logo
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ ಏಷ್ಯಾಕಪ್ ತಂಡಕ್ಕೆ ಖಚಿತವಾಗಿ ಆಯ್ಕೆಯಾಗಲಿರುವ ಆಟಗಾರರಿವರು; ಸಂಭಾವ್ಯ ಹೆಸರುಗಳು ಹೀಗಿವೆ

ಭಾರತ ಏಷ್ಯಾಕಪ್ ತಂಡಕ್ಕೆ ಖಚಿತವಾಗಿ ಆಯ್ಕೆಯಾಗಲಿರುವ ಆಟಗಾರರಿವರು; ಸಂಭಾವ್ಯ ಹೆಸರುಗಳು ಹೀಗಿವೆ

Jayaraj HT Kannada

Aug 20, 2023 04:58 PM IST

ಏಷ್ಯಾಕಪ್‌ಗೆ ಆಯ್ಕೆಯಾಗಬಹುದಾದ ಆಟಗಾರರು

    • Asia Cup 2023: ಏಷ್ಯಾಕಪ್‌ಗೆ ಆಯ್ಕೆಯಾಗುವ ಸಂಭಾವ್ಯ ಆಟಗಾರರು ಯಾರ್ಯಾರು ಎಂಬ ಲೆಕ್ಕಾಚಾರ ಗರಿಗೆದರಿದೆ. ವರದಿಗಳ ಪ್ರಕಾರ, 17 ಸದಸ್ಯರ ತಂಡವನ್ನು ಈ ಬಾರಿ ಆಯ್ಕೆ ಮಾಡುವ ಸಾಧ್ಯತೆಯಿದೆ.
ಏಷ್ಯಾಕಪ್‌ಗೆ ಆಯ್ಕೆಯಾಗಬಹುದಾದ ಆಟಗಾರರು
ಏಷ್ಯಾಕಪ್‌ಗೆ ಆಯ್ಕೆಯಾಗಬಹುದಾದ ಆಟಗಾರರು

ಏಷ್ಯಾಕಪ್ (Asia Cup 2023) ಟೂರ್ನಿಗೆ ಸೋಮವಾರ (ಆಗಸ್ಟ್‌ 21)ರಂದು ಭಾರತ ಕ್ರಿಕೆಟ್ ತಂಡವನ್ನು (Indian cricket team) ಪ್ರಕಟಿಸುವುದು ಬಹುತೇಕ ಖಚಿತವಾಗಿದೆ. ಟೂರ್ನಿ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಆಗಸ್ಟ್ 30ರಂದು ಉದ್ಘಾಟನಾ ಪಂದ್ಯ ನಡೆಯಲಿದೆ. ಹೀಗಾಗಿ ಅಳೆದು ತೂಗಿ ಅಂತಿಮ ತಂಡವನ್ನು ನಿರ್ಧರಿಸಲು ಬಿಸಿಸಿಐ ಆಯ್ಕೆಗಾರರು ನಿರ್ಧರಿಸಿದ್ದಾರೆ. ತಂಡವನ್ನು ಘೋಷಿಸುವುದಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್‌ ಅಗರ್ಕರ್‌ ಸಭೆ ನಡೆಸಲಿದ್ದಾರೆ ಎಂದು ಹಲವಾರು ವರದಿಗಳು ಹೇಳಿವೆ.

ಟ್ರೆಂಡಿಂಗ್​ ಸುದ್ದಿ

ಒಂದು ಅವಕಾಶ ಕೊಡಿ ಎಂದು ಅಂಗಾಲಾಚಿದ್ದಾತ ಈಗ ಆರ್‌ಸಿಬಿ ಲಕ್ಕೀ ಚಾರ್ಮ್; ನಡೆದು ಬಂದ ಹಾದಿ ನೆನೆದು ಕಣ್ಣೀರಿಟ್ಟ ಸ್ವಪ್ನಿಲ್‌ ಸಿಂಗ್

ನೀನು ನಮ್ಮ ಪ್ರಮುಖ ಬೌಲರ್‌ ಎಂದು ಮೊದಲ ದಿನವೇ ಆರ್‌ಸಿಬಿ ಹೇಳಿತ್ತು; ಕಂಬ್ಯಾಕ್‌ ಕುರಿತು ಯಶ್‌ ದಯಾಳ್ ಮಾತು

ಆರ್‌ಸಿಬಿ vs ಆರ್‌ಆರ್‌, ಕೆಕೆಆರ್‌ vs ಎಸ್‌ಆರ್‌ಎಚ್‌ ಪ್ಲೇಆಫ್‌ ಪಂದ್ಯಗಳಿಗೆ ಮಳೆ ಆತಂಕ ಇದೆಯಾ? ಅಹಮದಾಬಾದ್‌ ಹವಾಮಾನ ವರದಿ ಹೀಗಿದೆ

ಐಪಿಎಲ್‌ ಪ್ಲೇಆಫ್ ಪಂದ್ಯಗಳು ಮಳೆಯಿಂದ ರದ್ದಾದರೆ ಮುಂದೇನು; ಮೀಸಲು ದಿನ ಇದೆಯೇ? ನಿಯಮಗಳು ಹೀಗಿವೆ

ತಂಡ ಅಂತಿಮಗೊಳ್ಳಲು ಒಂದು ದಿನ ಮಾತ್ರವೇ ಉಳಿದಿದ್ದು, ಏಷ್ಯಾಕಪ್‌ಗೆ ಆಯ್ಕೆಯಾಗುವ ಸಂಭಾವ್ಯ ಆಟಗಾರರು ಯಾರ್ಯಾರು ಎಂಬ ಲೆಕ್ಕಾಚಾರ ಗರಿಗೆದರಿದೆ. ವರದಿಗಳ ಪ್ರಕಾರ, 17 ಸದಸ್ಯರ ತಂಡವನ್ನು ಈ ಬಾರಿ ಆಯ್ಕೆ ಮಾಡುವ ಸಾಧ್ಯತೆಯಿದೆ. ಇವರಲ್ಲಿ ಕೆಲವು ಆಟಗಾರರು ಆಯ್ಕೆಯಾಗುವುದು ಖಚಿತ. ಇನ್ನೂ ಕೆಲವು ಆಟಗಾರರಲ್ಲಿ ಅದೃಷ್ಟ ಹೊಂದಿರುವ ಆಟಗಾರರು ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಸಂಭಾವ್ಯ ಆಟಗಾರರ ಪಟ್ಟಿ ಹೀಗಿದೆ.

ರೋಹಿತ್ ಶರ್ಮಾ (ನಾಯಕ)‌

ಟೀಮ್‌ ಇಂಡಿಯಾದ ಕಾಯಂ ನಾಯಕನಾಗಿರುವ ರೋಹಿತ್ ಶರ್ಮಾ ಆಯ್ಕೆಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ನಾಯಕನಾಗಿರುವ ಕಾರಣ ಇವರೇ ತಂಡವನ್ನು ಮುನ್ನಡೆಸಲಿದ್ದಾರೆ. ಅಲ್ಲದೆ ಆಡುವ ಬಳಗದಲ್ಲಿಯೂ ಆರಂಭಿಕ ಆಟಗಾರನಾಗಿ ಶರ್ಮಾ ಸ್ಥಾನ ಪಡೆಯಲಿದ್ದಾರೆ. 2022ರ ಆರಂಭದಿಂದ ಆಡಿದ 17 ಏಕದಿನ ಪಂದ್ಯಗಳಲ್ಲಿ ರೋಹಿತ್‌ 45.14ರ ಸರಾಸರಿಯಲ್ಲಿ ಬ್ಯಾಟ್‌ ಬೀಸಿ 632 ರನ್ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ

2011ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಆಡಿದ ಆಟಗಾರರಲ್ಲಿ ಪ್ರಸ್ತುತ ಸಕ್ರಿಯರಾಗಿರುವ ಏಕೈಕ ಆಟಗಾರ ವಿರಾಟ್.‌ ವಿಶ್ವದ ದಿಗ್ಗಜ ಆಟಗಾರ ಭಾರತ ತಂಡದಲ್ಲಿ ಈಗಲೂ ಭರವಸೆಯ ಬ್ಯಾಟರ್.‌ ಹೀಗಾಗಿ ಇವರು ಅಧಿಕೃತ ತಂಡ ಘೋಷಣೆಗೂ ಮುನ್ನವೇ ಆಯ್ಕೆಯಾಗಿದ್ದಾರೆ. ಅಲ್ಲದೆ ವಿರಾಟ್‌ ಮೇಲೆ ಅಭಿಮಾನಿಗಳ ನಿರೀಕ್ಷೆಗಳ ಬೆಟ್ಟವೇ ಇದೆ.

ಶುಭ್ಮನ್ ಗಿಲ್

ನಾಯಕ ರೋಹಿತ್‌ ಶರ್ಮಾಗೆ ಆರಂಭಿಕ ಜೊತೆಗಾರನಾಗಿ ಗಿಲ್‌ ಆಯ್ಕೆ ಕೂಡಾ ಬಹುತೇಕ ಖಚಿತ. ಯುವ ಆಟಗಾರ ಕಳೆದ ಒಂದು ವರ್ಷದಲ್ಲಿ ಅದ್ಭುತ ಪ್ರದರ‍್ಶನ ತೋರಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲಿಯೂ ಸತತ ಶತಕ ಸಿಡಿಸಿ ತಮ್ಮ ಫಾರ್ಮ್‌ ತೋರಿಸಿಕೊಂಡಿದ್ದಾರೆ. 2022ರ ಜನವರಿಯಿಂದ ಆಡಿದ 24 ಏಕದಿನ ಪಂದ್ಯಗಳಲ್ಲಿ 69.40ಯ ಭರ್ಜರಿ ಸರಾಸರಿಯಲ್ಲಿ 1388 ರನ್ ಸಿಡಿಸಿದ್ದಾರೆ.

ಕೆಎಲ್ ರಾಹುಲ್ (ವಿಕೆಟ್‌ ಕೀಪರ್)‌

ರಾಹುಲ್‌ ಫಿಟ್‌ನೆಸ್‌ ಸಾಬೀತಾಗದ ಕಾರಣದಿಂದ ಏಷ್ಯಾಕಪ್‌ ತಂಡದ ಆಯ್ಕೆ ತಡ ಮಾಡಲಾಗಿದೆ ಎಂಬ ಅಭಿಪ್ರಾಯಗಳಿವೆ. ವಿಕೆಟ್‌ ಕೀಪರ್‌ ಕೂಡಾ ಆಗಿರುವ ಕನ್ನಡಿಗನ ಉಪಸ್ಥಿತಿ ತಂಡದಲ್ಲಿ ಪ್ರಾಮುಖ್ಯತೆ ಪಡೆದಿದೆ. ಒಂದು ವೇಳೆ ರಾಹುಲ್ ಸಂಪೂರ್ಣ ಫಿಟ್ ಆಗಿದ್ದರೆ ಅವರ ಆಯ್ಕೆ ಖಚಿತವಾಗಿರುತ್ತಿತ್ತು. ವರದಿಗಳ ಪ್ರಕಾರ ಚೇತರಿಸಿಕೊಂಡಿರುವ ರಾಹುಲ್ ಅಭ್ಯಾಸ ಅವಧಿಯಲ್ಲೂ ವಿಕೆಟ್ ಕೀಪಿಂಗ್ ಆರಂಭಿಸಿದ್ದಾರೆ. ಹೀಗಾಗಿ ಫಿಟ್‌ನೆಸ್‌ ಸಾಬೀತಾದರೆ ರಾಹುಲ್‌ ಆಯ್ಕೆ ಖಚಿತವಾಗಲಿದೆ.

ಇಶಾನ್ ಕಿಶನ್ (ವಿಕೆಟ್‌ ಕೀಪರ್)‌

ಮತ್ತೊಂದು ವಿಕೆಟ್ ಕೀಪಿಂಗ್ ಆಯ್ಕೆಯಾಗಿರುವ ಇಶಾನ್ ಕಿಶನ್ ಇನ್ನಿಂಗ್ಸ್‌ ಓಪನಿಂಗ್ ಮಾಡಬಲ್ಲರು. ಮಾತ್ರವಲ್ಲದೆ ಮಧ್ಯಮ ಕ್ರಮಾಂಕದಲ್ಲಿಯೂ ಆಡಬಲ್ಲರು. ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಇಶಾನ್ ನಿರ್ಲಕ್ಷ್ಯ ಮಾಡುವ ಸಾಧ್ಯತೆ ಕಡಿಮೆ.

ತಿಲಕ್ ವರ್ಮಾ

ಕಡಿಮೆ ಸಮಯದಲ್ಲಿ ತೆರೆಮರೆಯಿಂದ ತೆರೆಮುಂದೆ ಬಂದ ಯುವ ಆಟಗಾರ. ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲೇ ಅದ್ಭುತ ಪ್ರದರ್ಶನ ನೀಡಿ ಭವಿಷ್ಯದ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಹೀಗಾಗಿ ಇವರನ್ನು ಏಷ್ಯಾಕಪ್‌ಗೆ ಆಯ್ಕೆ ಮಾಡುವಂತೆ ಹಲವಾರು ಹಿರಿಯ ಆಟಗಾರರು ಧ್ವನಿ ಎತ್ತಿದ್ದಾರೆ.

ಶ್ರೇಯಸ್ ಅಯ್ಯರ್

ಗಾಯದ ಕಾರಣದಿಂದ ಅಯ್ಯರ್‌ ಆಯ್ಕೆ ಬಗ್ಗೆ ಅನುಮಾನಗಳಿವೆ. ಒಂದು ವೇಳೆ ಫಿಟ್‌ ಆಗಿದ್ದರೆ ಅಯ್ಯರ್‌ ಆಯ್ಕೆ ಖಚಿತವಾಗುತ್ತಿತ್ತು. ಬೆನ್ನಿನ ಕೆಳಭಾಗದ ಗಾಯದಿಂದಾಗಿ ಹೊರಗುಳಿದಿರುವ ಅಯ್ಯರ್‌, ರಾಹುಲ್ ಅವರಂತೆಯೇ ಸದ್ಯ ಅಭ್ಯಾಸ ಅವಧಿಯಲ್ಲಿ ಬ್ಯಾಟಿಂಗ್ ಮಾಡಲು ಪ್ರಾರಂಭಿಸಿದ್ದಾರೆ. ಫಿಟ್ನೆಸ್ ಸಾಬೀತುಪಡಿಸಲು ಆಯ್ಕೆದಾರರು ಅವರಿಗೆ ಮತ್ತೊಮ್ಮೆ ಅವಕಾಶ ನೀಡುವ ಸಾಧ್ಯತೆ ಇದೆ. ಒಂದು ವೇಳೆ ಅಯ್ಯರ್‌ ಫಿಟ್ ಆದರೆ, ನಾಲ್ಕನೇ ಕ್ರಮಾಂಕಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ.

ಸೂರ್ಯಕುಮಾರ್ ಯಾದವ್

ಟಿ20ಯಲ್ಲಿ ಅಬ್ಬರಿಸುವ ಸೂರ್ಯಕುಮಾರ್‌ ಅವರ ಏಕದಿನ ಫಾರ್ಮ್ ಚಿಂತಾಜನಕವಾಗಿದೆ. ಆದರೂ, ಸೂರ್ಯನಿಗೆ ಮೇಲಿಂದ ಮೇಲೆ ಅವಕಾಶ ನೀಡಲಾಗುತ್ತಿದೆ. ಹೀಗಾಗಿ ಏಕದಿನದಲ್ಲಿ ಅಬ್ಬರಿಸುವ ನಿರೀಕ್ಷೆಯಿಂದ ಮತ್ತೊಮ್ಮೆ ಅವಕಾಶ ನೀಡುವ ಸಾಧ್ಯತೆ ಇದೆ. ಇದರಲ್ಲಿ ಮುಂದಿನ ವಿಶ್ವಕಪ್‌ಗೆ ತಂಡ ರಚಿಸುವ ಉದ್ದೇಶವೂ ಇರುವ ಸಾಧ್ಯತೆಗಳಿವೆ.

ಹಾರ್ದಿಕ್ ಪಾಂಡ್ಯ

ಭಾರತದ ಅತ್ಯುತ್ತಮ ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿರುವ ಪಾಂಡ್ಯ, ಆಟದೊಂದಿಗೆ ನಾಯಕತ್ವ ಗುಣವನ್ನೂ ಹೊಂದಿದ್ದಾರೆ. ತಂಡಕ್ಕೆ ಬೆಸ್ಟ್ ಫಿನಿಶರ್ ಅಗತ್ಯವಿದ್ದು, ಹಾರ್ದಿಕ್‌ ಆಯ್ಕೆ ಖಚಿತವಾಗಿದೆ.

ರವೀಂದ್ರ ಜಡೇಜಾ

ಪಾಂಡ್ಯ ಮತ್ತು ಜಡೇಜಾ ಪ್ರಸ್ತುತ ಭಾರತ ತಂಡದ ಅತ್ಯುತ್ತಮ ಆಲ್‌ರೌಂಡರ್‌ಗಳು. ಬೌಲಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿ ಸಮಾನ ಪ್ರಭಾವ ಬೀರುವ ಸಾಮರ್ಥ್ಯ ಇರುವ ಆಟಗಾರರು. ಈ ಜೋಡಿ ಇಲ್ಲದೆ ಯಾವುದೇ ಸೀಮಿತ ಓವರ್‌ಗಳ ತಂಡ ಇರಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವಿದೆ. ಜಡೇಜಾ ಸ್ಪಿನ್ ಸಾಮರ್ಥ್ಯ ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್‌ ಆಗಿದೆ.

ಜಸ್ಪ್ರೀತ್ ಬೂಮ್ರಾ

ಐರ್ಲೆಂಡ್ ವಿರುದ್ಧದ ಸರಣಿ ಮೂಲಕ ಟೀಮ್‌ ಇಂಡಿಯಾಗೆ ಕಂಬ್ಯಾಕ್‌ ಮಾಡಿರುವ ಬೂಮ್ರಾ ಬೌಲಿಂಗ್ ಮಾಡಲು ಪ್ರಾರಂಭಿಸಿದ್ದಾರೆ. ಅವರ ಪುನರಾಗಮನದಿಂದ ತಂಡಕ್ಕೆ ಬಲ ಬಂದಿದೆ. ಟೀಮ್‌ ಇಂಡಿಯಾದ ಶ್ರೇಷ್ಠ ವೇಗದ ಬೌಲರ್‌ ಆಗಿರುವ ಅವರು, ಏಷ್ಯಾಕಪ್ ಮತ್ತು ವಿಶ್ವಕಪ್‌ ತಂಡಕ್ಕೆ ಮೊದಲ ಆಯ್ಕೆಯ ಬೌಲರ್‌ ಆಗಿ ಆಯ್ಕೆಯಾಗಲಿದ್ದಾರೆ.

ಮೊಹಮ್ಮದ್ ಶಮಿ

ಶಮಿ ಸೀಮ್ ಬೌಲಿಂಗ್ ಸಾಮರ್ಥ್ಯವನ್ನು ಎಂದಿಗೂ ನಿರ್ಲಕ್ಷಿಸಲಾಗುವುದಿಲ್ಲ. ಆರಂಭಿಕ ಓವರ್‌ಗಳಲ್ಲಿ ಇವರ ಬೌಲಿಂಗ್ ಭಾರತಕ್ಕೆ ನಿರ್ಣಾಯಕ.

ಮೊಹಮ್ಮದ್ ಸಿರಾಜ್

ಕಳೆದ ಎರಡು ವರ್ಷಗಳಲ್ಲಿ ಬೌಲಿಂಗ್‌ನಲ್ಲಿ ಸಿರಾಜ್‌ ಸುಧಾರಣೆ ಕಂಡ ಬಗ್ಗೆ ಅದ್ಭುತ. ಪವರ್‌ಪ್ಲೇನಲ್ಲಿ ವಿಕೆಟ್‌ ಟೇಕಿಂಗ್‌ ಬೌಲರ್‌ ಆಗಿರುವ ಸಿರಾಜ್‌ ಆಯ್ಕೆಯ ಸಾಧ್ಯತೆ ಕೂಡಾ ದಟ್ಟವಾಗಿದೆ.

ಅಕ್ಷರ್ ಪಟೇಲ್

ರವೀಂದ್ರ ಜಡೇಜಾ ಅವರಂಥ ಸಾಮರ್ಥ್ಯ ಹೊಂದಿರುವ ಮತ್ತೋರ್ವ ಬೌಲರ್‌ ಅಕ್ಷರ್. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗಿಂತ ಹೆಚ್ಚು ಪ್ರಭಾವ ಬೀರಬಲ್ಲ ಆಲ್‌ರೌಂಡರ್‌. ಹೀಗಾಗಿ ಅಶ್ವಿನ್‌ಗಿಂತ ಅಕ್ಷರ್‌ಗೆ ಈ ಬಾರಿಯೂ ಆದ್ಯತೆ ನೀಡಬಹುದು.

ಶಾರ್ದೂಲ್ ಠಾಕೂರ್

ಕೆಳ ಕ್ರಮಾಂಕದ ಬ್ಯಾಟಿಂಗ್‌ ಮಾಡಬಲ್ಲ ಸಾಮರ್ಥ್ಯವಿರುವ ಮತ್ತೊಬ್ಬ ವೇಗದ ಬೌಲಿಂಗ್ ಆಲ್‌ರೌಂಡರ್ ಠಾಕೂರ್.‌ ಇವರು ಕೂಡಾ ತಂಡಕ್ಕೆ ಪ್ರಮುಖ ಆಟಗಾರನಾಗಿ ಆಯ್ಕೆಯಾಗಬಹುದು.

ಕುಲದೀಪ್ ಯಾದವ್

ವೆಸ್ಟ್ ಇಂಡೀಸ್‌ ನೆಲದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಬೌಲರ್ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಪ್ರಭಾವ ಬೀರಬಲ್ಲರು.

ಯುಜ್ವೇಂದ್ರ ಚಹಾಲ್

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಚಹಾಲ್‌ಗೆ ಅವಕಾಶ ಸಿಗಲಿಲ್ಲ. ಆದರೆ ಆ ಬಳಿಕ ಟಿ20 ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಸ್ಪಿನ್ನರ್‌ ಆಗಿ ಚಹಾಲ್‌ ಕೂಡಾ ಆಯ್ಕೆಯಾಗಬಲ್ಲರು.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ