logo
ಕನ್ನಡ ಸುದ್ದಿ  /  ಕರ್ನಾಟಕ  /  Forest News: ವನ್ಯಜೀವಿ ಸಂಘರ್ಷ ತಡೆಗೆ ಕರ್ನಾಟಕ, ಕೇರಳ,ತಮಿಳುನಾಡು ಸಮನ್ವಯಕ್ಕೆ ಅರಣ್ಯ ಸಲಹಾ ಮಂಡಳಿ ರಚನೆ

Forest News: ವನ್ಯಜೀವಿ ಸಂಘರ್ಷ ತಡೆಗೆ ಕರ್ನಾಟಕ, ಕೇರಳ,ತಮಿಳುನಾಡು ಸಮನ್ವಯಕ್ಕೆ ಅರಣ್ಯ ಸಲಹಾ ಮಂಡಳಿ ರಚನೆ

Umesha Bhatta P H HT Kannada

Mar 10, 2024 06:32 PM IST

google News

ಬಂಡೀಪುರದಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಕೇರಳ ಸಚಿವ ಶಶೀಂದ್ರನ್‌, ಕರ್ನಾಟಕದ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.

    • ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಅರಣ್ಯ ಇಲಾಖೆಗಳು ಸಮನ್ವಯದಿಂದ ಮಾನವ, ವನ್ಯಜೀವಿ ಸಂಘರ್ಷ ತಪ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ನಿರ್ಣಯಿಸಿವೆ. 
ಬಂಡೀಪುರದಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಕೇರಳ ಸಚಿವ ಶಶೀಂದ್ರನ್‌, ಕರ್ನಾಟಕದ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.
ಬಂಡೀಪುರದಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಕೇರಳ ಸಚಿವ ಶಶೀಂದ್ರನ್‌, ಕರ್ನಾಟಕದ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.

ಬಂಡೀಪುರ( ಚಾಮರಾಜನಗರ ಜಿಲ್ಲೆ) : ಕರ್ನಾಟಕ, ಕೇರಳ, ತಮಿಳುನಾಡಿಗೆ ಹೊಂದಿಕೊಂಡಿರುವ ನೀಲಗಿರಿ ಜೀವವೈವಿಧ್ಯ ತಾಣದಲ್ಲಿ ಹೆಚ್ಚಿರುವ ವನ್ಯಜೀವಿ ಮಾನವ ಸಂಘರ್ಷ ತಗ್ಗಿಸುವ ನಿಟ್ಟಿನಲ್ಲಿ ಸಮನ್ವಯದೊಂದಿಗೆ ಕೆಲಸ ಮಾಡಲು ಸಲಹಾ ಮಂಡಳಿಯನ್ನು ರಚಿಸುವ ತೀರ್ಮಾನ ಮಾಡಲಾಗಿದೆ. ಸಂಘರ್ಷದಿಂದ ಪ್ರಾಣಿಗಳ ಜತೆಗೆ ಮನುಷ್ಯರಿಗೂ ತೊಂದರೆಯಾಗದಂತೆ ಕೂಡಲೇ ಕಾರ್ಯಪ್ರವೃತ್ತರಾಗಲು ಮೂರು ರಾಜ್ಯಗಳ ಅರಣ್ಯ ಇಲಾಖೆಗಳು ಕಾರ್ಯನೀತಿ ರೂಪಿಸಿಕೊಂಡು ಇನ್ನು ಮುಂದೆ ಕೆಲಸ ಮಾಡಲಿವೆ. ಈ ಕುರಿತು ಬಂಡೀಪುರದಲ್ಲಿ ಭಾನುವಾರ ನಡೆದ ಕರ್ನಾಟಕ, ಕೇರಳ, ತಮಿಳುನಾಡು ಅರಣ್ಯ ಸಚಿವರು, ಹಿರಿಯ ಅಧಿಕಾರಿಗಳು ಸುಧೀರ್ಘ ಸಭೆ ನಡೆಸಿ ಹಲವಾರು ತೀರ್ಮಾನಗಳನ್ನು ಕೈಗೊಳ್ಳಲಾಯಿತು.

ಕಳೆದ ತಿಂಗಳು ಕೇರಳದಲ್ಲಿ ಆನೆ ತುಳಿತಕ್ಕೆ ರೈತ ಮೃತಪಟ್ಟ ವಿಚಾರದಲ್ಲಿ ಕರ್ನಾಟಕದಿಂದ ಪರಿಹಾರ ನೀಡಲು ನಿರ್ಧರಿಸಿದ ನಂತರ ಈ ವಿಚಾರದಲ್ಲಿ ಸಂಘರ್ಷ ಏರ್ಪಟ್ಟಿತ್ತು. ಸಮನ್ವಯದ ಕೊರತೆಯಿಂದ ಸಂಘರ್ಷದ ವಿಚಾರಗಳು ಹೆಚ್ಚಿ ಆಡಳಿತಾತ್ಮಕವಾಗಿ ಸಮಸ್ಯೆಯಾಗಬಹುದು ಎನ್ನುವ ನಿಟ್ಟಿನಲ್ಲಿ ಈ ಸಭೆ ನಡೆಸಲಾಗಿದೆ.

ಬಂಡೀಪುರದ ಹುಲಿ ಸಂರಕ್ಷಿತ ಅರಣ್ಯದ ಸಫಾರಿ ಸ್ವಾಗತ ಕೇಂದ್ರದ ಬಳಿ ನಿರ್ಮಿಸಲಾಗಿದ್ದ ಸಭಾಂಗಣದಲ್ಲಿ ಕೇರಳದ ಅರಣ್ಯ ಸಚಿವ ಎ.ಕೆ. ಶಶೀಂದ್ರನ್ ಅವರೊಂದಿಗೆ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳ ಪ್ರಥಮ ಸಮನ್ವಯ ಸಭೆಯಲ್ಲಿ ಕರ್ನಾಟಕದ ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿದರು.

ಅರಣ್ಯ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳನ್ನು ಕರ್ನಾಟಕ, ಕೇರಳ ಮತ್ತು ತಮಿಳುನಾಡು ಮೂರೂ ರಾಜ್ಯಗಳು ಉತ್ತಮವಾಗಿ ಮಾಡುತ್ತಿವೆ. ಹೀಗಾಗಿಯೇ ಈ ಮೂರೂ ರಾಜ್ಯಗಳಲ್ಲಿ ವನ್ಯ ಜೀವಿಗಳ ಸಂಖ್ಯೆ ಹೆಚ್ಚಳವಾಗಿದೆ. ಈ ಪ್ರಯತ್ನಗಳನ್ನು ಮುಂದುವರಿಸುವುದು ನಿರ್ಣಾಯಕ. ಮಾನವ-ಪ್ರಾಣಿ ಸಂಘರ್ಷವನ್ನು ನಿರ್ವಹಿಸಲು ಜಂಟಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು (ಎಸ್ಒಪಿ) ಅಳವಡಿಸಿಕೊಳ್ಳಲು ಪ್ರಸ್ತಾಪಿಸಿದ ಸಚಿವ ಈಶ್ವರ ಖಂಡ್ರೆ, ವಿವಿಧ ಇಲಾಖೆಗಳ ನಡುವೆ ಸಹಯೋಗ ಈ ನಿಟ್ಟಿನಲ್ಲಿ ಅತ್ಯಗತ್ಯವಾಗಿದೆ ಎಂದು ಹೇಳಿದರು.

ದಿವಂಗತ ಪ್ರಧಾನಿ ಇಂದಿರಾಗಾಂಧೀ ಅವರು ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಒತ್ತು ನೀಡಿ, ಕಾಯಿದೆಗಳನ್ನು ಜಾರಿಗೆ ತಂದರು. ನಂತರದ ಎಲ್ಲ ಸರ್ಕಾರಗಳೂ ವನ ಮತ್ತು ವನ್ಯಜೀವಿ ಸಂಪತ್ತಿನ ರಕ್ಷಣೆಗೆ ಒತ್ತು ನೀಡಿದ ಫಲವಾಗಿ ಅರಣ್ಯ ಸಂರಕ್ಷಣೆಯೂ ಆಗಿದೆ. ವನ್ಯಜೀವಿಗಳ ಸಂತತಿಯಲ್ಲೂ ಹೆಚ್ಚಳವಾಗಿದೆ. ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ದಕ್ಷಿಣದ ಈ ಮೂರೂ ರಾಜ್ಯಗಳಲ್ಲಿರುವ ಉತ್ತಮ ರೂಢಿಗಳನ್ನು ಅಳವಡಿಸಿಕೊಂಡು ಪ್ರಕೃತಿ ಪರಿಸರ ಉಳಿಸಲು ಪರಸ್ಪರ ಸಹಯೋಗ ನೀಡಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.

ವನ್ಯಜೀವಿ ಸಂಘರ್ಷ, ಕಳ್ಳಬೇಟಿ ತಡೆ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಒಗ್ಗೂಡಿ ಶ್ರಮಿಸಲು ತೀರ್ಮಾನಿಸಿವೆ. ಇದು ಕೇಂದ್ರ ಸರ್ಕಾರದ ಆದೇಶದ ಮೇಲೆ ನಡೆಯುತ್ತಿರುವ ಸಭೆಯಲ್ಲ. ಬದಲಾಗಿ, ದಕ್ಷಿಣದ ಮೂರು ರಾಜ್ಯಗಳ ಕಳಕಳಿ ಮತ್ತು ಸ್ವಯಂ ಪ್ರಯತ್ನದ ಫಲವಾದ ಸಭೆಯಾಗಿದೆ ಎಂದು ತಿಳಿಸಿದರು.

ವನ್ಯ ಜೀವಿಗಳು ಸ್ವಚ್ಛಂದವಾಗಿ ಒಂದು ಕಾಡಿನಿಂದ ಮತ್ತೊಂದಕ್ಕೆ ಸಂಚರಿಸುತ್ತವೆ. ಹಲವಾರು ಶತಮಾನಗಳಿಂದ ತಮಿಳುನಾಡು, ಕೇರಳ ಮತ್ತು ಕರ್ನಾಟಕದ ನಡುವೆ ಆನೆಗಳು ಮುಕ್ತವಾಗಿ ಓಡಾಡುತ್ತಿದ್ದು, ಯಾವುದೇ ವನ್ಯಜೀವಿಗೆ ರಾಜ್ಯದ ಗಡಿಯ ಮಿತಿ ಇರುವುದಿಲ್ಲ. ಆನೆ ಕಾರಿಡಾರ್ ಇದೆ. ಹುಲಿಗಳು ಕೂಡ ಒಂದು ಕಾಡಿನಿಂದ ಮತ್ತೊಂದಕ್ಕೆ ಹೋಗುತ್ತವೆ. ಈ ವನ್ಯಜೀವಿಗಳಿಂದ ಯಾವುದೇ ರಾಜ್ಯದಲ್ಲಿ ಅಮೂಲ್ಯ ಜೀವ ಅಥವಾ ಬೆಳೆ ಹಾನಿ ತಗ್ಗಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಲಾಗಿದ್ದು ಶೀಘ್ರದಲ್ಲೇ ಇದಕ್ಕೆ ಒಂದು ಮೂರ್ತ ರೂಪ ನೀಡಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ಮೂರೂ ರಾಜ್ಯಗಳ ನಡುವೆ ನಡೆಯುವ ಸಭೆಗಳಲ್ಲಿ ತಂತ್ರಜ್ಞಾನ ಬಳಕೆಗೆ ಒತ್ತು ನೀಡಲಾಗುವುದು. ಜೊತೆಗೆ ಸನ್ನಾ ಮತ್ತು ಲಂಟಾನಾ ಕಳೆಯ ಸಮಸ್ಯೆಯ ನಿವಾರಣೆಗೂ ಸಹಯೋಗ ಅಗತ್ಯವಾಗಿದ್ದು, ತಂತ್ರಜ್ಞಾನ ಅಳವಡಿಕೆ ಮತ್ತು ಕಳೆ ನಾಶಕ್ಕೆ ಒಂದು ಸಲಹಾ ಸಮಿತಿ ರಚಿಸಲು ಪ್ರಸ್ತಾಪಿಸಲಾಗಿದೆ ಎಂದರು.

ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಪಿಸಿಸಿಎಫ್), ಅರಣ್ಯ ಪಡೆ ಮುಖ್ಯಸ್ಥರು, ಮುಖ್ಯ ವನ್ಯಜೀವಿ ವಾರ್ಡನ್‌ ಗಳು ಮತ್ತು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ಆದ ತೀರ್ಮಾನಗಳೇನು

1. ಹಂಚಿಕೆಯ ಹೊಣೆಗಾರಿಕೆ ಸಮ್ಮತಿ: ವನ್ಯಜೀವಿಗಳ ಆವಾಸಸ್ಥಾನಗಳನ್ನು ಗುರುತಿಸುವುದು ಮತ್ತು ವಿಸ್ತರಿಸುತ್ತಿರುವುದು. ವಿಸ್ತರಣೆಯಾಗುತ್ತಿರುವ ವಸತಿ ಪ್ರದೇಶಗಳ ನಡುವೆಯೂ ಅರಣ್ಯ ಸಂರಕ್ಷಿಸುವ ಬದ್ಧತೆ.

2. ಸಹಯೋಗದ ಚಾರ್ಟರ್: ಗಡಿಗಳನ್ನು ಮೀರಿ, ಮಾನವ-ಪ್ರಾಣಿ ಸಂಘರ್ಷಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುವ ಪ್ರತಿಜ್ಞೆ.

3. ಕಾರ್ಯತಂತ್ರದ ಸಮನ್ವಯ: ತಡೆರಹಿತ ಸಹಯೋಗ, ರಚನಾತ್ಮಕ ಮಾಹಿತಿಯ ಹಂಚಿಕೆ ಮತ್ತು ಮಾನವ-ವನ್ಯಜೀವಿ ಸಂಘರ್ಷ ಸವಾಲುಗಳ ವಿರುದ್ಧ ಜಂಟಿ ಪ್ರಯತ್ನ.

4. ಸಂಪನ್ಮೂಲ ವಿನಿಮಯ ಕಾರ್ಯಕ್ರಮ: ಸಮನ್ವಯತೆಯನ್ನು ಸಂಕೇತಿಸುವ ಈ ಕಾರ್ಯಕ್ರಮವು ನಿರ್ಣಾಯಕ ಸಂಪನ್ಮೂಲಗಳು, ಪರಿಣಿತಿ ಮತ್ತು ಜ್ಞಾನದ ವಿನಿಮಯ ಸುಗಮಗೊಳಿಸುತ್ತದೆ.

5. ವನ್ಯಜೀವಿ ಸಂಖ್ಯೆಯ ಅಂದಾಜು ಮತ್ತು ಜಂಟಿ ಕಾರ್ಯಾಚರಣೆಗಳು: ವನ್ಯಜೀವಿಗಳ ಸಂಖ್ಯೆಯ ಆಧಾರದ ಮೇಲೆ ಮತ್ತು ಸಂಘಟಿತ ಕಾರ್ಯಾಚರಣೆಗಳ ಮೂಲಕ ಮಾಹಿತಿ ಆಧಾರಿತವಾಗಿ ನಿರ್ಧಾರ ತೆಗೆದುಕೊಳ್ಳುವುದು.

6. ಸಲಹಾ ಮಂಡಳಿ: ವನ್ಯಜೀವಿ ಸಂರಕ್ಷಣಾ ತಜ್ಞರನ್ನು ಒಳಗೊಂಡು, ಸಂಘರ್ಷ ನಿರ್ವಹಣಾ ತಂತ್ರಗಳನ್ನು ಹೆಚ್ಚಿಸಲು ಅಮೂಲ್ಯವಾದ ಒಳನೋಟಗಳನ್ನು ಒದಗಿಸುವ ನಿಟ್ಟಿನಲ್ಲಿ ಒಂದು ಸಲಹಾ ಮಂಡಳಿ ರಚಿಸುವ ಪ್ರಸ್ತಾಪ.

7. ವಿಮರ್ಶೆ ಮತ್ತು ಹೊಂದಾಣಿಕೆ: ಸುಸ್ಥಿರ ಉತ್ಕೃಷ್ಟತೆ ಮತ್ತು ವಿಕಸನಗೊಳ್ಳುತ್ತಿರುವ ಜವಾಬ್ದಾರಿಗಳಿಗೆ ಹೊಂದಿಕೊಳ್ಳುವಿಕೆಗಾಗಿ ಆಡಳಿತದಲ್ಲಿ ನಿಯಮಿತ ಪರಾಮರ್ಶೆ.

8 . ಭವಿಷ್ಯದ ಹಂಚಿಕೆಯ ದೃಷ್ಟಿಕೋನ: ಮಾನವ ಮತ್ತು ವನ್ಯಜೀವಿಗಳು ಸಾಮರಸ್ಯದಿಂದ ಸಹಬಾಳ್ವೆ ನಡೆಸುವ ಜವಾಬ್ದಾರಿಯುತ ಸಂರಕ್ಷಣೆಯ ಪರಂಪರೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಆಡಳಿತಾತ್ಮಕ ಗಡಿಗಳನ್ನು ಮೀರಿದ ಹಂಚಿಕೆಯ ದೃಷ್ಟಿಕೋನವನ್ನು ಈ ಚಾರ್ಟರ್ ಒಳಗೊಂಡಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ