ದಕ್ಷಿಣ ಭಾರತದವ್ರು ಆಫ್ರಿಕನ್ನರಂತೆ ಕಾಣ್ತಾರೆ ಅನ್ನೋ ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಗುನ್ನ ಕೊಟ್ಟ ಕನ್ನಡ ನಟಿ ಪ್ರಣೀತಾ ಸುಭಾಷ್
May 09, 2024 11:01 AM IST
ದಕ್ಷಿಣ ಭಾರತದವ್ರು ಆಫ್ರಿಕನ್ನರಂತೆ ಕಾಣ್ತಾರೆ ಅನ್ನೋ ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಗುನ್ನ ಕೊಟ್ಟ ಕನ್ನಡ ನಟಿ ಪ್ರಣೀತಾ ಸುಭಾಷ್
- ದಕ್ಷಿಣ ಭಾರತದವರು ಸೌತ್ ಆಫ್ರಿಕಾದವರಂತೆ ಕಾಣುತ್ತಾರೆ ಎಂಬ ಹೇಳಿಕೆ ನೀಡಿದ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ವಿರುದ್ಧ ಟೀಕೆಗಳು ಹೇಳಿ ಬರುತ್ತಿವೆ. ಈ ಹೇಳಿಕೆ ಬಗ್ಗೆ ನಟಿ ಪ್ರಣೀತಾ ಸುಭಾಷ್ ಸಹ ಪ್ರತಿಕ್ರಿಯೆ ನೀಡಿದ್ದಾರೆ.
Pranitha subhash reacts on Sam Pitroda: ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ, ಜನಾಂಗೀಯ ವಿಚಾರಕ್ಕೆ ಸಂಬಂಧಿಸಿದಂತೆ ಅಸಂಬದ್ಧ ಹೇಳಿಕೆ ನೀಡಿ ಮತ್ತೆ ಟೀಕೆಗಳನ್ನು ಎದುರಿಸುತ್ತಿದ್ದಾರೆ. ದಕ್ಷಿಣ ಭಾರತದವರು ನೋಡಲು ಥೇಟ್ ಆಫ್ರಿಕನ್ನರನ್ನು ಹೋಲುತ್ತಾರೆ, ಅದೇ ರೀತಿ ಈಶಾನ್ಯ ರಾಜ್ಯದಲ್ಲಿನವರು ಚೀನಿ ಮಂದಿಯಂತಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದರು. ಈಗ ಇದೇ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದ್ದಲ್ಲದೆ, ವ್ಯಾಪಕ ವಿರೋಧವೂ ವ್ಯಕ್ತವಾಗುತ್ತಿದೆ. ಸೌತ್ ಸಿನಿಮಾ ಸೆಲೆಬ್ರಿಟಿಗಳೂ ಈ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸ್ಯಾಮ್ ಪಿತ್ರೋಡಾ ಅವರ ಜನಾಂಗೀಯ ಹೇಳಿಕೆ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ. ಕಾಂಗ್ರೆಸ್ ನಾಯಕನ ಬಾಯಲ್ಲಿ ಬಂದ ಈ ಹೇಳಿಕೆಯನ್ನು ಸ್ವತಃ ಕಾಂಗ್ರೆಸ್‌ನವರೇ ಒಪ್ಪಿಕೊಳ್ಳುತ್ತಿಲ್ಲ. ಈ ನಡುವೆ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದಾರೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ "I am a South Indian ! And I look Indian" ಎಂಬ ಸಾಲುಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗುತ್ತಿದೆ.
ಪ್ರಣೀತಾ ಸುಭಾಷ್ ಟ್ವಿಟ್
ಬಹುಭಾಷಾ ನಟಿ, ಕನ್ನಡತಿ ಪ್ರಣೀತಾ ಸುಭಾಷ್ ಸಹ ಸ್ಯಾಮ್ ಪಿತ್ರೋಡಾ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಸೋಷಿಯಲ್ ಮೀಡಿಯಾ ಟ್ವಿಟರ್‌ನಲ್ಲಿ ತಮ್ಮದೊಂದು ಫೋಟೋ ಹಂಚಿಕೊಂಡು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪೋಸ್ಟ್‌ಗೆ ರಿಪ್ಲೈ ಮಾಡಿದ ಪ್ರಣೀತಾ, "ನಾನು ಓರ್ವ ಸೌತ್ ಇಂಡಿಯನ್! ನಾನು ಭಾರತೀಯಳಂತೆ ಕಾಣುತ್ತೇನೆ" ಎಂಬ ಸಾಲುಗಳನ್ನು ಬರೆದುಕೊಂಡಿದ್ದಾರೆ.
ನಿರ್ಮಲಾ ಸೀತಾರಾಮನ್ ಏನಂದ್ರು?
ನಿರ್ಮಾಲಾ ಸೀತಾರಾಮನ್ ಅವರೂ ಸಹ ಈ ಹೇಳಿಕೆಯನ್ನು ವಿರೋಧಿಸಿದ್ದಾರೆ. "ನಾನು ದಕ್ಷಿಣ ಭಾರತದವಳು. ನಾನು ಭಾರತೀಯಳಂತೆ ಕಾಣುತ್ತೇನೆ! ನನ್ನ ತಂಡವು ಈಶಾನ್ಯ ಭಾರತದಿಂದ ಉತ್ಸಾಹಿ ಸದಸ್ಯರನ್ನು ಹೊಂದಿದೆ. ಅವರೂ ಭಾರತೀಯರಂತೆ ಕಾಣುತ್ತಾರೆ! ಪಶ್ಚಿಮ ಭಾರತದ ನನ್ನ ಸಹೋದ್ಯೋಗಿಗಳು ಭಾರತೀಯರಂತೆ ಕಾಣುತ್ತಾರೆ. ನಿಮ್ಮ ಮನಸ್ಥಿತಿ ಮತ್ತು ನಿಮ್ಮ ಮನೋಭಾವವನ್ನು ಬಹಿರಂಗಪಡಿಸಿದ್ದಕ್ಕಾಗಿ ಧನ್ಯವಾದಗಳು ಎಂದಿದ್ದರು.
ಅಷ್ಟಕ್ಕೂ ಸ್ಯಾಮ್ ಪಿತ್ರೋಡಾ ಹೇಳಿದ್ದೇನು?
ದಿ ಸ್ಟೇಟ್ಸ್‌ಮನ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಸ್ಯಾಮ್ ಪಿತ್ರೋಡಾ, ಭಾರತದಲ್ಲಿನ ವೈವಿದ್ಯತೆಯ ಬಗ್ಗೆ ಮಾತನಾಡಿದ್ದರು. ಆದರೆ, ಅವರ ಹೇಳಿಕೆ ಜನಾಂಗೀಯ ಸ್ವರೂಪ ಪಡೆದುಕೊಂಡಿತ್ತು. ಅಷ್ಟಕ್ಕೂ ಸ್ಯಾಮ್ ಪಿತ್ರೋಡಾ ಹೇಳಿದ್ದೇನು? ಇಲ್ಲಿದೆ ನೋಡಿ. "ಕಳೆದ 75 ವರ್ಷಗಳಿಂದ ಭಾರತದಲ್ಲಿ ತುಂಬ ಖುಷಿಯಾಗಿಯೇ ನಾವು ಬದುಕುತ್ತಿದ್ದೇವೆ. ಭಾರತದಲ್ಲಿ ಪೂರ್ವದ ಜನರು ಚೀನಿಯರಂತೆ ಕಾಣುತ್ತಾರೆ, ಪಶ್ಚಿಮದಲ್ಲಿರುವ ಜನರು ಅರಬ್ಬರಂತಿದ್ದಾರೆ, ಉತ್ತರದ ಜನರು ಬಹುಶಃ ಬಿಳಿಯರಂತೆ ಮತ್ತು ದಕ್ಷಿಣದ ಜನರು ಆಫ್ರಿಕನ್ನರಂತೆ ಕಾಣುತ್ತಾರೆ" ಎಂದು ಹೇಳಿಕೆ ನೀಡಿದ್ದರು.