ಟೋಕಿಯೊ ಒಲಿಂಪಿಕ್ಸ್‌ನಲ್ಲಿ 1 ಚಿನ್ನ, 2 ಬೆಳ್ಳಿ, 4 ಕಂಚು ಗೆದ್ದಿದ್ದ ಭಾರತ; ಪದಕ ಪಟ್ಟಿಯಲ್ಲಿ ಎಷ್ಟನೇ ಸ್ಥಾನ ಪಡೆದಿತ್ತು?
India Tokyo 2020 Olympics medal winners: 2020ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಯಾವ ರೀತಿ ಪ್ರದರ್ಶನ ನೀಡಿದ್ದರು? ಭಾರತಕ್ಕೆ ಸಿಕ್ಕಿದ್ದ ಪದಕ ಎಷ್ಟು ಎಂಬುದರ ನೋಟ ಇಲ್ಲಿದೆ.
ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ (ಸಮ್ಮರ್) ಆರಂಭಕ್ಕೆ ಎರಡು ತಿಂಗಳಷ್ಟೇ ಬಾಕಿ ಉಳಿದಿದೆ. 2024ರ ಜುಲೈ 26 ರಿಂದ 2024ರ ಆಗಸ್ಟ್ 11 ವರೆಗೂ ಈ ಕ್ರೀಡಾಕೂಟ ನಡೆಯಲಿದೆ. ಫ್ರಾನ್ಸ್ನ ಪ್ಯಾರಿಸ್ನಲ್ಲಿ ನಡೆಯುವ ಈ ಒಲಿಂಪಿಕ್ನಲ್ಲಿ 32 ಕ್ರೀಡೆಗಳಲ್ಲಿ 329 ಈವೆಂಟ್ಗಳು ಜರುಗಲಿದ್ದು, ವಿವಿಧ ದೇಶಗಳಿಂದ 10,500 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಜಾರ್ಡಿನ್ಸ್ ಡು ಟ್ರೋಕಾಡೆರೊ ಮತ್ತು ಸೀನ್ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸ್ಟೇಡ್ ಡಿ ಫ್ರಾನ್ಸ್ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಭಾರತೀಯ ಕ್ರೀಡಾಪಟುಗಳು ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಪದಕಕ್ಕೆ ಮುತ್ತಿಕ್ಕಿ, ದೇಶದ ಹಿರಿಮೆ ಹೆಚ್ಚಿಸಲು ಸಾಕಷ್ಟು ಸಿದ್ಧತೆ ನಡೆಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸಿ ಪದಕಗಳ ಸಂಖ್ಯೆ ಹೆಚ್ಚಿಸಲು ಕಸರತ್ತು ನಡೆಸುತ್ತಿರುವ ಭಾರತೀಯರು, ಐತಿಹಾಸಿಕ ಸಾಧನೆ ಮಾಡಲು ಪಣತೊಟ್ಟಿದ್ದಾರೆ. ಅಲ್ಲದೆ, ಅಗ್ರ 10 ರೊಳಗೆ ಸ್ಥಾನ ಪಡೆಯಲು ಭಾರತ ಪಣತೊಟ್ಟಿದೆ. ಹಾಗಾದರೆ ಈ ಹಿಂದೆ 2020ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಯಾವ ರೀತಿ ಪ್ರದರ್ಶನ ನೀಡಿದ್ದರು? ಎಷ್ಟು ಪದಕ ಗೆದ್ದಿದ್ದರು ಎಂಬುದರ ವಿವರ ಇಲ್ಲಿದೆ.
1 ಚಿನ್ನ, 2 ಬೆಳ್ಳಿ, 4 ಕಂಚು ಗೆದ್ದಿದ್ದ ಭಾರತ
2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಒಟ್ಟು 7 ಪದಕಕ್ಕೆ ಮುತ್ತಿಕ್ಕಿತ್ತು. ಮೆಡಲ್ ಪಟ್ಟಿಯಲ್ಲಿ ಒಟ್ಟು 48ನೇ ಸ್ಥಾನದಲ್ಲಿತ್ತು. ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಗೆದ್ದು ಭಾರತ. ಈ ಬಾರಿ ಈ ಸಂಖ್ಯೆಯನ್ನು ವಿಸ್ತರಿಸಲು ಸನ್ನದ್ಧಗೊಂಡಿದೆ. ಪದಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಅಮೆರಿಕ 113 ಪದಕ ಗೆದ್ದಿತ್ತು. 39 ಚಿನ್ನ, 41 ಬೆಳ್ಳಿ, 33 ಕಂಚು ಪದಕ ಗೆದ್ದಿತ್ತು. ಚೀನಾ ಎರಡನೇ ಸ್ಥಾನದಲ್ಲಿತ್ತು. 38 ಚಿನ್ನ, 32 ಬೆಳ್ಳಿ, 18 ಕಂಚಿನ ಪದಕಗಳಿಗೆ ಮುತ್ತಿಕ್ಕಿತ್ತು. ಜಪಾನ್ 27 ಚಿನ್ನ, 14 ಬೆಳ್ಳಿ, 17 ಬೆಳ್ಳಿ ಪದಕಗಳೊಂದಿಗೆ 3ನೇ ಸ್ಥಾನ ಪಡೆದಿತ್ತು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಪ್ರದರ್ಶನ ಹೇಗಿತ್ತು?
ಮೀರಾಬಾಯಿ - ಬೆಳ್ಳಿ ಪದಕ: ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಬೆಳ್ಳಿಯೊಂದಿಗೆ ಭಾರತದ ಪದಕ ಖಾತೆ ತೆರೆದಿದ್ದರು. ಒಲಿಂಪಿಕ್ಸ್‌ನಲ್ಲಿ ಅವರ ಮೊದಲ ಪದಕವಾಗಿತ್ತು. ಸಿಡ್ನಿ 2000ರಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದ ನಂತರ ಇದು ಭಾರತದ 2ನೇ ವೇಟ್‌ಲಿಫ್ಟಿಂಗ್ ಒಲಿಂಪಿಕ್ ಪದಕವಾಗಿದೆ.
ಲವ್ಲಿನಾ ಬೊರ್ಗೊಹೈನ್ - ಕಂಚಿನ ಪದಕ: 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಲವ್ಲಿನಾ ಬೊರ್ಗೊಹೈನ್ ಮಹಿಳೆಯರ 69 ಕೆಜಿ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಟರ್ಕಿಯ ಬುಸೆನಾಜ್ ಸುರ್ಮೆನೆಲಿ ವಿರುದ್ಧ ಸೆಮಿಫೈನಲ್‌ನಲ್ಲಿ ಸೋತ ನಂತರ ಕಂಚಿನ ಪದಕ ಗೆದ್ದಿದ್ದರು. ಲವ್ಲಿನಾ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಚೈನೀಸ್ ತೈಪೆಯ ನಿಯೆನ್-ಚಿನ್ ಚೆನ್ ಅವರನ್ನು ಸೋಲಿಸಿ ಪದಕವನ್ನು ಖಚಿತಪಡಿಸಿಕೊಂಡಿದ್ದರು.
ಪಿವಿ ಸಿಂಧು - ಕಂಚಿನ ಪದಕ: ಬ್ಯಾಡ್ಮಿಂಟನ್ ರಾಣಿ ಪಿವಿ ಸಿಂಧು ಅವರು 2 ವೈಯಕ್ತಿಕ ಒಲಿಂಪಿಕ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಮತ್ತು ಎರಡನೇ ಭಾರತೀಯ ಅಥ್ಲೀಟ್ (ಸುಶೀಲ್ ಕುಮಾರ್ ನಂತರ) ಎನಿಸಿದ್ದಾರೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಸಿಂಧು ಚೀನಾದ ಹಿ ಬಿಂಗ್ ಜಿಯಾವೊ ಅವರನ್ನು 21-13, 21-15 ಸೆಟ್‌ಗಳಿಂದ ಸೋಲಿಸಿ ಕಂಚಿನ ಪದಕ ಗೆದ್ದಿದ್ದರು. ಇದು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸಿಕ್ಕ 3ನೇ ಪದಕವಾಗಿತ್ತು.
ರವಿ ಕುಮಾರ್ ದಹಿಯಾ - ಬೆಳ್ಳಿ ಪದಕ: 23 ವರ್ಷದ ರವಿ ಕುಮಾರ್ ದಹಿಯಾ ಪುರುಷರ 57 ಕೆಜಿ ಫ್ರೀಸ್ಟೈಲ್ ಕುಸ್ತಿಯ ಫೈನಲ್‌ನಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ಆರ್‌ಒಸಿಯ ಜಾವುರ್ ಉಗೆವ್ ವಿರುದ್ಧ ಸೋತರು. ಈ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದರು. ಇದು ಅವರ ಚೊಚ್ಚಲ ಒಲಿಂಪಿಕ್ಸ್ ಆಗಿತ್ತು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸುಶೀಲ್ ಕುಮಾರ್ ಕುಸ್ತಿಯಲ್ಲಿ ಮೊದಲ ಬೆಳ್ಳಿ ಪದಕ ಗೆದ್ದಿದ್ದರು.
ಭಾರತ ಪುರುಷರ ಹಾಕಿ ತಂಡ - ಕಂಚಿನ ಪದಕ: 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನಂತರ ಅಂದರೆ 41 ವರ್ಷಗಳ ಕಾಯುವಿಕೆಯ ಬಳಿಕ ಭಾರತೀಯ ಪುರುಷರ ಹಾಕಿ ತಂಡವು ಒಲಿಂಪಿಕ್ ಪದಕಕ್ಕೆ ಮುತ್ತಿಕ್ಕಿತು. ಒಂದು ಹಂತದಲ್ಲಿ 3-1 ರಿಂದ ಹಿನ್ನಡೆ ಸಾಧಿಸಿದ ಭಾರತ, ಜರ್ಮನಿಯನ್ನು 5-4 ಅಂತರದಿಂದ ಸೋಲಿಸಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು. ಇದು ಭಾರತಕ್ಕೆ ಸಿಕ್ಕ ಮೂರನೇ ಒಲಿಂಪಿಕ್ ಪದಕವಾಗಿದೆ.
ಬಜರಂಗ್ ಪುನಿಯಾ - ಕಂಚಿನ ಪದಕ: ಕುಸ್ತಿಪಟು ಬಜರಂಗ್ ಪುನಿಯಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ 3ನೇ ಭಾರತೀಯ ಚೊಚ್ಚಲ ಆಟಗಾರ ಎನಿಸಿದರು. 2 ಬಾರಿಯ ಏಷ್ಯನ್ ಚಾಂಪಿಯನ್ ಬಜರಂಗ್ ಪುನಿಯಾ ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿ ಪ್ಲೇಆಫ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತ ಕಜಕಿಸ್ತಾನದ ಡೌಲೆಟ್ ನಿಯಾಜ್ಬೆಕೊವ್ ಅವರನ್ನು ಸೋಲಿಸಿ ಕಂಚಿನ ಪದಕವನ್ನು ಪಡೆದರು. ಇದು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸಿಕ್ಕ ಆರನೇ ಪದಕವಾಗಿದೆ.
ನೀರಜ್ ಚೋಪ್ರಾ - ಚಿನ್ನದ ಪದಕ: ನೀರಜ್ ಚೋಪ್ರಾ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅಭಿನವ್ ಬಿಂದ್ರಾ ನಂತರ ಭಾರತದ ಎರಡನೇ ವೈಯಕ್ತಿಕ ಒಲಿಂಪಿಕ್ ಚಾಂಪಿಯನ್ ಆದರು. ಇದು ಯಾವುದೇ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಪದಕವಾಗಿದೆ. ನೀರಜ್ ಚೋಪ್ರಾ 87.58 ಮೀ ದೂರ ಎಸೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.