದಾರೆ

ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಇತಿಹಾಸ ನಿರ್ಮಿಸಿದ ಡಿ ಗುಕೇಶ್
ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಇತಿಹಾಸ ನಿರ್ಮಿಸಿದ ಡಿ ಗುಕೇಶ್ (PTI)

ಚೆನ್ನೈ ಮೂಲದ 17 ವರ್ಷದ ಚೆಸ್‌ ಆಟಗಾರ ದೊಮ್ಮರಾಜು ಗುಕೇಶ್ (Dommaraju Gukesh) ಇತಿಹಾಸ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಚೆಸ್ ಒಕ್ಕೂಟದ (FIDE) ಕ್ಯಾಂಡಿಡೇಟ್ಸ್ ಪಂದ್ಯಾವಳಿ ಗೆಲ್ಲುವ ಮೂಲಕ ವಿಶ್ವದ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಶಿಪ್ ಚಾಲೆಂಜರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹದಿಹರೆಯದಲ್ಲೇ ಜಾಗತಿಕ ಮಟ್ಟದಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಡಿ ಗುಕೇಶ್‌, ಪ್ರಜ್ಞಾನಂದನ ಸಾಧನೆ ನೆನಪಿಸಿದ್ದಾರೆ. ಚೆಸ್‌ ಆಡದ ಇತಿಹಾಸದಲ್ಲಿಯೇ ಈ ಪಂದ್ಯಾವಳಿ ಗೆದ್ದ ಮೊದಲ ಹದಿಹರೆಯದ ಆಟಗಾರ ಎನಿಸಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಅಂತಿಮ ಸುತ್ತಿನಲ್ಲಿ 9/14 ಅಂಕ ಗಳಿಸುವ ಮೂಲಕ ಗುಕೇಶ್‌ ಮೊದಲ ಸ್ಥಾನ ಪಡೆದರು. ಇದರೊಂದಿಗೆ ವಿಶ್ವನಾಥನ್ ಆನಂದ್ ಬಳಿಕ ಕ್ಯಾಂಡಿಡೇಟ್ಸ್ ಗೆದ್ದ ಎರಡನೇ ಭಾರತೀಯ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಮುಂದೆ ವಿಶ್ವ ಚೆಸ್ ಚಾಂಪಿಯನ್ ಆಗುವತ್ತ ಮಹತ್ವದ ಹೆಜ್ಜೆ ಇಟ್ಟಿರುವ ಗುಕೇಶ್‌, ಈ ವರ್ಷದ ಕೊನೆಯಲ್ಲಿ ಚೀನಾದ ಚೆಸ್‌ ಗ್ರಾಂಡ್‌ಮಾಸ್ಟರ್‌ ಡಿಂಗ್ ಲಿರೆನ್ ಅವರನ್ನು ಎದುರಿಸಲಿದ್ದಾರೆ.

ಡಿಂಗ್ ಲಿರೆನ್‌ ವಿರುದ್ಧ ಗೆದ್ದರೆ, ಗುಕೇಶ್ ಅವರು ಕಿರಿಯ ವಿಶ್ವ ಚಾಂಪಿಯನ್ ಆಗುವ ಅವಕಾಶ ಪಡೆಯುತ್ತಾರೆ. ಮ್ಯಾಗ್ನಸ್ ಕಾರ್ಲ್‌ಸೆನ್ ಮತ್ತು ಗ್ಯಾರಿ ಕಾಸ್ಪರೋವ್ ಅವರು ಈ ಹಿಂದೆ ತಮ್ಮ 22ನೇ ವರ್ಷ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು.

ಕಠಿಣ ಪೈಪೋಟಿ

ಕ್ಯಾಂಡಿಡೇಟ್‌ನ ಫೈನಲ್‌ ಸುತ್ತಿಗೆ ಪ್ರವೇಶಿಸಲು ಕಠಿಣ ಪೈಪೋಟಿ ಏರ್ಪಟ್ಟಿತ್ತು. ಬಲಿಷ್ಠ ಆಟಗಾರರಾದ ಫ್ಯಾಬಿಯಾನೊ ಕರುವಾನಾ, ಇಯಾನ್ ನೆಪೊಮ್ನಿಯಾಚ್ಚಿ ಮತ್ತು ಹಿಕಾರು ನಕಮುರಾ ಎಂಬ ಮೂವರು ಆಟಗಾರರು ಗೆಲ್ಲಲೇಬೇಕಾದ ಒತ್ತಡದಲ್ಲಿದ್ದರು. ಟೂರ್ನಿಯಲ್ಲಿ ಜಾಗತಿಕ ಆಕರ್ಷಣೆಯಾಗಿದ್ದ ಬಾಲಕ ಗುಕೇಶ್‌, ವಿಶ್ವದ 3ನೇ ಶ್ರೇಯಾಂಕದ ಅಮೆರಿಕದ ನಕಮುರಾ ವಿರುದ್ಧ ಡ್ರಾ ಸಾಧಿಸಬೇಕಿತ್ತು. ಇದೇ ವೇಳೆ ಕರುವಾನಾ ಮತ್ತು ನೆಪೊಮ್ನಿಯಾಚ್ಚಿ ನಡುವಿನ ಪಂದ್ಯ ಕೂಡಾ ಡ್ರಾ ಆಗಬೇಕಿತ್ತು. ಅದರಂತೆಯೇ ಈ ಎರಡೂ ಫಲಿತಾಂಶಗಳು ಗುಕೇಶ್‌ ಪರವಾಗಿ ಬಂದವು.

ಇದನ್ನೂ ಓದಿ | Chess Candidates 2024: ಚೆಸ್ ಚತುರ ಪ್ರಜ್ಞಾನಂದ ಮತ್ತು ವಿಧಿತಿ ಗುಜರಾತಿಗೆ ಸೋಲು, ಡ್ರಾ ಸಾಧಿಸಿದ ಡಿ ಗುಕೇಶ್

ಕಳೆದ ಮೂರು ವಾರಗಳಲ್ಲಿ ಚೆಸ್‌ ಟೂರ್ನಿಯಲ್ಲಿ ಆಡುತ್ತಿರುವ ಹದಿಹರೆಯದ ಆಟಗಾರ, ಅತ್ಯುತ್ತಮ ಆಟ ಪ್ರದರ್ಶಿಸಿದ್ದಾರೆ. ಯಾವುದೇ ಒತ್ತಡಕ್ಕೊಳಗಾಗದೆ, ತನ್ನ ವಯಸ್ಸನ್ನು ಮೀರಿ ಪ್ರಬುದ್ಧತೆ ತೋರಿಸಿದ್ದಾರೆ. ಶಾಂತವಾಗಿ ಮುನ್ನುಗಿದ್ದಾರೆ.