ತಲಾ ಶತಕ ಸಿಡಿಸಿ ವಿಶ್ವಕಪ್‌ನಲ್ಲಿ ಹಲವು ದಾಖಲೆ ನಿರ್ಮಿಸಿದ ರಚಿನ್, ಕಾನ್ವೆ; ಕೊಹ್ಲಿಯ ರೆಕಾರ್ಡ್ ಪಟ್ಟಿ ಸೇರಿದ ರವೀಂದ್ರ
Dec 22, 2023 05:28 PM IST
ಡಿವೊನ್ ಕಾನ್ವೇ ಮತ್ತು ರಚಿನ್ ರವೀಂದ್ರ
- ODI World Cup: ಡಿವೊನ್ ಕಾನ್ವೇ ಮತ್ತು ರಚಿನ್ ರವೀಂದ್ರ 2023ರ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಹಲವು ದಾಖಲೆ ನಿರ್ಮಿಸಿದ್ದಾರೆ.
ವಿಶ್ವಕಪ್‌ನ (ICC ODI World Cup) ಆರಂಭಿಕ ಪಂದ್ಯದಲ್ಲಿಯೇ ನ್ಯೂಜಿಲೆಂಡ್‌ನ ಡಿವೊನ್ ಕಾನ್ವೇ (Devon Conway) ಮತ್ತು ರಚಿನ್ ರವೀಂದ್ರ (Rachin Ravindra) ಅದ್ಭುತ ಪ್ರದರ್ಶನ ನೀಡಿದರು. ಗೆಲುವಿನ ದ್ವಿಶತಕದ ಜೊತೆಯಾಟದ ಜೊತೆಗೆ ಈ ಜೋಡಿಯು ಹಲವು ದಾಖಲೆಗಳನ್ನು ನಿರ್ಮಿಸಿದೆ. ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲೇ ಶತಕ ಸಿಡಿಸಿದ ಉಭಯ ಆಟಗಾರರು, ಈ ಆವೃತ್ತಿಯಲ್ಲಿ ಶತಕ ಸಿಡಿಸಿದ ಮೊದಲೆರಡು ಆಟಗಾರರೆಂಬ ದಾಖಲೆ ಬರೆದರು.
ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕಾನ್ವೆ ಮತ್ತು ರಚಿನ್ ಕ್ರಮವಾಗಿ ಮೊದಲ ಮತ್ತು ಎರಡನೆಯವರಾಗಿ ಶತಕ ಸಿಡಿಸಿದರು. ಪ್ರಸಕ್ತ ಆವೃತ್ತಿಯ ವಿಶ್ವಕಪ್‌ನ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ ಕಾನ್ವೇ ಮತ್ತು ರವೀಂದ್ರ, ವಿಶಿಷ್ಟ ದಾಖಲೆಯ ಪಟ್ಟಿ ಸೇರಿಕೊಂಡರು. ಇದೇ ವೇಳೆ ಪದಾರ್ಪಣೆಯ ವಿಶ್ವಕಪ್ ಪಂದ್ಯದಲ್ಲಿಯೇ ರಚಿನ್ ಶತಕದ ಸಾಧನೆ ಮಾಡಿದರು.
ಕಿವೀಸ್ ತಂಡದ ಕಿರಿಯ ಆಟಗಾರ
ಇಂಗ್ಲೆಂಡ್ ವಿರುದ್ಧ 96 ಎಸೆತಗಳಲ್ಲಿ 11 ಬೌಂಡರಿ, 5 ಸಿಕ್ಸರ್ಗಳ ನೆರವಿನಿಂದ ಅಜೇಯ 123 ರನ್ ಸಿಡಿಸಿದ ರವೀಂದ್ರ, ಏಕದಿನ ವಿಶ್ವಕಪ್‌ನಲ್ಲಿ ಹೊಸ ದಾಖಲೆ ಬರೆದರು. 23 ವರ್ಷದ ರಚಿನ್ ರವೀಂದ್ರ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ನ್ಯೂಜಿಲೆಂಡ್ ತಂಡದ ಪರ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಶತಕದೊಂದಿಗೆ ನ್ಯೂಜಿಲೆಂಡ್‌ನ ನಾಥನ್ ಆಸ್ಟಲ್ ಮತ್ತು ಕ್ರಿಸ್ ಹ್ಯಾರಿಸ್ ಅವರ ದಾಖಲೆಯನ್ನು ಪುಡಿಗಟ್ಟಿದ್ದಾರೆ.
ವಿಶ್ವಕಪ್‌ನಲ್ಲಿ ಯಾವುದೇ ವಿಕೆಟ್‌ಗೆ ಅತ್ಯಧಿಕ ಜೊತೆಯಾಟ
- 372 - ಕ್ರಿಸ್ ಗೇಲ್ ಮತ್ತು ಮರ್ಲಾನ್ ಸ್ಯಾಮ್ಯುಯೆಲ್ಸ್ (ವೆಸ್ಟ್ ಇಂಡೀಸ್): 2015
- 318 - ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ (ಭಾರತ): 1999
- 282 - ತಿಲಕರತ್ನೆ ದಿಲ್ಶನ್ ಮತ್ತು ಉಪುಲ್ ತರಂಗ (ಶ್ರೀಲಂಕಾ): 2011
- ಅಜೇಯ 273 - ಡಿವೊನ್ ಕಾನ್ವೇ ಮತ್ತು ರಚಿನ್ ರವೀಂದ್ರ (ನ್ಯೂಜಿಲ್ಯಾಂಡ್): 2023
- 260 - ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ (ಆಸ್ಟ್ರೇಲಿಯಾ): 2015
ಚೊಚ್ಚಲ ವಿಶ್ವಕಪ್ ಪಂದ್ಯದಲ್ಲೇ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರರು
- ವಿರಾಟ್ ಕೊಹ್ಲಿ (ಭಾರತ): 22 ವರ್ಷ, 106 ದಿನ (2011)
- ಆಂಡಿ ಫ್ಲವರ್ (ಜಿಂಬಾಬ್ವೆ) 23 ವರ್ಷ 301 ದಿನ (1992)
- ರಚಿನ್ ರವೀಂದ್ರ (ನ್ಯೂಜಿಲ್ಯಾಂಡ್) 23 ವರ್ಷ, 321 ದಿನ, (2023)
- ನಾಥನ್ ಆಸ್ಟಲ್ (ನ್ಯೂಜಿಲ್ಯಾಂಡ್) 24 ವರ್ಷ 152 ದಿನ, (1996)
- ಡೇವಿಡ್ ಮಿಲ್ಲರ್ (ದಕ್ಷಿಣ ಆಫ್ರಿಕಾ) 25 ವರ್ಷ 250 ದಿನ, (2015)
ನ್ಯೂಜಿಲೆಂಡ್ ಪರ ವೇಗವಾಗಿ 1000 ಏಕದಿನ ರನ್ ಗಳಿಸಿದವರು
- 22 ಇನ್ನಿಂಗ್ಸ್- ಡೆವೊನ್ ಕಾನ್ವೇ
- 24 ಇನ್ನಿಂಗ್ಸ್- ಗ್ಲೆನ್ ಟರ್ನರ್
- 24 ಇನ್ನಿಂಗ್ಸ್- ಡೇರಿಲ್ ಮಿಚೆಲ್
- 25 ಇನ್ನಿಂಗ್ಸ್- ಆಂಡ್ರ್ಯೂ ಜೋನ್ಸ್
- 29 ಇನ್ನಿಂಗ್ಸ್- ಬ್ರೂಸ್ ಎಡ್ಗರ್
- 29 ಇನ್ನಿಂಗ್ಸ್- ಜೆಸ್ಸಿ ರೈಡರ್
ಚೊಚ್ಚಲ ವಿಶ್ವಕಪ್ ಪಂದ್ಯದಲ್ಲೇ ಶತಕ
ರಾಚಿನ್ ರವೀಂದ್ರ ಚೊಚ್ಚಲ ವಿಶ್ವಕಪ್ನಲ್ಲೇ ಶತಕ ಸಿಡಿಸಿದ ವಿಶ್ವದ 16ನೇ ಆಟಗಾರ. 1975ರಲ್ಲಿ ಇಂಗ್ಲೆಂಡ್ ತಂಡದ ಡೆನ್ನಿಸ್ ಅಮಿಸ್ ಚೊಚ್ಚಲ ಶತಕ ಪಂದ್ಯದಲ್ಲೇ ಸೆಂಚುರಿ ಬಾರಿಸಿದ್ದರು. ಇದೇ ಪಂದ್ಯದಲ್ಲಿ ಮೂರಂಕಿ ದಾಟಿದ ಡೆವೋನ್ ಕಾನ್ವೆ, ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ 15ನೇ ಆಟಗಾರ ಎಂಬ ದಾಖಲೆ ಬರೆದರು.