ಕನ್ನಡ ಸುದ್ದಿ  /  Sports  /  Ravindra Jadeja Says He Feels Great To Wear India Jersey Again After 5 Months

Ravindra Jadeja: ಸುಮಾರು 5 ತಿಂಗಳ ಬಳಿಕ ಟೀಮ್‌ ಇಂಡಿಯಾ ಜೆರ್ಸಿ ತೊಡಲು ಸಂತಸವಾಗುತ್ತಿದೆ; ಖುಷಿ ಹಂಚಿಕೊಂಡ ಜಡ್ಡು

“ನಾನು ತುಂಬಾ ಉತ್ಸುಕನಾಗಿದ್ದೇನೆ. ಐದು ತಿಂಗಳಿಗೂ ಹೆಚ್ಚು ಸಮಯದ ನಂತರ ನಾನು ಟೀಮ್‌ ಇಂಡಿಯಾ ಜೆರ್ಸಿ ತೊಡುತ್ತಿದ್ದೇನೆ. ನನಗೆ ಮತ್ತೆ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಈ ಅವಧಿಯಲ್ಲಿ ಸಾಕಷ್ಟು ಏರಿಳಿತಗಳು ಸಂಭವಿಸಿದವು. ಏಕೆಂದರೆ 5 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರವಿರುವುದು ಸುಲಭವಲ್ಲ,” ಎಂದು ಸ್ಟಾರ್ ಅಲ್ ರೌಂಡರ್ ಹೇಳಿದ್ದಾರೆ.

ರವೀಂದ್ರ ಜಡೇಜಾ
ರವೀಂದ್ರ ಜಡೇಜಾ (BCCI)

ನಾಗ್ಪುರ (ಮಹಾರಾಷ್ಟ್ರ): ಭಾರತದ ಸ್ಟಾರ್ ಆಲ್‌ರೌಂಡರ್ ಹಾಗೂ ಐಸಿಸಿ ಟೆಸ್ಟ್‌ ಆಲ್‌ರಂಡರ್‌ ಶ್ರೇಯಾಂಕದಲ್ಲಿ ನಂಬರ್‌ ವನ್‌ ಸ್ಥಾನದಲ್ಲಿರುವ ರವೀಂದ್ರ ಜಡೇಜಾ, ಸುದೀರ್ಘ ಅವಧಿಯ ವಿಶ್ರಾಂತಿಯ ಬಳಿಕ ಮತ್ತೆ ಅಂತಾರಾಷ್ಟ್ರೀಯ ತಂಡಕ್ಕೆ ಮರಳಲು ಸಿದ್ಧರಾಗಿದ್ದಾರೆ. ಬರೋಬ್ಬರಿ 5 ತಿಂಗಳ ನಂತರ ಭಾರತ ತಂಡದ ಜೆರ್ಸಿ ಧರಿಸಲು ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಒಂದು ವೇಳೆ ತಮ್ಮ ಮೊಣಕಾಲಿನ ಶಸ್ತ್ರಚಿಕಿತ್ಸೆಯನ್ನು ಮುಂದೂಡಿದ್ದರೂ, 2022ರ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಅವಕಾಶ ಮಾತ್ರ ತುಂಬಾ ಕಡಿಮೆಯಿತ್ತು ಎಂದು ಹೇಳಿದ್ದಾರೆ.

ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ನಡೆದ ಏಷ್ಯಾಕಪ್‌ ಸಮಯದಲ್ಲಿ, ಜಡೇಜಾ ತಮ್ಮ ಬಲ ಮೊಣಕಾಲಿನಲ್ಲಿ ಸಮಸ್ಯೆ ಅನುಭವಿಸಿದರು. ಹೀಗಾಗಿ ಅವರು ಪಂದ್ಯಾವಳಿಯಿಂದ ಹೊರಗುಳಿದರು. ಗಾಯದಿಂದಾಗಿ ಅವರು ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನಿಂದಲೂ ಹೊರಬಿದ್ದರು. ಅಲ್ಲಿ ಭಾರತವು ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಹತ್ತು ವಿಕೆಟ್‌ಗಳ ಅಂತರದಿಂದ ಸೋತು ಹೊರಬಿದ್ದಿತು. ಆ ಬಳಿಕ ಡಿಸೆಂಬರ್‌ನಲ್ಲಿ ನಡೆದ ಬಾಂಗ್ಲಾದೇಶ ಪ್ರವಾಸದಲ್ಲೂ ಜಡೇಜಾ ಪಾಲ್ಗೊಂಡಿಲ್ಲ.

34 ವರ್ಷದ ಆಲ್‌ರೌಂಡರ್, ತಮ್ಮ ವೈದ್ಯರು ಟಿ20 ವಿಶ್ವಕಪ್‌ಗೆ ಮೊದಲು ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಸೂಚಿಸಿದ್ದರು ಎಂದು ಹೇಳಿದ್ದಾರೆ.

“ನಾನು ಭಾರತ ತಂಡಕ್ಕೆ ಮರಳಿ, ತಂಡದಲ್ಲಿ ಆಡಲು ಕಾತುರದಿಂದ ಕಾಯುತ್ತಿದ್ದೆ. ನಾನು ಕೆಲವು ಸಮಯದಿಂದ ನನ್ನ ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದೆ. ಹೀಗಾಗಿ ದಿಢೀರ್‌ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ನಾನು ತ್ವರಿತವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕೇ ಅಥವಾ ವಿಶ್ವಕಪ್‌ ನಂತರ ಮಾಡಿಸಬೇಕೆ ಎಂಬ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು. ವೈದ್ಯರು ಸರ್ಜರಿ ಮಾಡಿಸಿಕೊಳ್ಳದಿದ್ದರೆ ವಿಶ್ವಕಪ್‌ನಲ್ಲಿ ಆಡುವ ಸಾಧ್ಯತೆ ಕಡಿಮೆ ಎಂದು ಹೇಳಿದರು. ಹೀಗಾಗಿ ವಿಶ್ವಕಪ್‌ಗೂ ಮುನ್ನ ಅದನ್ನು ಮಾಡುವಂತೆ ಸಲಹೆ ನೀಡಿದ್ದರು. ಅದರಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗುವುದಾಗಿ ನಿರ್ಧರಿಸಿದೆ” ಎಂದು ಜಡೇಜಾ ಹೇಳಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ.

ಫೆಬ್ರವರಿ 9ರಿಂದ ನಾಗ್ಪುರದಲ್ಲಿ ಪ್ರಾರಂಭವಾಗುವ ನಾಲ್ಕು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲಾರ್ಧಕ್ಕೆ 17 ಮಂದಿಯ ಟೆಸ್ಟ್ ತಂಡಕ್ಕೆ ಜಡೇಜಾರನ್ನು ಆಯ್ಕೆಗಾರರು ಹೆಸರಿಸಿದ್ದಾರೆ. ಸರಣಿಯ ಎರಡನೇ ಟೆಸ್ಟ್ ದೆಹಲಿಯಲ್ಲಿ ನಡೆಯಲಿದ್ದು, ನಂತರ ಅಂತಿಮ ಎರಡು ಟೆಸ್ಟ್ ಪಂದ್ಯಗಳು ಕ್ರಮವಾಗಿ ಧರ್ಮಶಾಲಾ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿವೆ. ಜಡೇಜಾ ಅವರು ಆಡುವ ಬಳಗದಲ್ಲಿ ಸ್ಥಾನ ಪಡೆಯುವುದು ಅವರ ಫಿಟ್‌ನೆಸ್‌ ಮೇಲೆ ಅವಲಂಬಿಸಿದೆ ಎಂದು ಬಿಸಿಸಿಐ ತಿಳಿಸಿದೆ.

“ನಾನು ತುಂಬಾ ಉತ್ಸುಕನಾಗಿದ್ದೇನೆ. ಐದು ತಿಂಗಳಿಗೂ ಹೆಚ್ಚು ಸಮಯದ ನಂತರ ನಾನು ಟೀಮ್‌ ಇಂಡಿಯಾ ಜೆರ್ಸಿ ತೊಡುತ್ತಿದ್ದೇನೆ. ನನಗೆ ಮತ್ತೆ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಈ ಅವಧಿಯಲ್ಲಿ ಸಾಕಷ್ಟು ಏರಿಳಿತಗಳು ಸಂಭವಿಸಿದವು. ಏಕೆಂದರೆ 5 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರವಿರುವುದು ಸುಲಭವಲ್ಲ,” ಎಂದು ಸ್ಟಾರ್ ಅಲ್ ರೌಂಡರ್ ಹೇಳಿದ್ದಾರೆ.

“ಎನ್‌ಸಿಎಯಲ್ಲಿ ಫಿಸಿಯೋ ಮತ್ತು ತರಬೇತುದಾರರು ನನ್ನ ಮೊಣಕಾಲಿನ ವಿಚಾರವಾಗಿ ತುಂಬಾ ಶ್ರಮಿಸಿದರು. ಅವರ ಭಾನುವಾರ ರಜೆಯಂದು ಕೂಡಾ ನನಗಾಗಿ ಸಮಯ ನೀಡಿದರು. ಈಗ ನಾನು ಎಲ್ಲರೊಂದಿಗೆ ತಯಾರಿ ನಡೆಸುತ್ತಿದ್ದೇನೆ. ಇಲ್ಲಿಂದ ಮುಂದೆ ಏನಾಗುತ್ತದೆಯೋ ಗೊತ್ತಿಲ್ಲ. ಎಲ್ಲಾ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ” ಎಂದು ಅವರು ಹೇಳಿದರು.

ಏರಿಳಿತಗಳ ನಡುವೆಯೂ ಮತ್ತೆ ಟೀಂ ಇಂಡಿಯಾ ಪರ ಆಡಬಹುದೆಂದು ಕಾಯುತ್ತಿದ್ದೇನೆ ಎಂದು ಜಡೇಜಾ ಹೇಳಿದ್ದಾರೆ. ಶಸ್ತ್ರಚಿಕಿತ್ಸೆ ಮತ್ತು ಪುನರ್ವಸತಿ ಸಮಯದಲ್ಲಿ ತನ್ನ ಮನಸ್ಸಿನಲ್ಲಿ ವಿಭಿನ್ನ ಆಲೋಚನೆಗಳು ಬರುತ್ತಿದ್ದವು ಎಂದಿದ್ದಾರೆ.

“ನಾನು ಟಿವಿಯಲ್ಲಿ ವಿಶ್ವಕಪ್ ನೋಡುತ್ತಿದ್ದಾಗ, ನಾನು ಅಲ್ಲಿಯೇ ಇದ್ದೇನೆ ಎಂದು ನಾನು ಯೋಚಿಸುತ್ತಿದ್ದೆ. ಈ ಸಣ್ಣ ವಿಷಯಗಳು ಸಹ ಫಿಟ್ ಭೇಗನೆ ಫಿಟ್‌ ಆಗಲು ನಿಮ್ಮನ್ನು ಪ್ರೇರೇಪಿಸುತ್ತವೆ,” ಎಂದು ಅವರು ಹೇಳಿದರು.