logo
ಕನ್ನಡ ಸುದ್ದಿ  /  ಕ್ರಿಕೆಟ್  /  2007 World Cup: ಕ್ರಿಕೆಟ್‌ ಶಿಶು ಬಾಂಗ್ಲಾದೇಶ ವಿರುದ್ಧ ಸೋತು ವಿಶ್ವಕಪ್‌ನಿಂದ ಹೊರಬಿದ್ದಿತ್ತು ಭಾರತ ತಂಡ

2007 World Cup: ಕ್ರಿಕೆಟ್‌ ಶಿಶು ಬಾಂಗ್ಲಾದೇಶ ವಿರುದ್ಧ ಸೋತು ವಿಶ್ವಕಪ್‌ನಿಂದ ಹೊರಬಿದ್ದಿತ್ತು ಭಾರತ ತಂಡ

Jayaraj HT Kannada

Sep 27, 2023 01:58 PM IST

2007ರ ವಿಶ್ವಕಪ್‌ ಪಂದ್ಯದಲ್ಲಿ ಭಾರತ ವಿರುದ್ಧ ಗೆದ್ದ ಬಾಂಗ್ಲಾದೇಶ

    • ICC ODI World Cup: ಏಕದಿನ ವಿಶ್ವಕಪ್‌ ಇತಿಹಾಸದಲ್ಲಿ ಮಿಶ್ರ ಫಲಿತಾಂಶ ಪಡೆದಿರುವ ಭಾರತ ಕ್ರಿಕೆಟ್‌ ತಂಡವು, ಕೆಲವೊಮ್ಮೆ ಅಚ್ಚರಿಯ ರೀತಿಯಲ್ಲಿ ಸೋಲು ಕಂಡಿದೆ. 2007ರ ಟೂರ್ನಿಯಲ್ಲಿ ಇಂಥಾ ಸನ್ನಿವೇಶ ನಡೆದಿತ್ತು.
2007ರ ವಿಶ್ವಕಪ್‌ ಪಂದ್ಯದಲ್ಲಿ ಭಾರತ ವಿರುದ್ಧ ಗೆದ್ದ ಬಾಂಗ್ಲಾದೇಶ
2007ರ ವಿಶ್ವಕಪ್‌ ಪಂದ್ಯದಲ್ಲಿ ಭಾರತ ವಿರುದ್ಧ ಗೆದ್ದ ಬಾಂಗ್ಲಾದೇಶ

ಏಕದಿನ ವಿಶ್ವಕಪ್‌ಗೆ (ICC ODI World Cup) ಭಾರತ ಕ್ರಿಕೆಟ್‌ ತಂಡ ಭರ್ಜರಿ ಸಿದ್ಧತೆಯಲ್ಲಿದೆ. 2011ರ ಬಳಿಕ ಇದೇ ಮೊದಲ ಬಾರಿಗೆ ಭಾರತವು ಟೂರ್ನಿಗೆ ಆತಿಥ್ಯ ವಹಿಸುತ್ತಿದ್ದು, ವಿಶ್ವಕಪ್‌ ಗೆಲ್ಲುವ ಫೇವರೆಟ್‌ ತಂಡವಾಗಿದೆ. ಅಲ್ಲದೆ ಈ ಬಾರಿಯ ಟೂರ್ನಿಯ ಎಲ್ಲಾ ಪಂದ್ಯಗಳು ಭಾರತದಲ್ಲಿ ಮಾತ್ರ ನಡೆಯುತ್ತಿದೆ. ಹೀಗಾಗಿ ಪಂದ್ಯಾವಳಿಯ ಆತಿಥ್ಯ ವಹಿಸುವ ಎಲ್ಲಾ ಕ್ರಿಕೆಟ್‌ ಮೈದಾನಗಳು ನವೀಕರಣಗೊಂಡು ಸಜ್ಜಾಗುತ್ತಿವೆ.

ಟ್ರೆಂಡಿಂಗ್​ ಸುದ್ದಿ

ತೆಳ್ಳಗಾದ ಸೂರ್ಯಕುಮಾರ್ ಯಾದವ್, ನಾಲ್ಕೇ ತಿಂಗಳಲ್ಲಿ 15 ಕೆಜಿ ತೂಕ ಇಳಿಕೆ; ಈ ಆಹಾರ ಕ್ರಮ ನೀವು ಅನುಕರಿಸಿ ತೂಕ ಇಳಿಸಿ!

ಸ್ಫೋಟಕ 94 ರನ್ ಸಿಡಿಸಿ 17 ವರ್ಷಗಳ ಹರ್ಷಲ್ ಗಿಬ್ಸ್ ದಾಖಲೆಯನ್ನು ಛಿದ್ರಗೊಳಿಸಿದ ಆರನ್ ಜೋನ್ಸ್​

ಕೆನಡಾ ವಿರುದ್ಧ ಅಮೆರಿಕಗೆ ದಾಖಲೆಯ ಜಯ ತಂದುಕೊಟ್ಟ ಆರನ್ ಜೋನ್ಸ್-ಆಂಡ್ರೀಸ್ ಗೌಸ್ ಯಾರು; ಇಬ್ಬರೂ ವಲಸಿಗರು ವಾಸ್ತುಶಿಲ್ಪಿಗಳು

ವಿರಾಟ್‌-ಅಕ್ಷರ್ ಪಟೇಲ್‌ ಇನ್,‌ ಸಂಜು-ದುಬೆ ಔಟ್;‌ ಟಿ20 ವಿಶ್ವಕಪ್‌ಗೆ ಭಾರತ ಸಂಭಾವ್ಯ ತಂಡ ಹೀಗಿದೆ

ಈವರೆಗೆ ನಡೆದಿರುವ 12 ವಿಶ್ವಕಪ್‌ ಆವೃತ್ತಿಗಳಲ್ಲಿ ಭಾರತವು ಮಿಶ್ರ ಫಲಿತಾಂಶ ಕಂಡಿದೆ. 1983 ಮತ್ತು 2011ರಲ್ಲಿ ಎರಡು ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿರುವ ಭಾರತ, ಒಂದು ಬಾರಿ ಮಾತ್ರ ಫೈನಲ್‌ವರೆಗೂ ಬಂದಿತ್ತು. ಈ ನಡುವೆ ಕೆಲವು ಪಂದ್ಯಾವಳಿಯಲ್ಲಿ ಅಚ್ಚರಿಯ ರೀತಿಯಲ್ಲಿ ಸೋಲು ಕಂಡು ಟೂರ್ನಿಯಿಂದ ನಿರ್ಗಮಿಸಿದೆ. 2007ರಲ್ಲಿ ಹೀಗೆಯೇ ಆಗಿತ್ತು.

ಬಾಂಗ್ಲಾದೇಶ ವಿರುದ್ಧ ಅಚ್ಚರಿಯ ಸೋಲು

2007ರ ವಿಶ್ವಕಪ್‌ ಪಂದ್ಯಾವಳಿಯು ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ ನಡೆದಿತ್ತು. ಆ ಪಂದ್ಯಾವಳಿಯಲ್ಲಿ ಭಾರತವನ್ನು ಮುನ್ನಡೆಸಿದವರು ಕನ್ನಡಿಗ ರಾಹುಲ್‌ ದ್ರಾವಿಡ್.‌ ಆದರೆ, ಈ ಟೂರ್ನಿಯು ಭಾರತದ ಪಾಲಿಗೆ ಕಹಿ ಫಲಿತಾಂಶ ಕೊಟ್ಟಿತು. ಗ್ರೂಪ್‌ ಹಂತದ ಪಂದ್ಯದಲ್ಲಿ ಕ್ರಿಕೆಟ್‌ ಶಿಶು ಬಾಂಗ್ಲಾದೇಶ ವಿರುದ್ಧ ಅಚ್ಚರಿಯ ಸೋಲು ಕಂಡ ಭಾರತವು, ಆ ಬಳಿಕ ಅದೇ ಸೋಲಿನಿಂದಾಗಿ ಟೂರ್ನಿಯಿಂದ ನಿರ್ಗಮಿಸಬೇಕಾಯ್ತು. ಯಶಸ್ವಿ ಚೇಸಿಂಗ್‌ ಮಾಡಿ 5 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿದ ಬಾಂಗ್ಲಾದೇಶ, ಭಾರತಕ್ಕೆ ಶಾಕ್ ನೀಡಿತು.

ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತವು, ಸೌರವ್‌ ಗಂಗೂಲಿ ಅವರ ಅರ್ಧಶತಕದ (66) ನೆರವಿನಿಂದ 191 ರನ್‌ ಪೇರಿಸಿತು. ಈ ಪಂದ್ಯದಲ್ಲಿ ಬಾಂಗ್ಲಾ ವೇಗಿ ಮೋರ್ತಜಾ ದಾಳಿಗೆ ಮಣಿದ ಭಾರತ 49.3 ಓವರ್‌ಗಳಲ್ಲಿ ಆಲೌಟ್‌ ಆಯ್ತು. ಚೇಸಿಂಗ್‌ ನಡೆಸಿದ ಬಾಂಗ್ಲಾ, 48.3 ಓವರ್‌ಗಳಲ್ಲಿ ಕೇವಲ 5 ವಿಕೆಟ್‌ ಕಳೆದುಕೊಂಡು ಗುರಿ ಸಾಧಿಸಿತು. ಪಂದ್ಯದಲ್ಲಿ ತಮೀಮ್‌ ಇಕ್ಬಾಲ್‌, ಮುಶ್ಫಿಕರ್‌ ರಹೀಮ್‌ ಮತ್ತು ಶಕೀಬ್‌ ಅಲ್‌ ಹಸನ್‌ ತಲಾ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಶ್ರೀಲಂಕಾ ವಿರುದ್ಧ ಸೋತು ಟೂರ್ನಿಗೆ ಅಧಿಕೃತ ವಿದಾಯ

ಬಾಂಗ್ಲಾದೇಶದ ವೇಗಿಗಳ ಆರಂಭಿಕ ದಾಳಿ ಹಾಗೂ ಲೆಫ್ಟ್‌ ಆರ್ಮ್‌ ಸ್ಪಿನ್ನರ್‌ಗಳ ದಾಳಿಗೆ ಭಾರತದ ಬ್ಯಾಟಿಂಗ್‌ ಲೈನಪ್‌ ಕುಸಿಯಿತು. ಆ ಬಳಿಕ ಬೌಲಿಂಗ್‌ ಮತ್ತು ಫೀಲ್ಡಿಂಗ್‌ನಲ್ಲೂ ಎಡವಿತು. ಈ ಪಂದ್ಯದಲ್ಲಿ ಸೋತ ಭಾರತವು, ಸೂಪರ್‌ ಫೋರ್‌ ಹಂತಕ್ಕೆ ಲಗ್ಗೆ ಇಡುವ ಅವಕಾಶವನ್ನು ಬಹುತೇಕ ಕಳೆದುಕೊಂಡಿತ್ತು. ಗುಂಪು ಹಂತದ ಮುಂದಿನ ಪಂದ್ಯಗಳಲ್ಲಿ ಶ್ರೀಲಂಕಾ ಹಾಗೂ ಬರ್ಮುಡಾ ವಿರುದ್ಧ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತು. ಆದರೆ, ಭಾರತೀಯರ ಕೋರಿಕೆ ಫಲಿಸಲಿಲ್ಲ.

ಬರ್ಮುಡ ವಿರುದ್ಧದ ಪಂದ್ಯದಲ್ಲಿ ಭರ್ಜರಿ 257 ರನ್‌ಗಳಿಂದ ಗೆದ್ದ ಭಾರತವು, ಆ ಬಳಿಕ ಶ್ರೀಲಂಕಾ ವಿರುದ್ಧ 69 ರನ್‌ಗಳಿಂದ ಸೋಲು ಕಂಡಿತು. ಅದರೊಂದಿಗೆ ವಿಶ್ವಕಪ್‌ ಅಭಿಯಾನದಿಂದ ಅಧಿಕೃತವಾಗಿ ಹೊರಬಿತ್ತು.ಅತ್ತ ಶ್ರೀಲಂಕಾ ಫೈನಲ್‌ ಪ್ರವೇಶಿಸಿತು. ಆಸ್ಟ್ರೇಲಿಯಾ ವಿರುದ್ಧ ನಡೆದ ಫೈನಲ್‌ ಮುಖಾಮುಖಿಯಲ್ಲಿ 53 ರನ್‌ಗಳಿಂದ ಗೆದ್ದ ಆಸ್ಟ್ರೇಲಿಯಾ ಹ್ಯಾಟ್ರಿಕ್‌ ವಿಶ್ವಕಪ್‌ ಗೆದ್ದಿತು.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ