logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Elephant Attack: ಬೆಂಗಳೂರು ಬಳಿ ರೈತ ಕಾಡಾನೆ ತುಳಿತಕ್ಕೆ ವೃದ್ದ ಬಲಿ: ಅರಣ್ಯ ಇಲಾಖೆ ವಿರುದ್ದ ಆಕ್ರೋಶ

Bengaluru Elephant attack: ಬೆಂಗಳೂರು ಬಳಿ ರೈತ ಕಾಡಾನೆ ತುಳಿತಕ್ಕೆ ವೃದ್ದ ಬಲಿ: ಅರಣ್ಯ ಇಲಾಖೆ ವಿರುದ್ದ ಆಕ್ರೋಶ

HT Kannada Desk HT Kannada

Dec 17, 2023 03:36 PM IST

google News

ಬೆಂಗಳೂರು ಹೊರ ವಲಯದ ಹಾರೋಹಳ್ಳಿ ಬಳಿ ಕಾಡಾನೆ ದಾಳಿಗೆ ವೃದ್ದರೊಬ್ಬರು ಮೃತಪಟ್ಟಿದ್ಧಾರೆ.

    • Elephant attack near Bengaluru ಬೆಂಗಳೂರು ಹೊರ ವಲಯದ ಹಾರೋಹಳ್ಳಿ ತಾಲ್ಲೂಕಿನಲ್ಲಿ ಭಾನುವಾರ ಬೆಳ್ಳಂಬೆಳಿಗ್ಗೆ ಕಾಡಾನೆ ದಾಳಿ ನಡೆಸಿದ್ದರಿಂದ ಜಮೀನು ಕಡೆ ಹೊರಟಿದ್ದ ವೃದ್ದರೊಬ್ಬರು ಮೃತಪಟ್ಟಿದ್ದಾರೆ.
ಬೆಂಗಳೂರು ಹೊರ ವಲಯದ ಹಾರೋಹಳ್ಳಿ ಬಳಿ ಕಾಡಾನೆ ದಾಳಿಗೆ ವೃದ್ದರೊಬ್ಬರು ಮೃತಪಟ್ಟಿದ್ಧಾರೆ.
ಬೆಂಗಳೂರು ಹೊರ ವಲಯದ ಹಾರೋಹಳ್ಳಿ ಬಳಿ ಕಾಡಾನೆ ದಾಳಿಗೆ ವೃದ್ದರೊಬ್ಬರು ಮೃತಪಟ್ಟಿದ್ಧಾರೆ.

ಬೆಂಗಳೂರು: ಬೆಂಗಳೂರು ಹೊರ ವಲಯದಲ್ಲಿ ಕಾಡಾನೆ ದಾಳಿ ಮಾಡಿದ್ದರಿಂದ ವೃದ್ದರೊಬ್ಬರು ಮೃತಪಟ್ಟಿದ್ದಾರೆ.

ರಾಮನಗರ ಜಿಲ್ಲೆ ಹಾರೋಹಳ್ಳಿ ತಾಲ್ಲೂಕು ಮರಳವಾಡಿ ಹೋಬಳಿಯ ಹರಳಿಕರೆ ದೊಡ್ಡಿ ಬಳಿ ಜಮೀನು ಕಡೆ ಹೊರಟಿದ್ದ ತಿಮ್ಮೇಗೌಡ(70) ಎಂಬುವವರ ಮೇಲೆ ಭಾನುವಾರ ಬೆಳಗಿನ ಜಾವ ಏಕಾಏಕಿ ಆನೆ ದಾಳಿ ನಡೆಸಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ಧಾರೆ. ಈ ಭಾಗದಲ್ಲಿ ಆನೆ ಹಾವಳಿ ಇದೆ. ಅರಣ್ಯ ಇಲಾಖೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದರು.

ಗ್ರಾಮದಲ್ಲಿಯೇ ರೇಷ್ಮೆ ಕೃಷಿ ಮಾಡಿಕೊಂಡಿದ್ದ ತಿಮ್ಮೇಗೌಡ ಅವರು ಬೆಳಗಿನ ಜಾವ 5ರ ಹೊತ್ತಿಗೆ ನೀರು ಹರಿಸಲೆಂದು ಜಮೀನು ಕಡೆ ನಡೆದು ಹೋಗುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ. ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಆನೆ ತಿಮ್ಮೇಗೌಡ ಅವರ ಎದೆ ಭಾಗದ ಮೇಲೆ ಕಾಲಿಟ್ಟಿದ್ದು, ಸ್ಥಳದಲ್ಲಿಯೇ ಮೃತಪಟ್ಟರು.

ಬೆಳಕು ಹರಿದಾಗ ಇದನ್ನು ಗಮನಿಸಿದವರು ಮನೆಯವರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು. ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದರಿಂದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು.

ಈ ಭಾಗದಲ್ಲಿ ಆನೆಗಳು ಆಗಾಗ ಬರುತ್ತಲೇ ಇರುತ್ತವೆ. ಬೆಳೆ ಹಾನಿ ಮಾಡುತ್ತವೆ. ಕಲವರು ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ನಾವುಗಳು ಜೀವಭಯದಿಂದಲೇ ಬದುಕು ನಡೆಸುವ ಸ್ಥಿತಿಯಿದೆ ಎಂದು ಜನ ಆಕ್ರೋಶ ಹೊರ ಹಾಕಿದರು.

ಕೆಲವರು ಒಂದೇ ಆನೆ ಬಂದಿತ್ತು ಎಂದರೆ ಇನ್ನು ಕೆಲವರು ಮೂರು ಆನೆಗಳು ಬಂದಿವೆ ಎಂದು ಸ್ಥಳಕ್ಕೆ ಆಗಮಿಸಿದ್ದ ಬೆಂಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ( CCF) ಲಿಂಗರಾಜು ಅವರಿಗೆ ಮಾಹಿತಿ ನೀಡಿದರು.

ಹಾರೋಹಳ್ಳಿ ವಲಯದಲ್ಲಿ ಆನೆ ಸಮಸ್ಯೆ ಇರುವ ಕಡೆಗೆ ರೈಲ್ವೆ ಕಂಬಿ ಅಳವಡಿಸಿ ಆನೆಗಳು ಕಾಡಿನಿಂದ ಬಾರದಂತೆ ಮಾಡಲಾಗುವುದು. ಈಗಾಗಲೇ ಟೆಂಡರ್‌ ಕೂಡ ಕರೆಯಲಾಗಿದ್ದು, ಕೂಡಲೇ ಕೆಲಸ ಶುರು ಮಾಡಲಾಗುತ್ತದೆ ಎಂದು ಸಿಸಿಎಫ್‌ ಲಿಂಗರಾಜು ಭರವಸೆ ನೀಡಿದರು.

ಮೃತರ ದೇಹವನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುವುದು. ವರದಿ ಬಂದ ನಂತರ 15 ಲಕ್ಷ ರೂ. ಪರಿಹಾರವನ್ನು ಅರಣ್ಯ ಇಲಾಖೆಯಿಂದ ನೀಡಲಾಗುವುದು ಎಂದು ತಿಳಿಸಿದರು.

ಶಿಬಿರ ಸ್ಥಾಪನೆ

ಈಗಾಗಲೇ ಈ ಭಾಗದಲ್ಲಿ ಆನೆ ಹಾವಳಿ ಇರುವುದರಿಂದ ಬನ್ನೇರಘಟ್ಟ ಹಾಗೂ ರಾಮನಗರ ಜಿಲ್ಲೆಗೂ ಪ್ರತ್ಯೇಕ ಆನೆ ಕಾರ್ಯಪಡೆ ರಚಿಸಲಾಗಿದೆ. ಅವುಗಳು ಕಾರ್ಯನಿರ್ವ ಹಿಸುತ್ತಿವೆ. ಈ ಭಾಗದಲ್ಲಿ ಶಿಬಿರವೊಂದನ್ನು ಸ್ಥಾಪಿಸಿ ಆನೆಗಳ ಚಲನವಲನ ಮೇಲೆ ನಿಗಾ ಇರಿಸಲಾಗುವುದು. ಶಿಬಿರ ಇಂದಿನಿಂದಲೇ ಹಾರೋಹಳ್ಳಿ ಭಾಗದಲ್ಲಿ ಆರಂಭಿಸಲಾಗುವುದು ಎಂದು ಲಿಂಗರಾಜು ತಿಳಿಸಿದ್ದಾರೆ.

ಡಿಸಿಎಂ ಸೂಚನೆ

ಆನೆ ದಾಳಿಯಿಂದ ಮೃತಪಟ್ಟ ರೈತನ ಕುಟುಂಬಕ್ಕೆ ಪರಿಹಾರ ನೀಡಬೇಕು. ಕೂಡಲೇ ಆನೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕನಕಪುರ ಶಾಸಕರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ