logo
ಕನ್ನಡ ಸುದ್ದಿ  /  ಕರ್ನಾಟಕ  /  Court News: ಬೆಂಗಳೂರು ಸುಂಕದಕಟ್ಟೆ ಸಮೀಪ ದೇಗುಲ ನಿರ್ಮಾಣಕ್ಕೆ ರಸ್ತೆ ಅತಿಕ್ರಮಣ; ನಗರ ಜಿಲ್ಲಾಡಳಿತಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ ಇದು

Court News: ಬೆಂಗಳೂರು ಸುಂಕದಕಟ್ಟೆ ಸಮೀಪ ದೇಗುಲ ನಿರ್ಮಾಣಕ್ಕೆ ರಸ್ತೆ ಅತಿಕ್ರಮಣ; ನಗರ ಜಿಲ್ಲಾಡಳಿತಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ ಇದು

Umesh Kumar S HT Kannada

Mar 12, 2024 08:49 AM IST

google News

ಕರ್ನಾಟಕ ಹೈಕೋರ್ಟ್‌

  • Court News: ಬೆಂಗಳೂರು ಸುಂಕದಕಟ್ಟೆ ಸಮೀಪ ದೇಗುಲ ನಿರ್ಮಾಣಕ್ಕೆ ರಸ್ತೆ ಅತಿಕ್ರಮಣ ನಡೆಸಲಾಗಿದೆ ಎಂಬ ದಾವೆಗೆ ಸಂಬಂಧಿಸಿದ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನಡೆಸುತ್ತಿದೆ. ಈ ಸಂಬಂಧ ನಗರ ಜಿಲ್ಲಾಡಳಿತಕ್ಕೆ ಕರ್ನಾಟಕ ಹೈಕೋರ್ಟ್‌ ನೀಡಿರುವ ಸೂಚನೆ ಏನು- ಇಲ್ಲಿದೆ ವಿವರ.

     

ಕರ್ನಾಟಕ ಹೈಕೋರ್ಟ್‌
ಕರ್ನಾಟಕ ಹೈಕೋರ್ಟ್‌

ಬೆಂಗಳೂರು: ರಸ್ತೆ ಅತಿಕ್ರಮಿಸಿ ಧಾರ್ಮಿಕ ಕಟ್ಟಡಗಳ ನಿರ್ಮಾಣ ಬೇಡ ಎಂದು ಕಳೆದ ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದ ಕರ್ನಾಟಕ ಹೈಕೋರ್ಟ್‌ ಈಗ ಈ ಸಂಬಂಧ ಹೊಸ ಸಮಗ್ರ ವರದಿ ಸಲ್ಲಿಸಲು ಬೆಂಗಳೂರು ನಗರ ಜಿಲ್ಲಾಡಳಿತಕ್ಕೆ ಸೂಚಿಸಿದೆ.

ಸುಂಕದಕಟ್ಟೆ ಸಮೀಪದ ಸಲ್ಲಾಪುರದಮ್ಮ ದೇವಾಲಯವನ್ನು ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿ ನಿರ್ಮಿಸಲಾಗುತ್ತಿದೆ ಎಂಬ ಆಕ್ಷೇಪಕ್ಕೆ ಸಂಬಂಧಿಸಿ ಹೊಸದಾಗಿ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಸುಂಕದಕಟ್ಟೆಯ ಸಿ. ಹೊನ್ನಯ್ಯ ಮತ್ತಿತರರು ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿ ಸಲ್ಲಾಪುರದಮ್ಮ ದೇವಾಲಯ ಟ್ರಸ್ಟ್ ಸದಸ್ಯರು ದೇವಸ್ಥಾನ ನಿರ್ಮಿಸುತ್ತಿದ್ದಾರೆ ಎಂದು ಆಕ್ಷೇಪಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್.ಎ. ಅಂಜಾರಿಯಾ ಹಾಗೂ ನ್ಯಾ. ಕೃಷ್ಣಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬ೦ದಿತ್ತು.

ಕಳೆದ ವಿಚಾರಣೆ ವೇಳೆ ನಗರ ಜಿಲ್ಲಾಧಿಕಾರಿಗಳು ನೇಮಿಸಿದ ಭೂ ದಾಖಲೆಗಳ ಉಪನಿರ್ದೇಶಕರು ತಾಂತ್ರಿಕ ತಂಡದೊಂದಿಗೆ ಸ್ಥಳಕ್ಕೆ ಭೇಟಿ ಕೊಟ್ಟು ವಾಸ್ತವಿಕ ವರದಿಯನ್ನು ಮೂರು ವಾರದೊಳಗೆ ಸಲ್ಲಿಸಬೇಕು ನ್ಯಾಯಾಲಯ ನಿರ್ದೇಶನ ನೀಡಿತ್ತು.

ಮಾರ್ಚ್‌ 4ರಂದು ವಾಸ್ತವಿಕ ವರದಿ ಸಲ್ಲಿಸಿದ ನಗರ ಜಿಲ್ಲಾಡಳಿತ

ಸೋಮವಾರ ಅರ್ಜಿ ವಿಚಾರಣೆಗೆ ಬಂದಾಗ, ನ್ಯಾಯಾಲಯದ ಆದೇಶದಂತೆ ಮಾರ್ಚ್ 4ರಂದು ವರದಿ ಸಲ್ಲಿಸಲಾಗಿದೆ ಎಂದು ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು. ಈ ವರದಿಗೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯವು ವರದಿ ಸಮರ್ಪಕವಾಗಿಲ್ಲ. ಈ ಹಿಂದೆ ಬಿಬಿಎಂಪಿ ನೀಡಿದ್ದ ವರದಿಯ ಅಂಶಗಳನ್ನೇ ಇದರಲ್ಲಿ ಸೇರಿಸಲಾಗಿದೆ ಎಂದು ಹೇಳಿದೆ.

ದೇವಸ್ಥಾನದವರು ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿರುವ ಬಗ್ಗೆ ಈಗ ಸಲ್ಲಿಸಿರುವ ವರದಿಯಲ್ಲಿ ಏನು ಹೇಳಲಾಗಿದೆ. ಆ ಅಂಶ ವರದಿಯಲ್ಲಿ ಎಲ್ಲಿ ಉಲ್ಲೇಖಿಸಲಾಗಿದೆ ಎಂದು ನ್ಯಾಯಪೀಠವು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು. ನ್ಯಾಯಪೀಠದ ಪ್ರಶ್ನೆಗೆ ಸಮರ್ಪಕ ಉತ್ತರವನ್ನು ಸರ್ಕಾರದ ಪರ ವಕೀಲರು ನೀಡಿಲ್ಲ ಎಂದು ವರದಿ ಹೇಳಿದೆ.

ಈ ಮಧ್ಯೆ, ನ್ಯಾಯಾಲಯ ಅನುಮತಿ ಕೊಟ್ಟರೆ ಸ್ಥಳ ಪರಿಶೀಲನೆಯ ಪ್ರಕ್ರಿಯೆಯನ್ನು ಮತ್ತೊಮ್ಮೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ಸರ್ಕಾರದ ಪರ ವಕೀಲರು ಕಾಲಾವಕಾಶವನ್ನು ಕೋರಿದರು.

ಸಮಗ್ರ ವರದಿ ಸಲ್ಲಿಕೆಗೆ ಜಿಲ್ಲಾಡಳಿತಕ್ಕೆ ಸೂಚನೆ

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಜಿಲ್ಲಾಡಳಿತ ಸಲ್ಲಿಸಿರುವ ವರದಿ ತೃಪ್ತಿದಾಯಕವಾಗಿಲ್ಲ. ಹಾಗಾಗಿ, ಹೊಸದಾಗಿ ಸಮಗ್ರ ವರದಿ ಸಲ್ಲಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತು. ಅಲ್ಲದೆ, ಪರಿಶೀಲನೆಯನ್ನು ಮತ್ತೊಮ್ಮೆ ಕೈಗೊಳ್ಳಲು ಜಿಲ್ಲಾಡಳಿತ ಸ್ವತಂತ್ರವಾಗಿದೆ. ಆದರೆ, ಅದಕ್ಕೂ ಮೊದಲು ಸಂಬಂಧಪಟ್ಟ ಎಲ್ಲರಿಗೂ ನೋಟಿಸ್ ಕೊಟ್ಟು ಈ ಪ್ರಕ್ರಿಯೆ ನಡೆಸಬೇಕು ಎಂದು ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ನಾಲ್ಕು ವಾರಕ್ಕೆ ಮುಂದೂಡಿತು.

ಈ ಹಿಂದೆ ಜನವರಿ 11ರಂದು (ಗುರುವಾರ) ಬೆಂಗಳೂರು ನಗರದ ಸುಂಕದ ಕಟ್ಟೆ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿಕೊಂಡು ಸಲ್ಲಾಪುರದಮ್ಮ ದೇವಾಲಯ ಟ್ರಸ್ಟ್‌ ಸದಸ್ಯರು ದೇಗುಲ ನಿರ್ಮಿಸುತ್ತಿದ್ದಾರೆ ಎಂಬ ಆರೋಪದ ದಾವೆ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್‌ ನ್ಯಾಯಪೀಠ ಈ ವಿಚಾರ ಸ್ಪಷ್ಪಪಡಿಸಿತ್ತು.

ಸುಂಕದಕಟ್ಟೆ ಸಮೀಪದ ಸಲ್ಲಾಪುರದಮ್ಮ ದೇವಾಲಯ ನಿರ್ಮಾಣಕ್ಕೆ ಸಂಬಂಧಿಸಿದ ಆರೋಪವನ್ನು ಗಂಭೀರವಾಗಿ ತೆಗೆದುಕೊಂಡ ನ್ಯಾಯಪೀಠವು, ಸ್ಥಳ ಪರಿಶೀಲನೆ ಮಾಡಿ ಸರ್ವೇ ನಡೆಸಿ 3 ವಾರದಲ್ಲಿ ವಸ್ತುನಿಷ್ಠವಾದ ವರದಿ ಸಲ್ಲಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತ್ತು.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ