KL ರಾಹುಲ್ ವೈಫಲ್ಯ; ಆತನೇನು ಬೀದಿ ಬದಿ ಕ್ರಿಕೆಟಿಗನಲ್ಲ; ಅಳಿಯನಿಗೆ ಮಾವ ಸುನಿಲ್ ಶೆಟ್ಟಿ ಬೆಂಬಲ
Sunil Shetty: ಸತತ ವೈಫಲ್ಯ ಅನುಭವಿಸುತ್ತಿರುವ ಕೆ.ಎಲ್.ರಾಹುಲ್ ಅವರ ಬೆಂಬಲಕ್ಕೆ ಹೆಣ್ಣುಕೊಟ್ಟ ಮಾವ ಸುನಿಲ್ ಶೆಟ್ಟಿ ಬೆಂಬಲ ನೀಡಿದ್ದಾರೆ. ಅವರೇನು ಬೀದಿ ಬದಿ ಆಡುವ ಕ್ರಿಕೆಟಿಗನಲ್ಲ. ಪ್ರೋಫೆಷನಲ್ ಕ್ರಿಕೆಟರ್. ಆತನಿಗೆ ಗೊತ್ತು. ವೈಫಲ್ಯದಿಂದ ಹೊರ ಬರುವುದೇಗೆ ಎಂದು ನಟ ಹೇಳಿದ್ದಾರೆ.
KL ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್, 16ನೇ ಆವೃತ್ತಿಯ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದೆ. ಸದ್ಯ ಆಡಿರುವ 3 ಪಂದ್ಯಗಳಲ್ಲಿ 2ರಲ್ಲಿ ಜಯಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ನಾಯಕ ರಾಹುಲ್ ಉತ್ತಮ ಪ್ರದರ್ಶನ ತೋರಿದರು. ಹಾಗಂತ ನೆನಪು ಇಟ್ಟುಕೊಳ್ಳುವಂತಹ ಇನ್ನಿಂಗ್ಸ್ ಏನಲ್ಲಾ. ಅದಕ್ಕೂ ಹಿಂದಿನ ಪಂದ್ಯಗಳಲ್ಲಿ ತೋರಿದ್ದು ಕಳಪೆ ಪ್ರದರ್ಶನ. ಐಪಿಎಲ್ಗೂ ಮುನ್ನ ಇದ್ದದ್ದು ಕೂಡ ಕಳಪೆ ಫಾರ್ಮ್ನಲ್ಲೇ.
ರಾಹುಲ್ ಅವರ ಕಳಪೆಯಾಟ ಸಾಕಷ್ಟು ಟೀಕೆಗೆ ಕಾರಣವಾಗಿದೆ. ಭಾರತ ತಂಡದಲ್ಲಿ ಅವಕಾಶಗಳ ಮೇಲೆ ಅವಕಾಶ ನೀಡಲಾಯಿತು. ಬೇಕಾದಷ್ಟು ಬೆಂಬಲ ಟೀಮ್ ಮ್ಯಾನೇಜ್ಮೆಂಟ್ನಿಂದ ಸಿಕ್ಕಿತು. ಆದರೆ ಆರಂಭಿಕ ಆಟಗಾರ ಮಾಡಿದ್ದು, ನಿರಾಸೆ.! ಟೀಮ್ನಿಂದ ಕಿತ್ತು ಹಾಕುವಂತೆ ಟೀಕೆ ಎದುರಾದ ಬೆನ್ನಲ್ಲೇ ಉಪನಾಯಕನ ಪಟ್ಟ ಕಿತ್ತುಕೊಳ್ಳಲಾಯಿತು. ಬಳಿಕ ತಂಡದಿಂದಲೂ ಸ್ಥಾನ ಕಳೆದುಕೊಂಡರು.
ಟೀಮ್ ಇಂಡಿಯಾದಲ್ಲಿ ಸ್ಥಾನ ಉಳಿಸಿಕೊಳ್ಳುವ ಸವಾಲು ರಾಹುಲ್ ಮುಂದಿದೆ. ಹಾಗಾಗಿ ಪ್ರಸ್ತುತ ಐಪಿಎಲ್ನಲ್ಲಿ ಕಣಕ್ಕಿಳಿದಿರುವ ರಾಹುಲ್ ಅಬ್ಬರಿಸಿ ಸ್ಥಾನ ಭದ್ರ ಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಇಲ್ಲೂ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಮತ್ತೆ ಟೀಕೆ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಅಳಿಯ ಕೆ.ಎಲ್ ರಾಹುಲ್ ಅವರ ಬೆಂಬಲಕ್ಕೆ ಹೆಣ್ಣುಕೊಟ್ಟ ಮಾವ ಸುನಿಲ್ ಶೆಟ್ಟಿ ನಿಂತಿದ್ದಾರೆ. ರಾಹುಲ್ ವೈಫಲ್ಯ ಅನುಭವಿಸಿದಾಗ, ತಾವು ಏನು ಮಾಡುತ್ತೇವೆ ಎಂಬುದನ್ನು ವಿವರಿಸಿದ್ದಾರೆ.
ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂದರ್ಶನದಲ್ಲಿ ಸುನಿಲ್ ಶೆಟ್ಟಿ, ಕೆಎಲ್ ರಾಹುಲ್ ಬಗ್ಗೆ ಮಾತನಾಡಿದ್ದಾರೆ. ರಾಹುಲ್ ಅವರಂತಹ ಕ್ರಿಕೆಟಿಗರಿಗೆ ನಾನು ಕ್ರಿಕೆಟ್ ಕಲಿಸಲು ಸಾಧ್ಯವೇ? ಪ್ರೋಫೆಷನಲ್ ಕ್ರಿಕೆಟಿಗ. ರಾಷ್ಟ್ರೀಯ ತಂಡದಲ್ಲಿ ಸಾಮರ್ಥ್ಯ ನಿರೂಪಿಸಿದ ಆಟಗಾರ. ರಾಹುಲ್ ಗಳಿಸಲು ಸಾಧ್ಯವಾಗದಿದ್ದಾಗ, ಅವರ ಆಟದ ವೈಫಲ್ಯದ ಬಗ್ಗೆ ಮಾತನಾಡುವುದಿಲ್ಲ ಎಂದು ಸುನಿಲ್ ಶೆಟ್ಟಿ ಹೇಳಿದ್ದಾರೆ.
ಅವರೊಬ್ಬ ಹುಟ್ಟು ಹೋರಾಟಗಾರ ಎಂಬುದು ನಮಗೆಲ್ಲರಿಗೂ ಗೊತ್ತು. ಆಟದ ಬಗ್ಗೆ ಮಾತನಾಡದೆ ನಾವು ಅವರಿಗೆ ಹೆಚ್ಚಿನ ಪ್ರೀತಿಯನ್ನು ತೋರಿಸುತ್ತೇವೆ. ಅವರ ಕಳಪೆ ಪ್ರದರ್ಶನದ ಆಟ ಗಮನ ಸೆಳೆಯದಂತೆ ನೋಡಿಕೊಳ್ಳುತ್ತೇವೆ. ಕ್ರಿಕೆಟ್ ಹೊರತುಪಡಿಸಿ ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತೇವೆ. ರಾಹುಲ್ ಈಗಾಗಲೇ ದೇಶವನ್ನು ಪ್ರತಿನಿಧಿಸಿದ ಆಟಗಾರ. ಅಂತಹ ಆಟಗಾರನಿಗೆ ನಾವು ಕ್ರಿಕೆಟ್ ಕಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಆತನೇನು ಬೀದಿ ಬದಿ ಆಡುವ ಕ್ರಿಕೆಟಿಗನಲ್ಲ. ವೃತ್ತಿಪರ ಕ್ರಿಕೆಟಿಗ. ಆತನಿಗೆ ಗೊತ್ತು. ವೈಫಲ್ಯದಿಂದ ಹೊರ ಬರುವುದೇಗೆ. ಅಂತಹ ಆಟಗಾರನಿಗೆ ಬೀದಿಯಲ್ಲಿ ಕ್ರಿಕೆಟ್ ಆಡುವವನಿಗೆ ಹೇಳುವಂತೆ ಹೇಳಲು ಸಾಧ್ಯವೇ? ಅದು ಅಸಾಧ್ಯ. ಆತನ ಸಾಮರ್ಥ್ಯ ಆತನಿಗೆ ಗೊತ್ತು. ಕಷ್ಟಪಡುತ್ತಿದ್ದಾರೆ ಎಂದು ನಾನು ಹೇಳಬಲ್ಲೆ. ಆದರೆ, ಆತನ ಸಾಮರ್ಥ್ಯ ಕುಸಿದಿದೆ ಎಂದು ಹೇಳಲು ಆಗಲ್ಲ ಎಂದು 62 ವರ್ಷದ ನಟ ಹೇಳಿದ್ದಾರೆ. ನಾನು ಅವನೊಂದಿಗೆ ಇನ್ನೇನು ಮಾತನಾಡಬಹುದು? ಅವರ ಬ್ಯಾಟ್‌ಗೆ ವಿಶ್ರಾಂತಿ ನೀಡುವಂತೆ ನಾನು ಅವರನ್ನು ಪ್ರೋತ್ಸಾಹಿಸುತ್ತೇನೆ ಎಂದರು. ಜನವರಿ 23ರಂದು ಸುನಿಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಅವರನ್ನು ರಾಹುಲ್ ವರಿಸಿದ್ದರು.
ಇಂದಿನ ಪ್ರಮುಖ ಕ್ರೀಡಾ ಸುದ್ದಿ
RCB ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದ ಸುಯಶ್ ಶರ್ಮಾ ಈಗ ಜಗತ್ತಿನ ಗಮನ ಸೆಳೆದಿದ್ದಾರೆ. 4 ಓವರ್ಗಳಲ್ಲಿ 30 ರನ್ ನೀಡಿ ಪ್ರಮುಖ 3 ವಿಕೆಟ್ ಉರುಳಿಸಿದರು. ಆದರೆ, 19 ವರ್ಷದ ಯುವ ಲೆಗ್ ಸ್ಪಿನ್ನರ್ ಸುಯೇಶ್ ಅವರು ಜೀವನದಲ್ಲಿ ಪಟ್ಟ ಕಷ್ಟ ನೋವು ಅಷ್ಟಿಷ್ಟಲ್ಲ. ಸ್ಪರ್ಧಾತ್ಮಕ ಕ್ರಿಕೆಟ್ ಆಡದ ಈತ ಬೆಳೆದು ಬಂದಿದ್ದೇ ರೋಚಕ. ಇದರ ಸಂಪೂರ್ಣ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.