Suyash Sharma: ಕ್ಯಾನ್ಸರ್ನಿಂದ ತಂದೆ, ಕೊರೊನಾದಿಂದ ಕೋಚ್ ನಿಧನ; ನಗು ಮುಖದವನ ಹಿಂದಿದೆ ಕರಾಳ ನೋವು
- RCB ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದ ಸುಯಶ್ ಶರ್ಮಾ ಈಗ ಜಗತ್ತಿನ ಗಮನ ಸೆಳೆದಿದ್ದಾರೆ. 4 ಓವರ್ಗಳಲ್ಲಿ 30 ರನ್ ನೀಡಿ ಪ್ರಮುಖ 3 ವಿಕೆಟ್ ಉರುಳಿಸಿದರು. ಆದರೆ, 19 ವರ್ಷದ ಯುವ ಲೆಗ್ ಸ್ಪಿನ್ನರ್ ಸುಯೇಶ್ ಅವರು ಜೀವನದಲ್ಲಿ ಪಟ್ಟ ಕಷ್ಟ ನೋವು ಅಷ್ಟಿಷ್ಟಲ್ಲ. ಸ್ಪರ್ಧಾತ್ಮಕ ಕ್ರಿಕೆಟ್ ಆಡದ ಈತ ಬೆಳೆದು ಬಂದಿದ್ದೇ ರೋಚಕ.
- RCB ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದ ಸುಯಶ್ ಶರ್ಮಾ ಈಗ ಜಗತ್ತಿನ ಗಮನ ಸೆಳೆದಿದ್ದಾರೆ. 4 ಓವರ್ಗಳಲ್ಲಿ 30 ರನ್ ನೀಡಿ ಪ್ರಮುಖ 3 ವಿಕೆಟ್ ಉರುಳಿಸಿದರು. ಆದರೆ, 19 ವರ್ಷದ ಯುವ ಲೆಗ್ ಸ್ಪಿನ್ನರ್ ಸುಯೇಶ್ ಅವರು ಜೀವನದಲ್ಲಿ ಪಟ್ಟ ಕಷ್ಟ ನೋವು ಅಷ್ಟಿಷ್ಟಲ್ಲ. ಸ್ಪರ್ಧಾತ್ಮಕ ಕ್ರಿಕೆಟ್ ಆಡದ ಈತ ಬೆಳೆದು ಬಂದಿದ್ದೇ ರೋಚಕ.
(1 / 7)
ಸುಯೇಶ್ ಶರ್ಮಾಗೆ 19 ವರ್ಷ. ಜನಿಸಿದ್ದು ಮೇ 15, 2003 ರಂದು. ದೆಹಲಿಯ ನಿವಾಸಿ. ಲೆಗ್ ಸ್ಪಿನ್ ಬೌಲಿಂಗ್ ಜೊತೆಗೆ ಬಲಗೈ ಬ್ಯಾಟ್ಸ್‌ಮನ್. ಬಾಲ್ಯದಿಂದಲೂ ಇದೆ ಅವರಿಗೆ ಕ್ರಿಕೆಟ್ ಮೇಲಿನ ಪ್ರೀತಿ. ಆದರೆ ಕ್ರಿಕೆಟ್ ಜಗತ್ತಿಗೆ ತನ್ನ ತಾನು ಪರಿಚಯ ಮಾಡಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಯಾವಾಗಲೂ ನಗುಮೊಗದಲ್ಲೇ ಕಾಣುವ ಸುಯೇಶ್, ಸವೆಸಿರುವುದು ಕಲ್ಲು ಮುಳ್ಳಿನ ಹಾದಿ. ಕಳೆದಿರುವುದು ಕತ್ತಲೆಯ ದಿನಗಳನ್ನು.
(2 / 7)
ಸಾವು-ಬದುಕಿನ ನಡುವೆ ರೋಚಕ ಹೋರಾಟ ನಡೆಸಿದ ಸುಯೇಶ್, ಕ್ರಿಕೆಟ್ ಜಗತ್ತಿಗೆ ಪರಿಚಯ ಆಗಿದ್ದೇ ರೋಚಕ. ಬಿಸಿಸಿಐ ಆಯೋಜನೆಯ ಯಾವುದೇ ಟೂರ್ನಿಯಲ್ಲೂ ಈವರೆಗೂ ಆಡಿಲ್ಲ. ಫಸ್ಟ್ಕ್ಲಾಸ್, ಲೀಸ್ಟ್ ಎ ಪಂದ್ಯ, ಅಥವಾ ದೆಹಲಿಗಾಗಿ BCCI ಆಯೋಜಿಸಿದ ಯಾವುದೇ T20 ಪಂದ್ಯವನ್ನೂ ಆಡಿಲ್ಲ. ಸುಯಶ್‌ಗೆ ಅಂಡರ್-25 ಹಂತದಲ್ಲಿ ಕ್ಲಬ್ ಕ್ರಿಕೆಟ್ ಆಡಿದ ಅನುಭವ ಬಿಟ್ಟರೆ, ಸ್ಪರ್ಧಾತ್ಮಕ ಕ್ರಿಕೆಟ್ ಆಡಿದ ಅನುಭವವೇ ಇಲ್ಲ. ಈಗ 20 ಲಕ್ಷ ಪಡೆದು ಕೆಕೆಆರ್ ಪರ ಆಡುತ್ತಿದ್ದಾರೆ. ಈತ ಅತ್ಯಂತ ಬಡ ಕುಂಟುಂಬದಿಂದ ಬಂದ ಹುಡುಗ.
(3 / 7)
ಒಪ್ಪೊತ್ತಿನ ಊಟಕ್ಕೂ ಪರದಾಡಿದ ದಿನಗಳು ಆತನ ಕಣ್ಮುಂದೆ ಹಾದು ಹೋಗಿವೆ. ಆದಾಯದ ಮೂಲವೇ ಇಲ್ಲದಿದ್ದ ಕಾರಣ ಹಣಕಾಸಿನ ಅಭಾವ ಎದ್ದು ಕಾಡುತ್ತಿತ್ತು. ಇದರೆಲ್ಲ ಜೊತೆಗೆ ಸುಯೇಶ್ ಅವರ ತಂದೆ ಮಾರಕ ಕ್ಯಾನ್ಸರ್ನಿಂದ ನಿಧನ. ಈ ನೋವಿನಲ್ಲೂ ಪ್ರತಿಭಾವಂತ ಕ್ರಿಕೆಟಿಗನ ಕ್ರಿಕೆಟ್ ಕನಸು ಕಮರಲಿಲ್ಲ. ಪ್ರತಿಭೆ ಇದ್ದರೂ ಅವಕಾಶ ಅವಕಾಶ ಹುಡುಕಿಕೊಂಡು ಬರಲಿಲ್ಲ. ಪ್ರತಿ ಹಂತದಲ್ಲೂ ಅಗ್ನಿಪರೀಕ್ಷೆ ಎದುರಿಸಿದರು. ಇದು ಸತ್ವ ಪರೀಕ್ಷೆಯೂ ಆಗಿತ್ತು.
(4 / 7)
ತಂದೆಯ ನಿಧನದ ಆಘಾತದ ಬೆನ್ನಲ್ಲೇ ಕೊರೊನಾ ಕಾರಣದಿಂದ ಅವರ ಕೋಚ್ ಕೊನೆಯುಸಿರೆಳೆದರು. ಕೋವಿಡ್‌ನ 2ನೇ ತರಂಗದ ಸಮಯದಲ್ಲಿ ಕೋಚ್ ಸುರೇಶ್ ಬಾತ್ರಾ ನಿಧನರಾದರು. ಜೀವ ಕೊಟ್ಟ, ಜೀವನ ಕಟ್ಟಿಕೊಡುತ್ತಿದ್ದ ತಂದೆ ಮತ್ತು ಮಾರ್ಗದರ್ಶಕನ ನಿಧನದ ನಡುವೆಯೂ ಕಠಿಣ ಶ್ರಮ ನಿಲ್ಲಿಸಲಿಲ್ಲ. ಛಲದೊಂದಿಗೆ ನೋವಿನ ಜೊತೆ ಹೋರಾಟ ನಡೆಸಿದರು.
(5 / 7)
KKR ಪರ ಆಡುವ ಮೊದಲು ಸುಯಶ್, ಕಾಣಿಸಿಕೊಂಡಿದ್ದು ಡೆಲ್ಲಿ ಅಂಡರ್-25 ತಂಡದಲ್ಲಿ. ಪ್ರತಿಭೆ ಇದ್ದರೂ ದೆಹಲಿಯ ಹಿರಿಯರ ತಂಡದಲ್ಲಿ ಅವಕಾಶ ಎಂಬುದು ಮರೀಚಿಕೆಯಾಗಿತ್ತು. ಆದರೆ ಅಂತಹ ಆಟಗಾರರನ್ನು ಮೊದಲು ಗುರುತಿಸಿದ್ದು, ಕೆಕೆಆರ್ ತಂಡದ ಮುಖ್ಯಕೋಚ್ ಚಂದ್ರಕಾಂತ್ ಪಂಡಿತ್. ಅದಕ್ಕೂ ಮುನ್ನ ಸುಯಶ್ ದೇನಾ ಬ್ಯಾಂಕ್ ಪರ ಆಡಿದ್ದರು. ದೆಹಲಿಯ ಮದ್ರಾಸ್ ಕ್ಲಬ್‌ಗಾಗಿಯೂ ಆಡಿದ್ದರು. ವೀರೇಂದ್ರ ಸೆಹ್ವಾಗ್ ಮತ್ತು ಯುಜ್ವೇಂದ್ರ ಚಹಾಲ್ ಅವರಂತಹ ಕ್ರಿಕೆಟಿಗರು ಮದ್ರಾಸ್ ಕ್ಲಬ್‌ಗಾಗಿ ಈ ಹಿಂದೆ ಆಡಿದ್ದಾರೆ.
(6 / 7)
ಆದರೆ, ದೆಹಲಿಯ ವಿವಿಧ ಕ್ಲಬ್‌ಗಳೊಂದಿಗೆ ಅಧಿಕೃತ ಒಪ್ಪಂದ ಹೊಂದಿರಲಿಲ್ಲ. ಹಾಗಾಗಿ ಸುಯಶ್‌ಗೆ ಹೆಚ್ಚು ಹಣ ಸಿಗಲಿಲ್ಲ. ದೆಹಲಿಯ 25 ವರ್ಷದೊಳಗಿನವರ ತಂಡದಲ್ಲಿ ಆಡುವಾಗ ಸ್ವಾಶ್ ಅಥವಾ ರಾಜಸ್ಥಾನ ಕ್ರಿಕೆಟಿಗ ಎಂಬ ಚರ್ಚೆ ನಡೆಯುತ್ತಿತ್ತು. ಆ ಸಮಸ್ಯೆಯಿಂದ ಹೊರಬರಲು ಹೋರಾಟ ಮಾಡಬೇಕಾಯಿತು. ಅದರ ನಂತರ, ಐಪಿಎಲ್‌ನಲ್ಲಿ ಅವರ ಅದೃಷ್ಟ ಬದಲಾಯಿತು.
(7 / 7)
IPL ಆರಂಭಕ್ಕೂ ಮುನ್ನವೇ ಸುಯಶ್ ಶರ್ಮಾ ಕೆಕೆಆರ್ ಅಭ್ಯಾಸದಲ್ಲಿ ಗಮನ ಸೆಳೆದಿದ್ದರು. ಮತ್ತು ಈ ಮಿಸ್ಟ್ರಿ ಸ್ಪಿನ್ನರ್ RCB ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ಎಲ್ಲರನ್ನೂ ಆಕರ್ಷಿಸಿದರು. ಕೆಕೆಆರ್ ಕ್ಯಾಂಪ್‌ನಲ್ಲಿ ಭೇಟಿಯಾಗುವವರೆಗೂ ನಾಯಕ ನಿತೀಶ್ ರಾಣಾ ಅವರಿಗೆ ಸುಯಶ್ ಅವರ ಬಗ್ಗೆ ಏನೂ ತಿಳಿದಿರಲಿಲ್ಲ. ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡದಿದ್ದರೂ, ದೊಡ್ಡ ವೇದಿಕೆಯಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬ ಒತ್ತಡ ಒತ್ತು. ಆದರೆ ಸುಯಶ್‌ಗೆ ಇದೊಂದು ಕನಸಿನ ಪದಾರ್ಪಣೆ. ಬ್ಯಾಟ್ಸ್‌ಮನ್ ಆಗಿದ್ದವ ಈಗ ಸ್ಪಿನ್ನರ್ ಆಗಿದ್ದಾನೆ. ಮುಂದಿನ ಪಂದ್ಯಗಳಲ್ಲೂ ಹೀಗೆಯೇ ಮಿಂಚಲಿ, ರಾಷ್ಟ್ರೀಯ ತಂಡದಲ್ಲೂ ಸ್ಥಾನ ಪಡೆಯಲಿ ಎಂಬುದು ನಮ್ಮೆಲ್ಲರ ಆಶಯ.
ಇತರ ಗ್ಯಾಲರಿಗಳು