logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Shivakumara Swami Birthday: ಇಂದು ಶತಾಯುಷಿ ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತಿ; ಶ್ರೀಗಳ ಬಾಲ್ಯ, ಶಿಕ್ಷಣ, ಸಾಧನೆಯ ಕಿರು ಪರಿಚಯ

Shivakumara Swami Birthday: ಇಂದು ಶತಾಯುಷಿ ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತಿ; ಶ್ರೀಗಳ ಬಾಲ್ಯ, ಶಿಕ್ಷಣ, ಸಾಧನೆಯ ಕಿರು ಪರಿಚಯ

Rakshitha Sowmya HT Kannada

Apr 01, 2024 12:25 PM IST

google News

ಶತಾಯುಷಿ ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತಿ

  • Shivakumara Swami Birthday: ಇಂದು ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಹೆಸರಾದ ಶಿವಕುಮಾರ ಸ್ವಾಮೀಜಿ ಅವರ 117ನೇ ಹುಟ್ಟುಹಬ್ಬ. ಸಾವಿರಾರು ಬಡಮಕ್ಕಳಿಗೆ ಊಟ, ವಸತಿ ,ಉಚಿತ ಶಿಕ್ಷಣ ಒದಗಿಸಿಕೊಟ್ಟಿದ್ದಾರೆ. ಈ ಕೊಡುಗೆಗೆಗಾಗಿ ಅವರಿಗೆ ಅನೇಕ ಪ್ರಶಸ್ತಿಗಳು ಸಂದಿವೆ. 

ಶತಾಯುಷಿ ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತಿ
ಶತಾಯುಷಿ ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತಿ (PC: ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮಿಗಳ ಅಭಿಮಾನಿಗಳು)

ತುಮಕೂರು: ಇಂದು ಶತಾಯುಷಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತಿ. ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಹೆಸರಾದ ಶಿವಕುಮಾರ ಸ್ವಾಮೀಜಿಯವರ ಜನ್ಮದಿನದ ಪ್ರಯುಕ್ತ ತುಮಕೂರಿನ ಸಿದ್ದಗಂಗಾ ಮಠದಲ್ಲಿ ವಿವಿಧ ಕಾರ್ಯಕ್ರಮ ಜರುಗುತ್ತಿದೆ. ವಿವಿಧ ಗಣ್ಯರು, ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಶಿವಕುಮಾರ ಸ್ವಾಮೀಜಿ ಅವರ ಹುಟ್ಟುಹಬ್ಬದ ಆಚರಣೆಗಾಗಿ ಕಳೆದ ಕೆಲವು ದಿನಗಳಿಂದ ಸಿದ್ದತೆ ನಡೆಯುತ್ತಿತ್ತು. ಇಂದು ಬೆಳಗ್ಗಿನಿಂದಲೇ ಶ್ರೀಗಳ ಗದ್ದಿಗೆಗೆ ಅಭಿಷೇಕ ಮಾಡಿ, ಹೂಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಶಿವಕುಮಾರ ಸ್ವಾಮೀಜಿಯವರು ತಮ್ಮ ವೈಯಕ್ತಿಕ ಜೀವನವನ್ನು ತ್ಯಾಗ ಮಾಡಿ ಲಕ್ಷಾಂತರ ಮಕ್ಕಳಿಗೆ ಆಸರೆಯಾಗಿದ್ದರು. ಇಂದಿಗೂ ಮಠದಲ್ಲಿ ಅನೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರತಿದಿನ ಇಲ್ಲಿ ಅನ್ನ ದಾಸೋಹ ನಡೆಯುತ್ತಿದೆ. ಶ್ರೀಗಳ 117ನೇ ಜನ್ಮದಿನದ ಪ್ರಯುಕ್ತ ಅವರ ಬಾಲ್ಯ, ವಿದ್ಯಾಭ್ಯಾಸ, ಸಾಧನೆ ಬಗ್ಗೆ ಕಿರುಪರಿಚಯ ಇಲ್ಲಿದೆ.

ಶ್ರೀಗಳ ಜನನ, ಬಾಲ್ಯ

ಶಿವಕುಮಾರ ಸ್ವಾಮೀಜಿಗಳು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರದಲ್ಲಿ 1 ಏಪ್ರಿಲ್‌ 1908ರಲ್ಲಿ ಜನಿಸಿದರು. ತಂದೆ ಹೊನ್ನಪ್ಪ ಹಾಗೂ ಗಂಗಮ್ಮ ದಂಪತಿಗೆ ಶ್ರೀಗಳು 13ನೇ ಮಗ. ವಿರಾಪುರದ ಕೂಲಿಮಠದ ಮರಳಿನ ಮೇಲೆ ಅಕ್ಷರ ಬರೆಸುವ ಮೂಲಕ ಶಿವಣ್ಣನ ವಿದ್ಯಾಭ್ಯಾಸ ಆರಂಭವಾಯ್ತು. ಶಾಲೆಯಲ್ಲಿ ಓದುವಾಗಲೇ ತಾಯಿಯನ್ನು ಕಳೆದುಕೊಂಡ ಶಿವಣ್ಣ ಅವರಿಗೆ ಆಸೆ ಆಗಿದ್ದು ಅವರ ಅಕ್ಕ. ತುಮಕೂರಿನ ಸರ್ಕಾರಿ ಶಾಲೆಯಲ್ಲಿ ಮೆಟ್ರಿಕ್ಯುಲೇಷನ್‌ ಗಳಿಸಿದ ಶಿವಕುಮಾರ ಸ್ವಾಮೀಜಿಗೆ ಆಗಲೇ, ಸಿದ್ದಗಂಗಾ ಮಠಾಧಿಪತಿಗಳಾದ ಶ್ರೀ ಉದ್ದಾನ ಶಿವಯೋಗಿ ಅವರೊಂದಿಗೆ ಒಡನಾಟವಿತ್ತು. ಬೆಂಗಳೂರಿನ ಸೆಂಟ್ರಲ್‌ ಕಾಲೇಜಿಗೆ ಸೇರಿ ರಾವ್ ಬಹದ್ದೂರ್ ಧರ್ಮಪ್ರವರ್ತ ಶ್ರೀ ಗುಬ್ಬಿ ತೋಟದಪ್ಪ ಧರ್ಮ ಛತ್ರದಲ್ಲಿ ಉಳಿದುಕೊಂಡರು. ಓದಿನ ಜೊತೆಗೆ ಆಗ್ಗಾಗ್ಗೆ ಮಠಕ್ಕೆ ಭೇಟಿ ನೀಡುತ್ತಿದ್ದ ಅವರಿಗೆ ಆಂಗ್ಲಭಾಷೆ ಮತ್ತು ಸಂಸ್ಕೃತ ಬಾಷೆಯಲ್ಲಿ ಅಪಾರ ಪಾಂಡಿತ್ಯ ಇತ್ತು.

ಮಠದ ಜವಾಬ್ದಾರಿ

ಸಿದ್ದಗಂಗಾ ಮಠದ ಉದ್ದಾನ ಶಿವಯೋಗಿಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು 1930ರಲ್ಲಿ ನಿಧನರಾದರು. ಉತ್ತರ ಕ್ರಿಯಾದಿ ಕಾರ್ಯಕ್ರಮಕ್ಕೆ ಬಂದಿದ್ದ ಶಿವಣ್ಣನವರನ್ನು ಉದ್ದಾನ ಶಿವಯೋಗಿ ಸ್ವಾಮೀಜಿಗಳು ಮಠದ ಉತ್ತರಾಧಿಕಾರಿಯನ್ನಾಗಿ ಘೋಷಿಸಿದರು. ಸನ್ಯಾಸತ್ವ ಸ್ವೀಕರಿಸಿದ ನಂತರವೂ ವಿದ್ಯಾಭ್ಯಾಸ ಮುಗಿಸಿದ ಶ್ರೀಗಳು ಮೊದಲ ದರ್ಜೆಯಲ್ಲಿ ಪಾಸ್‌ ಆಗುವ ಮೂಲಕ ವಿದ್ಯಾಭ್ಯಾಸ ಮುಗಿಸಿ ನಂತರ ಮಠಕ್ಕೆ ವಾಪಸ್‌ ಆಗಿ ತಮ್ಮ ಸಂಪೂರ್ಣ ಸಮಯವನ್ನು ಮಠಕ್ಕಾಗಿ ಮೀಸಲಿಟ್ಟರು. ಆರಂಭದಲ್ಲಿ ಮಠ ನಿರ್ವಹಣೆಯಲ್ಲಿ ಸವಾಲುಗಳನ್ನು ಎದುರಿಸಿದ ಶ್ರೀಗಳು ನಂತರ ಎಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಿದರು.

ಶಿಕ್ಷಣಕ್ಕೆ ಶ್ರೀಗಳು ನೀಡಿದ ಕೊಡುಗೆ

ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಿವಕುಮಾರ ಸ್ವಾಮೀಜಿಗಳು ನೀಡಿದ ಕೊಡುಗೆ ಅಪಾರವಾದುದು. ಮಕ್ಕಳ ಶಿಕ್ಷಣ ಹಾಗೂ ತರಬೇತಿಗಾಗಿ 130ಕ್ಕೂ ಹೆಚ್ಚು ಸಂಸ್ಥೆಗಳನ್ನು ಸ್ಥಾಪಿಸಿದರು. ಇವುಗಳಲ್ಲಿ ನುರಿತ ಶಿಕ್ಷಕರು ನರ್ಸರಿಯಿಂದ ಎಂಜಿನಿಯರಿಂಗ್, ವಿಜ್ಞಾನ, ಕಲೆ ಮತ್ತು ನಿರ್ವಹಣೆ ಜೊತೆಗೆ ವೃತ್ತಿಪರ ತರಬೇತಿ ಕೂಡಾ ನೀಡುತ್ತಿದ್ದಾರೆ. ಮಠದಲ್ಲಿ ಯಾವುದೇ ಧರ್ಮ, ಜಾತಿಯ ಹಂಗಿಲ್ಲದೆ 5 ರಿಂದ 16ನೇ ವಯಸ್ಸಿನ 10 ಸಾವಿರಕ್ಕಿಂತ ಹೆಚ್ಚು ಮಕ್ಕಳು ಇದ್ದು ಉಚಿತ ಆಹಾರ, ಶಿಕ್ಷಣ ಮತ್ತು ಆಶ್ರಯ ಪಡೆಯುತ್ತಿದ್ದಾರೆ. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರು ಸ್ವತಃ ಮಠಕ್ಕೆ ಭೇಟಿ ನೀಡಿ ಶ್ರೀಗಳ ಕಾರ್ಯವನ್ನು ಶ್ಲಾಘಿಸಿದ್ದರು.

ಶ್ರೀಗಳ ದಿನಚರಿ

ಶ್ರೀಗಳು ಪ್ರತಿದಿನ ಬೆಳಗ್ಗೆ 4 ಗಂಟೆಗೆ ಏಳುತ್ತಿದ್ದರು. ನಿತ್ಯಕರ್ಮಗಳನ್ನು ಮುಗಿಸಿ ಒಂದು ಗಂಟೆಗೂ ಹೆಚ್ಚು ಹೊತ್ತು ಧ್ಯಾನ ಮಾಡುತ್ತಿದ್ದರು. ನಂತರ ಇಷ್ಟಲಿಂಗ ಪೂಜೆ ಮಾಡಿ 6.30 ಕ್ಕೆ ಉಪಹಾರ ಸೇವಿಸುತ್ತಿದ್ದರು. ಜೊತೆಗೆ ಬೇವಿನ ಚೆಕ್ಕೆ ಕಷಾಯ ಕುಡಿಯುತ್ತಿದ್ದರು. ನಂತರ ತಮ್ಮನ್ನು ನೋಡಲು ಬಂದ ಭಕ್ತರಿಗೆ ದರ್ಶನ ನೀಡಿ ಆಶೀರ್ವದಿಸುತ್ತಿದ್ದರು. ಬೆಳಗ್ಗೆ ಹಾಗೂ ಸಂಜೆ ಮಠದ ಆವರಣದಲ್ಲಿ ನಡೆಯುವ ಮಕ್ಕಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಪ್ರಾರ್ಥನೆಯಲ್ಲಿ ಶ್ರೀಗಳು ಪಾಲ್ಗೊಳ್ಳುತ್ತಿದ್ದರು. ನಂತರ ತಮ್ಮ ಕಚೇರಿಯಲ್ಲಿ ದಿನ ಪತ್ರಿಕೆ ಓದುತ್ತಿದ್ದರು. ಅಲ್ಲಿಗೆ ಬಂದ ಭಕ್ತರಿಗೆ, ದರ್ಶನಾರ್ಥಿಗಳಿಗೆ ದರ್ಶನ ನೀಡುತ್ತಿದ್ದರು. ಮಧ್ಯಾಹ್ನ ಭೋಜನದ ನಂತರ ಮತ್ತೆ ಭಕ್ತರಿಗೆ ದರ್ಶನ ನೀಡುತ್ತಿದ್ದರು. ನಂತರ ಮಠದ ಮಕ್ಕಳ ಕುಶಲೋಪರಿ ವಿಚಾರಿಸುತ್ತಾ ಊಟ ಮುಗಿಸಿ ಪುಸ್ತಕ ಓದಿ ರಾತ್ರಿ 11 ಗಂಟೆಗೆ ಮಲಗುತ್ತಿದ್ದರು.

ಶ್ರೀಗಳಿಂದ ಸಂದ ಗೌರವ

ಶ್ರೀಗಳು ಶಿಕ್ಷಣಕ್ಕಾಗಿ ಮಾತ್ರವಲ್ಲ, ರೈತಾಪಿ ವರ್ಗದ ಕಷ್ಟಗಳಿಗೂ ಮಿಡಿಯುತ್ತಿದ್ದರು. ಪ್ರವಾಹ, ಬರದಂತ ಪರಿಸ್ಥಿತಿಗಳಲ್ಲಿ ಮಠದ ವತಿಯಿಂದ ಆಹಾರ, ಧಾನ್ಯ, ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದರು. ಪ್ರತಿ ವರ್ಷ ಕೃಷಿ ಜಾತ್ರೆ ಆಯೋಜಿಸುತ್ತಿದ್ದರು. ಮಠದ ಮಕ್ಕಳಿಗೆ ಮಾತ್ರವಲ್ಲ ಅಲ್ಲಿ ಬರುವ ಭಕ್ತರಿಗೂ ಊಟದ ವ್ಯವಸ್ಥೆ ಮಾಡಿದ್ದರು. ಇಷ್ಟೆಲ್ಲಾ ಸೇವೆಗಾಗಿ ಶಿವಕುಮಾರ ಸ್ವಾಮೀಜಿ ಅವರಿಗೆ ಸಾಕಷ್ಟು ಗೌರವ ಪುರಸ್ಕಾರಗಳು ಸಂದಿವೆ. ಶಿಕ್ಷಣ ಸೇವೆಗಾಗಿ ಕರ್ನಾಟಕ ವಿವಿ 1965ರಲ್ಲಿ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದೆ. ಶ್ರೀಗಳ 100ನೇ ವರ್ಷದ ಹುಟ್ಟುಹಬ್ಬ ಮತ್ತು ಕರ್ನಾಟಕ ಸುವರ್ಣ ಮಹೋತ್ಸವ ಸಮಯದಲ್ಲಿ ಕರ್ನಾಟಕ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿದೆ. 2015ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿದೆ. ಆದರೆ ಶ್ರೀಗಳಿಗೆ ಭಾರತರತ್ನ ನೀಡಬೇಕು ಎನ್ನುವುದು ಎಲ್ಲರ ಬೇಡಿಕೆ ಆಗಿದೆ. ಇದನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕಿದೆ.

2019ರಲ್ಲಿ ಲಿಂಗೈಕ್ಯರಾದ ಶ್ರೀಗಳು

ಮಠದ ಆಡಳಿತ ವಹಿಸಿಕೊಂಡಾಗಿನಿಂದ ಲವಲವಿಕೆಯಿಂದ ಇದ್ದ ಶ್ರೀಗಳು 2016 ರಲ್ಲಿ ವಯೋಸಹಜ ಕಾಯಿಲೆಗೆ ತುತ್ತಾದರು. ಜಾಂಡೀಸ್‌, ನ್ಯುಮೋನಿಯಾದಂಥ ಆರೋಗ್ಯ ಸಮಸ್ಯೆಗಳು ಅವರನ್ನು ಕಾಡತೊಡಗಿತು. 2018ರಲ್ಲಿ ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಚೇತರಿಸಿಕೊಂಡಿದ್ದರು. ಕೆಲವು ದಿನಗಳ ಬಳಿಕ ಅವರಿಗೆ ಶ್ವಾಸಕೋಶದ ಸೋಂಕು ಕಾಡತೊಡಗಿತು. ಆರೋಗ್ಯ ಸುಧಾರಿಸದ ಕಾರಣ ಅವರನ್ನು ಆಸ್ಪತ್ರೆಯಿಂದ ಮಠಕ್ಕೆ ವಾಪಸ್‌ ಕರೆತರಲಾಯಿತು. 21 ಜನವರಿ 2019ರಂದು ಶ್ರೀಗಳು 111ನೇ ವಯಸ್ಸಿನಲ್ಲಿ ತಮ್ಮ ಮಠದಲ್ಲೇ ಲಿಂಗೈಕ್ಯರಾದರು.

ಶ್ರೀಗಳು ಇಂದು ದೈಹಿಕವಾಗಿ ಅಗಲಿದ್ದರೂ ಭಕ್ತರ ಜನಮಾನಸದಲ್ಲಿ ನೆಲೆಸಿದ್ದಾರೆ. ಲಕ್ಷಾಂತರ ಮಂದಿಯ ಬೆಳಗಾಗಿದ್ದಾರೆ. ಇಂದಿಗೂ ಮಠದ ಗದ್ದುಗೆ ದರ್ಶನ ಪಡೆಯಲು ಪ್ರತಿ ನಿತ್ಯ ಭಕ್ತರು ಆಗಮಿಸುತ್ತಾರೆ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ