ಚೈತ್ರಾ ಜೆ ಆಚಾರ್ ಜತೆ ರೋಮ್ಯಾಂಟಿಕ್ ಡ್ಯಾನ್ಸ್ ಮಾಡಿದ ಕಿಶನ್ ಬಿಳಗಲಿ; ಕನ್ನಡದ ಆಲಿಯಾ ಭಟ್ ಅಂದ್ರು ಫ್ಯಾನ್ಸ್
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ನಟಿ ಚೈತ್ರಾ ಜೆ ಆಚಾರ್ ಇದೀಗ ಬಿಗ್‌ಬಾಸ್ ಮಾಜಿ ಸ್ಪರ್ಧಿ, ಡ್ಯಾನ್ಸರ್ ಕಿಶನ್ ಬಿಳಗಲಿ ಜತೆ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇವರಿಬ್ಬರ ಡ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬೆಂಗಳೂರು: ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಮೂಲಕ ಸಿನಿಪ್ರಿಯರನ್ನು ಗಮನ ಸೆಳೆದ ನಟಿ ಚೈತ್ರಾ ಜೆ ಆಚಾರ್ ಇದೀಗ ಬಿಗ್‌ಬಾಸ್ ಮಾಜಿ ಸ್ಪರ್ಧಿ, ಡ್ಯಾನ್ಸರ್ ಕಿಶನ್ ಬಿಳಗಲಿ ಜತೆ ರೊಮ್ಯಾಂಟಿಕ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದು, ಕೆಲವರು ಈಕೆ ಕನ್ನಡದ ಆಲಿಯಾ ಭಟ್‌ರಂತೆ ಕಾಣಿಸುತ್ತಿದ್ದಾರೆ ಎಂದಿದ್ದಾರೆ. ಅನಿಮಲ್ ಸಿನಿಮಾದ ಪಹ್ಲೆ ಬೀ ಮೇನ್ ಹಾಡಿಗೆ ಇವರಿಬ್ಬರು ಡ್ಯಾನ್ಸ್ ಮಾಡಿದ್ದಾರೆ.
ಹೇಗಿದೆ ಡ್ಯಾನ್ಸ್ ವಿಡಿಯೋ?
ಕಿಶನ್ ಬಿಳಗಲಿ ಅವರ ವಿಡಿಯೋ ಸಹಜವಾಗಿಯೇ ರೊಮ್ಯಾಂಟಿಕ್ ಆಗಿರುತ್ತದೆ. ಈ ಹಿಂದೆ ನಮ್ರತಾ ಗೌಡ ಸೇರಿದಂತೆ ಹಲವು ನಟಿಯರ ಜತೆ ಮಾದಕ ನೃತ್ಯ ಮಾಡಿದ್ದಾರೆ. ಸದ್ಯ ಚೈತ್ರಾ ಜೆ ಆಚಾರ್ ಜತೆಗಿನ ವಿಡಿಯೋ ಕೂಡ ನೆಕ್ಸ್ಟ್ ಲೆವೆಲ್‌ನಲ್ಲಿದೆ. ಪಾಗಲ್ ಪಾಗಲ್ ಹೇ ಎಂಬ ಹಾಡಿಗೆ ಇಬ್ಬರೂ ತನ್ಮಯರಾಗಿ ಡ್ಯಾನ್ಸ್ ಮಾಡಿದ್ದಾರೆ. ಚೈತ್ರಾ ಜೆ ಆಚಾರ್ ಈ ಡ್ಯಾನ್ಸ್ ವಿಡಿಯೋದ ಬಹುತೇಕ ಕಡೆ ಕಾಡಿಗೆ ಕಣ್ಣನ್ನು ಮುಚ್ಚಿಕೊಂಡೇ ನಟಿಸಿದ್ದಾರೆ.
ನೆಟ್ಟಿಗರ ಕಾಮೆಂಟ್ ಹೇಗಿದೆ?
ಕಿಶನ್ ಬಿಳಗಲಿ ವಿಡಿಯೋಗಳಿಗೆ ನೆಗೆಟಿವ್ ಮತ್ತು ಅಶ್ಲೀಲ ಕಾಮೆಂಟ್‌ಗಳನ್ನು ಹಾಕುವ ನೆಟ್ಟಿಗರಿಗೆ ಬರ ಇಲ್ಲ. ಇದೇ ಸಮಯದಲ್ಲಿ ಒಂದಿಷ್ಟು ಜನರು ಸಕಾರಾತ್ಮಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. "ನಾನು ಮೊದಲ ನೋಟಕ್ಕೆ ಇವರನ್ನು ಆಲಿಯಾ ಭಟ್ ಅಂದುಕೊಂಡೆ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಈಕೆ ಆಲಿಯಾ ಭಟ್‌ಗಿಂತ ಚೆನ್ನಾಗಿದ್ದಾಳೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. "ಇವರು ಕನ್ನಡದ ರವಿಚಂದ್ರನ್" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಇನ್ನೊಬ್ಬರು "ಇವರು ರವಿಚಂದ್ರನ್‌ನ ಎಕ್ಸ್‌ಟ್ರಾ ಪ್ರೊ ವರ್ಷನ್" ಎಂದು ಹೇಳಿದ್ದಾರೆ.
ಯುವ ಹಾಡಿಗೆ ಕಿಶನ್ ನೃತ್ಯ
ಇತ್ತೀಚೆಗೆ ಕಿಶನ್ ಬಿಳಗಲಿ ಮತ್ತು ನಮ್ರತಾ ಗೌಡ ಯುವ ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿದ್ದು ವೈರಲ್ ಆಗಿತ್ತು. ಏನೂ ಹೇಳಲಿ ನಾನು ಹೊಸತರ ಎಂಬ ಹಾಡಿಗೆ ಚಂದದ ಡ್ಯಾನ್ಸ್ ಮಾಡಿದ್ದರು. ನಮ್ರತಾ ಗೌಡ ಜತೆ ಕಿಶನ್ ಬಿಳಗಲಿ ಹಲವು ವಿಡಿಯೋಗಳಿಗೆ ಡ್ಯಾನ್ಸ್ ಮಾಡಿದ್ದಾರೆ. ಇತ್ತೀಚೆಗೆ "ಮಧ್ಯರಾತ್ರಿಲಿ ಹೈವೆ ರಸ್ತೇಲಿ" ಎಂಬ ಹಾಡಿಗೆ ಇವರಿಬ್ಬರು ಡ್ಯಾನ್ಸ್ ಮಾಡಿದ್ದರು. ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಶಾಂತಿಕ್ರಾಂತಿ ಸಿನಿಮಾದ ಹಾಡಿಗೆ ಇವರು ಸಖತ್ ಡ್ಯಾನ್ಸ್ ಮಾಡಿದ್ದರು. ಇದಾದ ಬಳಿಕ ಫೆಬ್ರವರಿ ಎರಡನೇ ವಾರದಲ್ಲಿ ಪರವಶನಾದೆನು ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಕಳೆದ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ಸಂಯುಕ್ತ ಹೆಗ್ಡೆ ಜತೆ ಕಿಶನ್ ಡ್ಯಾನ್ಸ್ ಮಾಡಿದ್ದರು. ನಟಿ ಸಂಯುಕ್ತ ಹೆಗ್ಡೆ ಜತೆ ಇವರು ಮಾಡಿರುವ ಮಾದಕ ನೃತ್ಯ ಸಾಕಷ್ಟು ವೈರಲ್ ಆಗಿತ್ತು.
ಬಿಗ್‌ಬಾಸ್ ಕನ್ನಡ ಸೀಸನ್ 7ರಲ್ಲಿ ಸ್ಪರ್ಧಿಸಿದ ಬಳಿಕ ಕಿಶನ್ ಬಿಳಗಲಿ ಹೆಚ್ಚು ಫೇಮಸ್. ಮೂಲತಃ ಚಿಕ್ಕಮಗಳೂರಿನವರಾದ ಇವರು ಅದ್ಭುತ ಡ್ಯಾನ್ಸರ್. ಕಿಶನ್ ಕನ್ನಡ ಮಾತ್ರವಲ್ಲದೆ ಹಿಂದಿ ಕಿರುತೆರೆಯಲ್ಲೂ ಫೇಮಸ್. 2018 ರ ಹಿಂದಿ ರಿಯಾಲಿಟಿ ಶೋ ಡ್ಯಾನ್ಸ್ ದಿವಾನಿ ಶೋ ಕಾರ್ಯಕ್ರಮದಲ್ಲಿ ಗೆಲುವು ಪಡೆದಿದ್ದರು. ಈಗ ಸೋಷಿಯಲ್ ಮೀಡಿಯಾದಲ್ಲಿ ತನ್ನ ಡ್ಯಾನ್ಸ್ ವಿಡಿಯೋಗಳ ಮೂಲಕ ಆಗಾಗ ಸುದ್ದಿಯಲ್ಲಿರುತ್ತಾರೆ.