ಕನ್ನಡ ಸುದ್ದಿ  /  ಕ್ರೀಡೆ  /  Ian Botham: 'ಭಾರತದಲ್ಲಿ ಐಪಿಎಲ್ ಮಾತ್ರ, ಟೆಸ್ಟ್ ಕ್ರಿಕೆಟ್ ನೋಡುವವರೇ ಇಲ್ಲ; ಟೆಸ್ಟ್ ನಶಿಸಿದ್ರೆ ಕ್ರಿಕೆಟ್ ಅಂತ್ಯವಾದಂತೆ!'

Ian Botham: 'ಭಾರತದಲ್ಲಿ ಐಪಿಎಲ್ ಮಾತ್ರ, ಟೆಸ್ಟ್ ಕ್ರಿಕೆಟ್ ನೋಡುವವರೇ ಇಲ್ಲ; ಟೆಸ್ಟ್ ನಶಿಸಿದ್ರೆ ಕ್ರಿಕೆಟ್ ಅಂತ್ಯವಾದಂತೆ!'

ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್ ಇಯಾನ್ ಬೋಥಮ್, ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಬಗ್ಗೆ ಟೀಕಿಸಿದ್ದಾರೆ. ಆಟದ ಸುದೀರ್ಘ ಸ್ವರೂಪವಾದ ಟೆಸ್ಟ್‌ ಕ್ರಿಕೆಟ್‌ ಬಗ್ಗೆ ಮಾತನಾಡುತ್ತಾ, ಅವರು ಐಪಿಎಲ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಫೈಲ್ ಫೋಟೋ: ಸರ್ ಇಯಾನ್ ಬೋಥಮ್
ಫೈಲ್ ಫೋಟೋ: ಸರ್ ಇಯಾನ್ ಬೋಥಮ್ (REUTERS)

ಇಂಡಿಯನ್ ಪ್ರೀಮಿಯರ್ ಲೀಗ್(IPL) ವಿಶ್ವದ ಅತಿದೊಡ್ಡ ಫ್ರಾಂಚೈಸ್ ಆಧಾರಿತ ಕ್ರಿಕೆಟ್ ಪಂದ್ಯಾವಳಿಯಾಗಿದೆ. ಆರ್ಥಿಕವಾಗಿ ಮತ್ತು ದಿಗ್ಗಜ ಕ್ರಿಕೆಟಿಗರ ಪಾಲ್ಗೊಳ್ಳುವಿಕೆಯ ಮೂಲಕ ಇದು ಯಶಸ್ಸಿನ ಉತ್ತುಂಗಕ್ಕೇರಿದೆ. ಆದರೆ, ಐಪಿಎಲ್‌ ಆರಂಭವಾದ ಬಳಿಕ ಟೆಸ್ಟ್ ಕ್ರಿಕೆಟ್‌ನ ಜನಪ್ರಿಯತೆ ಕಡಿಮೆಯಾಗಿದೆ ಎಂದು ಕೆಲವು ಮಾಜಿ ಕ್ರಿಕೆಟಿಗರು ಆಗಾಗ ಹೇಳುತ್ತಾ ಬರುತ್ತಿದ್ದಾರೆ. ಇದೇ ಕಾರಣಕ್ಕೆ ಐಪಿಎಲ್‌ ಅನ್ನು ಟೀಕಿಸಿದ್ದಾರೆ.

ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್ ಇಯಾನ್ ಬೋಥಮ್ ಕೂಡಾ, ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಬಗ್ಗೆ ಟೀಕಿಸಿದ್ದಾರೆ. ಆಟದ ಸುದೀರ್ಘ ಸ್ವರೂಪವಾದ ಟೆಸ್ಟ್‌ ಕ್ರಿಕೆಟ್‌ ಬಗ್ಗೆ ಮಾತನಾಡುತ್ತಾ, ಅವರು ಐಪಿಎಲ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇಂಗ್ಲಿಷ್ ಮಾಧ್ಯಮ ಮಿರರ್ ಸ್ಪೋರ್ಟ್‌ಗೆ ನೀಡಿದ ಸಂದರ್ಶನದಲ್ಲಿ, ಭಾರತದಲ್ಲಿ ಟೆಸ್ಟ್‌ ಕ್ರಿಕೆಟ್‌ನ ಕ್ರೇಜ್ ಕಡಿಮೆಯಾಗುತ್ತಿದೆ ಮತ್ತು ದೇಶದಲ್ಲಿ ಐಪಿಎಲ್ ಮಾತ್ರ ಯಶಸ್ವಿಯಾಗಿದೆ ಎಂದು ಬೋಥಮ್ ಹೇಳಿದ್ದಾರೆ.

“ನಾವು ಇಂಗ್ಲೆಂಡ್‌ನವರು ಅದೃಷ್ಟವಂತರು. ನಮ್ಮಲ್ಲಿ ಟೆಸ್ಟ್‌ ಕ್ರಿಕೆಟ್‌ನ ಎಲ್ಲಾ ಟಿಕೆಟ್‌ಗಳು ಮಾರಾಟವಾಗುತ್ತವೆ. ಹೌದು, ಆಟದ ಮೊದಲ ನಾಲ್ಕು ದಿನಗಳಲ್ಲಿ ಕ್ರೀಡಾಂಗಣ ಭರ್ತಿಯಾಗಿರುತ್ತವೆ. ಜನರು ಟೆಸ್ಟ್‌ ಕ್ರಿಕೆಟನ್ನು ನೋಡುತ್ತಾರೆ. ಇಂಗ್ಲೆಂಡ್ ಕ್ರಿಕೆಟಿಗರು ಪ್ರಪಂಚದ ಬೇರೆಲ್ಲಿಯೂ ಅಂತಹ ಸಂದರ್ಭವನ್ನು ನೋಡುವುದಿಲ್ಲ. ಆಸ್ಟ್ರೇಲಿಯಾದಲ್ಲಿ ಇಂಗ್ಲೆಂಡ್ ಆಡುತ್ತಿದ್ದರೆ, ಬಹುಶಃ ಬಾಕ್ಸಿಂಗ್ ದಿನದಂದು 75ರಿಂದ 80,000 ಜನರು ಬರಬಹುದು. ಟೆಸ್ಟ್ ಕ್ರಿಕೆಟ್‌ನ ಹೆಚ್ಚಿನ ಮೈದಾನಗಳು ಒಂದು ಋತುವಿನಲ್ಲಿ ಅಷ್ಟು ಜನರನ್ನು ಪಡೆಯುವುದಿಲ್ಲ” ಎಂದು ಬೋಥಮ್ ಹೇಳಿದ್ದಾರೆ.

“ಆದರೆ ಭಾರತದಲ್ಲಿ ಜನರು ಟೆಸ್ಟ್ ಕ್ರಿಕೆಟ್ ವೀಕ್ಷಿಸುವುದಿಲ್ಲ. ಅಲ್ಲಿ ಏನೇ ಇದ್ದರೂ ಐಪಿಎಲ್. ಅದರಿಂದ ಅವರು ದೊಡ್ಡ ಮಟ್ಟದಲ್ಲಿ ಹಣ ಗಳಿಸುತ್ತಾರೆ. ಸದ್ಯಕ್ಕೆ ಇದೆಲ್ಲಾ ಅದ್ಭುತ ಎಂದೇ ಅನಿಸುತ್ತದೆ. ಆದರೆ, ಇವೆಲ್ಲಾ ಎಷ್ಟು ಕಾಲ ಉಳಿಯಲು ಸಾಧ್ಯ? ಟೆಸ್ಟ್ ಕ್ರಿಕೆಟ್ 100 ವರ್ಷಗಳಿಂದಲೂ ಇದೆ. ಒಂದು ವೇಳೆ ನಾವು ಟೆಸ್ಟ್ ಕ್ರಿಕೆಟ್ ನಶಿಸಿದರೆ, ನಮಗೆ ತಿಳಿದಿರುವಂತೆಯೇ ನಾವು ಕ್ರಿಕೆಟ್ ಅನ್ನೇ ಕಳೆದುಕೊಳ್ಳುತ್ತೇವೆ. ಅದು ಖಂಡಿತವಾಗಿಯೂ ಅರ್ಥಹೀನವಾಗುತ್ತದೆ. ಟೆಸ್ಟ್ ಪಂದ್ಯವನ್ನು ಆಡುವುದನ್ನು ಪ್ರತಿಯೊಬ್ಬ ಆಟಗಾರನು ಬಯಸಬೇಕು,” ಎಂದು ಆಲ್‌ರೌಂಡರ್ ಹೇಳಿದ್ದಾರೆ.

ಭಾರತವು ಫೆಬ್ರವರಿ 9ರಿಂದ ಆಸ್ಟ್ರೇಲಿಯಾವನ್ನು ನಾಲ್ಕು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಎದುರಿಸಲಿದೆ. ತಂಡವು ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ಈ ವರ್ಷದ ಜೂನ್‌ನಲ್ಲಿ ನಡೆಯುವ ಫೈನಲ್‌ನಲ್ಲಿ ಸ್ಥಾನ ಕಾಯ್ದಿರಿಸುವ ಗುರಿಯನ್ನು ಭಾರತ ಹೊಂದಿದೆ.

ಗಮನಿಸಬಹುದಾದ ಇತರೆ ಸುದ್ದಿಗಳು

Border-Gavaskar Trophy: ಏನಿದು ಬಾರ್ಡರ್‌ ಗವಾಸ್ಕರ್‌ ಟ್ರೋಫಿ? ಇತಿಹಾಸವೇನು? ಯಾವ ತಂಡ ಬಲಿಷ್ಠ? ಬೆರಳ ತುದಿಯಲ್ಲಿ ವಿವರ

ವಿಶ್ವದ ಎರಡು ಬಲಿಷ್ಠ ಕ್ರಿಕೆಟ್‌ ತಂಡಗಳಾದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಹುನಿರೀಕ್ಷಿತ ಟೆಸ್ಟ್‌ ಸರಣಿಗೆ ದಿನಗಣನೆ ಆರಂಭವಾಗಿದೆ. ಉಭಯ ತಂಡಗಳ ನಡುವೆ ನಡೆಯುತ್ತಿರುವುದು ಟೆಸ್ಟ್‌ ಸರಣಿಯಾದರೂ, ಇದು ಟಿ20 ಕದನದಷ್ಟು ರೋಚಕತೆ ಸೃಷ್ಟಿಸಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸ್ಥಾನ ಪಡೆಯಲಿರುವ ಪ್ರಮುಖ ತಂಡಗಳಾಗಿರುವ ಉಭಯ ತಂಡಗಳ ಕದನಕ್ಕೆ ವೇದಿಕೆ ಸಿದ್ಧವಾಗಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ