logo
ಕನ್ನಡ ಸುದ್ದಿ  /  ಕರ್ನಾಟಕ  /  ಶಾಲಾ ಘೋಷ ವಾಕ್ಯ ವಿವಾದ; ಮಕ್ಕಳಲ್ಲಿ ಸಂಘರ್ಷದ ಮನೋಭಾವ ಬಿತ್ತುತ್ತಿದೆ ಕಾಂಗ್ರೆಸ್ ಸರ್ಕಾರ, ಬಿಜೆಪಿ ನಾಯಕರ ಟೀಕೆ

ಶಾಲಾ ಘೋಷ ವಾಕ್ಯ ವಿವಾದ; ಮಕ್ಕಳಲ್ಲಿ ಸಂಘರ್ಷದ ಮನೋಭಾವ ಬಿತ್ತುತ್ತಿದೆ ಕಾಂಗ್ರೆಸ್ ಸರ್ಕಾರ, ಬಿಜೆಪಿ ನಾಯಕರ ಟೀಕೆ

Umesh Kumar S HT Kannada

Feb 19, 2024 02:11 PM IST

google News

ಕರ್ನಾಟಕ ವಸತಿ ಶಾಲಾ ಘೋಷ ವಾಕ್ಯ ವಿವಾದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕರು, ಕಾಂಗ್ರೆಸ್ ಸರ್ಕಾರವು ಮಕ್ಕಳಲ್ಲಿ ಸಂಘರ್ಷದ ಮನೋಭಾವ ಬಿತ್ತುತ್ತಿದೆ ಎಂದು ಟೀಕೆ ಮಾಡಿದ್ದಾರೆ. ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಈ ಕುರಿತು ಟೀಕೆ ಮಾಡಿದ್ದಾರೆ.

  • ಶಾಲಾ ಘೋಷ ವಾಕ್ಯ ವಿವಾದ ಗರಿಗೆದರಿದ್ದು, ಮಕ್ಕಳಲ್ಲಿ ಸಂಘರ್ಷದ ಮನೋಭಾವ ಬಿತ್ತುತ್ತಿದೆ ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ನಾಯಕರು ಟೀಕೆ ಮಾಡಿದ್ದಾರೆ. ಕರ್ನಾಟಕ ಸರ್ಕಾರಿ ವಸತಿ ಶಾಲೆಗಳ ಪ್ರವೇಶ ದ್ವಾರದ ಘೋಷ ವಾಕ್ಯವನ್ನು “ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ” ಎಂದು ಬದಲಾಯಿಸಿದ್ದು ಈ ವಿವಾದಕ್ಕೆ ಕಾರಣ.

ಕರ್ನಾಟಕ ವಸತಿ ಶಾಲಾ ಘೋಷ ವಾಕ್ಯ ವಿವಾದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕರು, ಕಾಂಗ್ರೆಸ್ ಸರ್ಕಾರವು ಮಕ್ಕಳಲ್ಲಿ ಸಂಘರ್ಷದ ಮನೋಭಾವ ಬಿತ್ತುತ್ತಿದೆ ಎಂದು ಟೀಕೆ ಮಾಡಿದ್ದಾರೆ. ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ,  ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಈ ಕುರಿತು ಟೀಕೆ ಮಾಡಿದ್ದಾರೆ.
ಕರ್ನಾಟಕ ವಸತಿ ಶಾಲಾ ಘೋಷ ವಾಕ್ಯ ವಿವಾದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕರು, ಕಾಂಗ್ರೆಸ್ ಸರ್ಕಾರವು ಮಕ್ಕಳಲ್ಲಿ ಸಂಘರ್ಷದ ಮನೋಭಾವ ಬಿತ್ತುತ್ತಿದೆ ಎಂದು ಟೀಕೆ ಮಾಡಿದ್ದಾರೆ. ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಈ ಕುರಿತು ಟೀಕೆ ಮಾಡಿದ್ದಾರೆ.

ಬೆಂಗಳೂರು: ಕರ್ನಾಟಕ ಸರ್ಕಾರಿ ವಸತಿ ಶಾಲೆಗಳ ಪ್ರವೇಶ ದ್ವಾರದ ಘೋಷ ವಾಕ್ಯವನ್ನು “ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ” ಎಂದು ಬದಲಾಯಿಸಿದ್ದು ಈಗ ರಾಜಕೀಯವಾಗಿ ಕೂಡ ಟೀಕೆಗೆ ಒಳಗಾಗಿದೆ. ಬಿಜೆಪಿ ನಾಯಕರು ಸರ್ಕಾರದ ನಡೆಯನ್ನು, ಮಕ್ಕಳಲ್ಲಿ ಸಂಘರ್ಷದ ಮನೋಭಾವ ಬಿತ್ತುತ್ತಿದೆ ಕಾಂಗ್ರೆಸ್ ಸರ್ಕಾರ ಎಂದು ಟೀಕಿಸಿದೆ.

ಮೈಸೂರು ವಿಶ್ವವಿದ್ಯಾಲಯದ ಧ್ಯೇಯ ವಾಕ್ಯ ‘ನಹಿ ಜ್ಞಾನೇನ ಸದೃಶಂ’ ಅಂದರೆ ‘ಜ್ಞಾನಕ್ಕೆ ಸಮನಾದುದು ಯಾವುದು ಇಲ್ಲ’ ಎಂಬುದು, ಈ ಘೋಷವಾಕ್ಯ ವಿಶ್ವವಿದ್ಯಾಲಯದ ಕಾರ್ಯಸೌಧವನ್ನು ಅಲಂಕರಿಸಿದೆ ಜತೆಗೇ ವಿದ್ಯೆಯ ಅಧಿದೇವತೆ ಸರಸ್ವತಿಯನ್ನೂ ಪಡಿಮೂಡಿಸಲಾಗಿದೆ. ತನ್ನ ಅಧೀನದಲ್ಲಿದೆ ಎಂಬ ಅಹಃ ನಿಂದ , ಭಗವದ್ಗೀತೆಯ ಈ ಶ್ಲೋಕ ಹಾಗೂ ಸರಸ್ವತಿಯನ್ನು ತೆಗೆಸುವ ಐತಿಹಾಸಿಕ ಪ್ರಮಾದ ವೆಸಗಲೂ ಈ ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕುವುದಿಲ್ಲ ಎನಿಸುತ್ತಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

ಇದೇ ವೇಳೆ, ಹೊಸ ಘೋಷವಾಕ್ಯದ ಮೂಲಕ ಮಕ್ಕಳ ಮನಸಲ್ಲಿ ಸಂಘರ್ಷ ಮೂಡಿಸುವ ಕೆಲಸ ಮಾಡಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ಪರಿಣಾಮಗಳನ್ನು ಸರ್ಕಾರವೇ ಎದುರಿಸಬೇಕಷ್ಟೆ- ಬಿ.ವೈ.ವಿಜಯೇಂದ್ರ

ಶಾಲೆಗಳೆಂದರೆ ಪವಿತ್ರ ತಾಣ. ಇದನ್ನು ಅರ್ಥೈಸಿಕೊಳ್ಳದ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಮನಸ್ಥಿತಿ. ಇಲಾಖೆಯ ಹಿರಿಯ IAS ಅಧಿಕಾರಿಯ ಮೂಲಕ ಸರ್ಕಾರಿ ವಸತಿ ಶಾಲೆಗಳ ದ್ವಾರದಲ್ಲಿ ಬರೆಸಲಾಗಿದ್ದ "ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ” ಎಂಬ ಘೋಷವಾಕ್ಯವನ್ನು ಬದಲಿಸಿ “ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ" ಎಂದು ಬರೆಸಲು ಪ್ರಾರಂಭಿಸಿದೆ.

ಮೊನ್ನೆಯಷ್ಟೇ ಇದೇ ಶಾಲೆಗಳಲ್ಲಿ ಧಾರ್ಮಿಕ ಹಬ್ಬ , ಪೂಜೆಗಳಿಗೆ ನಿಷೇಧ ಹೇರಿ ಆದೇಶ ಹೊರಡಿಸಿ ಇದರಿಂದ ‘ಕೈ’ಸುಡಲು ಆರಂಭವಾದ ಬೆನ್ನಲ್ಲೇ ಆದೇಶ ಹಿಂಪಡೆದು ತನ್ನ ಹಿಂದೂ ವಿರೋಧಿ ಮನಸ್ಥಿತಿಯನ್ನು ಅದುಮಿಟ್ಟುಕೊಂಡಿದ್ದ ಸರ್ಕಾರ ಇದೀಗ ಮತ್ತೊಂದು ಮತಿಗೇಡಿತನಕ್ಕೆ ‘ಕೈ’ಹಾಕಿ ವಿಕೃತಿ ಮೆರೆದಿದೆ, ಜತೆಗೇ ವಿದ್ಯಾರ್ಥಿಗಳನ್ನು ಶಿಕ್ಷಕರ ವಿರುದ್ಧ ಎತ್ತಿಕಟ್ಟಲು ಈ ಸಾಲುಗಳು ಪ್ರಚೋದನೆ ನೀಡುವಂತಿದೆ.

ಕೈ ಮುಗಿದು ಒಳೆಗೆ ಬಾ ….ಎಂಬ ರಾಷ್ಟ್ರಕವಿ ಕುವೆಂಪು ಅವರ ಪದ್ಯದ ಸಾಲುಗಳಿಂದ ಪ್ರೇರಣೆ ಪಡೆದು ನಾಡಿನ ಅನೇಕ ಶಿಕ್ಷಣ ಸಂಸ್ಥೆಗಳು ‘"ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ" ಎಂದು ಘೋಷವಾಕ್ಯ ಬರೆಸಿವೆ, ಇದನ್ನೇ ಸರ್ಕಾರಿ ಶಾಲೆಗಳಲ್ಲೂ ಅನುಸರಿಸಲಾಗಿದೆ.

‘ವಿದ್ಯಾ ದದಾತಿ ವಿನಯಂ….ವಿದ್ಯೆ ಎಂದರೆ ವಿನಯ, ವಿನಯ ವಿದ್ದೆಡೆ ಮಾತ್ರ ವಿದ್ಯೆ ಒಲಿಯುವುದು, ವಿದ್ಯಾಲಯವನ್ನು ದೇಗುಲದಂತೆ ಭಾವಿಸಿ "ಕೈ ಮುಗಿದು ಒಳಗೆ ಬನ್ನಿ’’ ಎಂಬ ಸದ್ವಿನಯ, ಸಂಸ್ಕಾರ, ಶ್ರದ್ಧಾಗುಣಗಳನ್ನು ನೆನಪಿಸುವ ಈ ಸಾಲು ಯಾವ ಧರ್ಮದವರನ್ನು ನೋಯಿಸುತ್ತದೋ ತಿಳಿಯದಾಗಿದೆ?

ಇದಕ್ಕೆ ಕಾಂಗ್ರೆಸ್ ಸರ್ಕಾರವೇ ಜನರಿಗೆ ಸ್ಪಷ್ಟನೆ ನೀಡಬೇಕಿದೆ.

ದೇಶದ ಆರನೇ ಹಾಗೂ ಕರ್ನಾಟಕ ರಾಜ್ಯದ ಮೊದಲನೇ ವಿಶ್ವವಿದ್ಯಾಲಯವಾಗಿರುವ ಶ್ರೀಮನ್ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಮೈಸೂರು ವಿಶ್ವವಿದ್ಯಾಲಯದ ಧ್ಯೇಯ ವಾಕ್ಯ ‘ನಹಿ ಜ್ಞಾನೇನ ಸದೃಶಂ’ ಅಂದರೆ ‘ಜ್ಞಾನಕ್ಕೆ ಸಮನಾದುದು ಯಾವುದು ಇಲ್ಲ’ ಎಂಬುದು, ಈ ಘೋಷವಾಕ್ಯ ವಿಶ್ವವಿದ್ಯಾಲಯದ ಕಾರ್ಯಸೌಧವನ್ನು ಅಲಂಕರಿಸಿದೆ ಜತೆಗೇ ವಿದ್ಯೆಯ ಅಧಿದೇವತೆ ಸರಸ್ವತಿಯನ್ನೂ ಪಡಿಮೂಡಿಸಲಾಗಿದೆ. ತನ್ನ ಅಧೀನದಲ್ಲಿದೆ ಎಂಬ ಅಹಃ ನಿಂದ , ಭಗವದ್ಗೀತೆಯ ಈ ಶ್ಲೋಕ ಹಾಗೂ ಸರಸ್ವತಿಯನ್ನು ತೆಗೆಸುವ ಐತಿಹಾಸಿಕ ಪ್ರಮಾದ ವೆಸಗಲೂ ಈ ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕುವುದಿಲ್ಲ ಎನಿಸುತ್ತಿದೆ.

ವಸತಿ ಶಾಲೆಗಳ ಮೇಲೆ ಬರೆಸಲಾಗಿದ್ದ ಈ ಹಿಂದಿನ “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ" ಘೋಷ ವಾಕ್ಯ ಮತ್ತೆ ಬರೆಸದೇ ಹೋದರೆ ಹಾಗೂ ಈ ಆದೇಶದ ಹಿಂದಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದೇ ಹೋದರೆ ಮುಂದಾಗುವ ಪರಿಣಾಮಗಳನ್ನು ಸರ್ಕಾರ ಎದುರಿಸಬೇಕಿದೆ.

ಮಕ್ಕಳ ಮನಸಲ್ಲೂ ಸಂಘರ್ಷ ಉಂಟು ಮಾಡಿ ರಾಜಕೀಯ ಬೇಳೆ ಬೇಯಿಸುತ್ತಿದ್ದಾರೆ: ಬಸವರಾಜ ಬೊಮ್ಮಾಯಿ ಟೀಕೆ

ಕರ್ನಾಟಕ ಸರ್ಕಾರ ತನ್ನ ವಸತಿ ಶಾಲೆಗಳಲ್ಲಿ ಇದುವರೆಗೂ ಇದ್ದ ಜ್ಞಾನ ದೇಗುಲವಿದು ಕೈಮುಗಿದು ಬಾ ಎಂಬ ವಾಕ್ಯವನ್ನು ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಸ್ನಿಸಿ ಎಂದು ಬದಲಾಯಿಸುವ ಮೂಲಕ ಮಕ್ಕಳ ಮನಸಲ್ಲಿ ಸಂಘರ್ಷ ಮೂಡಿಸುವ ಕೆಲಸ ಮಾಡಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಸಮಾಜದಲ್ಲಿ ಮಕ್ಕಳಿಂದ ಹಿಡಿದು ಎಲ್ಲರಲ್ಲಿಯೂ ಸಂಘರ್ಷ ಉಂಟು ಮಾಡಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಸರ್ಕಾರದ ವಸತಿ ಶಾಲೆಗಳಲ್ಲಿ ಅಕ್ಕಿ ಸಿಗುತ್ತಿಲ್ಲ. ಅದೇ ಕಾರಣಕ್ಕೆ ನಾವು ಖಜಾನೆ ಖಾಲಿ ಇದೆ ಅಂತ ಹೇಳುತ್ತಿದ್ದೇವೆ‌. ಅಭಿವೃದ್ಧಿಗೆ ಹಣ ಕೊಡುವುದಿಲ್ಲ. ಹಸಿವು ಮುಕ್ತ ಕರ್ನಾಟಕ ಅಂತ ಬೋರ್ಡ್ ಹಾಕಿಕೊಂಡಿದ್ದಾರೆ. ಮೊದಲು ನಿಮ್ಮ ಶಾಲಾ ಮಕ್ಕಳಿಗೆ ಅನ್ನ ಕೊಡಿ ವಿದ್ಯೆ ಕೊಡಿ. ಬಡವರಿಗೆ ಅಕ್ಕಿಯನ್ನು ನರೇಂದ್ರ ಮೋದಿ ಸರ್ಕಾರ ಕೊಡುತ್ತಿದೆ. ಅದನ್ನೂ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಅದೇ ರೀತಿ ವಿದ್ಯಾರ್ಥಿಗಳಿಗೆ ನೀಡುವ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.

ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ: ಸರ್ಕಾರದ ಮುಟ್ಟಾಳತನ, ಸಚಿವ ಪ್ರಲ್ಹಾದ ಜೋಶಿ ಆಕ್ರೋಶ

ಶಾಲೆ, ಹಾಸ್ಟೆಲ್ ಗಳಲ್ಲಿ 'ಜ್ಞಾನ ದೆಗುಲವಿದು ಧೈರ್ಯವಾಗಿ ಪ್ರಸ್ನಿಸಿ ಎಂಬುದನ್ನು ಬರೆಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮುಟ್ಟಾಳತನವನ್ನು ತೋರ್ಪಡಿಸಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಇಂದು (ಫೆ.19) ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಘೋಷ ವಾಕ್ಯವನ್ನು ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ತಿದ್ದುಪಡಿ ಮಾಡಿರುವುದು ಕಾಂಗ್ರೆಸ್ ನ ತುಷ್ಟೀಕರಣದ ಪರಮಾವಧಿ ಎಂದು ಕಿಡಿ ಕಾರಿದರು.

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎಂಬುದನ್ನು ಅಳಿಸಿ ಹಾಕಿ ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ತಿದ್ದುಪಡಿ ಮಾಡಿರುವ ಬಗ್ಗೆ ವಿಧಾನಸಭೆ ಮತ್ತು ವಿಧಾನ ಪರಿಷತ್ ಅಲ್ಲಿ ಬಿಜೆಪಿ ಚರ್ಚೆ ಮಾಡಲಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎಂಬುದು ರಾಷ್ಟ್ರಕವಿ ಕುವೆಂಪು ಅವರ ಘೋಷವಾಕ್ಯ. ಇದನ್ನು ತಿದ್ದುಪಡಿ ಮಾಡುವ ಮೂಲಕ ಕುವೆಂಪು ಅವರಿಗೂ ಈ ಸರ್ಕಾರ ಅವಮಾನ ಮಾಡಿದೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಈ ಸರ್ಕಾರ, ಕುವೆಂಪು ಅವರ ಘೋಷ ವಾಕ್ಯವನ್ನೇ ಬದಲಾಯಿಸಿದೆ. ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ದೃಷ್ಟಿಯಲ್ಲಿ ಕುವೆಂಪು ಜಾತ್ಯಾತೀತರಲ್ಲವೇ? ಎಂದು ಪ್ರಶ್ನಿಸಿದರು.

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎಂದಿರುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿರುವ ಜೋಶಿ ಅವರು, ಇದು ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನಡೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ತುಷ್ಟೀಕರಣದ ಪರಾಕಾಷ್ಠೆ ರಾಜ್ಯ ಕಾಂಗ್ರೆಸ್ ಸರ್ಕಾರ ತುಷ್ಟೀಕರಣದ ಪರಾಕಾಷ್ಠೆ ತಲುಪಿದೆ. ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಎಷ್ಟರ ಮಟ್ಟಿಗೆ ಹಿಂದೂ ವಿರೋಧಿ ನಡೆ ಅನುಸರಿಸುತ್ತಿದೆ ಮತ್ತು ಯಾವ ಹಂತಕ್ಕೆ ತುಷ್ಟೀಕರಣ ಮಾಡುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಸಚಿವ ಜೋಶಿ ಕಿಡಿ ಕಾರಿದರು.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ