ಕನ್ನಡ ಸುದ್ದಿ  /  ಕ್ರೀಡೆ  /  Asia Cup 2023: ಪಾಕ್‌ ಏಷ್ಯಾಕಪ್‌ ಆತಿಥ್ಯ ಕೈತಪ್ಪೋದು ಬಹುತೇಕ ಖಚಿತ; ವಿಶ್ವಕಪ್‌ಗೆ ಭಾರತಕ್ಕೆ ಬರಲ್ಲ ಎಂದು ಬೆದರಿಸಿದ ಪಿಸಿಬಿ

Asia cup 2023: ಪಾಕ್‌ ಏಷ್ಯಾಕಪ್‌ ಆತಿಥ್ಯ ಕೈತಪ್ಪೋದು ಬಹುತೇಕ ಖಚಿತ; ವಿಶ್ವಕಪ್‌ಗೆ ಭಾರತಕ್ಕೆ ಬರಲ್ಲ ಎಂದು ಬೆದರಿಸಿದ ಪಿಸಿಬಿ

ಪಾಕಿಸ್ತಾನದಿಂದ ಆತಿಥ್ಯದ ಹಕ್ಕುಗಳನ್ನು ಕಿತ್ತುಕೊಳ್ಳುವ ಎಸಿಸಿ ನಿರ್ಧಾರಕ್ಕೆ ಪಿಸಿಬಿ ಗರಂ ಆಗಿದೆ. ಹೀಗಾಗಿ ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್‌ನಿಂದ ಹಿಂದೆ ಸರಿಯುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿದೆ.

ಪಾಕ್‌ ಹಾಗೂ ಟೀಮ್‌ ಇಂಡಿಯಾ ನಾಯಕ
ಪಾಕ್‌ ಹಾಗೂ ಟೀಮ್‌ ಇಂಡಿಯಾ ನಾಯಕ (REUTERS)

ಈ ಬಾರಿಯ ಏಷ್ಯಾಕಪ್‌ ಆತಿಥ್ಯಕ್ಕೆ ತಟಸ್ಥ ಸ್ಥಳವನ್ನು ಘೋಷಿಸಲಾಗುವುದು ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ನಿರ್ಧರಿಸಿದ್ದು, ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವಾಸ್ತವದಲ್ಲಿ ಪಾಕಿಸ್ತಾನದಲ್ಲಿ ಟೂರ್ನಿ ಆಯೋಜನೆಗೊಳ್ಳಬೇಕಿತ್ತು. ಆದರೆ, ಭಾರತದ ವಿರೋಧದಿಂದಾಗಿ ಟೂರ್ನಿಯು ಯುಎಇಯಲ್ಲಿ ಆಯೋಜನೆಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಪಾಕಿಸ್ತಾನದಿಂದ ಆತಿಥ್ಯದ ಹಕ್ಕುಗಳನ್ನು ಕಿತ್ತುಕೊಳ್ಳುವ ಎಸಿಸಿ ನಿರ್ಧಾರಕ್ಕೆ ಪಿಸಿಬಿ ಗರಂ ಆಗಿದೆ. ಹೀಗಾಗಿ ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್‌ನಿಂದ ಹಿಂದೆ ಸರಿಯುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿದೆ.

ಏಷ್ಯಾಕಪ್ ಆತಿಥ್ಯಕ್ಕೆ ಹೊಸ ಸ್ಥಳವನ್ನು ಈ ವರ್ಷದ ಮಾರ್ಚ್‌ನಲ್ಲಿ ಅಂತಿಮಗೊಳಿಸಲಾಗುವುದು ಎಂದು ಎಸಿಸಿಯು ನಿನ್ನೆ(ಶನಿವಾರ) ನಿರ್ಧರಿಸಿದೆ. ಶನಿವಾರ ಬಹರೇನ್‌ನಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌(ACC)ನ ತುರ್ತು ಸಭೆ ನಡೆದಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮುಖ್ಯಸ್ಥ ನಜಮ್ ಸೇಥಿ ಸಭೆಯಲ್ಲಿ ಭಾಗವಹಿಸಿದ್ದರು. 2023ರ ಏಷ್ಯಾಕಪ್‌ಗೆ ಆತಿಥ್ಯ ವಹಿಸುವ ಕುರಿತು ಇಲ್ಲಿ ಚರ್ಚಿಸಲಾಗಿತ್ತು. ಆದರೆ, ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರಗಳಾಗಿಲ್ಲ. ಆತಿಥ್ಯದ ಕುರಿತು ಇನ್ನಷ್ಟೇ ಅಂತಿಮ ನಿರ್ಧಾರ ಹೊರಬೀಳಬೇಕಾಗಿದೆ.

ಮೂಲವೊಂದು ಸುದ್ದಿಸಂಸ್ಥೆ ಎಎನ್‌ಐಗೆ ನೀಡಿರುವ ಮಾಹಿತಿಯ ಪ್ರಕಾರ, “ಏಷ್ಯಾಕಪ್ ಅನ್ನು ಬೇರೆ ಯಾವುದಾದರೂ ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸಬಹುದು ಎಂಬ ಬಗ್ಗೆ ಮಾತನಾಡಲಾಗಿದೆ. ಆದರೆ, ಸಹಜವಾಗಿಯೇ ಈ ಆಲೋಚನೆಯಿಂದ ಪಿಸಿಬಿ ಅಸಮಾಧಾನಗೊಂಡಿದೆ. ಆತಿಥ್ಯದ ಅವಕಾಶ ಪಡೆಯುವ ಪಟ್ಟಿಯಲ್ಲಿ ಯುಎಇ ಹೆಸರು ಅಗ್ರಸ್ಥಾನದಲ್ಲಿದೆ. ಕಳೆದ ಬಾರಿಯೂ ಅರಬ್‌ ರಾಷ್ಟ್ರ ಈ ಟೂರ್ನಿಗೆ ಆತಿಥ್ಯ ವಹಿಸಿತ್ತು. ಒಂದು ವೇಳೆ ಪಾಕ್‌ನಿಂದ ಆತಿಥ್ಯದ ಹಕ್ಕನ್ನು ಕಿತ್ತುಕೊಂಡರೆ, ಇದೇ ವರ್ಷ ಭಾರತದಲ್ಲ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ ಪಾಕಿಸ್ತಾನವು ಪಾಕಿಸ್ತಾನವು ಭಾರತಕ್ಕೆ ಬರುವುದಿಲ್ಲ ಎಂದು ಪಾಕಿಸ್ತಾನ ಹೇಳಿದೆ” ಎಂಬ ಮಾಹಿತಿ ಲಭ್ಯವಾಗಿದೆ.

ಭದ್ರತಾ ಕಾರಣಗಳಿಂದಾಗಿ ಭಾರತವು ಏಷ್ಯಾಕಪ್‌ ಟೂರ್ನಿಯಲ್ಲಿ ಭಾಗಿಯಾಗಲು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ. ಹೀಗಾಗಿ ಪಂದ್ಯಾವಳಿಯನ್ನು ತಟಸ್ಥ ಸ್ಥಳದಲ್ಲಿ ನಡೆಸಲಾಗುವುದು ಎಂದು ಎಸಿಸಿ ಅಧ್ಯಕ್ಷ ಜಯ್ ಶಾ ಕಳೆದ ವರ್ಷವೇ ಬಹಿರಂಗಪಡಿಸಿದ್ದರು. ಎಸಿಸಿಯ ಕಾರ್ಯಕಾರಿ ಮಂಡಳಿ ಸದಸ್ಯರ ಎರಡನೇ ಸುತ್ತಿನ ಸಭೆಯಲ್ಲಿ ಹೊಸ ಸ್ಥಳವನ್ನು ನಿರ್ಧರಿಸಲಾಗುತ್ತದೆ. ಈ ಸಭೆಯನ್ನು ಮಾರ್ಚ್ ತಿಂಗಳಲ್ಲಿ ನಡೆಸಲಾಗುತ್ತದೆ.

ಕಳೆದ ವರ್ಷ ಏಷ್ಯಾಕಪ್‌ಗೆ ಯುಎಇ ಆತಿಥ್ಯ ವಹಿಸಿದ್ದು, ಇದೇ ರಾಷ್ಟ್ರ ಮತ್ತೆ ಆತಿಥ್ಯ ವಹಿಸುವ ಸಾಧ್ಯತೆ ಹೆಚ್ಚಿದೆ. ಮತ್ತೊಂದೆಡೆ ನೆರೆಯ ರಾಷ್ಟ್ರಗಳ ನಡುವಿನ ರಾಜಕೀಯ ಉದ್ವಿಗ್ನತೆಯ ನಡುವೆ ಪಂದ್ಯಾವಳಿಗೆ ಆತಿಥ್ಯ ವಹಿಸಲು ಕತಾರ್ ಕೂಡ ಆಸಕ್ತಿ ತೋರಿಸಿದೆ. ಇದು ಈಗಾಗಲೇ ಕೆಲವು ಕ್ರಿಕೆಟ್ ಪಂದ್ಯಾವಳಿಗಳು ಮತ್ತು ಫ್ರಾಂಚೈಸ್ ಆಧಾರಿತ ಕ್ರಿಕೆಟ್ ಲೀಗ್‌ಗಳನ್ನು ಆಯೋಜಿಸಿದೆ.

ಪಿಸಿಬಿಯ ಮಾಜಿ ಅಧ್ಯಕ್ಷ ರಮೀಜ್ ರಾಜಾ ಅವರ ಅವಧಿಯಲ್ಲಿ, ಭಾರತ ಹಾಗೂ ಪಾಕಿಸ್ತಾನದ ಎರಡು ಕ್ರಿಕೆಟ್‌ ಮಂಡಳಿಗಳ ನಡುವೆ ಮಾತುಕತೆ ನಡೆದಿತ್ತು. ಭದ್ರತೆಯ ಕಾರಣಕ್ಕೆ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದೆ. ಅಕ್ಟೋಬರ್‌ನಲ್ಲಿ ನಡೆದ ಬಿಸಿಸಿಐ ಸಭೆಯ ನಂತರ, ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ಸಾಧ್ಯವಿಲ್ಲ. ಹೀಗಾಗಿ, ಪಂದ್ಯಾವಳಿಯನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವುದಾಗಿ ಬಿಸಿಸಿಐ ಕಾರ್ಯದರ್ಶಿ ಶಾ ಘೋಷಣೆ ಮಾಡಿದ್ದರು. ಆ ಬಳಿಕ ಉಭಯ ರಾಷ್ಟ್ರಗಳ ನಡುವೆ ಗುದ್ದಾಟ ಆರಂಭವಾಗಿವೆ. ಇನ್ನೂ ಈ ಸಮಸ್ಯೆಗೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ.