ಕನ್ನಡ ಸುದ್ದಿ  /  Sports  /  Suresh Raina Predicts Next Csk Captain In Ipl After Ms Dhoni

Suresh Raina on CSK captain: 'ನಿಮ್ಮ ನಾಯಕತ್ವಕ್ಕೆ ಶುಭವಾಗಲಿ ಬ್ರದರ್'; ಧೋನಿ ನಂತರ ಸಿಎಸ್‌ಕೆ ನಾಯಕ ಯಾರೆಂದು ತಿಳಿಸಿದ ರೈನಾ

"ರುತು, ನಿಮ್ಮ ನಾಯಕತ್ವಕ್ಕೆ ಶುಭವಾಗಲಿ, ಸಹೋದರ," ಎಂದು ರೈನಾ ಹೇಳಿದ್ದಾರೆ.

ಧೋನಿ-ರೈನಾ
ಧೋನಿ-ರೈನಾ

ಇಂಡಿಯನ್ ಪ್ರೀಮಿಯರ್ ಲೀಗ್‌ನ 2023ರ ಆವೃತ್ತಿಯು ಮಾರ್ಚ್ 31ರಂದು ಆರಂಭವಾಗಲಿದೆ. ಅಹಮದಾಬಾದ್‌ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ. ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಹಲವಾರು ಸಿಎಸ್‌ಕೆ ಆಟಗಾರರು ಈಗಾಗಲೇ ಚೆನ್ನೈನಲ್ಲಿ ಆಯೋಜಿಸಲಾದ ತಂಡದ ಶಿಬಿರದಲ್ಲಿ ಹೊಸ ಸೀಸನ್‌ಗಾಗಿ ಸಿದ್ಧತೆ ಪ್ರಾರಂಭಿಸಿದ್ದಾರೆ.

ಇಂಗ್ಲೆಂಡ್‌ನ ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್‌ ಖರೀದಿಗೆ ತೀವ್ರ ಬಿಡ್ಡಿಂಗ್ ನಡೆಸಿದ ಸೂಪರ್ ಕಿಂಗ್ಸ್, ಹರಾಜಿನ ಬಳಿಕ ತಂಡವನ್ನು ಮತ್ತಷ್ಟು ಬಲಪಡಿಸಿಕೊಂಡಿತು. ಹೀಗಾಗಿ ಇವರು ಸಿಎಸ್‌ಕೆ ತಂಡದ ಮುಂದಿನ ನಾಯಕನಾಗಲಿದ್ದಾರೆ ಎಂದು ವ್ಯಾಪಕವಾಗಿ ಹೇಳಲಾಗುತ್ತಿದೆ. ಧೋನಿ ಈ ವರ್ಷ ಕೊನೆಯ ಐಪಿಎಲ್‌ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಧೋನಿ ನಂತರ ಸಿಎಸ್‌ಕೆ ತಂಡದ ಮುಂದಿನ ನಾಯಕ ಯಾರು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ಫ್ರಾಂಚೈಸಿಯ ಮಾಜಿ ಕ್ರಿಕೆಟಿಗ ಮತ್ತು ತಂಡದ ಸಾರ್ವಕಾಲಿಕ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾದ ಸುರೇಶ್ ರೈನಾ, ವಿಕೆಟ್‌ ಕೀಪರ್ ಹಾಗೂ ಬ್ಯಾಟರ್ ಧೋನಿ ಲೀಗ್‌ನಿಂದ ನಿವೃತ್ತಿಯಾಗಲು ನಿರ್ಧರಿಸಿದ ನಂತರ ಅವರಿಂದ ನಾಯಕತ್ವ ಪಡೆಯುವ ಮುಂದಿನ ಆಟಗಾರ ಯಾರು ಎಂಬುದನ್ನು ಬಹಿರಗಪಡಿಸಿದ್ದಾರೆ. ಅಚ್ಚರಿಯ ಆಯ್ಕೆ ತಿಳಿಸಿರುವ ರೈನಾ, ಅದು ರುತುರಾಜ್ ಗಾಯಕ್ವಾಡ್ ಆಗಿರಬಹುದು ಎಂದು ತಿಳಿಸಿದ್ದಾರೆ. ಗಾಯಕ್ವಾಡ್ ಅವರು 2020ರ ಪಂದ್ಯಾವಳಿಯಲ್ಲಿ ಸಿಎಸ್‌ಕೆ ತಂಡಕ್ಕೆ ಪದಾರ್ಪಣೆ ಮಾಡಿದರು. ಅದಾದ ಒಂದು ವರ್ಷದ ನಂತರ ಅವರು ಆರೆಂಜ್ ಕ್ಯಾಪ್ ಗೆದ್ದು ಸಂಭ್ರಮಿಸಿದರು.

2021ರ ಐಪಿಎಲ್‌ ಆವೃತ್ತಿಯಲ್ಲಿ ಗಾಯಕ್ವಾಡ್ 16 ಪಂದ್ಯಗಳಲ್ಲಿ 635 ರನ್ ಗಳಿಸಿದರು. 136.26ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅವರು, ಪಂದ್ಯಾವಳಿಯಲ್ಲಿ ಮೊದಲ ಶತಕವನ್ನು ಸಹ ಸಿಡಿಸಿದರು. ಅಲ್ಲದೆ ನಾಲ್ಕು ಅರ್ಧ ಶತಕಗಳನ್ನು ಬಾರಿಸಿದ್ದರು.

“ರುತುರಾಜ್ ಗಾಯಕ್ವಾಡ್ ಅವರನ್ನು ನಾಯಕನಾಗಿ ಬೆಳೆಸಬೇಕೆಂದು ನಾನು ಬಯಸುತ್ತೇನೆ. ಮಾಹಿ ಭಾಯಿಗೆ ಒಳ್ಳೆಯ ಜ್ಞಾನ ಇದೆ. ಅವರು ತಂಡದ ಹುಡುಗರ ನೆರವಿಗೆ ಬರುತ್ತಾರೆ. ನಾನು ರುತುರಾಜ್ ಗಾಯಕ್ವಾಡ್ ಮುಂದಿನ ನಾಯಕನಾಗಬೇಕೆಂದು ಹೇಳುತ್ತೇನೆ. ಅವರು ನಿಜವಾಗಿಯೂ ಚೆನ್ನಾಗಿ ಆಡಿದ್ದಾರೆ. ಹೀಗಾಗಿ ಅವರು ದೇಶಕ್ಕಾಗಿ ಮತ್ತು ಸಿಎಸ್‌ಕೆಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ನಾನು ಬಯಸುತ್ತೇನೆ,” ಎಂದು ರೈನಾ ಜಿಯೋ ಸಿನಿಮಾ ಜೊತೆ ಮಾತನಾಡಿದ್ದಾರೆ. ಧೋನಿ ನಂತರ ಯಾರು ನಾಯಕರಾಗಬೇಕು ಎಂದು ಕೇಳಿದಾಗ ಅವರು ಈ ರೀತಿ ಉತ್ತರಿಸಿದ್ದಾರೆ.

"ರುತು, ನಿಮ್ಮ ನಾಯಕತ್ವಕ್ಕೆ ಶುಭವಾಗಲಿ, ಸಹೋದರ," ಎಂದು ರೈನಾ ಹೇಳಿದ್ದಾರೆ.

ಸಿಎಸ್‌ಕೆ ತಂಡವು ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ನಿರಾಶಾದಾಯಕವಾಗಿ ಆಡಿದ ಅವರು, ಅಂಕಪಟ್ಟಿಯಲ್ಲಿ 9ನೇ ಸ್ಥಾನ ಗಳಿಸಿದರು. ತಂಡವು ಆಡಿದ 14 ಪಂದ್ಯಗಳಲ್ಲಿ ನಾಲ್ಕನ್ನು ಮಾತ್ರ ಗೆದ್ದಿತ್ತು. ಹೀಗಾಗಿ ಈ ವರ್ಷ ತಮ್ಮ ಹಿಂದಿನ ಋತುವಿನಿಂದ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದೆ.