ಕನ್ನಡ ಸುದ್ದಿ  /  Sports  /  Rcb Announce Smriti Mandhana As Captain For Wpl

Smriti Mandhana RCB captain: ಆರ್‌ಸಿಬಿ ವನಿತೆಯರ ತಂಡಕ್ಕೆ ಸ್ಮೃತಿ ಮಂಧನಾ ನಾಯಕಿ; ವಿರಾಟ್‌, ಫಾಫ್‌ರಿಂದ ವಿಶೇಷ ವಿಡಿಯೋ ಸಂದೇಶ

ಕ್ರಿಕೆಟ್‌ ಲೀಗ್‌ಗಳಲ್ಲಿ ಜಗತ್ತಿನ ಅತ್ಯಂತ ಜನಪ್ರಿಯ ತಂಡವಾದ ಆರ್‌ಸಿಬಿಯ ವನಿತೆಯರ ತಂಡದ ನಾಯಕಿಯ ಗೌರವಕ್ಕೆ ಸ್ಮೃತಿ ಪತ್ರರಾಗಿದ್ದಾರೆ. ನಾಯಕತ್ವ ಜವಾಬ್ದಾರಿ ನೀಡಲು ತಮ್ಮನ್ನು ನಂಬಿದ್ದಕ್ಕಾಗಿ RCB ತಂಡದ ಮ್ಯಾನೇಜ್‌ಮೆಂಟ್‌ಗೆ ಸ್ಮೃತಿ ಧನ್ಯವಾದ ಹೇಳಿದ್ದಾರೆ.

ವಿರಾಟ್ ಕೊಹ್ಲಿ, ಸ್ಮೃತಿ ಮಂಧಾನ
ವಿರಾಟ್ ಕೊಹ್ಲಿ, ಸ್ಮೃತಿ ಮಂಧಾನ (RCB)

ವಿಮೆನ್ಸ್‌ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ಫ್ರಾಂಚೈಸಿಯು ಸ್ಮೃತಿ ಮಂಧನ(Smriti Mandhana) ಅವರನ್ನು ನಾಯಕಿಯಾಗಿ ಘೋಷಿಸಿದೆ. ಬೆಂಗಳೂರು ಫ್ರಾಂಚೈಸಿಯು ಇಂದು(ಶನಿವಾರ) ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ವಿಶೇಷ ಬೆಳವಣಿಗೆಯ ಬಗ್ಗೆ ದೃಢಪಡಿಸಿದೆ.

ಆರ್‌ಸಿಬಿ(RCB) ನಾಯಕ ಫಾಫ್ ಡು ಪ್ಲೆಸಿಸ್(Faf du Plessis) ಮತ್ತು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ(Virat Kohli)ಯನ್ನು ಒಳಗೊಂಡಿರುವ ವಿಡಿಯೋ ಸಂದೇಶವನ್ನು ಆರ್‌ಸಿಬಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ಇದರೊಂದಿಗೆ ಮಹತ್ವದ ಪ್ರಕಟಣೆಯನ್ನು ನೀಡಿದೆ.

“ನಮ್ಮ ಪ್ಲೇ ಬೋಲ್ಡ್ ತತ್ವ ಮತ್ತು ಕ್ರಿಕೆಟ್ ಆಟಗಳಿಗೆ ಸ್ಮೃತಿ ಒಪ್ಪುವ ಆಟಗಾರ್ತಿ. ನಾವು ಅವರಿಗೆ ನಾಯಕತ್ವದ ಪಾತ್ರವನ್ನು ನೀಡಿದ್ದೇವೆ. ಅವರು ಆರ್‌ಸಿಬಿಯನ್ನು ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಾರೆ ಎಂಬ ವಿಶ್ವಾಸವಿದೆ,” ಎಂದು ಆರ್‌ಸಿಬಿ ಫ್ರಾಂಚೈಸಿ ಅಧ್ಯಕ್ಷ ಪ್ರಥಮೇಶ್ ಮಿಶ್ರಾ ಹೇಳಿಕೆಯನ್ನು ಆರ್‌ಸಿಬಿ ಉಲ್ಲೇಖಿಸಿದೆ.

“ವಿಮೆನ್ಸ್‌ ಪ್ರೀಮಿಯರ್ ಲೀಗ್‌ನಲ್ಲಿ ತುಂಬಾ ವಿಶೇಷವಾದ ಆರ್‌ಸಿಬಿ ತಂಡವನ್ನು ಮತ್ತೊಂದು ಜೆರ್ಸಿ 18 ಸಂಖ್ಯೆ ಮುನ್ನಡೆಸುವ ಸಮಯ. ಹೌದು, ನಾವು ಸ್ಮೃತಿ ಮಂಧನ ಬಗ್ಗೆ ಮಾತನಾಡುತ್ತಿದ್ದೇವೆ. ಚೆನ್ನಾಗಿ ನಾಯಕತ್ವ ನಿಭಾಯಿಸಿ ಸ್ಮೃತಿ. ನಿಮಗೆ ಅತ್ಯುತ್ತಮ ತಂಡ ಮತ್ತು ವಿಶ್ವದ ಅತ್ಯುತ್ತಮ ಅಭಿಮಾನಿಗಳ ಬೆಂಬಲವಿದೆ" ಎಂದು ವಿರಾಟ್ ಕೊಹ್ಲಿ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

ಇದೇ ವೇಳೆ ಆರ್‌ಸಿಬಿ ಪುರುಷರ ತಂಡದ ನಾಯಕ ಫಾಫ್ ಡು ಪ್ಲೆಸಿಸ್, “ನಮ್ಮ ಮಹಿಳಾ ನಾಯಕಿ ಆರ್‌ಸಿಬಿ ತಂಡವನ್ನು ಮುನ್ನಡೆಸುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದಾರೆ ಎಂದು ನನಗೆ ತುಂಬಾ ವಿಶ್ವಾಸವಿದೆ. ಆಲ್ ದಿ ವೆರಿ ಬೆಸ್ಟ್, ಸ್ಮೃತಿ ಮಂಧನ. ನಿಮ್ಮನ್ನು ಮೈದಾನದಲ್ಲಿ ನೋಡೋಣ” ಎಂದು ಅವರು ಹೇಳಿದ್ದಾರೆ.

ಕ್ರಿಕೆಟ್‌ ಲೀಗ್‌ಗಳಲ್ಲಿ ಜಗತ್ತಿನ ಅತ್ಯಂತ ಜನಪ್ರಿಯ ತಂಡವಾದ ಆರ್‌ಸಿಬಿಯ ವನಿತೆಯರ ತಂಡದ ನಾಯಕಿಯ ಗೌರವಕ್ಕೆ ಸ್ಮೃತಿ ಪತ್ರರಾಗಿದ್ದಾರೆ. ನಾಯಕತ್ವ ಜವಾಬ್ದಾರಿ ನೀಡಲು ತಮ್ಮನ್ನು ನಂಬಿದ್ದಕ್ಕಾಗಿ RCB ತಂಡದ ಮ್ಯಾನೇಜ್‌ಮೆಂಟ್‌ಗೆ ಸ್ಮೃತಿ ಧನ್ಯವಾದ ಹೇಳಿದ್ದಾರೆ.

"ನನಗೆ ಈ ಅದ್ಭುತ ಅವಕಾಶವನ್ನು ನೀಡಿದ RCB ಮ್ಯಾನೇಜ್‌ಮೆಂಟ್‌ಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ವಿಶ್ವದ ಅತ್ಯುತ್ತಮ ಅಭಿಮಾನಿಗಳಿಂದ ಪ್ರೀತಿ ಮತ್ತು ಬೆಂಬಲವನ್ನು ಸ್ವೀಕರಿಸಲು ನಾನು ಎದುರು ನೋಡುತ್ತಿದ್ದೇನೆ. ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿಯನ್ನು ಯಶಸ್ಸಿನತ್ತ ಮುನ್ನಡೆಸಲು ನನ್ನಿಂದ ಸಾಧ್ಯವಾಗುವ ಶೇಕಡ 100ರಷ್ಟು ಪ್ರಯತ್ನವನ್ನು ಮಾಡುವ ಭರವಸೆಯನ್ನು ನಾನು ನೀಡುತ್ತೇನೆ" ಎಂದು ಎಡಗೈ ಆರಂಭಿಕ ಆಟಗಾರ್ತಿ ಹೇಳಿದ್ದಾರೆ.

ಪ್ರಸ್ತುತ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿರುವ ಭಾರತೀಯ ಮಹಿಳಾ ತಂಡದ ಉಪನಾಯಕಿಯಾಗಿರುವ ಮಂಧನಾ ಅವರು, ಈ ಹಿಂದೆ 11 ಸಂದರ್ಭಗಳಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಮಂಧನ ತಂಡದ ನಾಯಕತ್ವ ವಹಿಸಿದ್ದ ಕೊನೆಯ 5 ಪಂದ್ಯಗಳಲ್ಲಿ ಭಾರತ ಗೆದ್ದಿದೆ.

ಫೆಬ್ರವರಿ 13ರಂದು ನಡೆದ ಮೊದಲ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಎಡಗೈ ಓಪನರ್ ಅತ್ಯಂತ ದುಬಾರಿ ಮೊತ್ತಕ್ಕೆ ಆರ್‌ಸಿಬಿ ಪಾಲಾಗಿದ್ದಾರೆ. RCB ಮತ್ತು ಮುಂಬೈ ಇಂಡಿಯನ್ಸ್ ನಡುವಿನ ತೀವ್ರವಾದ ಬಿಡ್ಡಿಂಗ್ ವಾರ್‌ ಬಳಿಕ, ಅಂತಿಮವಾಗಿ ಅವರು 3.6 ಕೋಟಿ ರೂಪಾಯಿ ಗಳಿಸಿದ್ದಾರೆ.