ಕನ್ನಡ ಸುದ್ದಿ  /  Sports  /  Why Narendra Modi Stadium Of Ahmedabad Is In Guinness Book Of World Records

Narendra Modi Stadium: ಅಹಮದಾಬಾದ್ ಸ್ಟೇಡಿಯಂ ವಿಶ್ವದ ಅತಿ ದೊಡ್ಡ ಕ್ರೀಡಾಂಗಣವೇ? ಗಿನ್ನೆಸ್ ಪುಸ್ತಕದಲ್ಲಿ ಇದರ ಹೆಸರು ಯಾಕಿದೆ?

ಹಲವಾರು ರೀತಿಯಲ್ಲಿ ಈ ಕ್ರೀಡಾಂಗಣವು ವಿಶೇಷ. ಈಗಾಗಲೇ ಗಿನ್ನೆಸ್‌ ಪುಸ್ತಕದಲ್ಲಿ ಈ ಕ್ರೀಡಾಂಗಣದ ಹೆಸರು ದಾಖಲಾಗಿದೆ. ಭಾರತದ ಅತಿದೊಡ್ಡ ಹಾಗೂ ವಿಶೇಷ ವ್ಯವಸ್ಥೆಗಳಿರುವ ಮೈದಾನವಾಗಿರುವ ನರೇಂದ್ರ ಮೋದಿ ಸ್ಟೇಡಿಯಂನ ಕೆಲ ವೈಶಿಷ್ಟ್ಯಗಳ ಕುರಿತು ನೀವು ಕೂಡಾ ತಿಳಿದುಕೊಳ್ಳಿ.

ನರೇಂದ್ರ ಮೋದಿ ಸ್ಟೇಡಿಯಂ
ನರೇಂದ್ರ ಮೋದಿ ಸ್ಟೇಡಿಯಂ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯ ಅಂತಿಮ ಪಂದ್ಯವು, ಇಂದಿನಿಂದ ಆರಂಭವಾಗಿದೆ. ಗುಜರಾತ್‌ ರಾಜ್ಯದ ಅತಿದೊಡ್ಡ ನಗರವಾದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಕ್ರೀಡಾಂಗಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸ್ಟೇಡಿಯಂ ಹಲವು ವಿಶೇಷತೆಗಳನ್ನು ಹೊಂದಿದೆ.

ಇಂದು ಆರಂಭವಾದ ನಾಲ್ಕನೇ ಟೆಸ್ಟ್‌ ಪಂದ್ಯವು ದೇಶ ವಿದೇಶದಾದ್ಯಂತ ವಿಶೇಷ ಆಕರ್ಷಣೆಯಾಗಿದೆ. ಇದಕ್ಕೆ ಕಾರಣ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮದೇ ಹೆಸರಿನ ಸ್ಟೇಡಿಯಂಗೆ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಭೇಟಿ ನೀಡಿ ಪಂದ್ಯವನ್ನು ವೀಕ್ಷಿಸಿರುವುದು.

ಹಲವಾರು ರೀತಿಯಲ್ಲಿ ಈ ಕ್ರೀಡಾಂಗಣವು ವಿಶೇಷ. ಈಗಾಗಲೇ ಗಿನ್ನೆಸ್‌ ಪುಸ್ತಕದಲ್ಲಿ ಈ ಕ್ರೀಡಾಂಗಣದ ಹೆಸರು ದಾಖಲಾಗಿದೆ. ಭಾರತದ ಅತಿದೊಡ್ಡ ಹಾಗೂ ವಿಶೇಷ ವ್ಯವಸ್ಥೆಗಳಿರುವ ಮೈದಾನವಾಗಿರುವ ನರೇಂದ್ರ ಮೋದಿ ಸ್ಟೇಡಿಯಂನ ಕೆಲ ವೈಶಿಷ್ಟ್ಯಗಳ ಕುರಿತು ನೀವು ಕೂಡಾ ತಿಳಿದುಕೊಳ್ಳಿ.

ಇತ್ತೀಚೆಗಷ್ಟೇ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣಗೊಂಡ ಈ ಕ್ರೀಡಾಂಗಣವನ್ನು ಈ ಹಿಂದೆ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಟೇಡಿಯಂ ಎಂದು ಕರೆಯಲಾಗುತ್ತಿತ್ತು. ಅಹಮದಾಬಾದ್‌ ನಗರದ ಹಳೆಯ ಹೆಗ್ಗುರುತಾದ ಈ ಕ್ರೀಡಾಂಗಣವನ್ನು 1983ರಲ್ಲಿ ತೆರೆಯಲಾಯ್ತು. ಆ ಬಳಿಕ 2020ರಲ್ಲಿ ಇದನ್ನು ದೊಡ್ಡ ಮಟ್ಟದಲ್ಲಿ ನವೀಕರಿಸಿ ಪುನಃ ತೆರೆಯಲಾಯಿತು.

ಈ ಕ್ರೀಡಾಂಗಣವು ಕಳೆದ ಕೆಲವು ದಶಕಗಳಲ್ಲಿ ನೂರಾರು ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಿದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಮತ್ತು ಐಸಿಸಿಯು ಆಯೋಜಿಸುವ ಪಂದ್ಯಾವಳಿಗಳ ಕೇಂದ್ರವಾಗಿ ಪ್ರಾಮುಖ್ಯತೆಗೆ ಪಡೆದಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಿರ್ಣಾಯಕ ಟೆಸ್ಟ್ ಪಂದ್ಯ ಕೂಡಾ ಇಲ್ಲಿಯೇ ನಡೆಯುತ್ತಿದೆ.

ನರೇಂದ್ರ ಮೋದಿ ಸ್ಟೇಡಿಯಂನ ವಿಶೇಷತೆ

  • ನರೇಂದ್ರ ಮೋದಿ ಸ್ಟೇಡಿಯಂ(Narendra Modi Stadium) ಅನ್ನು 1983ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಟೇಡಿಯಂ( Sardar Vallabhbhai Patel Stadium) ಎಂದು ಉದ್ಘಾಟಿಸಲಾಯಿತು. ಆ ಬಳಿಕ ಇತ್ತೀಚೆಗೆ ನವೀಕರಣಕ್ಕೆ ಒಳಗಾದ ಬಳಿಕ 2020ರ ಫೆಬ್ರವರಿ ತಿಂಗಳಲ್ಲಿ ಮತ್ತೆ ತೆರೆಯಲಾಯಿತು.
  • ಕ್ರೀಡಾಂಗಣದ ಮರುವಿನ್ಯಾಸವು ಅಹಮದಾಬಾದ್‌ನ ಅತಿದೊಡ್ಡ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾಗಿದೆ. ಈ ಕ್ರೀಡಾಂಗಣವು ಈಗ ಮೆಟ್ರೋ ಮಾರ್ಗಕ್ಕೆ ನೇರ ಸಂಪರ್ಕ ಹೊಂದಿದೆ. ರಸ್ತೆ ಸಂಚಾರವನ್ನು ಕಡಿಮೆ ಮಾಡಲು ಸ್ಕೈವಾಕ್ ಮೂಲಕ ಕ್ರೀಡಾಂಗಣಕ್ಕೆ ಮೆಟ್ರೋ ನಿಲ್ದಾಣದಿಂದ ಸಂಪರ್ಕ ಕಲ್ಪಿಸಲಾಗಿದೆ.
  • ಮೈದಾನವು ಮೂರು ಪ್ರವೇಶ ದ್ವಾರಗಳನ್ನು ಹೊಂದಿದೆ. ಇದರೊಂದಿಗೆ ಅನೇಕ ಐಷಾರಾಮಿ ಸೌಲಭ್ಯಗಳು ಇಲ್ಲಿವೆ.
  • ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 55 ಕೊಠಡಿಗಳ ಕ್ಲಬ್‌ಹೌಸ್, ಒಲಿಂಪಿಕ್ ಗಾತ್ರದ ಈಜುಕೊಳ, ನಾಲ್ಕು ಡ್ರೆಸ್ಸಿಂಗ್ ಕೊಠಡಿಗಳಿವೆ.
  • ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಸಾಮಾನ್ಯವಾಗಿ ಕಾಣುವ ಫ್ಲಡ್‌ಲೈಟ್‌ಗಳ ಬದಲಿಗೆ, ಮೈದಾನದ ಚಾವಣಿಯ ಮೇಲೆ ಗುಣಮಟ್ಟದ ಎಲ್‌ಇಡಿ ದೀಪಗಳ ವಿಶಿಷ್ಟವಾದ ಸೆಟ್ ಅಳವಡಿಸಲಾಗಿದೆ.
  • ಕ್ರೀಡಾಂಗಣದ ಪ್ರೇಕ್ಷಕರ ಸಾಮರ್ಥ್ಯ ಬರೋಬ್ಬರಿ 132,000. ಹೀಗಾಗಿ ಇದು ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ಎಂಸಿಜಿಯು ಅತಿ ದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಎಂಬ ಹೆಗ್ಗಳಿಕೆ ಪಡೆದಿತ್ತು. ಆದರೆ, ನರೇಂದ್ರ ಮೋದಿ ಕ್ರೀಡಾಂಗಣವು ಅದನ್ನು ಎರಡನೇ ಸ್ಥಾನಕ್ಕೆ ತಳ್ಳಿತು.
  • ಕ್ರೀಡಾಂಗಣವು 3,000 ಕಾರುಗಳು ಮತ್ತು 10,000 ದ್ವಿಚಕ್ರ ವಾಹನಗಳ ಪಾರ್ಕಿಂಗ್‌ ಸಾಮರ್ಥ್ಯವನ್ನು ಹೊಂದಿದೆ.
  • ನರೇಂದ್ರ ಮೋದಿ ಕ್ರೀಡಾಂಗಣವು 2022ರ ಐಪಿಎಲ್ ಫೈನಲ್‌ಗೆ ಆತಿಥ್ಯ ವಹಿಸಿದಾಗ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆಯಾಯ್ತು. ಕ್ರೀಡಾಂಗಣದಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ಆತಿಥ್ಯ ವಹಿಸಿದ ಹಿನ್ನೆಲೆಯಲ್ಲಿ ಈ ದಾಖಲೆ ನಿರ್ಮಾಣವಾಯ್ತು. ಆ ಪಂದ್ಯವನ್ನು ನೋಡಲು ಬರೋಬ್ಬರಿ 101,566 ಪ್ರೇಕ್ಷಕರು ಸೇರಿದ್ದರು.
  • ನರೇಂದ್ರ ಮೋದಿ ಸ್ಟೇಡಿಯಂ ಪ್ರಸ್ತುತ ಗುಜರಾತ್ ಕ್ರಿಕೆಟ್ ಸಂಸ್ಥೆ(Gujarat Cricket Association)ಯ ಒಡೆತನದಲ್ಲಿದೆ. ಇಲ್ಲಿ ಟೆಸ್ಟ್, ಏಕದಿನ, ಟಿ20 ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲಾಗುತ್ತದೆ.
  • ಈ ಕ್ರೀಡಾಂಗಣವು ವಿಶ್ವದ ಎರಡನೇ ಅತಿ ದೊಡ್ಡ ಕ್ರೀಡಾಂಗಣ(ಎಲ್ಲಾ ಕ್ರೀಡೆಗಳ ಆತಿಥ್ಯದಲ್ಲಿ). ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಎಂಬ ಖ್ಯಾತಿಗೆ ಉತ್ತರ ಕೊರಿಯಾದ ರುಂಗ್ರಾಡೊ ಮೇ ಡೇ ಸ್ಟೇಡಿಯಂ(Rungrado 1st of May Stadium) ಪಾತ್ರವಾಗಿದೆ. ಇದನ್ನು ರುಂಗ್ರಾಡೊ ಫಸ್ಟ್‌ ಆಫ್‌ ಮೇ ಸ್ಟೇಡಿಯಂ ಎಂದು ಕರೆಲಾಗುತ್ತದೆ. ಇದು ಅಧಿಕೃತವಾಗಿ 150,000 ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುತ್ತದೆ. ಇಲ್ಲಿ ಮುಖ್ಯವಾಗಿ ಫುಟ್ಬಾಲ್‌ ಪಂದ್ಯಗಳನ್ನು ಆಯೋಜಿಸಲಾಗುತ್ತದೆ.